ಐಟಿ ಚಳಿಗಾಲ ಅಡಗಲು ಸ್ಥಳವೆಲ್ಲಿ!
ಬೆಂಗಳೂರು ನಮ್ಮಂಥವರಿಗಲ್ಲಾರಿ...
ಎಂದು ಈಚೆಗೆ ಸ್ನೇಹಿತರೊಬ್ಬರು ಬೇಸರಿಸಿಕೊಂಡರು. ಬೆಂಗಳೂರಿನಲ್ಲಿ ಮನುಷ್ಯ ಜೀವನವೊಂದನ್ನು ಬಿಟ್ಟರೆ ಮಿಕ್ಕಿದ್ದೆಲ್ಲ ತುಟ್ಟಿ. ತರಕಾರಿ, ಹಾಲು, ಬಸ್ಸು, ಕರೆಂಟು, ಮನೆ ಬಾಡಿಗೆ, ಉಡುಗೆ-ತೊಡುಗೆ ಹೀಗೆ ಪಟ್ಟಿ ಇನ್ನೂ ಬೆಳೆಯುತ್ತಾ ಹೋಗುತ್ತದೆ.
ಹಾಗಾದರೆ ಶ್ರೀ ಸಾಮಾನ್ಯನಿಗೆ ಬೆಂಗಳೂರಿನಲ್ಲಿ ಜೀವಿಸುವ ಹಕ್ಕೇ ಇಲ್ಲವೇ? ಏನಾಯ್ತು ಬೆಂಗಳೂರಿಗೆ ಎಲ್ಲಿ ತಪ್ಪಿತು ತಾಳ?
ತಿಂಗಳಿಗೆ 10-12 ಸಾವಿರ ರೂಪಾಯಿ ಸಂಬಳ ಪಡೆಯುವ ನಮ್ಮಂಥ ಮಧ್ಯಮ ವರ್ಗದವರಿಗೆ ಬೆಂಗಳೂರು ಜೀವನ ಇಂದು ದುರ್ಭರವಾಗುತ್ತಿದೆ. ಚಿಕ್ಕ ಮನೆಗೆ ಯದ್ವಾತದ್ವಾ ಬಾಡಿಗೆ ಕೇಳುವ ಮಾಲಿಕ, ಸಮೀಪದ ಕೋಲಾರದಲ್ಲೇ ಬೆಳೆಯುವ ಕೆಜಿ ಟೊಮ್ಯಾಟೊಗೆ 12 ರೂಪಾಯಿ, ಹೊಸಕೋಟೆಯ ಸುತ್ತಮುತ್ತಲಿಂದ ರೈತರಿಂದ ಲೀಟರ್‌ಗೆ ಎಂಟು ರೂಪಾಯಿಗೆ ಹಾಲು ಖರೀದಿಸಿ ಜನರಿಗೆ 16 ರೂಪಾಯಿಗೆ ಮಾರುವ ಸರಕಾರ, ಎರಡು ಕಿಮಿ ಸ್ಟಾಪಿಗೆ 5 ರೂಪಾಯಿ ಪೀಕಿಸುವ ಕಂಡಕ್ಟರ್, 60 ಬೈ 40 ಸೈಟಿಗೆ 40 ರಿಂದ 50 ಲಕ್ಷ ಕೇಳುವ ಭೂಮಾಲಿಕ... ಏನಿದು ನಾನ್ ಸೆನ್ಸ್?
ಕೇಳಿದರೆ ಐಟಿ ಹಬ್, ಐಟಿ ಕ್ಯಾಪಿಟಲ್, ಐಟಿ ಸಿಟಿ, ಹೈಟೆಕ್ ಸಿಟಿ ಎಂದೆಲ್ಲಾ ಹೇಳುತ್ತಾರೆ. ಹಾಗಾದರೆ ಐಟಿಯಲ್ಲಿ ಕೆಲಸ
ಮಾಡುವವರಿಗೆ ಮಾತ್ರ ಬೆಂಗಳೂರೇ? ನಾವೂ ಮನುಷ್ಯರಲ್ಲವೇ?
ಬೆಂಗಳೂರಿನಲ್ಲಿ ಶ್ರೀಸಾಮಾನ್ಯನಿಗೆ ಈ ರೀತಿಯ ಅನ್ಯಾಯ ನೋಡುತ್ತಿದ್ದರೆ, ಅಲ್ಲೂ ಒಂದು ಸರಕಾರವಿದೆ, ಕಾನೂನು-ಸುವ್ಯವಸ್ಥೆ ಇದೆ ಎಂದೆನಿಸುವುದೇ ಇಲ್ಲ. ಅನಗತ್ಯವಾಗಿ ಏರುತ್ತಿರುವ ಬೆಲೆ ನಿಯಂತ್ರಣ ಸಾಧ್ಯವೇ ಇಲ್ಲವೇ?
ಬೆಂಗಳೂರಿಗೆ ಐಟಿ ಉದ್ಯಮ ಕಾಲಿಟ್ಟಂದಿನಿಂದ ಜನಜೀವನ ತುಟ್ಟಿಯಾಗಿಬಿಟ್ಟಿದೆ. ಇಲ್ಲಿ ಸಂಬಳ ಶುರುವಾಗುವುದೇ 30 ಸಾವಿರ ರೂಪಾಯಿಯಿಂದ. ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಸಾಫ್ಟ್‌ವೇರ್ ಎಂಜಿನಿಯರುಗಳಾಗಿದ್ದರಂತೂ ತಿಂಗಳಿಗೆ 60 ಸಾವಿರ ರೂಪಾಯಿ ಸಂಬಳ. ಅವರು ಎಷ್ಟು ಬೆಲೆ ತೆತ್ತಾದರೂ ತಮಗೆ ಬೇಕಾದುದನ್ನು ಕೊಂಡುಕೊಳ್ಳಬಲ್ಲರು. ಅದಕ್ಕೆ ಅಲ್ಲಿ ಎಲ್ಲ ವಸ್ತುಗಳ ಬೆಲೆ ಗಗನಮುಖಿ. ಬೇರೆಯವರ ಗತಿ?
ಈಚೆಗೆ ಫ್ಯಾಬ್ ಸಿಟಿ ಕರ್ನಾಟಕದ ಕೈ ತಪ್ಪಿದ್ದಕ್ಕೆ ಅನೇಕ ಮಾಧ್ಯಮಗಳು ಆಕಾಶವೇ ಕಳಚಿ ಬಿತ್ತು ಎನ್ನುವ ರೀತಿಯಲ್ಲಿ ಬರೆದವು. ಇದಕ್ಕೆ ಪ್ರತಿಯಾಗಿ ಆಂಧ್ರಪ್ರದೇಶಕ್ಕಿಂತ ನಮ್ಮ ರಾಜ್ಯ ಹೆಚ್ಚಿನ ಸೌಲತ್ತು ಕೊಡುವುದಾಗಿ ಸವಾಲಿನ ರೀತಿಯಲ್ಲಿ ಹೇಳಿದರು ನಮ್ಮ ಮುಖ್ಯಮಂತ್ರಿ.
ಫ್ಯಾಬ್ ಸಿಟಿ ಬಂದು ಅಗ್ಗದ ದರದಲ್ಲಿ ನಮ್ಮದೇ ನೀರು, ವಿದ್ಯುತ್ ಪಡೆದು ನಮ್ಮ ವಾತಾವರಣವನ್ನೇ ಕಲುಷಿತಗೊಳಿಸಿ ತಮಿಳರಿಗೋ, ತೆಲುಗರಿಗೋ ಇಲ್ಲವೇ ಬಿಹಾರದವನಿಗೋ ಉದ್ಯೋಗ ಕೊಟ್ಟು, ನಮ್ಮ ಜೀವನವನ್ನು ಅಧೋಗತಿಗಿಳಿಸುವ ಇಂಥ ಫ್ಯಾಬ್ ಸಿಟಿಗಳು ಇದ್ದರೆಷ್ಟು ಬಿಟ್ಟರೆಷ್ಟು. ನಾಗೇಶ ಹೆಗಡೆಯವರು ಬರೆದಂತೆ-ಫ್ಯಾಬ್ ಸಿಟಿಯಂಥ ಐಟಿ ಕಂಪನಿಗಳು ನಮ್ಮಲ್ಲಿಗೇ ಬರಬೇಕೆಂದೇನೂ ಇಲ್ಲ. ಕನ್ನಡಿಗರಿಗೆ ನಿಜವಾದ ಸಾಮರ್ಥ್ಯ ಇದ್ದರೆ ಫ್ಯಾಬ್ ಸಿಟಿಯಿದ್ದಲ್ಲಿಗೇ ನಮ್ಮವರು ಹೋಗುತ್ತಾರೆ.
ಈಗ ಪ್ರಾರಂಭವಾಗಿರುವ ಐಟಿ ಚಳಿಗಾಲ ಹೀಗೇ ಮುಂದುವರಿದರೆ ಅಡಗಲು ಸ್ಥಳವೆಲ್ಲಿ?
4 Comments:
ಅಯ್ಯಯ್ಯೋ ... ಬೇಡ ಬಿಡಿ ಬೆಂಗ್ಳೂರು ಸಹವಾಸ... ಅಂತ ನೀವೂ ಚೆನ್ನೈಗೇ ಓಡಿಹೋದ್ರೋ? ನಿಮ್ಮಂಥವರು ಬೆಂಗಳೂರಿನ ಕೈತಪ್ಪದಂತೆ ಮಾನ್ಯ ಮುಖ್ಯಮಂತ್ರಿಗಳು ಗಲಾಟೆ ಎಬ್ಬಿಸಿ ಹೇಳಿಕೆ ಕೊಡುವುದಿಲ್ಲವೇಕೆ? ಫ್ಯಾಬ್ ಸಿಟಿಯಿಂದ ಫ್ಯಾಬ್ಯುಲಸ್ ಆಗಿ ಗಂಟು ಸಿಗುತ್ತದೆ ಎಂದಾದರೆ, ಕನ್ನಡದ ಪ್ರತಿಭೆಗಳು ಕೂಡ ಫ್ಯಾಬ್ಯುಲಸ್ ಆಗಿರಲಾರವೆ? ಅದಕ್ಕಾಗಿ ರಾಜ್ಯ ಸರಕಾರವು ಕನ್ನಡಿಗರು ಕೂಡ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಡೆಗಟ್ಟಲು ತಕ್ಷಣವೇ ಅಧ್ಯಾದೇಶ ಹೊರಡಿಸಬೇಕು ಎಂದು ನಮ್ಮ ತಂಡ ಆಶಿಸುತ್ತದೆ...
ಜೈ ಕರಿನಾಟಕ ಸರಕಾರ
ಜೈ ಕರ್ನಾಟಕ ಮಾತೆ
ಎಲ್ಲಾ ಜಾಗತಿಕ ಮಾರುಕಟ್ಟೆಯ ಫಲ ಸ್ವಾಮಿ. ಬ್ಲಾಗ್ ಜಗತ್ತಿಗೆ ಸ್ವಾಗತ. ನನ್ನ ಬ್ಲಾಗಿಗೆ ಕೊಂಡಿ ಕೊಟ್ಟದ್ದಕ್ಕೆ ಧನ್ಯವಾದಗಳು.
ಶ್ರೀ ಶಾಮ್ ಕಶ್ಯಪ್ ಅವರೇ,
ನಿಮ್ಮ ಸ್ವಾಗತ-ಹಾರೈಕೆ-ಪ್ರತಿಕ್ರಿಯೆಗೆ ಧನ್ಯವಾದಗಳು.
ಫ್ಯಾಬ್ ಸಿಟಿಯಂಥ ಬಹುರಾಷ್ಟ್ರೀಯ ಕಂಪನಿಗಳು ಜಾಗತಿಕ ಮಾರುಕಟ್ಟೆಯ ಫಲ ಎಂಬುದನ್ನು ನಾನೂ ಒಪ್ಪುತ್ತೇನೆ. ಆದರೆ ಅವರು ತಮ್ಮ ಸಂಸ್ಥೆಯನ್ನು ಸ್ಥಾಪಿಸಲು ಭೂಮಿ ನೀಡಿದ ಸ್ಥಳೀಯರಿಗೇ ಉದ್ಯೋಗಾವಕಾಶ ಕೊಡದಿದ್ದರೆ ಏನು ಫಲ?
ಕನ್ನಡದ ಪ್ರತೀ ಬ್ಲಾಗಿನಲ್ಲೂ ಇತರ ಕನ್ನಡ ಬ್ಲಾಗ್ ಗಳ ಕೊಂಡಿಗಳನ್ನು ನೀಡುವ ಮೂಲಕ ನೆಟ್ ನಲ್ಲಿ ಕನ್ನಡ ಸಮುದಾಯವನ್ನೂ ಬೆಳೆಸಲೂ ಎಲ್ಲರೂ ಯತ್ನಿಸೋಣ.
Dear Mr Shyam,
I agree that b'coz of these companies all this is happening, but it very wrong thing to blame IT companies that they are not providing employement to localites, did they ever tell u that ur a localite and we will not give u job. if ur capable of doing the such jobs they 100% employ u and u can also earn as others are doing...
Post a Comment
<< Home