Wednesday, June 02, 2010

ಮತಗಟ್ಟೆಗಳಿಂದ ಪ್ರಜ್ಞಾವಂತರೇಕೆ ದೂರ?

ಈಚೆಗೆ ಮುಕ್ತಾಯಗೊಂಡ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ರಾಜ್ಯಾದ್ಯಂತ ಶೇಕಡಾ 80 ರಷ್ಟು ಮತದಾನವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸೂಕ್ತ ರಸ್ತೆ, ಕುಡಿಯುವ ನೀರು, ಹಾಗೂ ವಿದ್ಯುತ್ ನಂಥ ಮೂಲ ಸೌಕರ್ಯಗಳ ಕೊರತೆ ಇದ್ದರೂ ಇಲ್ಲಿನ ನಮ್ಮ ಮತದಾರರು ಮೈಸುಡುವ ಬಿಸಿಲನ್ನೂ ಲೆಕ್ಕಿಸದೇ ಭಾರಿ ಪ್ರಮಾಣದಲ್ಲಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆ.

ಇದಕ್ಕೇ ಇರಬೇಕು ಎರಡು ತಿಂಗಳ ಹಿಂದೆ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲಿ ಕೇವಲ ಶೇ.44 ರಷ್ಟು ಮತದಾನವಾದಾಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು. "ಕಸ ಸಂಗ್ರಹಿಸುವ ಗಾಡಿ ಮನೆ ಮುಂದೆ ನಿಲ್ಲುವ ಸೌಕರ್ಯ ಇರುವಾಗ ಸುಶಿಕ್ಷಿತರು ಎನ್ನಿಸಿಕೊಂಡವರು ಮತದಾನದಿಂದ ದೂರ ಉಳಿದರೆ ಹೇಗೆ" ಎಂದೂ ನಗರದ ಪ್ರಜ್ಞಾವಂತರನ್ನು ಪ್ರಶ್ನಿಸಿದ್ದರು.

ಇದು ಬೆಂಗಳೂರಿನ ಕತೆಯಷ್ಟೇ ಅಲ್ಲ. ಪ್ರಜ್ಞಾವಂತರು ಎನ್ನಿಸಿಕೊಂಡವರು ವಾಸಿಸುವ ದೇಶದ ಯಾವುದೇ ನಗರ-ಪಟ್ಟಣಗಳಲ್ಲಿ ನೀರಸ ಮತದಾನವಾಗುತ್ತಿರುವುದು ಈಚಿನ ಚುನಾವಣೆಗಳಲ್ಲಿ ಮಾಮೂಲಿಯಾಗಿಬಿಟ್ಟಿದೆ.

ಶಾಸನಬದ್ಧವಾಗಿ ದೊರೆತಿರುವ ಮತದಾನದ ಹಕ್ಕು ಚಲಾಯಿಸುವುದು ಪ್ರತಿಯೊಬ್ಬ ಮತದಾರನ ಕರ್ತವ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಮತಯಂತ್ರದಲ್ಲಿ ಒತ್ತುವ ಒಂದು ಗುಂಡಿಯಿಂದ ಆಗುವ ಪರಿಣಾಮವೇನು ಎಂಬುದು ನಮ್ಮ ಸುಶಿಕ್ಷಿತರು ಎನ್ನಿಸಿಕೊಂಡವರಿಗೆ ಗೊತ್ತಿರುವುದಿಲ್ಲವೇ? ಖಂಡಿತ ಇರುತ್ತದೆ. ಆದರೂ ಅವರು ಮತಗಟ್ಟೆಗಳತ್ತ ಹೋಗಲು ಏಕೆ ಹಿಂಜರಿಯುತ್ತಾರೆ ಎಂಬ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿದರೆ ಸಮಸ್ಯೆಯ ಇನ್ನೊಂದು ಮಗ್ಗುಲು ತೆರೆದುಕೊಳ್ಳುತ್ತದೆ.

ಬಿಬಿಎಂಪಿ ಚುನಾವಣೆಯಲ್ಲಿ ಈ ಸಲ ಅತ್ಯಂತ ಹೆಚ್ಚು ಕಳಂಕಿತರು ಸ್ಪರ್ಧಿಸಿದ್ದರು. ನಿನ್ನೆ-ಮೊನ್ನೆವರೆಗೂ ಮಚ್ಚು-ಲಾಂಗು ಝಳಪಿಸುತ್ತಿದ್ದವರು ಚುನಾವಣೆ ಘೋಷಣೆಯಾಗಿದ್ದೇ ತಡ ದಿವಿನಾಗಿ ಗರಿಗರಿ ದಿರಿಸು ಧರಿಸಿ ಹಲ್ಲು ಕಿರಿದರು. "ನಮ್ಗೇ ಓಟ್ ಹಾಕ್ಬೇಕು" ಎಂಬ "ಹಕ್ಕೊತ್ತಾಯ" ವನ್ನೂ ಮಾಡಿದರು. ಇದು ಸಾಲದೆಂಬಂತೆ, "ಕಳಂಕಿತರನ್ನು ಜನ ಆಯ್ಕೆ ಮಾಡಿದರೆ ನಮ್ಮದೇನೂ ಅಭ್ಯಂತರವಿಲ್ಲ" ಎಂದು ಮಾಜಿ ಮುಖ್ಯಮಂತ್ರಿಯೊಬ್ಬರು ಬಹಿರಂಗವಾಗಿ ಬೆಂಬಲ ನೀಡಿದ್ದು ಪ್ರಜಾಪ್ರಭುತ್ವದ ಬಗ್ಗೆ ನಮ್ಮ ಜನಪ್ರತಿನಿಧಿಗಳ ಅಭಿಪ್ರಾಯ ತಿಳಿಯುತ್ತದೆ. ಇಂಥ ಹೇಳಿಕೆಗಳಿಂದ ಸಮಾಜಕ್ಕೆ ಎಂಥ ಸಂದೇಶ ರವಾನೆಯಾಗುತ್ತದೆ ಎಂಬುದನ್ನೂ ನಮ್ಮ "ಪ್ರಭು"ಗಳು ಅರಿಯಬೇಕು.

ಹಾಡು ಹಗಲೇ ಹೆಣ ಬೀಳುವ ಬೆಂಗಳೂರಿನಂಥ ನಗರಗಳಲ್ಲಿ ಅಂಗೈಯಲ್ಲಿ ಜೀವ ಹಿಡಿದುಕೊಂಡು ಬದುಕುವ ನಾಗರಿಕರು ಮಚ್ಚು ಹಿಡಿದ ಕೈಗೆ ಅಧಿಕಾರ ಒಪ್ಪಿಸಬೇಕೇ?

ನಗರಗಳಲ್ಲಿ ವಾಸಿಸುವ ಬಹುತೇಕರು ಮಧ್ಯಮ ವರ್ಗದ ವಿದ್ಯಾವಂತರು. ಕಳಂಕಿತರ ರಾಜಕೀಯ ಪ್ರವೇಶ, ಕೌಟುಂಬಿಕ ರಾಜಕಾರಣ, ಕಣ್ಣು ಕೋರೈಸುವ ಭ್ರಷ್ಟಾಚಾರ, ಜಾತೀಯತೆಯಂಥ ವಿಚಾರಗಳಿಂದ ಈ ವರ್ಗ ರೋಸಿಹೋಗಿದೆ. ಸ್ವಾತಂತ್ರ್ಯಾ ನಂತರ 60 ವರ್ಷಗಳಲ್ಲಿ ಅನೇಕ ರಾಜಕೀಯ ಪಕ್ಷಗಳನ್ನು ನಾವು ನೋಡಿದ್ದೇವೆ. ಆದರೆ ಈ ದೀರ್ಘಾವಧಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಯಾವ ಪಕ್ಷವೂ ಉತ್ಕೃಷ್ಟ ಅನ್ನುವಂಥ ಆಡಳಿತ ನೀಡಿಲ್ಲ. ನೀಡಿದ್ದೇ ಆಗಿದ್ದರೆ "ಗರೀಬಿ ಹಟಾವೋ" ದಂಥ ಸವಕಲು ವಿಷಯಗಳು ಇನ್ನೂ ಚಾಲ್ತಿಯಲ್ಲಿ ಇರುತ್ತಿರಲಿಲ್ಲ. ಹಳ್ಳಿಗಳಲ್ಲಿ ಹತ್ತಾರು ಎಕರೆ ಹೊಲ ಇದ್ದವರು ಬೆಂಗಳೂರಿನ ಗಾರ್ಮೆಂಟ್ ಕಾರ್ಖಾನೆಯ ಪುಡಿಗಾಸಿಗೆ ಗುಳೆ ಎದ್ದು ಬರುತ್ತಿರಲಿಲ್ಲ. ಪರಿಸ್ಥಿತಿ ಹೀಗಿರುವಾಗ ಯಾರು ಹಿತವರು ಈ ಎಲ್ಲ ರಾಜಕಾರಣಿಗಳೊಳಗೆ ಎಂದು ಕೇಳುವಂತಾಗಿದೆ.

ಯಾವ ಸರಕಾರ ಬಂದರೂ ಸರಕಾರೀ ಕಚೇರಿಯಲ್ಲಿ ಲಂಚ ಕೊಡೋದು ತಪ್ಪಿಲ್ಲ ಎಂಬ ಭಾವನೆ ಗಟ್ಟಿಯಾಗುತ್ತಿದೆ. ಸರಕಾರಿ ಕಚೇರಿಗಳು ಎಂದರೆ ಭ್ರಷ್ಟಾಚಾರದಿಂದ ದುರ್ನಾತ ಬೀರುವ ಸುಲಭ್ ಶೌಚಾಲಯಗಳಾಗಿಬಿಟ್ಟಿವೆ. ಜವಾನನಿಂದ ದಿವಾನನ ವರೆಗೂ ಕಾಸು ಪೀಕಲೇಬೇಕು. ಆಗಾಗ ಲೋಕಾಯುಕ್ತರು ನಡೆಸುವ ದಾಳಿಯಲ್ಲಿ ಅಕ್ರಮವಾಗಿ ಕೋಟಿ ಕೋಟಿ ಗಳಿಸಿದ ಕೊಳಕರು ಬೆತ್ತಲಾಗುತ್ತಿರುವುದೇ ನಮ್ಮ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ನಂಗಾನಾಚ್! ಮೇಲಧಿಕಾರಿ ಹಾಗೂ ರಾಜಕಾರಣಿಯ ನೆರವಿಲ್ಲದೇ ಸರಕಾರಿ ನೌಕರನೊಬ್ಬ ಕೋಟಿಗಟ್ಟಲೇ ಹಣ ಗಳಿಸುವುದು ಸಾಧ್ಯವೇ? ಬೆಕ್ಕಿಗೆ ಗಂಟೆ ಕಟ್ಟುವರಾರು?

ಬೆಂಗಳೂರಿನ ಒಟ್ಟು ಮತದಾರರ ಸಂಖ್ಯೆ ಸುಮಾರು 70 ಲಕ್ಷ. ಬಿಬಿಎಂಪಿ ಚುನಾವಣೆಯಲ್ಲಿ ಮತದಾನ ಮಾಡಿದವರು ಕೇವಲ 33 ಲಕ್ಷ. ಅಂದರೆ 37 ಲಕ್ಷ ಮತದಾರರು ಮತದಾನ ಧಿಕ್ಕರಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತಕ್ಕೆ ಪ್ರಾಶಸ್ತ್ಯ. ಆದರೆ ಬೆಂಗಳೂರಿನ ಶೇ.56 ರಷ್ಟು ಮತದಾರರು ಚುನಾವಣೆಯಿಂದ ದೂರ ಉಳಿದಿದ್ದಾರೆ ಎಂದರೆ ಪ್ರಸಕ್ತ ರಾಜಕೀಯ ವ್ಯವಸ್ಥೆಯ ಬಗ್ಗೆ ಜನ ನಂಬಿಕೆ ಕಳೆದುಕೊಂಡಿದ್ದಾರೆ ಎಂದರ್ಥವೇ? ಇದು ಗಂಭೀರವಾಗಿ ಚಿಂತಿಸಬೇಕಾದ ವಿಷಯ.

ಇದು ಮಾಹಿತಿ ಯುಗ. ವಿಧಾನಸಭೆ-ಲೋಕಸಭೆಗಳಲ್ಲಿ ನಡೆಯುವ ಕಲಾಪಗಳ ನೇರಪ್ರಸಾರವನ್ನು ವೀಕ್ಷಿಸುವ, ಆಲಿಸುವ ಸೌಲಭ್ಯವಿದೆ. ದಿನವೊಂದಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗುವ ಶಾಸನಸಭೆಗಳಲ್ಲಿ ನಮ್ಮ ಪ್ರತಿನಿಧಿಗಳೆನ್ನಿಸಿಕೊಂಡವರು ಸ್ವಪ್ರತಿಷ್ಠೆಗಾಗಿ ತೋಳೇರಿಸುವ, ಸಭಾಧ್ಯಕ್ಷರ ಮೇಲೆ ಏರಿ ಹೋಗುವ ದುಂಡಾವರ್ತನೆ ನೋಡುವ ಯಾರಿಗೇ ಆದರೂ ಇವರನ್ನು ಯಾಕಾದರೂ ಆಯ್ಕೆ ಮಾಡಿ ಕಳುಹಿಸುತ್ತೇವೋ ಎಂದು ಅನ್ನಿಸಿರಬಹುದು.

ಚುನಾವಣೆ ದಿನಾಂಕ ಘೋಷಣೆಯಾಗುವುದೇ ತಡ, ನಮ್ಮ ಸ್ವದೇಶಿ-ವಿದೇಶಿ ಸಚಿವರೆಲ್ಲ ಸ್ಥಳೀಯ ಚುನಾವಣಾ ಆಖಾಡಕ್ಕೆ ಧುಮುಕುತ್ತಾರೆ. ರೋಡ್ ಶೋ ಮಾಡುತ್ತಾರೆ, ಅಗತ್ಯ ಬಿದ್ದರೆ ಥಕ ಥೈ ಕೂಡ ಮಾಡಿ(ಸಿ)ಬಿಡುತ್ತಾರೆ. ಮತದಾನ ಹತ್ತಿರವಾದಂತೆಲ್ಲ ಅವರಿಗೆ ಸೈಕಲ್ ಶಾಪ್ ಶಾಮಣ್ಣನೂ ಬೇಕು ಹಣ್ಣಿನಂಗಡಿ ರಾಮಣ್ಣನೂ ಬೇಕು. ಆದರೆ ಫಲಿಂತಾಂಶ ಬಂದದ್ದೇ ತಡ, ಈ ಮಹಾಶಯರು ಜನರನ್ನು ಮಾತನಾಡಿಸುವುದಿರಲಿ, ತಮ್ಮ ಹವಾನಿಯಂತ್ರಿತ ಕಾರಿನ ಕಿಟಕಿಯ ಗಾಜನ್ನೂ ಕೆಳಗಿಳಿಸುವುದಿಲ್ಲ. ದಡ ದಾಟಿದ ಮೇಲೆ ಅಂಬಿಗನ ಹಂಗೇನು?

ಚುನಾವಣೆ ಮುಗಿಯುವವರೆಗೆ ಬೆಲೆ ಏರಿಕೆಯಂಥ ಸೂಕ್ಷ್ಮ ವಿಷಯಗಳನ್ನು ಅದುಮಿಟ್ಟುಕೊಳ್ಳುವ ಸರಕಾರ, ಫಲಿತಾಂಶ ಬಂದಿದ್ದೇ ತಡ ಹಾಲಿನ ದರ, ನೀರಿನ ದರ, ಬಸ್ ದರಗಳನ್ನು ಪೈಪೋಟಿಗೆ ಬಿದ್ದಂತೆ ಏರಿಸುವುದನ್ನು ನೋಡಿದರೆ ಇವರೇನು ಜನರ ಶತ್ರುಗಳಾ ಎಂದೆನ್ನಿಸಿಬಿಡುತ್ತದೆ.

ಜನರನ್ನು ವಂಚಿಸುವ ಕಾರ್ಯದಲ್ಲಿ ಯಾವ ರಾಜಕೀಯ ಪಕ್ಷವೂ ಹಿಂದೆ ಬಿದ್ದಿಲ್ಲ. ಅಧಿಕಾರದಲ್ಲಿದ್ದಾಗ ಎಲ್ಲರೂ ಮಾಡುವ ಕೆಲಸ ಒಂದೇ. ಬೆಲೆ ಏರಿಕೆಯಿಂದ ಕಂಗೆಟ್ಟು ಹೊಟ್ಟೆಗೆ ಕೈ ಹಾಕಿ ಪರ ಪರ ಕೆರೆದುಕೊಳ್ಳುವ ಸರದಿ ಮಾತ್ರ ಮಧ್ಯಮ ವರ್ಗದ ಮಂದಿಯದು.

ನಿನ್ನೆ ಒಂದು ಪಕ್ಷದಲ್ಲಿದ್ದ ವ್ಯಕ್ತಿ ನಾಳೆ ಇನ್ನೊಂದು ಪಕ್ಷದ ಅಭ್ಯರ್ಥಿ. ನಮ್ಮ ರಾಜಕಾರಣಿಗಳು ಪಕ್ಷದಿಂದ ಪಕ್ಷಕ್ಕೆ ಹಾರುತ್ತಿರುವುದನ್ನು ಕಂಡು ಮಂಗನಿಗೂ ನಾಚಿಕೆಯಾಗಿರಬೇಕು. ಇದರ ಮಧ್ಯೆ ರಾಜಕೀಯ ಪಕ್ಷಗಳ "ಕಾರ್ಯಾಚರಣೆ", ಮತದಾನದ ಹಿಂದಿನ ದಿನ ತೋಡುವ ಖೆಡ್ಡಾ ಇಂಥವೇ ಹಲವು ಪ್ರಸಂಗಗಳು ಮತಗಟ್ಟೆಗಳತ್ತ ಪ್ರಜ್ಞಾವಂತರು ಹೋಗಲು ಅಸಹ್ಯಪಟ್ಟುಕೊಳ್ಳುವಂತಾಗಿದೆ.

ನಮ್ಮನ್ನು ಆಳುವವರ ಜ್ಞಾನದ ಬಗ್ಗೆ ಮಾತನಾಡುವುದೇ ಒಂದು ಅಸಹ್ಯ. ಒಬ್ಬ ಜವಾನನಿಗೂ ಕನಿಷ್ಠ ವಿದ್ಯಾರ್ಹತೆ ಎಂಬುದಿರುವಾಗ ಶಾಸನಸಭೆಗಳಿಗೆ ಆಯ್ಕೆಯಾಗುವವರಿಗೆ ವಿದ್ಯಾರ್ಹತೆ, ತಾವು ವಹಿಸಿಕೊಳ್ಳುವ ಇಲಾಖೆ ಬಗ್ಗೆ ಸೂಕ್ತ ಜ್ಞಾನ ಬೇಡವೇ? ಜನಪ್ರತಿನಿಧಿಯಾದವನಿಗೆ ಯಾವ ತಾಲೂಕು ಯಾವ ಜಿಲ್ಲೆಯಲ್ಲಿದೆ ಎಂಬ ಕನಿಷ್ಠ ಜ್ಞಾನವಾದರೂ ಇರಬೇಕಾಗುತ್ತದೆ. "ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬೆಂಗಾವಲು ಪಡೆ ಇಲ್ಲದಿದ್ದರೆ ಬೆಂಗಳೂರಿನ ಬೀದಿಗಳನ್ನು ಸುತ್ತೋದು ಕಷ್ಟ" ಎಂದು ಹಿರಿಯ ರಾಜಕಾರಣಿಯೊಬ್ಬರು ಬಿಬಿಎಂಪಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದು ಅತಿಶಯೋಕ್ತಿ ಎನ್ನಿಸಿದರೂ ಇದು ನಮ್ಮನ್ನು ಆಳುವವರರ ಜ್ಞಾನದ ಬಗ್ಗೆ ತಿಳಿಸುತ್ತದೆ.

ಪ್ರತೀ ಚುನಾವಣೆಯಲ್ಲಿ ನೀರಸ ಮತದಾನವಾದಾಗಲೂ ಮತದಾನ ಕಡ್ಡಾಯಗೊಳಿಸಬೇಕು ಎಂಬ ಕೂಗು ಕಳೆದ ಐದಾರು ವರ್ಷಗಳಿಂದ ಕೇಳಿ ಬರುತ್ತಿದೆ. ಕಡ್ಡಾಯ ಮತದಾನ ಜಾರಿಯಲ್ಲಿರುವ ಕೆಲ ದೇಶಗಳನ್ನೂ ನಮ್ಮ ಸ್ವದೇಶಿ ರಾಜಕಾರಣಿಗಳು ಹೆಸರಿಸಿದ್ದಾರೆ.

ಕಡ್ಡಾಯ ಮತದಾನದ ಬಗ್ಗೆ ಮಾತನಾಡುವ ನಮ್ಮ ರಾಜಕಾರಣಿಗಳು ಎಂದಾದರೂ ತಮ್ಮನ್ನು
ಆಯ್ಕೆ ಮಾಡಿದ ಮತದಾರರಿಗೆ ಉತ್ತರದಾಯಿಗಳಾಗಿದ್ದಾರಾ? ಕಡ್ಡಾಯದ ಬಗ್ಗೆ ಸೊಲ್ಲೆತ್ತುವವರು ವಿಧಾನಸಭೆ-ಲೋಕಸಭೆಗಳಲ್ಲಿನ ದಂಡಪಿಂಡಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಅವಕಾಶದ ಬಗ್ಗೆಯೂ ಒತ್ತಾಯಿಸಿದ್ದಾರಾ? ಉಹುಂ, ಖಂಡಿತ ಇಲ್ಲ.

***

ಮತದಾನ ಕಡ್ಡಾಯದ ಬಗ್ಗೆ ಬೊಬ್ಬೆ ಹೊಡೆಯುವ ಜನ ಚುನಾವಣಾ ಆಯೋಗದ 1961 ರ ಚುನಾವಣಾ ವಿಧಿವಿಧಾನ (Conduct of Election Rules)ದ 49(0) ಅವಕಾಶದ ಬಗ್ಗೆ ಏಕೆ ಜಾಣಗುರುಡುತನ ತೋರಿಸುತ್ತಾರೆ? 49(0) ಪ್ರಕಾರ "ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಯೊಬ್ಬ ಆಯ್ಕೆಯಾಗಲು ಅನರ್ಹ ಎಂದು ಮತದಾರನಿಗೆ ಅನ್ನಿಸಿದರೆ, ಮತಗಟ್ಟೆ ಅಧಿಕಾರಿ ಬಳಿ ಇರುವ 17 ಎ ಫಾರ್ಮ್ ನಲ್ಲಿ ಮತ ಚಲಾಯಿಸಲು ನಿರಾಕರಿಸಿದ ಬಗ್ಗೆ ನಮೂದಿಸಿ, ರೆಜಿಸ್ಟರ್ ನಲ್ಲಿ ಚುನಾವಣಾ ಗುರುತುಪತ್ರ ಸಂಖ್ಯೆ ಬರೆದು ಸಹಿ ಮಾಡಬೇಕು" ಎಂದಿದೆ. ಭಾರತದ ಚುನಾವಣಾ ಆಯೋಗ ಮತದಾರರಿಗೆ ನೀಡಿರುವ ಅತ್ಯುತ್ತಮ ಅವಕಾಶವಿದು. ಆದರೆ ಮಾಧ್ಯಮಗಳೂ ಸೇರಿದಂತೆ ಯಾರೊಬ್ಬರು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸದಿರುವುದು ಆಶ್ಚರ್ಯಕರ.

ಇನ್ನುಮುಂದೆ ಜನ ಮತ ಚಲಾಯಿಸೋಲ್ಲ ಎಂದು ಗದರುವ ಗುಮ್ಮಣ್ಣರಿಗೆ 49(0) ಅವಕಾಶದ ಬಗ್ಗೆ ಮನವರಿಕೆ ಮಾಡಿಕೊಡಬೇಕು.
ಈಗಿರುವ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಬೇಕಾದ ಅಗತ್ಯವಿದೆ. ಮತಯಂತ್ರದಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರು ಹಾಗೂ ಅವರ ಗುರುತಿನ ಚಿಹ್ನೆಯ ಬಳಿಕ ಕೊನೆಯ ಸಾಲಿನಲ್ಲಿ "ಯಾರೂ ಹಿತವರಲ್ಲ" ಅಥವಾ "ಯಾರಿಗೂ ನನ್ನ ಮತವಿಲ್ಲ" ಎಂಬರ್ಥದ ಗುಂಡಿ ಒತ್ತುವ ಅವಕಾಶವಿದ್ದರೆ ಮುಂಬರುವ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಏರಿಕೆಯಾದರೆ ಅಚ್ಚರಿಯಿಲ್ಲ. ತನಗೆ ಬೇಕಾಗಿರುವುದನ್ನು ಆಯ್ಕೆ ಮಾಡಲು ಮತದಾರನಿಗೆ ಅವಕಾಶವಿರದಿದ್ದರೆ ಗಂಟೆಗಟ್ಟಲೆ ಸರತಿಯಲ್ಲಿ ನಿಂತು ಏಕೆ ಮತ ಚಲಾಯಿಸಬೇಕು. ಕೊಳೆತ ಹಣ್ಣುಗಳ ಬುಟ್ಟಿಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲೇಬೇಕು ಎಂಬಂತಿದೆ ಪ್ರಸಕ್ತ ಎಲೆಕ್ಟ್ರಾನಿಕ್ ಮತಯಂತ್ರದ ವಿನ್ಯಾಸ.

0 Comments:

Post a Comment

<< Home