Friday, May 29, 2009

ಮತಭಾರತ ಮತ್ತು ಮಧ್ಯಮ ವರ್ಗ

ಅದು ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು.

ವಿಧಾನಸೌಧ ಹಾಗೂ ರಾಜಭವನಕ್ಕೆ ಕೂಗಳತೆ ದೂರದಲ್ಲಿರುವ ಜಿಪಿಒ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ ಸ್ಟೇಬಲ್ ತಿಮ್ಮಯ್ಯ ಅಲಿಯಾಸ್ ಮೀಸೆ ತಿಮ್ಮಯ್ಯ, ಬೆಂಗಳೂರಿನ ಭಾರಿ ಟ್ರಾಫಿಕ್ಕಿನ ನಡುವೆಯೆಯೂ ವಿಧಾನಸೌಧ - ರಾಜಭವನಕ್ಕೆ ಎಡತಾಕುವ ಗಣ್ಯರ ಪಡೆಗೆ ದಾರಿಮಾಡಿಕೊಡುತ್ತ, ಜನರೊಂದಿಗೆ ಸ್ನೇಹದಿಂದ ಇದ್ದರು. ಒಂದು ದಿನ ಅದೇ ವೃತ್ತದಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿ ಬಾಲಕಿಯೊಬ್ಬಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ತಿಮ್ಮಯ್ಯ ಅಸುನೀಗಿದರು. ತಮ್ಮ ಗಿರಿಜಾ ಮೀಸೆ ಮತ್ತು ನಯ-ವಿನಯದಿಂದ ಜನಮನ್ನಣೆ ಗಳಿಸಿದ್ದ ಮೀಸೆ ತಿಮ್ಮಯ್ಯ ದುರಂತ ಸಾವಿಗೀಡಾದ ಬಳಿಕ ಆತ ಕರ್ತವ್ಯ ನಿರ್ವಹಿಸುತ್ತಿದ್ದ ವೃತ್ತಕ್ಕೆ ಅವರ ಹೆಸರನ್ನೇ ಇಡಬೇಕು ಎಂದು ಪತ್ರಿಕೆಗಳಲ್ಲಿ ಓದುಗರು ಮಾಡಿದ ಆಗ್ರಹಕ್ಕೆ ಮಣಿದ ಅಂದಿನ ಮುಖ್ಯಮಂತ್ರಿ ಎಚ್. ಡಿ. ದೇವೇಗೌಡರು ತಿಮ್ಮಯ್ಯ ವೃತ್ತ ಎಂದು ನಾಮಕರಣ ಮಾಡಲು ಶಿಫಾರಸು ಮಾಡಿದರು.

ಕೆಲವೇ ವರ್ಷಗಳ ಹಿಂದೆ ಮುಖ್ಯಮಂತ್ರಿ ಯಾದವರೂ ಪತ್ರಿಕೆಗಳನ್ನು ಓದುತ್ತಿದ್ದರು, ಅದರಲ್ಲಿ ಪ್ರಕಟವಾದ ಓದುಗರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು ಎಂಬುದಕ್ಕೆ ಮೇಲಿನ ಉದಾಹರಣೆ ಸಾಕ್ಷಿ. ಆದರೆ ಇಂದು ಮಂತ್ರಿ ಮಾಗಧರಾರೂ ಪತ್ರಿಕೆಗಳನ್ನೇ ಓದುತ್ತಿಲ್ಲ ಎಂಬ ಭಾವನೆ ಜನರಲ್ಲಿ ಬೇರೂರುವಂತಾಗಿದೆ. ತಾವು ಹೇಳಿದ್ದು, ಜಾಹೀರಾತು ನೀಡಿದ್ದು ಪತ್ರಿಕೆಗಳಲ್ಲಿ ಪ್ರಕಟವಾಗಿದೆಯೇ ಇಲ್ಲವೇ ಎಂಬುದನ್ನು ನೋಡಲು ಮಾತ್ರ ಕಣ್ಣು ತೆಗೆಯುವ ರಾಜಕಾರಣಿಗಳು ಜನರ ಸಮಸ್ಯೆಗಳನ್ನು ಮಾತ್ರ ಕಣ್ಣಿಗೆ - ಕಿವಿಗೆ ಹಾಕಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಅವರದೇನಿದ್ದರೂ ಏಕಮುಖ ಸಂವಹನ.

ಕೆಲ ದಿನಗಳ ಹಿಂದೆ ಸಚಿವರೊಬ್ಬರು ತಮ್ಮ ಅಂಕಣದಲ್ಲಿ ವರ್ಷದಿಂದ ವರ್ಷಕ್ಕೆ ಮತದಾನ ಕಡಿಮೆಯಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇನ್ನೂ ಮುಂದುವರಿದು ಕಡಿಮೆ ಮತದಾನವಾಗುವ ಬಗ್ಗೆ ಚುನಾವಣಾ ಆಯೋಗ ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದೂ ವ್ಯಾಖ್ಯಾನಿಸಿದ್ದರು. ಮತದಾನ ಕಡಿಮೆಯಾಗಲು, ಅದರಲ್ಲೂ ಮಧ್ಯಮ ವರ್ಗದ ಜನ ಮತಗಟ್ಟೆಗಳತ್ತ ಸುಳಿಯದಿರಲು ಕಾರಣವೇನು ಎಂದು ರಾಜಕಾರಣಿಗಳು ಚಿಂತಿಸಿದ್ದಾರೆಯೇ?

ಚುನಾವಣೆ ಬಂದಾಗ ಮಾತ್ರ ನಮ್ಮ ಜನ ರಾಜಕಾರಣಿಗಳನ್ನು ಹತ್ತಿರದಿಂದ ನೋಡಲು ಸಾಧ್ಯ. ಅವರ ರೋಡ್ ಷೋ ಗಳೇನು, ಕೊಳಗೇರಿಗೆ ಗುಡಿಸಲುಗಳಿಗೆ ಭೇಟಿಗಳೇನು... ಅವರು ಪಾರ್ಕ್ ನಲ್ಲೂ ಹಾಜರ್, ತರಕಾರಿ ಮಂಡಿಯಲ್ಲೂ ಜೀ ಹುಜೂರ್! ಅದೇ ಚುನಾವಣೆ ಮುಗಿದ ಮೇಲೆ? ಅವರ ಸುತ್ತ ಹುತ್ತ ಬೆಳೆದುಬಿಡುತ್ತದೆ.

ಪ್ರತಿವರ್ಷ ಜೂನ್ ತಿಂಗಳು ಸಮೀಪಿಸಿದಂತೆ ಖಾಸಗಿ ಶಾಲೆಗಳು ವಿಧಿಸುವ ದುಬಾರಿ ಶುಲ್ಕ, ಹಣ ಕೀಳಲು ಅವು ಕಂಡಿರುವ ದಾರಿಗಳ ಸರಮಾಲೆಯ ಗೋಳಿನ ಕತೆಗಳು ಪತ್ರಿಕೆಗಳ 'ಸಂಪಾದಕರಿಗೆ ಪತ್ರ' ವಿಭಾಗದಲ್ಲಿ ಪ್ರಕಟವಾಗುವುದು ಸಾಮಾನ್ಯ. ಆದರೆ ಇಂಥ ಎಷ್ಟು ಪತ್ರಗಳಿಗೆ ಸಂಬಂಧಿಸಿದ ಸಚಿವರು, ಅಧಿಕಾರಿಗಳು ಉತ್ತರ ನೀಡಿದ್ದಾರೆ? ಎರಡೂವರೆ ವರ್ಷದ ಮಗುವಿಗೆ 25 ಸಾವಿರ ರೂಪಾಯಿ ಶುಲ್ಕ ವಸೂಲು ಮಾಡುವ ಶಾಲೆಯ ಆಡಳಿತ ಮಂಡಳಿಯನ್ನು ಯಾವ ಜನಪ್ರತಿನಿಧಿಯಾದರೂ ಪ್ರಶ್ನಿಸಿದ್ದಾರಾ? ಉಹುಂ ಇಲ್ಲ. ಏಕೆಂದರೆ ಇಂದು ಶಿಕ್ಷಣದ ಹೆಸರಿನಲ್ಲಿ ನಡೆಯುತ್ತಿರುವ 'ದಂಧೆ'ಯಲ್ಲಿ ಪಕ್ಷಭೇದ ಮರೆತು ರಾಜಕಾರಣಿಗಳು ಫಲಾನುಭವಿಗಳು. ಶಾಲೆಯ ದಾರಿ ದೂರವಿಲ್ಲ ಆದರೆ ಈ ದಾರಿ ಬಲು ದುಬಾರಿ ಎಂಬುದು ಸರಕಾರದ ಗಮನಕ್ಕೆ ಬಂದಂತಿಲ್ಲ.

ಅಂಕೆಮೀರಿ ಹಣ ವಸೂಲು ಮಾಡುವ ಶಾಲೆಗಳ ಬಗ್ಗೆ ಯಾರಿಗೆ ದೂರು ನೀಡಬೇಕು ಎಂಬುದು ಅನೇಕ ಪಾಲಕರಿಗೆ ಗೊತ್ತಿಲ್ಲ. ದುಬಾರಿ ಶುಲ್ಕ ತೆತ್ತು ಬೇಸತ್ತಿರುವ ಪಾಲಕರು ಪತ್ರಿಕೆಗಳ ಗಮನಕ್ಕೆ ತಂದರೂ ಪ್ರಯೋಜನವಾಗದಾದಾಗ ಶಾಲೆಯ ಫೀಸು ಕಟ್ಟಿ ಇನ್ನೊದು ವರ್ಷದ ವರೆಗೆ ಅಸಹಾಯಕರಾಗಿ ಬಿಡುತ್ತಾರೆ.

ಇನ್ನು ಶಿಕ್ಷಣದ ನಂತರ ಮಧ್ಯಮ ವರ್ಗದ ಬಹುಮುಖ್ಯ ಆದ್ಯತೆ ಸ್ವಂತ ಸೂರು. ಬೆಂಗಳೂರಿನಂಥ ಊರಿನಲ್ಲಿ ಮೂರು ಜನರ ಪುಟ್ಟ ಸಂಸಾರಕ್ಕೆ ಬಾಡಿಗೆ ಮನೆ ಬೇಕೆಂದರೆ ಏಳೆಂಟು ಸಾವಿರ ಬಾಡಿಗೆ ಕಕ್ಕಬೇಕು. ಹಾಗಿದ್ದರೆ ಬಾಡಿಗೆ ನಿಯಂತ್ರಣ ಕಾಯ್ದೆ ಅನ್ನುವುದೊಂದು ಇದೆಯಾ? ಇದಕ್ಕೂ ಒಂದು ಇಲಾಖೆ ಇದೆಯಾ? ಗೊತ್ತಿಲ್ಲ. ಸರಕಾರೀ ಬಂಗಲೆಗಳಲ್ಲಿ ವಾಸ ಮಾಡುವ ನಮ್ಮ ದೊರೆಗಳಿಗೆ ಇದರ ಉಸಾಬರಿಯಾದರೂ ಏಕೆ ಬೇಕು? ಅವರಿಗೆ ಬೇಕಿರುವುದು 'ಭದ್ರ' ಸರಕಾರ ನಡೆಸುವಷ್ಟು ತಲೆ ಎಣಿಕೆ, ಐದು ವರ್ಷ ಜಡದ್ದು ರಾಜ್ಯಭಾರ.

ಸಾರ್ವಜನಿಕರ ಮುಖವಾಣಿಯಂತಿರುವ ಪತ್ರಿಕೆಗಳು - ಪ್ರಜಾಪ್ರತಿನಿಧಿಗಳ ಮಧ್ಯೆ ಹೀಗೇ ಕಂದರ ಬೆಳೆಯುತ್ತಾ ಹೋದರೆ ಪ್ರಜಾಪ್ರಭುತ್ವಕ್ಕೆ ಅರ್ಥವಾದರೂ ಏನು? ತಮ್ಮ ಮೂಲಭೂತ ಅಗತ್ಯಗಳಿಗೆ ಸ್ಪಂದಿಸದ ರಾಜಕೀಯ ಪಕ್ಷಗಳ ಬಗ್ಗೆ ಜನರಿಗಿರುವ ಅಸಹನೆ ಪೂರ್ಣ ಪ್ರಮಾಣದ ಮತದಾನ ಬಹಿಷ್ಕಾರಕ್ಕೆ ಕಾರಣವಾದರೆ ಗತಿಯೇನು? ಅಧಿಕಾರದಲ್ಲಿರುವವರು, ಅಧಿಕಾರಕ್ಕೆ ಬರಬೇಕೆನ್ನುವವರು ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ.

0 Comments:

Post a Comment

<< Home