Monday, April 17, 2006

ಸಾಂಸ್ಕೃತಿಕ ರಾಯಭಾರಿ ನಿರ್ಗಮನ

ಯುಗಪುರುಷ ಡಾ.ರಾಜ್‌ಕುಮಾರ್ ಗೆ ಅಕ್ಷರ ನಮನ


ಕರ್ನಾಟಕ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವಾಗಲೇ ಸುವರ್ಣ ಸರಪಳಿಯ ಮಹತ್ವದ ಕೊಂಡಿಯೊಂದು ಕಳಚಿಕೊಂಡಿದೆ. ಸುವರ್ಣ ಸಂಭ್ರಮದ ಹಬ್ಬದ ನಾಡಿನಲ್ಲಿ ಸೂತಕದ ಛಾಯೆ ಕವಿದಿದೆ. ಕಳೆದ ಐದು ದಶಕಗಳಿಂದ ಇಡೀ ಜಗತ್ತಿಗೇ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿದ್ದವರು ಶಾಶ್ವತ ನಿವೃತ್ತಿ ಪಡೆದು ಕಾಣದ ಲೋಕಕ್ಕೆ ಸರಿದಿದ್ದಾರೆ. ಯುಗಾದಿ ಕಳೆದ ಕೇವಲ ಹದಿನೈದೇ ದಿನಗಳಲ್ಲಿ ಯುಗಾಂತ್ಯವಾಗಿದೆ. ಚಿತ್ರರಂಗ ಬಡವಾಗಿದೆ. ವಜ್ರದೇಹಿ, ಯೋಗಿ, ಬಂಗಾರದ ಮನುಷ್ಯ ಮಣ್ಣಿನಲ್ಲಿ ಲೀನವಾಗಿದ್ದಾರೆ.

ಡಾ.ರಾಜ್‌ಕುಮಾರ್ ಇಹಲೋಕ ತ್ಯಜಿಸಿದ್ದಾರೆ.

ಚಿತ್ರ ರಸಿಕರಿಗೆ ಆರಾಧ್ಯದೈವ, ಚಿತ್ರಪ್ರೇಮಿಗಳಿಗೆ ಅಣ್ಣಾವ್ರು, ಸರೀಕರ ಪಾಲಿಗೆ ರಾಜಣ್ಣ, ಕಿರಿಯರಿಗೆ ಅಪ್ಪಾಜಿ, ಕೆಲವರಿಗೆ ಡಾ.ರಾಜ್‌ಕುಮಾರ್, ಇನ್ನು ಹಲವರಿಗೆ ಡಾ.ರಾಜ್‌.

ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್ ಪ್ರೀತಿಯಿಂದ ಕರೆಸಿಕೊಂಡಿದ್ದು ಹೀಗೆ.

ಕೇವಲ ಮೂರನೆಯ ತರಗತಿವರೆಗೆ ಓದಿ, ಚಿತ್ರರಂಗದ ಉನ್ನತ ಹಂತ (ಸ್ಯಾಚುರೇಶನ್ ಪಾಯಿಂಟ್) ತಲುಪಿದರೂ, ಸಿರಿವಂತಿಕೆಯನ್ನು ಕಂಕುಳಲ್ಲೇ ಇರಿಸಿಕೊಂಡಿದ್ದರೂ, ಸದಾ ನಯ-ವಿನಯ, ಸರಳ ಜೀವನ, ಸಾತ್ವಿಕ ನಡೆ-ನುಡಿಯಿಂದ ಇಡೀ ನಾಡಿನ-ದೇಶದ ಗಮನ ಸೆಳೆದ ಹಿರಿಯ ಚೇತನ ಡಾ.ರಾಜ್‌ಕುಮಾರ್ ನಮ್ಮೊಂದಿಗಿಲ್ಲ ಎಂದರೆ ನಂಬಲು ಸಾಧ್ಯವೇ ಆಗುತ್ತಿಲ್ಲ.
ನಾನು ಚಲನಚಿತ್ರಗಳನ್ನು ಅಷ್ಟಾಗಿ ನೋಡದಿದ್ದರೂ ಡಾ.ರಾಜ್ ಒಬ್ಬ ವ್ಯಕ್ತಿಯಾಗಿ, ಶಕ್ತಿಯಾಗಿ ಅಷ್ಟಾಗಿ ಏಕೆ ಮೆಚ್ಚುಗೆಯಾಗುತ್ತಾರೆ ಎಂಬ ಪ್ರಶ್ನೆಗೆ ನನ್ನಷ್ಟಕ್ಕೆ ನಾನೇ ಕಂಡುಕೊಂಡ ಉತ್ತರವೆಂದರೆ- ರಾಜ್ ನಮ್ಮಲ್ಲಿ ನಮ್ಮವರೊಬ್ಬರಾಗಿದ್ದರು.

ಡಾ.ರಾಜ್ ಮಾಡದ ಪಾತ್ರಗಳು ಯಾವುದಾದರೂ ಇದೆಯೇ? ಬೇಟೆಗಾರ ಬೇಡ, ಬೆವರು ಸುರಿಸಿ ದುಡಿವ ರೈತ, ಕಾಫಿ ತೋಟದಲ್ಲಿ ರೈಟರ್, ಕುಸ್ತಿಪಟು, ಪೊಲೀಸ್, ಅಧ್ಯಾಪಕ, ಕೆಲಸಗಾರ, ಮಧ್ಯಮವರ್ಗದ ಬಡಜೀವ, ಕೂಲಿಗಾರ, ಕರುಣಾಮಯಿ ಅಣ್ಣ-ತಮ್ಮ, ವಾತ್ಸಲ್ಯದ ಅಪ್ಪ, ಕವಿ, ಯುವ ಪ್ರೇಮಿ, ಶಿಕ್ಷಕ, ಉಪನ್ಯಾಸಕ, ಪ್ರೊಫೆಸರ್ ... ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ತಾನು ಮಾಡಿದ ಪಾತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಈ ಮಹಾನ್ ನಟ ಸಮಾಜದ ಪ್ರತಿಯೊಂದು ವರ್ಗದಲ್ಲೂ ತನ್ನನ್ನು ಗುರುತಿಸಿಕೊಂಡಿದ್ದರು. ನಟಸಾರ್ವಭೌಮ ಎಂಬ ಹೆಸರಿಗೆ ಅತ್ಯಂತ ಸೂಕ್ತ ಅನ್ವರ್ಥಕ. ಪತ್ರಿಕೆಗಳಲ್ಲಿ ಬಂದಂತೆ ಕರ್ನಾಟಕ ರತ್ನ, ಪದ್ಮಭೂಷಣ, ಪದ್ಮವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಹೀಗೆ ಹಲವಾರು ಪ್ರಶಸ್ತಿಗಳಿಗೆ ಡಾ.ರಾಜ್ ಅವರಿಂದ ಗೌರವ ಬಂದಿತು.

ಡಾ.ರಾಜ್ ಅವರ ಸಿನಿಮಾಗಳನ್ನು ನೋಡಿದವರು, ಈ ಮಹಾನ್ ನಟನದು ಕೇವಲ ಅಭಿನಯವಷ್ಟೇ ಅಲ್ಲ, ನಿಜ ಜೀವನದಲ್ಲಿ ನಮ್ಮ ಕಷ್ಟ-ಭಾವನೆಗಳನ್ನೇ ಅವರು ಪ್ರತಿನಿಧಿಸಿದ್ದಾರೆ ಎಂಬ ಭಾವ ಮೂಡುತ್ತದೆ.

ಆದರೆ 77 ರ ಹರೆಯದಲ್ಲೂ ತಾವಿನ್ನೂ ಕಲಿಯಬೇಕಿರುವುದು ಬಹಳಷ್ಟಿದೆ, ಚಿತ್ರರಂಗ ಒಂದು ಸಮುದ್ರ, ತಮಗೆ ಸಂದ ಪ್ರಶಸ್ತಿಗಳೆಲ್ಲ ಅಭಿಮಾನಿ ದೇವರ ಹಾರೈಕೆ ಎಂದೇ ನಮ್ರತೆಯಿಂದ ನುಡಿಯುತ್ತಿದ್ದ ಅಭಿಮಾನಿಗಳ ಈ ಮಹಾನ್ ಪೂಜಾರಿ, ನಿರಹಂಕಾರಿ- ಯುವಪೀಳಿಗೆಗೆ ಆದರ್ಶಪ್ರಾಯ. ಕೀರ್ತಿ, ಸಂಪತ್ತಿನ ಬೆಟ್ಟವೇರಿದರೂ ತನ್ನನ್ನು ಮಾತ್ರ ಇರುವೆಯೊಂದಿಗೆ ಗುರುತಿಸಿಕೊಳ್ಳುತ್ತಿದ್ದ ಈ ಚೇತನ ನಮಗೆಲ್ಲ ಸ್ಫೂರ್ತಿ; “ನೀನು ಮುಗಿಲು ನಾವು ನೆಲ...”.

ಕನ್ನಡ ಮಣ್ಣಿನ ಬಂಗಾರದ ಮನುಷ್ಯ, ಚಿತ್ರಲೋಕದ ಧ್ರುವತಾರೆ, ಕನ್ನಡದ ಕಂಠೀರವ, ಕನ್ನಡದ ಕಣ್ಮಣಿ ಕಣ್ಮುಚ್ಚಿದಾಗ ತಮ್ಮ ಪಾಲಿನ ಆರಾಧ್ಯ ದೈವದ ಅಂತಿಮ ದರ್ಶನ ಪಡೆಯಲು ಸೇರಿದ ಜನಸಾಗರವೇ ಅವರ ಜನಪ್ರಿಯತೆಗೆ ಸಾಕ್ಷಿ. ಶರಣರ ಸಾವು ಮರಣದಲ್ಲೇ ಅಲ್ಲವೇ ಗೊತ್ತಾಗುವುದು?

ಕೆಲವರು ಹೇಳುವಂತೆ ತಮಿಳುನಾಡಿಗೊಬ್ಬ ಎಂಜಿಆರ್, ಆಂಧ್ರಪ್ರದೇಶಕ್ಕೊಬ್ಬ ಎನ್‌ಟಿಆರ್ ಇದ್ದಂತೆ ಕರ್ನಾಟಕಕ್ಕೊಬ್ಬ ಡಾ.ರಾಜ್‌ಕುಮಾರ್ ಎಂಬ ಮಾತನ್ನು ನಾನಂತೂ ಒಪ್ಪುವುದಿಲ್ಲ. ಡಾ.ರಾಜ್ ಇವರಿಬ್ಬರಿಗಿಂತಲೂ ಭಿನ್ನ ಎಂಬುದೇ ನನ್ನ ಸ್ಪಷ್ಟ ಅಭಿಪ್ರಾಯ. ತಾವು ಮಾಡಿದ ನಟನೆಯನ್ನೇ ನಂಬಿ ತಮಗೆ ಗೌರವ ನೀಡಿದ ಜನರ ಪ್ರೀತಿಯನ್ನೇ ಕ್ಯಾಶ್ ಮಾಡಿಕೊಂಡ ತಮಿಳು, ಆಂಧ್ರದ ...ಆರ್ ದ್ವಯರು ಅಧಿಕಾರದ ಅಮಲಿನಲ್ಲಿ ಮೆರೆಯಲಿಲ್ಲವೇ? ತಮಿಳಿಗರ ಕುಕ್ಕಿ ತಿನ್ನುವ ಬಡತನ, ತೆಲುಗರ ಅನಕ್ಷರತೆಯನ್ನೇ ಬಂಡವಾಳವಾಗಿಸಿಕೊಂಡು, ಮುಗ್ಧ ಜನರ ಭಾವನೆಗಳನ್ನು ಸ್ವಾರ್ಥಕ್ಕೆ ಬಳಸಿಕೊಂಡ ಆ ನಟರೆಲ್ಲಿ, ಮನಸ್ಸು ಮಾಡಿದ್ದರೆ 80 ರ ದಶಕದಲ್ಲೇ ಕರ್ನಾಟಕದ ಮುಖ್ಯಮಂತ್ರಿಯಾಗಿ ಮೆರೆಯಬಹುದಾಗಿದ್ದ ಅವಕಾಶವನ್ನು ಎಡಗಾಲಿನಿಂದ ಒದ್ದ ಈ ನಟಸಾರ್ವಭೌಮನೆಲ್ಲಿ? ಹೋಲಿಕೆ ಕೂಡ ಅಸಾಧ್ಯ. ಡಾ.ರಾಜ್ ಗೆ ಡಾ.ರಾಜ್ ಅವರೇ ಸಾಟಿ.

ಡಾ.ರಾಜ್ ಅಭಿನಯದಲ್ಲಿ ಸಕ್ರಿಯವಾಗಿದ್ದ ದಿನಗಳಲ್ಲಿ, ಈ ನಟ ಶಿಶುವಿಹಾರದ ಹುಡುಗನಿಂದ 80 ರ ವಯಸ್ಸಿನ ಅಜ್ಜಿವರೆಗೂ ಎಲ್ಲರ ಮನಸೂರೆಗೊಂಡ ಮಹಾನ್ ನಟ. ನನ್ನದೇ ಉದಾಹರಣೆ ಹೇಳಬೇಕೆಂದರೆ, ನಾನಿನ್ನೂ ಆಗ ಆರನೇ ತರಗತಿಯಲ್ಲಿದ್ದಾಗ 70ರ ಹರೆಯದಲ್ಲಿದ್ದ ನನ್ನ ಅಜ್ಜಿ ಡಾ.ರಾಜ್‌ಕುಮಾರ್ ಫ್ಯಾನ್! ರಾಜ್‌ಕುಮಾರ್ ಸಿನಿಮಾ ಬಂದರಂತೂ ನಮ್ಮನ್ನು ನೆಪವಾಗಿರಿಸಿಕೊಂಡು ಸಿನಿಮಾ ನೋಡಲು ಕರೆದುಕೊಂಡು ಹೋಗಿಬಿಡುತ್ತಿತ್ತು ನಮ್ಮಜ್ಜಿ! ಸಿನಿಮಾದಲ್ಲಿ ಡಾ.ರಾಜ್ ಗೆ ಕಷ್ಟದ ಸನ್ನಿವೇಶ ಬಂದರೆ ಅಜ್ಜಿಯ ಸೀರೆ ತೊಯ್ದು ತೊಪ್ಪೆ. ಮನೆಗೆ ಬಂದ ಮೇಲೂ ಕೂಡ "ಆ ಧೋಳು ಮಾರಾಯ್ಗ ದೇವ್ರು ಅಂಥಾ ಕಷ್ಟಾ ಕೊಡಬಾರದಿತ್ತು" ಎಂದು ಮಮ್ಮಲ ಮರಗುತ್ತಿತ್ತು ಅಜ್ಜಿ. ಒಬ್ಬ ನಟನ ನಟನೆಗೆ ಇದಕ್ಕಿಂತ ಹೆಚ್ಚು ಗೌರವ-ಪುರಸ್ಕಾರ ಬೇಕೆ?

ಡಾ.ರಾಜ್ ಅವರನ್ನು ನಾನು ನೇರವಾಗಿ ನೋಡಿದ್ದು ಒಂದೇ ಒಂದು ಬಾರಿ. ಅದು 1982ರಲ್ಲಿ. ಆಗಿನ್ನೂ ನನಗೆ ಆರು ವರ್ಷ. ಗೋಕಾಕ್ ಚಳವಳಿಯ ಉತ್ತುಂಗದ ದಿನಗಳವು. ಗೋಕಾಕ್ ವರದಿಯನ್ನು ಜಾರಿಗೊಳಿಸಲು ಜನಜಾಗೃತಿ ಮೂಡಿಸುವಲ್ಲಿ ಡಾ.ರಾಜ್ ನೇತೃತ್ವದಲ್ಲಿ ಚಿತ್ರನಟರ ತಂಡ ನಮ್ಮೂರು ರಟ್ಟೀಹಳ್ಳಿಗೂ ಬಂದಿತ್ತು. ಬಸ್ಸಿನ ಮೇಲೆ ನಿಂತು "ನಾನಿರುವುದೆ ನಿಮಗಾಗಿ, ನಾಡಿರುವುದೆ ನಮಗಾಗಿ, ಕಣ್ಣೀರೇಕೆ, ಬಿಸಿಯುಸಿರೇಕೆ..." ಎಂದು ಕಂಚಿನ ಕಂಠದಿಂದ ಡಾ.ರಾಜ್ ಹಾಡಿದ ಹಾಡು, ಉರಿ ಬಿಸಿಲಲ್ಲೂ ತಂದೆಯ ಹೆಗಲೇರಿ ಕುಳಿತು ಕಣ್ತುಂಬಿಕೊಂಡ ಡಾ.ರಾಜ್ ಮುಖ 24 ಸುದೀರ್ಘ ವರ್ಷಗಳ ಬಳಿಕವೂ ಇನ್ನೂ ಹಸುರಾಗಿಯೇ ಇದೆ. ಹಾಗೆಯೇ ಇರುತ್ತದೆ.

ಇಂಥ ಮಹಾನ್ ನಟ ತಮ್ಮ ಮನೋಜ್ಞ ಅಭಿನಯ, ಸಿರಿಕಂಠದಿಂದ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ. ದೇವರು ಹಿರಿಯ ಚೇತನದ ಆತ್ಮಕ್ಕೆ ಚಿರಶಾಂತಿ ನೀಡಲಿ.

ದೇಹಕ್ಕೆ ಸಾವುಂಟು, ಆತ್ಮಕ್ಕಲ್ಲ. ಡಾ.ರಾಜ್‌ಕುಮಾರ್ ಎಂಬ ಧ್ರುವತಾರೆ ಕನ್ನಡ ಇರುವವರೆಗೂ ಅಜರಾಮರ.

ಡಾ.ರಾಜ್‌ಕುಮಾರ್ ಅಮರ್ ರಹೇ!

4 Comments:

At 6:17 PM, April 17, 2006, Blogger Sarathy said...

ಸೊಗಸಾದ ನುಡಿಗಳ ಮೂಲಕ ರಾಜ್ ಅವರಿಗೆ ನಮನ ಸಲ್ಲಿಸಿದ್ದೀರಿ. ರಾಜ್ ಅವರು ಕನ್ನಡದ "ಮುತ್ತು" ಎಂಬುದು ಅಕ್ಷರಶಃ ಸತ್ಯ...ಸತ್ಯ.

 
At 1:10 PM, April 18, 2006, Blogger Anveshi said...

ಹೌದು, ಹೌದು....
ಪ್ರಶಸ್ತಿಗಳಿಗೇ ಗೌರವ ತಂದುಕೊಟ್ಟವರು ಅಣ್ಣಾವ್ರು.
ಕೆಲವರಿಗೆ ಎಂದಿಗೂ ಸಾವಿಲ್ಲ ಎನ್ನುವ ಮಾತು ಡಾ.ರಾಜ್ ಗೆ ಒಪ್ಪುತ್ತದೆ.

 
At 7:47 PM, September 30, 2006, Anonymous Anonymous said...

ರಾಜ್ ಇಲ್ಲ ಎಂದು ನೆನೆಸಿಕೊಂಡಾಗ ದುಃಖ ಒತ್ತರಿಸಿ ಬರುತ್ತದೆ,
ಇಷ್ಟು ತಿಂಗಳ ನಂತರವೂ ರಾಜ್ ಅಗಲಿದ ದುಃಖ ತೀರಿಲ್ಲ.
ಬಹುಷಃ ನಮ್ಮನ್ನು ಇಷ್ಟು ಗಾಢವಾಗಿ ಬೇರೆ ಯಾರ ಅಗಲಿಕೆಯೂ ಕಾಡಿಲ್ಲವೇನೊ.
ನಮ್ಮೆಲ್ಲರ ದೌರ್ಭಾಗ್ಯ.ಕನ್ನಡಿಗರೆಲ್ಲರಿಗು ಭರಿಸಲಾಗದ ನಷ್ಟ.

ಆಳ್ ಕನ್ನಡ ತಾಯ್ ,ಬಾಳ್ ಕನ್ನಡ ತಾಯ್.

 
At 7:51 PM, October 06, 2006, Blogger Vishwanath said...

Howdu Basavaraj,

Neevu heLiddu nija. Kannadada Kanmani Dr.Raj avaru illa embudannu oohisikollale saadhyavilla. Dr.Raj ge Raj avare saati. Avarige holikeye illa. Adondu gowrishankara parvata. Antha raajanna navarannu kaledukonda naavu nijakkoo thabbali.

 

Post a Comment

<< Home