Monday, June 26, 2006

ಜೂನ್ ಎಂಬ ಒಡಲಾಳದ ಪಡಿನೆಳಲು

ಜೂನ್!

ವರ್ಷದಲ್ಲಿ ಇದು ಏಳಕ್ಕೇರದ, ಐದಕ್ಕಿಳಿಯದ ಆರನೇ ತಿಂಗಳು. ನನ್ನಂತಹದೇ ಶುದ್ಧ ಮಧ್ಯಮ ವರ್ಗದ ತಿಂಗಳು!

ಜೂನ್ ತಿಂಗಳು ಮುಂಗಾರನ್ನೂ ತನ್ನ ಬೆನ್ನಿಗೇ ಅಂಟಿಸಿಕೊಂಡು ಬರುತ್ತದೆ, ಈ ದಿನಗಳಲ್ಲಿ ರೈತರು ಬಿತ್ತುವ ಖುಷಿಯಲ್ಲಿದ್ದರೆ, ಸಹಕಾರಿ ಬ್ಯಾಂಕುಗಳು ಕೃಷಿಕರಿಗೆ ಎಷ್ಟು ಬೆಳೆ ಸಾಲ ನೀಡಿದರೆ ಎಷ್ಟು ಬಡ್ಡಿ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿರುತ್ತವೆ, ಸಾಲದ ಮೇಲೆ ತೆಗೆದುಕೊಂಡು ಹೋದ ಗೊಬ್ಬರಕ್ಕೆ ಬೆಳೆ ಬಂದ ಮೇಲೆ ರೈತ ದುಡ್ಡು ಕೊಡುತ್ತಾನೋ ಅಥವಾ ಫಸಲು ಬರದೇ ಕೈ ಎತ್ತುತ್ತಾನೋ ಎಂಬ ಅರ್ಧ ಅಪನಂಬಿಕೆ‌ಯಿಂದಲೇ ಈ ಅಂಗಡಿಯವರು ದಂಧೆ ಆರಂಭಿಸುತ್ತಾರೆ.

ಮಕ್ಕಳು ಮಾತ್ರ ಈ ವರೆಗೆ ಬೇಸಿಗೆ ರಜೆಯಲ್ಲಿ ಮಜಾ ಮಾಡಿ ಒಲ್ಲದ ಮನಸ್ಸಿನಿಂದ ಪಾಟೀ ಚೀಲ ಹೆಗಲಿಗೇರಿಸಿ ಶಾಲೆಗೆ ನಡೆಯುತ್ತವೆ.

"ಜಿಟಿ ಜಿಟಿ ಮಳೆ, ಕಿಚಿ ಪಿಚಿ ಕೆಸರು, ಮಗು ಬಿಕ್ಕಿ ಬಿಕ್ಕಿ ಅತ್ತಂತೆ" ಸುರಿಯುವ ಮಳೆಯ ಜೂನ್ ತಿಂಗಳ ಮೊದಲ ತಾರೀಖಿನಂದೇ ಶಾಲೆ ಆರಂಭ.

ಅದೇಕೋ ಈ ತಿಂಗಳು ನನ್ನ ಮನಸ್ಸಿನ ಆಳದಲ್ಲಿ ಒಂದು ರೀತಿಯ ಭಯದ ಗಾಯ ಮೂಡಿಸಿಬಿಟ್ಟಿದೆ. ಶಾಲೆ-ಕಾಲೇಜುಗಳ ಮೆಟ್ಟಿಲು ತುಳಿಯುವುದನ್ನು ಬಿಟ್ಟು 10-12 ವರ್ಷಗಳ ಮೇಲಾದರೂ, ವರ್ಷಕ್ಕೊಮ್ಮೆ ಈ ತಿಂಗಳು ಬಂದಾಗ ಈಗಲೂ ನನ್ನ ಮನಸ್ಸಿನಲ್ಲಿ ಒಂದು ರೀತಿಯ ಭಯ, ವಿಷಣ್ಣತೆ, ಕೀಳರಿಮೆ ಮನೆಮಾಡಿ‌ಬಿಡುತ್ತದೆ.

ಉತ್ತರ ಕರ್ನಾಟಕದ ಉರಿಬಿಸಿಲಿನ ಕಾವು ಮೇ ಕೊನೆಯ ವಾರದ ಹೊತ್ತಿಗೆ ಕಡಿಮೆಯಾಗಿ ಜೂನ್ ಮೊದಲ ವಾರದಲ್ಲೇ ಒಂದು ರೀತಿಯ ಮೋಡ ಮುಸುಕಿದ ವಾತಾವರಣ. ಪ್ರಕೃತಿಯ ಮನಸ್ಸಿಗೂ ಮೋಡ ಕವಿದಂತಾಗಿ ಬಿಸಿಲಿನ ದರ್ಶನ ಅಷ್ಟಕ್ಕಷ್ಟೇ. ಆಗಾಗ ಬರುವ ಜಿಟಿ ಜಿಟಿ ಮಳೆ, ನನ್ನ ಮನಸ್ಸಿನಲ್ಲೂ ಮೋಡದ ಮುಸುಕಿದ ವಾತಾರವಣ.

ಇದನ್ನು ಮೀರಿಸುವಂತೆ ಕಬ್ಬಿಣದ ಕಡಲೆಯಂತಿದ್ದ ಗಣಿತದ ಸೂತ್ರಗಳನ್ನು ಹೇರುತ್ತಿದ್ದ ಗಣಿತದ ಮೇಷ್ಟ್ರು, ವಿಜ್ಞಾನದ ಕಾಳಿಂಗಪ್ಪ ಮೇಷ್ಟ್ರು, ಪ್ರಾರ್ಥನೆಯ ಸಮಯದಲ್ಲಿ 'ಜಯ ಭಾರತ ಜನನಿಯ ತನುಜಾತೆ...' ಪದ್ಯದ 'ಜಯ ಹೇ, ಜಯ ಹೇ...' ಚರಣವನ್ನು ಸ್ವಲ್ಪವೇ ಏರು-ಪೇರು ಮಾಡಿದರೂ ಇಡೀ ಮುನ್ನೂರೂ ಚಿಲ್ಲರೆ ವಿದ್ಯಾರ್ಥಿಗಳಿಗೆ ಚಬುಕದ (ಬಿದಿರಿನ ಕೋಲು) ಬಿಸಿ ಮುಟ್ಟಿಸುತ್ತಿದ್ದ ಪಿಟಿ ಸರ್... ನೆನಪಿಸಿಕೊಂಡರೆ ಅದೊಂದು worst life ಅನ್ನಿಸಿಬಿಡುತ್ತದೆ. ಯಾರಾದರೂ Student life is golden life ಅಂತ ಹೇಳಿದರೆ, ಅವರು ಸುಳ್ಳು ಹೇಳುತ್ತಿದ್ದಾರೇನೋ ಎಂದು ಅವರ ಬಗ್ಗೇ ನನಗೆ ಗುಮಾನಿ.

ಹೊಸ ಲೇಖಕ್ ನೋಟುಬುಕ್ಕಿನ ಹಿತವಾದ ವಾಸನೆ, ಹೊಸ ಪಠ್ಯ ಪುಸ್ತಕಗಳ ಬಣ್ಣದ ವಾಸನೆ ಆಘ್ರಾಣಿಸುತ್ತ ಪಾಟಿಚೀಲ ಏರಿಸಿಕೊಂಡು ಹುರುಪಿನಿಂದ ಶಾಲೆಗೆ ನಡೆದರೆ, ಒಮ್ಮೊಮ್ಮೆ ಮೊದಲ ಪೀರಿಯಡ್ಡೇ ಗಣಿತದ್ದು! ಸಾಮಾನ್ಯವಾಗಿ ಹಳ್ಳಿಯ ಶಾಲೆಗಳಲ್ಲಿ ನಿಗದಿತ ಟೈಂ-ಟೇಬಲ್ ಇಲ್ಲದೇ ಯಾವ್ಯಾವ ಮೇಷ್ಟ್ರಿಗೆ ಯಾವಾಗ ಪುರುಸೊತ್ತಿರುತ್ತದೋ ಆವಾಗ ಅವರು ಪಾಠ ಮಾಡುತ್ತಾರೆ. ನಮ್ಮ ಶಾಲೆಯಲ್ಲೂ ಆಗುತ್ತಿದ್ದುದು ಅದೇ.

ನಾನೂ ಒಬ್ಬ ಮೇಷ್ಟ್ರ ಮಗ ಆಗಿದ್ದರಿಂದಲೋ, ಅಥವಾ ನಾನು ಜಾಣ ಆಗಬೇಕು ಎಂಬ ಕಾರಣದಿಂದಲೋ ಅಥವಾ ಗಣಿತದಲ್ಲಿ ನಾನು ಶತದಡ್ಡ ಅಂದುಕೊಂಡಿದ್ದರಿಂದಲೋ- ಗೆಳೆಯನ ಬೆನ್ನಿನ ಹಿಂದೆ ನನ್ನ ತಲೆ ಹುದುಗಿಸಿ ಕುಳಿತಿದ್ದರೂ ಗಣಿತದ ಮೇಷ್ಟ್ರ ಹದ್ದಿನ ಕಣ್ಣು ನನ್ನ ಮೇಲೆ ಬಿದ್ದೇ ಬಿಡುತ್ತಿತ್ತು. ಭಾರತ-ಪಾಕಿಸ್ತಾನ ಗಡಿಯ ಪೊದೆಯೊಂದರಲ್ಲಿ ಅವಿತು ಕುಳಿತ ವೈರಿಯನ್ನು ನಮ್ಮ ಭದ್ರತಾ ಪಡೆಗಳು ಹೊರಗೆಳೆದು ಗುಂಡಿನ ಮಳೆಗರೆವಂತೆಯೇ ನಮ್ಮ ಗುರುಗಳು ನನ್ನ ಕೈಗೆ ಚಾಕ್ ಪೀಸ್ ಕೊಟ್ಟು ಗಣಿತದ ಸಮಸ್ಯೆಗಳನ್ನು ಬಿಡಿಸಲು ಹೇಳಿ ನನ್ನ ಹಿಂದೆಯೇ AK 47 ಬಂದೂಕು ಹಿಡಿದು ನಿಲ್ಲುವಂತೆ ಬಿದಿರಿನ ಕೋಲು ಹಿಡಿದು ನಿಂತು ಬಿಡುತ್ತಿದ್ದರು. ಎಷ್ಟೋ ಬಾರಿ ಆ ಲೆಕ್ಕ ಬಿಡಿಸಲು ಆಗದೇ ಅವರ ಹೊಡೆತಕ್ಕೆ ನನ್ನ ನಿಕ್ಕರು ಒದ್ದೆಯಾಗಿದ್ದೂ ಇದೆ! ಆದರೆ ನನ್ನ ಪ್ರೀತಿಯ ವಿಷಯಗಳಾದ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ತರಗತಿಗಳಲ್ಲಿ ಮೇಷ್ಟ್ರ ಕಣ್ಣಿಗೆ ರಾಚುವಂತೆ ಅನೇಕ ಬಾರಿ ಕೈ ಎತ್ತಿ ಅವರ ಗಮನ ಸೆಳೆದರೂ ನನಗೆ ಪ್ರಶ್ನೆಗಳನ್ನೇ ಕೇಳುತ್ತಿರಲಿಲ್ಲ.

ಹಾಗೆ ನೋಡಿದರೆ, ನಾನು ನೆಮ್ಮದಿಯಿಂದ ಕಲಿತಿದ್ದು ಪಿಯುಸಿ ಮೊದಲ ವರ್ಷದಿಂದಲೇ. ಹತ್ತನೇ ತರಗತಿವರೆಗೂ ವಿಜ್ಞಾನ-ಗಣಿತದ ಉಕ್ಕಿನ ಕಡಲೆ (ಕಬ್ಬಿಣಕ್ಕಿಂತಲೂ ಕಠಿಣ)ಗಳನ್ನು ಅಗಿಯಲಾಗದೇ ಹಲ್ಲು ಮುರಿದುಕೊಂಡಿದ್ದ ನನಗೆ ಹೊಸ ಹಲ್ಲು ಮೂಳೆತದ್ದು ಪಿಯುಸಿಯಲ್ಲೇ. ಎಸ್ಸೆಸ್ಸೆಲ್ಸಿ ವರೆಗೂ ನನ್ನದು ಸೆಕೆಂಡ್ ಕ್ಲಾಸ್ ಜೀವನ. ಫಸ್ಟ್‌ಕ್ಲಾಸ್‌ ಎಂಬುದು ನನಗಾಗ ಗಗನ ಕುಸುಮ. ಆದರೆ ಪಿಯುಸಿಯಲ್ಲಿ ಆರ್ಟ್ಸ್ ವಿಭಾಗಕ್ಕೆ ಸೇರಿದ ಮೇಲೆ ನನ್ನ ಇಷ್ಟದ ವಿಷಯಗಳನ್ನು ಓದುವ ಅವಕಾಶ ಸಿಕ್ಕಿದ್ದರಿಂದ ನಂತರ ಫಸ್ಟ್‌ಕ್ಲಾಸ್‌ಗೆ ಬಡ್ತಿ.

ಶಾಲೆಯ ದಿನಗಳೇಕೆ ಹೀಗೆ ಎಂದು ನಾನು ಅನೇಕ ಬಾರಿ ಯೋಚಿಸಿದ್ದುಂಟು. ಇದು ಕೇವಲ ನನಗೊಬ್ಬನಿಗಾದ ತಳಮಳವೇ, ಮಾನಸಿಕ ಗೊಂದಲವೇ, ಮನೋವೈಜ್ಞಾನಿಕ ಕಾರಣವೇನಾದರೂ ಇರಬಹುದೇ ಎಂದು ಅನೇಕ ಬಾರಿ ತಲೆ ಕೆಡಿಸಿಕೊಂಡಿದ್ದೇನೆ. ಇಂಗ್ಲಿಷ್ ನಾಟಕ ಪ್ರಪಂಚದಲ್ಲಿ ಅನಭಿಷಿಕ್ತ ದೊರೆಯಾಗಿ ಮೆರೆದ, ಸಾಹಿತ್ಯಕ್ಕೆ ಪ್ರತಿಷ್ಠಿತ ನೊಬೆಲ್ ಪಾರಿತೋಷಕ ಪಡೆದ ಜಾರ್ಜ್ ಬರ್ನಾರ್ಡ್ ಶಾ ಕೂಡ ಇಂತಹದೇ ತಹತಹ ಅನುಭವಿಸಿದ್ದರಂತೆ. ಅವರ ಜೀವನ ಚರಿತ್ರೆಯಲ್ಲಿ ಈ ವಿಷಯದ ಪ್ರಸ್ತಾಪವೂ ಆಗಿದೆ.

ಶಾಲೆ ಮತ್ತು ಕಾಲೇಜಿನಲ್ಲಿ ಬರ್ನಾರ್ಡ್ ಶಾ ವಿಫಲರಾಗಿದ್ದೇ ಹೆಚ್ಚು. ವೈಜ್ಞಾನಿಕವಾಗಿ ತಯಾರಾಗದ, ನಿದ್ರೆ ಬರಿಸುವ ಪಠ್ಯಕ್ರಮ, ಸಾಹಿತ್ಯದ ಹೆಸರಿನಲ್ಲಿ ತಲೆನೋವಾಗುವ ಪಠ್ಯಪುಸ್ತಕ ಮತ್ತು ವರ್ಷವಿಡೀ ಕಲಿತಿದ್ದನ್ನು ಮೂರೇ ಗಂಟೆಗಳಲ್ಲಿ ಕಕ್ಕುವ ಪರೀಕ್ಷಾ ಪದ್ಧತಿಯನ್ನು ಶಾ ತುಂಬಾ ವಿರೋಧಿಸಿದರು. ಜೈಲೇ ಶಾಲೆಗಿಂತ ಎಷ್ಟೋ ಉತ್ತಮ ಎಂಬ ಅಭಿಪ್ರಾಯವನ್ನೂ ಅವರು ತಮ್ಮ ಆತ್ಮಚರಿತ್ರೆಯಲ್ಲಿ ವ್ಯಕ್ತಪಡಿಸಿದ್ದಾರೆ.

ಬರ್ನಾರ್ಡ್ ಶಾ ಮಾತಿನಲ್ಲೇ ಹೇಳಬೇಕೆಂದರೆ, In a prison one was not forced to read books written by warders but in the school, one was forced through the hideous imposture of literature called the text-books!

ನನ್ನ ಮಟ್ಟಿಗಂತೂ ಆತನ ಮಾತು ನೂರಕ್ಕೆ ನೂರು ಸತ್ಯ. ಜೂನ್ ತಿಂಗಳಲ್ಲಿ ನನಗೆ ಬೇಸರವಾದಾಗಲೆಲ್ಲ ನಾನು ನೆನಪಿಸಿಕೊಳ್ಳುವುದು ಬರ್ನಾರ್ಡ್ ಶಾ ನನ್ನೇ.

ಮೊನ್ನೆ ಸ್ನೇಹಿತರೊಬ್ಬರು ತಮ್ಮ ನಾಲ್ಕು ವರ್ಷದ ಮಗು ಶಾಲೆಗೆ ಹೋಗಲು ಹಠ ಮಾಡಿದ್ದನ್ನು ಹೇಳಿದಾಗ ಇದೆಲ್ಲ ನೆನಪಾಯಿತು.

Tuesday, June 20, 2006

ಬಾಲಿವುಡ್‌ನ ದೊಡ್ಡಣ್ಣ ಅಮಿತಾಬ್


ಸ್ವಾತಂತ್ರ್ಯ ಚಳವಳಿ ಕಾವೇರಿದ ದಿನಗಳವು. ಶಿಕ್ಷಕ, ಸಾಹಿತಿ, ವಕೀಲ, ಕಾರ್ಮಿಕರನ್ನೊಳಗೊಂಡು ಎಲ್ಲರೆದುರಿಗಿದ್ದದ್ದು ಒಂದೇ ಮಂತ್ರ; ಸ್ವಾತಂತ್ರ್ಯಕ್ಕಾಗಿ ಹೋರಾಟ - ಇನ್-ಕ್ವಿಲಾಬ್ ಜಿಂದಾಬಾದ್ ಘೋಷಣೆಗಳ ಮೊರೆತ.

ಸರಿಸುಮಾರು ಇದೇ ಸಮಯದಲ್ಲಿ ಸಾವಿರದಾ ಒಂಬೈನೂರಾ ನಲ್ವತ್ತರಡನೇ ಇಸ್ವಿಯಲ್ಲಿ ಉತ್ತರ ಪ್ರದೇಶದ ಮಧ್ಯಮ ವರ್ಗದ ಕುಟುಂಬದಲ್ಲಿ ಕವಿ ಹರಿವಂಶರಾಯ್ ಬಚ್ಚನ್ ಮತ್ತು ತೇಜಿ ಅವರಿಗೆ ಅಲಹಾಬಾದಿನಲ್ಲಿ ಜನಿಸಿದ ಚೊಚ್ಚಲ ಮಗುವಿಗೆ ಇಟ್ಟ ಹೆಸರು ಇನ್ ಕ್ವಿಲಾಬ್ ರಾಯ್. ನಂತರ ಅದೇ ಮಗು ಅಮಿತಾಬ್ ಬಚ್ಚನ್ ಆಯಿತು!

ಅಮಿತಾಬ್ ಎಂದರೆ ಹಿಂದಿಯಲ್ಲಿ "ಮಿತಿಯಿಲ್ಲದ ಪ್ರತಿಭಾವಂತ" ಎಂದರ್ಥ. ಅಮಿತಾಬ್ ತಮ್ಮ ಹೆಸರಿಗೆ ಅನ್ವರ್ಥವಾದವರು. ಅನೇಕ ಸಿನಿಮಾ ಕಲಾವಿದರು ಸಿನಿಮಾ ಡೈಲಾಗ್‌ಗಳನ್ನು ಹೊರತುಪಡಿಸಿ ಮಾತನಾಡುವುದನ್ನು ಗಮನಿಸಿದರೆ ಶಬ್ದಗಳಿಗಾಗಿ ಅವರು ತಡಬಡಾಯಿಸುವುದನ್ನು ನಾವು ನೋಡಬಹುದು. ಆದರೆ ಅಮಿತಾಬ್ ಅವರೆಲ್ಲರಿಗಿಂತ ಭಿನ್ನವಾಗಿ ನಿಲ್ಲುವ ವ್ಯಕ್ತಿ. ಟಿವಿ ಸಂದರ್ಶನವಿರಲಿ, ಕೌನ್ ಬನೇಗಾ ಕರೋಡ್‌ಪತಿ‌ಯಂಥ ಕಾರ್ಯಕ್ರಮವಿರಲಿ ಅಥವಾ ಔಪಚಾರಿಕ ಮಾತುಕತೆಯಿರಲಿ ಅಲ್ಲಿ ಅವರ ಗಡಸು ಧ್ವನಿಯಷ್ಟೇ ಅವರ ವಿಚಾರವೂ ಸ್ಪಷ್ಟವಾಗಿರುತ್ತದೆ.

ಆರಡಿಗೂ ಎತ್ತರದ, ವಿಶಿಷ್ಠ ಹೇರ್ ಸ್ಟೈಲಿನ, ತೀಕ್ಷ್ಣ ಕಣ್ಣುಗಳ, ಗಡಸು ದನಿಯ ನಟ ಬಾಲಿವುಡ್‌ನ ಶೆಹನ್‌ಶಾಹ್ ವೃತ್ತಿ ಜೀವನದಲ್ಲಿ ತಮ್ಮ ಎತ್ತರಕ್ಕಿಂತಲೂ ಎತ್ತರವಾಗಿ ಬೆಳೆದವರು. ಅಮಿತಾಬ್ ಇಂದು ಕೇವಲ ಸೂಪರ್ ಸ್ಟಾರ್ ಅಷ್ಟೇ ಅಲ್ಲ ಒಂದು ಸೂಪರ್ ಬ್ರಾಂಡ್ ಕೂಡ.

ಇಂದು ಬಿಗ್ ಬಿ ಗೆ ಜ್ವರ ಬಂದರೂ ಸುದ್ದಿ, ಹೊಟ್ಟೆ ನೋವಾದರೂ ಸುದ್ದಿ, ಇನ್‌ಕಂ ಟ್ಯಾಕ್ಸ್ ಡಿಪಾರ್ಟ್‌ಮೆಂಟ್ ನೋಟಿಸ್ ಕಳಿಸಿದರೂ ಸುದ್ದಿಯೇ... ಒಟ್ಟಿನಲ್ಲಿ ಅವರು ಬಾಯಿ ಬಿಟ್ಟಿದ್ದು, ಬಿಡದೇ ಇದ್ದಿದ್ದಕ್ಕೆಲ್ಲ ನ್ಯೂಸ್ ವ್ಯಾಲ್ಯೂ!

ಹ್ಯಾಂಗ್ರಿ ಯಂಗ್ ಮ್ಯಾನ್?:

ಜಂಜೀರ್, ಲಾವಾರಿಸ್, ಕೂಲಿ, ಶೋಲೆ ಚಿತ್ರಗಳಲ್ಲಿ ಸಿಡುಕ ಯುವಕನ ಪಾತ್ರಧಾರಿ "ಯಾಂಗ್ರಿ ಯಂಗ್ ಮ್ಯಾನ್" ಇವತ್ತು "ಹ್ಯಾಂಗ್ರಿ ಯಂಗ್ ಮ್ಯಾನ್" ಎಂದು ನೀವು ಕೇಳುವಂತಿಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡಿರುವವರಂತೆ ಇಂದು ಮುಂಬೈ, ನಾಳೆ ಬೆಂಗಳೂರು ಇನ್ನೊಂದು ದಿನ ದುಬೈ ಹೀಗೆ ಯಂಗ್ ಮ್ಯಾನ್‌ಗಳೂ ನಾಚುವಂತೆ ದುಡಿಮೆಯ ಹಿಂದೆ ತಿರುಗುತ್ತಾ ಇರುತ್ತಾರೆ. ಹೋರ್ಡಿಂಗುಗಳಲ್ಲಿ ಅಮಿತಾಬ್, ಪೆಪ್ಸಿ ಬಾಟಲಿನಲ್ಲಿ ಅಮಿತಾಬ್, ಕನ್ನಡ ಚಿತ್ರದಲ್ಲೂ ಅಮಿತಾಬ್...

ಯಶಸ್ಸಿನ ಉತ್ತುಂಗಕ್ಕೇರಿದ ಅಮಿತಾಬ್ ಜೀವನದಲ್ಲಿ ಸದಾ ಸವಿಯನ್ನೇ ಉಂಡರೇ ಎಂದು ಕೇಳಿದರೆ ಇಲ್ಲ ಎಂದೇ ಹೇಳಬೇಕಾಗುತ್ತದೆ. ಒಂದು ಕಾಲದಲ್ಲಿ ಅಮಿತಾಬ್ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡವರು. ನೌಕರಿಗಾಗಿ ಅಲಹಾಬಾದಿನ ಬೀದಿ ಬೀದಿಗಳಲ್ಲಿ ಅಲೆದವರು, ಗಡಸು ಧ್ವನಿಯಿಂದಾಗಿ ಆಕಾಶವಾಣಿಯ ಧ್ವನಿ ಪರೀಕ್ಷೆಯಲ್ಲಿ ಫೇಲಾದವರು, ಸಿನಿಮಾ ಕ್ಷೇತ್ರಕ್ಕೆ ಹೋದರೆ ಇವರ ಎತ್ತರಕ್ಕೆ ಯಾವ ಅವಕಾಶವೂ ಇಲ್ಲ ಎಂದು ಚಾನ್ಸ್ ತಪ್ಪಿಸಿಕೊಂಡವರು. ನೀವು ನಂಬುತ್ತೀರೋ ಬಿಡುತ್ತೀರೋ, ಅಮಿತಾಬ್ ಬಚ್ಚನ್ ಜೊತೆಗಿನ ಮೊದಲ ಚಿತ್ರದಲ್ಲಿ ನಟಿಸಲು ನಟಿ ರೇಖಾ ನಿರಾಕರಿಸಿದ್ದಳಂತೆ.

ಇಂದು ಮುಂಬೈನ ಜುಹುವಿನಲ್ಲಿರುವ ಅವರ ಮನೆ "ಅಮಿತಾಬ್ ಮನೆ" ಎಂದೇ ಲ್ಯಾಂಡ್‌ಮಾರ್ಕ್ ಆಗಿ ಗುರುತಿಸಲ್ಪಟ್ಟಿದೆ. 1999ರಲ್ಲಿ ಅವರು ಈ ಮನೆಕಳೆದುಕೊಳ್ಳಬೇಕಾದ ಪರಿಸ್ಥಿತಿ ಒದಗಿತ್ತು. ಅಮಿತಾಬ್ ಬಚ್ಚನ್ ಕಾರ್ಪರೇಶನ್ ಲಿಮಿಟೆಡ್ (ಎಬಿಸಿಎಲ್) ಹುಟ್ಟುಹಾಕಿ ಕೈಸುಟ್ಟುಕೊಂಡ ಬಚ್ಚನ್, ಈ ಸಂಸ್ಥೆಯ ನಿರ್ಮಾಣಕ್ಕಾಗಿ ಮಾಡಿದ್ದ ಸಾಲವನ್ನು ತೀರಿಸದೇ ಇದ್ದುದರಿಂದ ಕೆನರಾ ಬ್ಯಾಂಕ್ ಕೋರ್ಟಿನ ಮೂಲಕ ಈ ಮನೆಯನ್ನು ಅಟ್ಯಾಚ್ ಮಾಡಿಸಿತ್ತು.

ಅಮಿತಾಬ್‌ಗೆ ವಯಸ್ಸಾಯಿತು ಇನ್ನು ಅವರ ಕತೆ ಮುಗಿದೇ ಹೋಯಿತು ಎಂದವರು ಅನೇಕರು. ಆದರೆ ಅದೇ ಅಮಿತಾಬ್ ಮತ್ತೆ ಸಾಲದ ಶೂಲದಿಂದ ಹೊರಬಂದು "ಕೌನ್ ಬನೇಗಾ ಕರೋಡ್‌ಪತಿ" ಕಾರ್ಯಕ್ರಮದ ಮೂಲಕ ಫೀನಿಕ್ಸ್‌ನಂತೆ ಕೊಡವಿಕೊಂಡು ಎದ್ದರು. "ಅಮಿತಾಬ್ ಬನ್ ಗಯಾ ಕರೋಡ್ ಪತಿ" ಆದರು.

ರಾಜೀವ್ ಗೆಳೆತನ:

ಇಂದಿರಾ ಗಾಂಧಿ ಕುಟುಂಬಕ್ಕೆ ಹತ್ತಿರವಾಗಿದ್ದ ಬಿಗ್ ಬಿ, ರಾಜೀವ್ ಗಾಂಧಿ ಅವರ ಆಪ್ತ ಸ್ನೇಹಿತರ ವಲಯದಲ್ಲಿ ಗುರುತಿಸಿಕೊಂಡಿದ್ದರು. ಅಮಿತಾಬ್ ಬಚ್ಚನ್ ಅವರು ಮೊದಲ ಸಿನಿಮಾದಲ್ಲಿ ಅಭಿನಯಿಸಲು ಇಂದಿರಾ ಗಾಂಧಿ ಅವರು ಕೊಟ್ಟ ಶಿಫಾರಸು ಪತ್ರವೇ ಕಾರಣವಂತೆ. ವ್ಯಕ್ತಿಯೊಬ್ಬನಿಗೆ ಕೇವಲ ಪ್ರತಿಭೆಯಿದ್ದರಷ್ಟೇ ಸಾಲದು ಅದೃಷ್ಟ ಮತ್ತು ಶಿಫಾರಸಿನ ಬೆಂಬಲವೂ ಬೇಕು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.

ಗಡಸು ಧ್ವನಿಯಿಂದಾಗಿಯೇ ಸಿನಿಮಾದಲ್ಲೇ ಅನೇಕ ದಿನಗಳ ಕಾಲ ಅವಕಾಶ ವಂಚಿತನಾಗಿದ್ ವ್ಯಕ್ತಿಯೊಬ್ಬ ಮುಂದೆ ಇಡೀ ಜಗತ್ತೇ ಮೆಚ್ಚುವ ಮಹಾನ್ ತಾರೆಯಾಗಿದ್ದು ನಿಜಕ್ಕೂ ಮೆಚ್ಚತಕ್ಕದ್ದೇ. ಇಂಗ್ಲೆಂಡಿನ ಮ್ಯಾಡಮ್ ಟುಸ್ಸಾಡ್ಸ್ ವಸ್ತು ಸಂಗ್ರಹಾಯಲಯದಲ್ಲಿನ ಅಮಿತಾಬ್ ಮೇಣದ ಪ್ರತಿಮೆ ಹಾಗೂ ಇವರನ್ನು ಸಹಸ್ರಮಾನದ ತಾರೆ ಎಂದು ಬಿಬಿಸಿ ಆಯ್ಕೆ ಮಾಡಿದ್ದು, ಕೊಲ್ಕೊತ್ತಾದಲ್ಲಿ ಅಭಿಮಾನಿಗಳಿಂದ ದೇವಾಲಯ... ಚಿತ್ರರಂಗದ ಈ ದೊಡ್ಡಣ್ಣನ ಸಾಧನೆಗೆ ಸಾಕ್ಷಿ.

ಇಂದು ಬಚ್ಚನ್ ಅವರಿಗೆ ವಯಸ್ಸು ಅರವತ್ನಾಲ್ಕಾದರೂ ಭಾರತದ ಜನಪ್ರಿಯ ಬ್ರಾಂಡ್‌ಗಳ ಪೈಕಿ ಮೊದಲ ಸ್ಥಾನ. ಅಮಿತಾಬ್ ಭಾಗವಹಿಸುವ ಹತ್ತು ಸೆಕೆಂಡುಗಳ ಜಾಹೀರಾತಿಗೆ ಇಂದು ಎರಡು ಲಕ್ಷ ರೂಪಾಯಿ ಬೆಲೆ. ದಿನಕ್ಕೆ ಎಂಟು ಗಂಟೆ ದುಡಿಯುವ ಅಮಿತಾಬ್ ಅದರ ಪೈಕಿ ಕೇವಲ ಹತ್ತೇ ನಿಮಿಷವನ್ನು ಜಾಹೀರಾತಿಗೆ ಅಂತ ಇಟ್ಟರೂ ಅವರ ದುಡಿಮೆ ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ.

ನಿಜಕ್ಕೂ ಈತ "ಕೋಟಿಗೊಬ್ಬ!"

ಚಿತ್ರರಂಗಕ್ಕೂ ಗಾಸಿಪ್‌ಗೂ ಎಡೆಬಿಡದ ನಂಟು. ಅಮಿತಾಬ್ ಕೂಡ ಇದರಿಂದ ಹೊರತಲ್ಲ. ಅನೇಕ ವರ್ಷಗಳ ಹಿಂದೆ ಒಂದು ಕಾಲದ ಬಾಲಿವುಡ್‌ನ ಬೆಡಗಿನ ತಾರೆ ರೇಖಾ ಹಾಗೂ ಇನ್ನೊಬ್ಬ ಮಾದಕ ನಟಿ ಪರ್ವಿನ್ ಬಾಬಿ ಜೊತೆ ಅಮಿತಾಬ್ ಹೆಸರು ತಳುಕು ಹಾಕಿಕೊಂಡಿತ್ತು. ಅನೇಕ ಸಂದರ್ಭಗಳಲ್ಲಿ ಜಾಣ ಅಮಿತಾಬ್ ಇದನ್ನು ಒಪ್ಪಿಕೊಳ್ಳಲೂ ಇಲ್ಲಿ ನಿರಾಕರಿಸಲೂ ಇಲ್ಲ.

ಒಬ್ಬ ವ್ಯಕ್ತಿಯಾಗಿ ನೀವು ಜೀವನದಲ್ಲಿ ಎಷ್ಟು ಯಶಸ್ವಿಯಾಗಿದ್ದೀರಿ ಎಂದು ಪತ್ರಕರ್ತರೊಬ್ಬರು ಈಚೆಗೆ ಟಿವಿ ಸಂದರ್ಶನದಲ್ಲಿ ಕೇಳಿದಾಗ,

मन का हो ता अच्छा और मन का ना हो तो और भी अच्छा, क्योंकि ओ भगवान कि मर्जि है

(ಮನಸ್ಸಿನಲ್ಲಿರುವುದು ಆದರೆ ಒಳ್ಳೆಯದು, ಮನಸ್ಸಿನಲ್ಲಿರುವುದು ಆಗದೇ ಇದ್ದರೆ ಅದು ಇನ್ನೂ ಒಳ್ಳೆಯದು, ಏಕೆಂದರೆ ಅದು ದೇವರ ಇಚ್ಛೆ) ಎಂದು ಅಮಿತಾಬ್ ಉತ್ತರಿಸಿದ್ದರು.

ಅದೇ ಮಂತ್ರವೇ ಅವರನ್ನು ಯಶಸ್ಸಿನ ತುಟ್ಟ ತುದಿಗೆ ತಂದು ನಿಲ್ಲಿಸಿರಬಹುದು.

ಭಾರತೀಯ ಚಿತ್ರರಂಗದ ಸಹಸ್ರಮಾನದ ತಾರೆ ಇನ್ನೂ ಬೆಳಗಲಿ, ಪ್ರಕಾಶ ನಿರಂತರವಾಗಲಿ.

ಅಮಿತಾಬ್ ಜಿ- कभि अल्विदा ना कहना!

ದಾರಿ ತಪ್ಪಿದ ಮಕ್ಕಳು!

ನಿಮಗೆ ನೆನಪಿರಬಹುದು,
1997ರಲ್ಲಿ ಕರ್ನಾಟಕದಲ್ಲಿ ಅಂದಿನ ಜೆ.ಎಚ್. ಪಟೇಲ್ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾಗಿದ್ದ ಬಿ.ಟಿ ಲಲಿತಾನಾಯಕ್ ಅವರ ಪುತ್ರ ವಿಶ್ವಜಿತ್,

ಮದ್ಯದ ಅಮಲಿನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮದ್ಯಾಭಿಷೇಕ ಮಾಡಿದ್ದು. ಈ ಘಟನೆ ಇಡೀ ರಾಜ್ಯಾದ್ಯಂತ ಭಾರಿ ಕೋಲಾಹಲವನ್ನೇ ಎಬ್ಬಿಸಿತ್ತು. ತಾಯಿ ಲಲಿತಾ

ನಾಯಕ್ ರಾಜೀನಾಮೆ ಕೊಡುವುದರೊಂದಿಗೆ ಈ ಪ್ರಕರಣ ಅಂತ್ಯ ಕಂಡಿತ್ತು.

ಅದಾಗಿ ಎರಡು ವರ್ಷಗಳ ಬಳಿಕ ಹರಿಯಾಣಾದ ಪ್ರಭಾವಿ ಕಾಂಗ್ರೆಸ್ ನಾಯಕ ವಿನೋದ್ ಶರ್ಮಾ ಅವರ ಸು(ಕು)ಪುತ್ರ ಮನು ಶರ್ಮಾ ದೆಹಲಿಯ ನೈಟ್ ಕ್ಲಬ್

ಒಂದರಲ್ಲಿ ಹಾರಿಸಿದ ಗುಂಡಿಗೆ ಜೆಸಿಕಾ ಲಾಲ್ ಎಂಬ ಹೈ ಪ್ರೊಫೈಲ್ಡ್ ಬಾರ್ ಅಟೆಂಡೆಂಟ್ ಅಸುನೀಗಿದಳು. ಈ ಪ್ರಕರಣವೂ ಸುದ್ದಿಯ ಕೇಂದ್ರಬಿಂದುವಾಗಿತ್ತು.

ಕೆಲವೇ ತಿಂಗಳುಗಳ ಹಿಂದೆ ಬೆಂಗಳೂರಿನ ಇನ್ ಫಂಟ್ರಿ ರಸ್ತೆಯಲ್ಲಿನ ಡಿಸ್ಕೊ ಥೆಕ್ ಒಂದಕ್ಕೆ ನುಗಿದ್ದ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ

ಕುಣಿತದ ಹುಡುಗಿ ತನ್ನ ಜೊತೆ ಬರಲು ನಿರಾಕರಿಸಿದ್ದರಿಂದ ಗುಂಡು ಹಾರಿಸಿ ಸುದ್ದಿಯಾಗಿದ್ದ.

ಈ ಮೂರೂ ಘಟನೆಗಳನ್ನೇ ಹೋಲುವ ಇತ್ತೀಚಿನ ಸೇರ್ಪಡೆ-ಕಳೆದ ತಿಂಗಳು ಅಸುನೀಗಿದ ಬಿಜೆಪಿ ನೇತಾರ
href="http://vishwaputa.blogspot.com/2006/05/blog-post.html">ಪ್ರಮೋದ್ ಮಹಾಜನ್
ಅವರ ಪುತ್ರ ರಾಹುಲ್ ಮಹಾಜನ್

ಮಾದಕ ದ್ರವ್ಯ ಪ್ರಕರಣ.

ನಾಲ್ಕೂ ಘಟನೆಗಳನ್ನು ತಾಳೆ ಹಾಕಿ ನೋಡಿ ಎಡವಟ್ಟಾಗಿದ್ದು ಎಲ್ಲಿ ಎಂದು ಯೋಚಿಸಿದರೆ ಸಿಗುವ ಉತ್ತರ- "ದೊಡ್ಡವರ" ಮಕ್ಕಳ ಧಾರ್ಷ್ಟ್ಯ, ಏನು ಮಾಡಿದರೂ

ಪಾರಾಗಬಹುದು ಎಂಬ ಉಡಾಫೆ ಹಾಗೂ ಸತ್ಯದ ಮೇಲೆ ಬರೆ ಎಳೆದು ಅಪ್ಪಟ ಸುಳ್ಳಿನ ಗಿಲೀಟು ನೀಡಿ ಪಾರು ಮಾಡುವ ನ್ಯಾಯಾಂಗ ವ್ಯವಸ್ಥೆ.

ಈ ಹುಡುಗರ ಪ್ರಭಾವಿ ತಂದೆ-ತಾಯಿಯ ಹಿಂದಿನ ಜೀವನ ನೋಡಿದರೆ, ಅವರು ಕಷ್ಟಪಟ್ಟು ಮೇಲೆ ಬಂದವರಾಗಿರುತ್ತಾರೆ. ಆದರೆ ತಮ್ಮ ಮಕ್ಕಳಿಗೆ ಕಷ್ಟದ ನೆರಳೂ

ತಾಕದ ರೀತಿಯಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆಸಿರುತ್ತಾರೆ. ಇವರ ಮಕ್ಕಳಿಗೆ ಜೀವನ ಇರುವುದೇ ಮಜಾ ಉಡಾಯಿಸಲು.

ಇಂದು ಉನ್ನತ ಶಿಕ್ಷಣ ಪಡೆದವರೂ ಒಂದು ಚಿಕ್ಕ ಉದ್ಯೋಗ, ನಾಲ್ಕು ಕಾಸು ಸಂಪಾದಿಸಿ ನೆಮ್ಮದಿಯ ಜೀವನ ನಡೆಸಲು ಪರದಾಡುತ್ತಿರಬೇಕಾದರೆ, ಈ ಅಗವ್ಯ

(ಅತಿ ಗಣ್ಯ ವ್ಯಕ್ತಿ)ರ ಮಕ್ಕಳು ದಿನಕ್ಕೊಂದು ಕಾರು, ಅಂಗಿ ಬದಲಾಯಿಸಿದಷ್ಟೇ ಸುಲಭವಾಗಿ ಬದಲಿಸುವ ಗರ್ಲ್ ಫ್ರೆಂಡ್ ಗಳು, ಮೋಜು-ಮಜಾ-ಮಸ್ತಿ‌ಯಲ್ಲಿ ಕಾಲ

ಕಳೆಯುತ್ತಿದ್ದಾರೆ. ಅದೂ ಶ್ರೀಸಾಮಾನ್ಯನ ಹಣದಿಂದ ಕಟ್ಟಿದ ಅಪ್ಪನ ಸರಕಾರಿ ಬಂಗಲೆಯಲ್ಲಿ (7 ಸಫ್ದರ್‌ಜಂಗ್ ರಸ್ತೆಯ ಬಂಗಲೆ)!

ರಾಹುಲ್ ಮಹಾಜನ್ ಪ್ರಕರಣದಲ್ಲಿ ಆಗಿದ್ದು ಕೂಡ ಇದೇ. ಈತನಿಗೇನು ಕೊರತೆ? ಅನಧಿಕೃತ ಮೂಲಗಳು ಪ್ರಕಾರ ಈತ ನೂರಾರು ಕೋಟಿ ರೂಪಾಯಿ ಬೆಲೆಬಾಳುವ

ಆಸ್ತಿಯ ಒಡೆಯ. ಒಂದೆಡೆ ಜನ ಹೇಗೆ ಹೊಟ್ಟೆ ಹೊರೆಯಬೇಕು ಎಂದು ಚಿಂತಿಸಿದರೆ, ಈತ ಇರುವ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂಬ ಜಾಯಮಾನದವ.

ಇದಕ್ಕೆ ವಿವೇಕ್ ಮೈತ್ರಾ, ಸಾಹಿಲ್ ನಂಥವರ ಮೈತ್ರಿ.

ಇದಕ್ಕೆಲ್ಲ ಕಲಶವಿಟ್ಟಂತೆ ನಮ್ಮ ನ್ಯಾಯಾಂಗ ವ್ಯವಸ್ಥೆ.

ಈ ವ್ಯವಸ್ಥೆಯಲ್ಲಿನ ಲೋಪ-ದೋಷದಿಂದಾಗಿ ಯಾರು ಏನು ಮಾಡಿದರೂ ಪಾರಾಗಬಹುದು ಎಂಬ ಮನೋಭಾವನೆ ಬೆಳೆದುಬಿಟ್ಟಿದೆ. ವಿಶ್ವಜಿತ್ ಪ್ರಕರಣ

ಏನಾಯಿತು? ಜೆಸ್ಸಿಕಾ ಲಾಲ್‌ಳನ್ನು ಮನು ಶರ್ಮಾ ಗುಂಡಿಟ್ಟು ಕೊಂದಿದ್ದು ಜಗತ್ತಿಗೇ ಗೊತ್ತಿದ್ದರೂ ಈಚೆಗೆ ದೆಹಲಿ ಹೈಕೋರ್ಟ್ ಈತನನ್ನು ಖುಲಾಸೆಗೊಳಿಸಿದ್ದು ಏನು

ತೋರಿಸುತ್ತದೆ? ರಾಹುಲ್ ಮಹಾಜನ್ ಕೂಡ ಕಾನೂನಿನ ಇಂಥದೇ ಹಿಂಬಾಗಿಲ ಮೂಲಕ ನಗುತ್ತ ಒಂದು ದಿನ ಹೊರಬರುತ್ತಾನೆ.

ಪ್ರಜಾಪ್ರಭುತ್ವದ ಕಾವಲುಗಾರನಂತಿರುವ ಮಾಧ್ಯಮಗಳು ನಾಲ್ಕು ದಿನ ಈ ಬಗ್ಗೆ ವರದಿ ಮಾಡುತ್ತವೆ. ಆಮೇಲೆ ತಣ್ಣಗಾಗುತ್ತವೆ, ಕ್ರಮೇಣ ಇಂಥ ವಿಷಯಗಳು

ಶ್ರೀಸಾಮಾನ್ಯರ ಮನಸ್ಸಿನಿಂದಲೂ ಮಾಸಿ ಹೋಗುತ್ತದೆ.

ಕನ್ನಡ ಸಿನಿಮಾವೊಂದರ ಹಾಡಿನ ಈ ಸಾಲುಗಳು ನೆನಪಾಗುತ್ತಿವೆ-

"ಈ ದೇಶದ್ ಕತೆ ಇಷ್ಟೇ ಕಣಮ್ಮೋ, ಇಲ್ಲಿ ನ್ಯಾಯಾ ನೀತೀಗ್ ಜಾಗ ಇಲ್ಲಮ್ಮೋ
ನ್ಯಾಯದ್ ಮನೆಗೀಗ್ಲೂ ಎರಡೆರಡಂತೆ ಬಾಗ್ಲು, ಹಿಂದೆ ಹೋಗಿ ಮುಂದೆ ಬರೋ ಈ ದೇಶದ್ ಕತೆ ಇಷ್ಟೇ ಕಣಮ್ಮೋ||"

Saturday, June 03, 2006

ಒಂದು ಪಿಗ್ಗಿನ ಕತೆ!

A story of a PIC(g)

ಈಚೆಗೆ ಕನ್ನಡಪ್ರಭದ ಛಾಯಾಂಕಣವೊಂದರಲ್ಲಿ ತಾಯಿ ಹಂದಿ ತನ್ನ ಮುದ್ದುಮರಿಗಳಿಗೆ ಹಾಲುಣಿಸುತ್ತಿರುವ ಚಿತ್ರ ನೋಡಿದೊಡನೆಯೇ ನನ್ನ ಅತ್ಯಂತ ಮೆಚ್ಚಿನ ಇಂಗ್ಲಿಷ್ ಲೇಖಕ ಚಾರ್ಲ್ಸ್ ಲ್ಯಾಂಬ್ ನೆನಪಾದ.

ಲ್ಯಾಂಬ್ ಬರವಣಿಗೆಯೇ ಹಾಗೆ. ನಮ್ಮ ಎಸ್.ಎಲ್. ಬೈರಪ್ಪ ಅವರ ಬರವಣಿಗೆಯಂತೆ. ಓದುತ್ತ ಹೋದರೆ ಅದು ನಮ್ಮದೇ ಕತೆಯೇನೋ ಎಂಬಂತೆ ಓದಿಸಿಕೊಂಡು ಹೋಗುತ್ತವೆ.

ಸ್ವತಃ ಜೀವನದಲ್ಲಿ ಹೊರಲಾರದಷ್ಟು ಕಷ್ಟದ ಮೂಟೆಯನ್ನೇ ಹೊತ್ತರೂ ಲ್ಯಾಂಬ್‌ನ ಬರಹಗಳಲ್ಲಿ ಮಾನವೀಯತೆ, ವ್ಯಂಗ್ಯ, ಮೊನಚು, ಹಾಸ್ಯ ಹಾಸು ಹೊಕ್ಕಾಗಿವೆ.

"A Desertation Upon a Roast Pig" ಎಂಬ ಪ್ರಬಂಧದಲ್ಲಿ ಲ್ಯಾಂಬ್ ಹಂದಿ ಮರಿಗಳು ಹಾಗೂ ಅವುಗಳ ಮಾಂಸದ ಬಗ್ಗೆ ಸ್ವಾರಸ್ಯಕರವಾಗಿ ಬರೆದಿದ್ದಾನೆ.

ಚಿತ್ರದಲ್ಲಿನ ಸುಂದರ ಹಂದಿ ಮರಿಗಳನ್ನು ನೋಡಿದಾಗ ನೆನಪಾಗಿದ್ದೇ ಈ ಪ್ರಬಂಧ.

ಲ್ಯಾಂಬ್‌ಗೆ ಹಂದಿ ಮಾಂಸ ಅದೂ ಎಳೆ ಹಂದಿಯ ಮಾಸವೆಂದರಂತೂ ಪಂಚಪ್ರಾಣವಂತೆ. ತನ್ನ ಜಿಹ್ವಾ ಚಾಪಲ್ಯದ ಜೊತೆಗೆ ಬೇಯಿಸಿದ ಮಾಂಸವನ್ನು ಮನುಷ್ಯ ತಿನ್ನಲು ಆರಂಭಿಸಿದ್ದು ಹೇಗೆ ಎಂಬುದರ ಬಗ್ಗೆಯೂ ಲೇಖಕ ಸ್ವಾರಸ್ಯಕರ ಕತೆಯೊಂದನ್ನು ನೀಡಿದ್ದಾನೆ.

ಸುಮಾರು ಎಪ್ಪತ್ತು ಸಾವಿರ ವರ್ಷಗಳಷ್ಟು ಕಾಲ ಮಾನವ ಹಸಿ ಮಾಂಸವನ್ನೇ ತಿನ್ನುತ್ತಿದ್ದನಂತೆ, ಮಾಂಸ ಬೇಯಿಸುವುದನ್ನು ಕಲಿತಿದ್ದು ತುಂಬಾ ಆಕಸ್ಮಿಕ. ಈ ವಾದಕ್ಕೆ ಪುಷ್ಠಿ ನೀಡಲು ಲ್ಯಾಂಬ್ ಚೀನೀ ಕತೆಯೊಂದರಲ್ಲಿನ ಹೋಟಿ ಮತ್ತು ಬೊಬೊ ಎಂಬ ಅಪ್ಪ-ಮಗನ ಪ್ರಯೋಗದ ಉದಾಹರಣೆ ನೀಡಿದ್ದಾನೆ.

ಕತೆ ಹೀಗಿದೆ-
ಎಂದಿನಂತೆ ಒಂದು ದಿನ ಹೋಟಿ ಮನೆಯತ್ತ ನೋಡಿಕೊಳ್ಳುವಂತೆ ಮಗ ಬೊಬೊ ನಿಗೆ ಹೇಳಿ ಕಾಡಿಗೆ ಹೋದ. ಸದಾ ಆಟದಲ್ಲೇ ಮೈಮರೆಯುತ್ತಿದ್ದ ಬಾಲಕ ಬೊಬೊ ಅಂದೂ ಕೂಡ ಗುಡಿಸಲಿನಲ್ಲಿ ಬೆಂಕಿಯ ಕಿಡಿಗಳೊಂದಿಗೆ ಆಡುತ್ತಿರುವಾಗ ಇಡೀ ಗುಡಿಸಲಿಗೇ ಬೆಂಕಿ ಹತ್ತಿಕೊಂಡಿತು. ಬೊಬೊ ಪ್ರಾಣಾಪಾಯದಿಂದ ಪಾರಾದನಾದರೂ ಒಂಬತ್ತು ಎಳೆ ಹಂದಿ ಮರಿಗಳೊಂದಿಗೆ ಜೋಪಡಿ ಸುಟ್ಟು ಬೂದಿಯಾಯಿತು. ಆ ದಿನಗಳಲ್ಲಿ ಚೀನಾದಲ್ಲಿ ಮನೆಯಲ್ಲಿ ಹಂದಿಗಳನ್ನು ಸಾಕುವುದೆಂದರೆ ಕುದುರೆಗಳನ್ನು ಸಾಕಿದಷ್ಟೇ ಪ್ರತಿಷ್ಠೆ-ಬೆಲೆ ಯಾಗಿದ್ದರಿಂದ ಬಾಲಕ ಬೊಬೊ ಬೋರೆಂದು ಅಳುತ್ತ ಕುಳಿತುಬಿಟ್ಟ. ಅಳುತ್ತಿರುವಾಗಲೇ ಗುಡಿಸಲಿನ ಅವಶೇಷಗಳಿಂದ ಒಂದು ಹಿತವಾದ ಸುಟ್ಟ ವಾಸನೆ ಬರುತ್ತಿದ್ದುದು ಆತನ ಗಮನಕ್ಕೆ ಬಂತು. ಕುತೂಹಲ ತಡೆಯಲಾರದ ಬೊಬೊ ಸುಟ್ಟ ವಾಸನೆ ಬರುತ್ತಿರುವೆಡೆ ಕೈ ಯಿಟ್ಟ. ಆ ಶಾಖಕ್ಕೆ ಬೆರಳುಗಳು ಸುಟ್ಟವು. ಸುಟ್ಟ ಬೆರಳುಗಳನ್ನು ತಂಪಾಗಿಸಲು ಕೂಡಲೇ ಬಾಯಲ್ಲಿಟ್ಟುಕೊಂಡ. ಹಿತವಾಗಿ ಬೆಂದಿದ್ದ ಹಂದಿಯ ಎಳೆಮಾಂಸದ ರುಚಿಯಿಂದ ಬೊಬೊ ಬ್ರಹ್ಮಾನಂದ ಪಡೆದ. ಈ ಹಿಂದೆ ಎಂದೂ ಆತ ಮಾಂಸದಲ್ಲಿ ಆ ರುಚಿಯನ್ನೇ ಕಂಡಿರಲಿಲ್ಲ. ಮನೆ ಸುಟ್ಟು ಹೋದ ಪರಿವೆಯೇ ಇಲ್ಲದೇ ಆತ ಬೆಂದ ಹಂದಿ ಮಾಂಸವನ್ನು ಮನಗಂಡ ಉಂಡ!

ಕಾಡಿನಿಂದ ಮರಳಿದ ಹೋಟಿ ತನ್ನ ಪುತ್ರರತ್ನನ ಅವತಾರ ಕಂಡು ಬೆಚ್ಚಿದ. ಗುಡಿಸಲು ಸುಟ್ಟು ಹೋಗಿದ್ದರೂ ಅದರ ಪರಿವೆಯೇ ಇಲ್ಲದೇ ತನ್ನಷ್ಟಕ್ಕೆ ತಾನು ಕೂತು ಅವಶೇಷಗಳಿಂದ ಏನೋ ತಿನ್ನುತ್ತಿರುವುದನ್ನು ಕಂಡ ಆತನ ಪಿತ್ತ ನೆತ್ತಿಗೇರಿತು. ಪರಿಣಾಮ ಮಗನಿಗೆ ಉಗಿದ, ಬಾರಿಸಿದ. ಉಹ್ಜ್ಞೂ, ಪ್ರಯೋಜನವಾಗಲಿಲ್ಲ. ಬೊಬೊ ತನ್ನ ಕಾಯಕವನ್ನು ಮುಂದುವರಿಸಿದ್ದ. ಆತ ತಲೆ ಎತ್ತಿದ್ದು ಹೊಟ್ಟೆ ತುಂಬ ತಿಂದು ತೇಗಿದ ಮೇಲೆಯೇ. ನಂತರ ತನ್ನ ಉತ್ಕೃಷ್ಟ ರುಚಿಯನ್ನು ಅಪ್ಪನಿಗೆ ಹೇಳಿದರೂ ಆತ ಅದನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ. ಈತನಿಗೆ ತಿಳಿಹೇಳುವುದು ಅಸಾಧ್ಯ ಎಂದರಿತ ಬೊಬೊ, ಅವನನ್ನೇ ಬೆಂದ ಮಾಂಸವಿದ್ದ ಸ್ಥಳಕ್ಕೆ ಕರೆತಂದು ಆತನ ಕೈಯನ್ನು ಸುಡುವ ಮಾಂಸದ ಮೇಲಿರಿಸಿದ. ಕೈಸುಟ್ಟುಕೊಂಡ ಹೋಟಿಯೂ ಅದನ್ನು ತಂಪಾಗಿಸಿಕೊಳ್ಳಲು ಎಂದಿನಂತೆ ಬಾಯಲ್ಲಿಟ್ಟುಕೊಂಡ. ಬಾಯಲ್ಲಿಟ್ಟಿದ್ದೇ ತಡ ಆತನಿಗೂ ಬ್ರಹ್ಮಾನಂದ ದರ್ಶನ! ನಂತರ ಅಪ್ಪ-ಮಗ ಚಕ್ಕಳ ಮಕ್ಕಳ ಹಾಕಿ ಕೂತು ಭೂರಿ ಭೋಜನ ಸವಿದಿದ್ದೇ ಸವಿದಿದ್ದು!!

ಮಾಂಸ ಬೇಯಿಸುವುದನ್ನು ಅವರು ಎಂದೂ ಕಂಡು, ಕೇಳಿರದಿದ್ದರಿಂದ ತಮ್ಮ 'ಪ್ರಥಮ ಅನುಭವ' ವನ್ನು ನೆರೆಹೊರೆಯವರಿಗೆ ಹೇಳಲು ಹೆದರಿಕೆಯಾಯಿತು. ಈ ರಹಸ್ಯವನ್ನು ತಮ್ಮಲ್ಲೇ ಬಚ್ಚಿಟ್ಟುಕೊಂಡರು. ಅಪ್ಪ-ಮಗನಿಗೆ ಬೇಯಿಸಿದ ಹಂದಿಯನ್ನು ತಿನ್ನುವ ಮನಸ್ಸಾದಾಗಲೆಲ್ಲ ಗುಡಿಸಲನ್ನೇ ಸುಟ್ಟು ಬಿಡುತ್ತಿದ್ದರು! ಹೋಟಿಯ ಗುಡಿಸಲು ಆಗಾಗ ನಿಗೂಢವಾಗಿ ಬೆಂಕಿಗೆ ಆಹುತಿಯಾಗುತ್ತಿದ್ದುದನ್ನು ಗಮನಿಸಿದ ನೆರೆಯವರಿಗೆ ಸಹಜವಾಗಿಯೇ ಕುತೂಹಲ ಉಂಟಾಯಿತು, ಇದರ ಬೆನ್ನ ಹಿಂದೆಯೇ ಅನೇಕ ವದಂತಿಗಳೂ ಶುರುವಾದವು. ಇದೂ ಕೋರ್ಟ್ ಮೆಟ್ಟಿಲನ್ನೂ ಹತ್ತಿತು. ಈ ಬಗ್ಗೆ ತೀರ್ಪು ನೀಡುವ ಮುನ್ನ ಬೆಂದ ಹಂದಿ ಮಾಂಸದ ಸ್ಯಾಂಪಲ್ ಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸುವಂತೆ ನ್ಯಾಯಾಧೀಶರು ಆದೇಶಿಸಿದರು. ಅದೂ ಆಯಿತು. ನ್ಯಾಯಮಂಡಳಿಯ ಎಲ್ಲಾ ಸದಸ್ಯರೂ ತಮ್ಮ ಬೆರಳುಗಳನ್ನು ನೆಕ್ಕಿದರು. ನೆಕ್ಕಿದ್ದೇ ತಡ, ಹಿಂದೆಂದೂ ಕಂಡಿರದ ರುಚಿ ಕಂಡ ಅವರು ಹೋಟಿ ಮತ್ತು ಬೊಬೊ ತಪ್ಪಿತಸ್ಥರಲ್ಲ ಎಂದು ಘೋಷಿಸಿ ಬಿಟ್ಟಿರು.

ನ್ಯಾಯಾಲಯದಲ್ಲಿ ಮಾಂಸದ ರುಚಿ ನೋಡಿದ ಜಡ್ಜಿ, ತನ್ನ ಮನೆಯನ್ನೇ ಸುಟ್ಟು ಬಿಡುವುದೇ! ಕ್ರಮೇಣ ಇದೇ ಪದ್ಧತಿ ಆ ಪ್ರಾಂತ್ಯದಲ್ಲಿ ಹಬ್ಬಿಬಿಟ್ಟಿತು. ಪರಿಣಾಮವಾಗಿ ಸೀಮೆ ಎಣ್ಣೆ- ಹಂದಿ ಮರಿಗಳು ತುಟ್ಟಿಯಾದವು, ವಿಮಾ ಕಂಪನಿಗಳು ಬಾಗಿಲು ಮುಚ್ಚಿದವು. ಈ ಎಲ್ಲಾ ಅನಾಹುತಗಳಾದ ಮೇಲಷ್ಟೇ ವ್ಯವಸ್ಥಿತವಾಗಿ ಮಾಂಸ ಬೇಯಿಸುವ ಪದ್ಧತಿಯನ್ನು ಕಂಡು ಹಿಡಿಯಲಾಯಿತು.

ಹೀಗಿದೆ ಮಾಂಸ ಬೇಯಿಸುವ ಪದ್ಧತಿ ಜಾರಿಗೆ ಬಂದ ಪುರಾಣ.

ಪರಮಶ್ರೇಷ್ಠ:
ಲ್ಯಾಂಬ್ ಗೆ, ಬೇಯಿಸಿದ ಹಂದಿ ಮಾಂಸ ಶ್ರೇಷ್ಠ ಖಾದ್ಯಗಳಲ್ಲೇ ಪರಮ ಶ್ರೇಷ್ಠ. ತಿನ್ನಲು ಯೋಗ್ಯವಾದ ಹಂದಿ ಹೇಗಿರಬೇಕೆಂದೂ ಆತ ಹೇಳುತ್ತಾನೆ ಓದಿ, "ಬೇಯಿಸಬೇಕಾಗಿರುವ ಹಂದಿ ಎಳೆಯದಾದಷ್ಟೂ ಒಳ್ಳೆಯದು, ಎಷ್ಟು ಎಳೆಯದು ಎಂದರೆ ಅದು ಒಂದು ತಿಂಗಳಿಗಿಂತ ಕಡಿಮೆ ವಯಸ್ಸಿನದಾಗಿರಬೇಕು". ಬೆಂದ ಈ ಮಾಂಸವನ್ನು ಊಟದ ಮೇಜಿನ ಮೇಲೆ ಸುಂದರವಾಗಿ ಇರಿಸಿದರೆ ಅದರ ಸವಿ ಬಲ್ಲವನೇ ಬಲ್ಲ. ಮಾಂಸವಿರಿಸಿದ ತಟ್ಟೆಯೇ ನನಗೆ ತೊಟ್ಟಿಲು ಎಂಬುದು ಲ್ಯಾಂಬನ ಅಂಬೋಣ.

ಹದವಾಗಿ ಬೆಂದ, ಗರಿಗರಿಯಾದ ಹಂದಿ ಮಾಂಸಕ್ಕೆ ಸಾಟಿಯೇ ಇಲ್ಲ. ಲ್ಯಾಂಬ್ ಪ್ರಕಾರ, ಎಳೆ ಹಂದಿ ಮರಿಯನ್ನು ಬೆಳೆದು ದೊಡ್ಡದಾಗಲು ಬಿಡಲೇ ಬಾರದು! ದೊಡ್ಡದಾಗಿ, ಹೊಲಸಾಗಿ, ಬಲಿತು ಅದನ್ನು ಬೇಯಿಸಿದರೆ ರುಚಿಯೇ ಹೊರಟು ಹೋಗಿಬಿಡುತ್ತದೆ. ಆತ ಇನ್ನೂ ಮುಂದುವರಿದು ಹೀಗೆ ಹೇಳುತ್ತಾನೆ, ಬೆಂಕಿಯಲ್ಲಿ ಎಳೆ ಹಂದಿಯ ಕಣ್ಣುಗಳು ಸುಟ್ಟು ಅದರಿಂದ ಜೆಲ್ಲಿಯಂಥ ದ್ರವ ಬಸಿಯುತ್ತಿದ್ದರೆ ಅದನ್ನು ಕಲ್ಪಿಸಿಕೊಳ್ಳುವುದೇ ಮಹದಾನಂದ. ನನಗೆ ಪೈನಾಪಲ್ ಎಂದರೆ ಇಷ್ಟ. ಆದರೆ ಇದು ನನ್ನ ಹಸಿವನ್ನು ಇಂಗಿಸುವುದಿಲ್ಲ. ಮಟನ್ ಚಾಪ್ ಕೂಡ ಅಷ್ಟಕ್ಕಷ್ಟೇ. ಹದವಾಗಿ ಬೆಂದ, ಗರಿಗರಿಯಾದ ಹಂದಿ ಮಾಂಸವಷ್ಟೇ ನನ್ನ ಹಸಿವಿನ ತಂತಿಯನ್ನು ಮೀಟುವುದು. ಹಂದಿ ಮಾಂಸ ತಿಂದರೆ, ಬಲಿಷ್ಠ ಮನುಷ್ಯ ಇನ್ನೂ ಬಲಿಷ್ಠನಾಗುತ್ತಾನೆ, ಪೇಲವ ಮನುಷ್ಯ ಚುರುಕಾಗುತ್ತಾನೆ ಎಂಬುದು ಲ್ಯಾಂಬ್ ವೈದ್ಯಕೀಯ ಅನುಭವ!


ಲ್ಯಾಂಬ್‌ನ ಈ ಸುಂದರ ಪ್ರಬಂಧ ನೆನಪಿಸಿದ ಕನ್ನಡಪ್ರಭದ ಚಿತ್ರಕ್ಕೆ ಮತ್ತೊಮ್ಮೆ ಧನ್ಯವಾದ.