ಶಹಬ್ಬಾಶ್ ಮುಂಬೈಕಾರ್!
ಮುಂಬೈನಲ್ಲಿ ಜೂನ್ 11, 2006 ರ ಸಂಜೆ 6-20 ರಿಂದ 6-32 ರ ವರೆಗೆ ಕೇವಲ ಹನ್ನೆರಡೇ ನಿಮಿಷಗಳಲ್ಲಿ 7 ಬಾರಿ ಸಂಭವಿಸಿದ ಭಾರಿ ಸ್ಫೋಟಕ್ಕೆ 200ಕ್ಕೂ ಹೆಚ್ಚು ಮುಗ್ಧ ಜನರು ಸಾವನ್ನಪ್ಪಿರುವ ಸುದ್ದಿ ಬೆಳಗಿನ ಪತ್ರಿಕೆಗಳಲ್ಲಿ ಅಚ್ಚಾಗಿ ಅದರ ಶಾಯಿ ಆರುವ ಮುನ್ನವೇ ಜುಲೈ 12ರ ಬೆಳಗ್ಗೆ ಅಲ್ಲಿನ ಜನಜೀವನ ಮಾಮೂಲಿ ಸ್ಥಿತಿಗೆ ಬಂದಾಗಿತ್ತು.
ಅದೇ ಮುಂಬೈ ಸೆಂಟ್ರಲ್-ವಿರಾರ್ ಮಾರ್ಗದ ರೈಲುಗಳಲ್ಲಿ ಜನ ಮತ್ತೆ ತಮ್ಮ "ರೋಜ್ ಕಾ ರೋಟಿ" ಗಾಗಿ ಪಯಣ ಬೆಳೆಸಿದರು. ನಿನ್ನೆಯ ಘಟನೆಗೆ ಬೆದರಿ ಯಾರೂ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಬಹುತೇಕ ಎಲ್ಲಾ ಕಚೇರಿಗಳಲ್ಲಿ ಮಹಿಳೆಯರೂ ಸೇರಿದಂತೆ ಹಂಡ್ರೆಡ್ ಪರ್ಸೆಂಟ್ ಅಟೆಂಡೆನ್ಸ್. ಅದೇ ಮುಂಬೈಕಾರರ ಸ್ಪೆಶಾಲಿಟಿ.
ಇದೇ ನಮ್ಮ ಬೆಂಗಳೂರಿನಲ್ಲಾಗಿದ್ದರೆ?
ಘಟನೆಯ ಹಿಂದೆಯೇ ಬಂದ್‌ಗೆ ಕರೆ. ಪೊಲೀಸರತ್ತ ಕಲ್ಲು ತೂರಾಟ, ಹಿಂಸಾಚಾರ. ಶಾಲಾ-ಕಾಲೇಜುಗಳಿಗೆ ರಜೆ. ಅಂಗಡಿ-ಮುಂಗಟ್ಟುಗಳಿಗೆ ಅಘೋಷಿತ ಬಂದ್. ಉಗ್ರಗಾಮಿಗಳ ದುಷ್ಕೃತ್ಯಕ್ಕಿಂತಲೂ ನಮ್ಮವರ ಉಪಟಳವೇ ಸಹಿಸದಂತಾಗಿ ಬಿಡುತ್ತಿತ್ತು.
ಮುಂಬೈನಲ್ಲಿ ನಿನ್ನೆ ಬಾಂಬ್ ಸ್ಫೋಟಿಸಿದಾಗಿನಿಂದ ನಡೆದ ಬೆಳವಣಿಗೆಗಳನ್ನು ನೋಡಿದರೆ ಮುಂಬೈಗರಿಂದ ನಾವು ಕಲಿಯಬೇಕಿರುವುದು ತುಂಬಾ ಇದೆ ಅನ್ನಿಸುತ್ತದೆ.
ಘಟನಾ ಸ್ಥಳಕ್ಕೆ ಪೊಲೀಸರು ತಲುಪುವ ಮೊದಲೇ ರೇಲ್ವೆ ಹಳಿಯ ಅಕ್ಕಪಕ್ಕದ ಮನೆಯಲ್ಲಿದ್ದವರು ಜನರ ನೆರವಿಗೆ ಧಾವಿಸಿಯಾಗಿತ್ತು. ತೀವ್ರವಾಗಿ ಗಾಯಗೊಂಡವರಿಗೆ ಕೆಲವರು ಸ್ಥಳದಲ್ಲೇ ಶುಶ್ರೂಷೆ ಮಾಡಿದರೆ, ಇನ್ನು ಹಲವರು ತಮ್ಮ ಮೊಬೈಲ್ ಫೋನ್ ನೀಡಿ ಅವರ ಮನೆಯವರೊಂದಿಗೆ ಮಾತನಾಡಲು ಸಹಾಯ ಮಾಡುತ್ತಿದ್ದರು. ಸತ್ತ ನತದೃಷ್ಟರ ಮೃತದೇಹಗಳನ್ನು ಸಾಗಿಸಲು ಕೆಲವರು ತಮ್ಮ ಮನೆಯಲ್ಲಿನ ಬೆಡ್ ಶೀಟ್ ಒದಗಿಸಿದರು, ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ದಾರಿಪಾಲಾಗಿದ್ದ ಜನರಿಗೆ ತಮ್ಮ ಸ್ವಂತ ವಾಹನಗಳಲ್ಲಿ ಮನೆ ಮುಟ್ಟಿಸಿದವರು ಇನ್ನಾರೋ.
ಒಬ್ಬರಿಗೊಬ್ಬರಿಗೆ ನಂಟಿಲ್ಲ. ಆದರೂ ಊರೆಲ್ಲಾ ನೆಂಟರು. ಮುಂಬೈ ಮಣ್ಣಿನ ಗುಣವೇ ಅಂಥದ್ದು. ಕ್ಷಣಮಾತ್ರದಲ್ಲಿ ಅದು ನಿಮ್ಮನ್ನು ಆತ್ಮೀಯರನ್ನಾಗಿಸಿಬಿಡುತ್ತದೆ.
ಸ್ಫೋಟದ ಗಾಯಾಳುಗಳಿಗೆ ರಕ್ತದ ಅಗತ್ಯವಿದೆ ಎಂದು ರೇಡಿಯೊ-ಟಿವಿಗಳಲ್ಲಿ ಪ್ರಸಾರವಾಗಿದ್ದೇ ತಡ. ಮುಂಬೈ ಆಸ್ಪತ್ರೆಗಳಿಗೆ ರಕ್ತದಾನಿಗಳ ಪ್ರವಾಹವೇ ಹರಿದು ಬಂತು. ರಕ್ತದ ಬಾಟಲಿಗಳು ತುಂಬಿ ತುಳುಕುವಷ್ಟು ರಕ್ತ ಭರ್ತಿಯಾಯಿತು. ಕೊನೆಗೆ ಆಸ್ಪತ್ರೆಯವರೇ "ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವಷ್ಟು ರಕ್ತ ಸಂಗ್ರಹವಾಗಿದೆ. ಸದ್ಯಕ್ಕೆ ರಕ್ತದ ಅವಶ್ಯಕತೆಯಿಲ್ಲ" ಎಂದು ಮಾಧ್ಯಮಗಳ ಮೂಲಕ ತಿಳಿಸಿ, ಒತ್ತಾಯಪೂರ್ವಕವಾಗಿ ರಕ್ತದಾನ ನಿಲ್ಲಿಸಬೇಕಾಯಿತು.
ಅದು ಮುಂಬೈಕಾರರ "ರಕ್ತ ಸಂಬಂಧ".
"ಎಷ್ಟೇ ಬಾಂಬ್ ಗಳು ಸ್ಫೋಟಗೊಂಡರೂ ನಾವು ಧೃತಿಗೆಡುವುದಿಲ್ಲ" ಎಂಬ ಸಂದೇಶ ಸಾರುವಂತೆ ಎಂದಿನಂತೆ ಇಂದೂ ತಮ್ಮ ಜೀವನ ಆರಂಭಿಸಿರುವ ಮುಂಬೈ ಜನರ ಸ್ಫೂರ್ತಿ ಕಂಡು ಉಗ್ರಗಾಮಿಗಳು ಕೈ ಕೈ ಹಿಸುಕಿಕೊಂಡಿರಬೇಕು. ಉಗ್ರರೂ ಮನುಷ್ಯರೇ. ಅವರಿಗೂ ಹೆಂಡತಿ, ಮಕ್ಕಳು, ತಂದೆ, ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮ ಇದ್ದಾರೆ. ಬಾಂಬ್ ದಾಳಿಗೆ ಸಿಲುಕಿ ಸತ್ತವರೂ ಕೂಡ ಇಂಥದೇ ಸಂಬಂಧವಿರುವ ಮನುಷ್ಯರು. ಇವರ ಬಂಧುಗಳ ಶಾಪ ದುಷ್ಟರಿಗೆ ತಟ್ಟದೇ ಇದ್ದೀತೆ? ಮುಂಬಾದೇವಿ ಅವರನ್ನು ಕ್ಷಮಿಸಿಯಾಳೆ?
ಮುಂಬೈನಲ್ಲಿ ಸ್ಫೋಟ ಸಂಭವಿಸಿದ ದಿನವೇ ಶ್ರೀನಗರದಲ್ಲೂ ಸ್ಫೋಟ ಸಂಭವಿಸಿದೆ. ಅಲ್ಲೂ ಕೂಡ ಮುಗ್ಧರ ಮೇಲೆ. ಆದರೆ ಅಲ್ಲಿನ ಜನರ ಪ್ರತಿಕ್ರಿಯೆ ಹೇಗಿತ್ತು ಎಂಬುದು ನಮಗೆಲ್ಲ ಗೊತ್ತೇ ಇದೆ.
ಮುಗ್ಧ, ಬಡ, ಅಲ್ಪಸಂಖ್ಯಾತ ಹಿಂದೂಗಳನ್ನು ರಾಕ್ಷಸರೂಪಿ ಉಗ್ರಗಾಮಿಗಳು ಸಾಲಾಗಿ ನಿಲ್ಲಿಸಿ ಗುಂಡು ಹೊಡೆದು ಸಾಯಿಸುತ್ತಿದ್ದರೆ, ಅಲ್ಲಿನ ಜನ ಬಹಿರಂಗವಾಗಿ ಎದೆ-ಎದೆ ಬಡಿದುಕೊಂಡು ಉಗ್ರರಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ.
ಅದೇ ಮುಂಬೈಗೂ-ಶ್ರೀನಗರಕ್ಕೂ ಇರುವ ವ್ಯತ್ಯಾಸ.
ಮುಂಬೈಕಾರರಿಗೆ ಶಹಬ್ಬಾಶ್ ಎಂದರೆ ಕಾಶ್ಮೀರಿಗಳಿಗೆ ಏನೆನ್ನಬೇಕು?