Saturday, October 31, 2009

ಗಣಿ ಖೆಡ್ಡಾದಲ್ಲಿ ಶೆಟ್ಟರ್ ಕುರಿ!

ನ್ಯಾಯದ ಹಣದ ಥೈಲಿ ಹಿಡಿದು ರಾಜಕಾರಣಕ್ಕೆ ಯಾರಾದರೂ ಬಂದರೆ ರಾಜ್ಯದಲ್ಲಿ ಈಗ ತಲೆದೋರಿರುವ ಪರಿಸ್ಥಿತಿಗಿಂತ ಭಿನ್ನವಾಗೇನೂ ಆಗಲು ಸಾಧ್ಯವಿಲ್ಲ.

ನಿನ್ನೆ ಮೊನ್ನೆಯಷ್ಟೇ ರಾಜಕೀಯಕ್ಕೆ ಕಾಲಿಟ್ಟು, ತಮ್ಮ ಕುಟುಂಬ-ಸ್ನೇಹಿತರಿಗೆಲ್ಲ ಮಂತ್ರಿ ಪದವಿ, ಅಧ್ಯಕ್ಷ ಸ್ಥಾನ, ಸಂಸದರ ಸ್ಥಾನವನ್ನು ಬ್ಲಾಕ್ ಮೇಲ್ ಮೂಲಕ ಪಡೆದರೂ ಕೆಲ ದುಷ್ಟಶಕ್ತಿಗಳ ಆಸೆಗೆ ಇನ್ನೂ ಮಿತಿ ಇಲ್ಲ.

ಕೇವಲ 20 ವರ್ಷದ ಹಿಂದೆ ಓರ್ವ ಪೊಲೀಸ್ ಪೇದೆಯ ಮಕ್ಕಳಾದ ಈ ಗಣಿಗಾರರು ಇಂದು ಸಾವಿರಾರು ಕೋಟಿ ರೂಪಾಯಿಗಳ ಕುಬೇರರು. ಇವರಿಗೆ ಇಷ್ಟೆಲ್ಲ ಹಣ ಎಲ್ಲಿಂದ ಬಂತು. ನ್ಯಾಯವಾಗಿ ಸಂಪಾದಿಸಿದ್ದರೆ ಈಗ ಇರುವ ಅಹಂ ಇರುತ್ತಿರಲಿಲ್ಲ. ಅನ್ಯಾಯವಾಗಿ ಬಂದ ಹಣವನ್ನು ಸೂರೆ ಹೊಡೆದು ಕೆಲ ಶಾಸಕರನ್ನು ತಮ್ಮ ಹಣಬಲದಿಂದ ಗೆಲ್ಲಿಸಿ ಅದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಇವರು ಪಕ್ಷಕ್ಕಿಂತ ತಾವು ದೊಡ್ಡವರೆಂದು ತೋರಿಸಿಕೊಳ್ಳುತ್ತಿದ್ದಾರೆ. ಹಣಬಲದಿಂದ ಪಕ್ಷದಲ್ಲಿರುವ ಎಂಜಲಿಗೆ ಆಸೆ ಪಡುವ ಕೆಲವರಿಗೆ ಬಿಸ್ಕೆಟ್ ಹಾಕುತ್ತ ಹೈದರಾಬಾದ್, ಗೋವಾ ಮತ್ತಿತರೆಡೆ ಪ್ರಾಣಿಗಳನ್ನು ಎಳೆದೊಯ್ಯುವಂತೆ ಕರೆದೊಯ್ಯುತ್ತಿದ್ದಾರೆ.

ಈ ರೆಡ್ಡಿಗಳಿಗೆ ರಾಜಕೀಯ-ಸಾಮಾಜಿಕ ಬದ್ಧತೆಯೇನಾದರೂ ಇದೆಯಾ? ಕಳೆದ ಎರಡು ವರ್ಷಗಳಿಂದ ಇವರ ನಡೆ ಗಮನಿಸುತ್ತಿರುವವರಿಗೆಲ್ಲ ತಮ್ಮ ಗಣಿ ಉದ್ಯಮಕ್ಕಿಂತ ಹೆಚ್ಚಿನ ಹಿತಾಸಕ್ತಿ ಇವರಿಗೆ ಬೇಕಿಲ್ಲವೆಂದು ಕಾಣುತ್ತದೆ. ರಾಜ್ಯದಲ್ಲಿ ಅಧಿಕಾರ ಅನುಭವಿಸುತ್ತ ಅದರ ಮೂಲಕವೇ ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆಯುವ ಇವರು ನೆರೆ ರಾಜ್ಯದಲ್ಲಿ ಹಣ ಹೂಡುವ ಮೂಲಕ ತಮ್ಮ ಹಿತಾಸಕ್ತಿ ಅಡಗಿಸಿಕೊಂಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸರಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಕೂತಲ್ಲಿ ಕೂರಲಾರದೇ ನಿಂತಲ್ಲಿ ನಿಲ್ಲಲಾರದೇ ಕುಂಡೆ ಸುಟ್ಟ ಬೆಕ್ಕಿನಂತೆ ಚಟಪಟಿಸುತ್ತಿರುವಾಗ ಪಕ್ಷದಲ್ಲೇ ಇದ್ದುಕೊಂಡು ರೆಸಾರ್ಟ್ ರಾಜಕಾರಣ ಮಾಡುತ್ತಿರುವ ರೆಡ್ಡಿಗಳು ರಾಜ್ಯದ ಜನತೆಗೆ ದ್ರೋಹ ಬಗೆದಿದ್ದಾರೆ.

ನೆರೆಯ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ನೂರಾರು ಕೇಜಿಗಟ್ಟಲೆ ಚಿನ್ನ ದಾನ ನೀಡುವ ಜನಾರ್ಧನ ರೆಡ್ಡಿಗೆ ಇಡೀ ಕರ್ನಾಟಕ ರಸ್ತೆಗಳನ್ನು ಮೂರಾಬಟ್ಟೆ ಮಾಡಿರುವ ಗಣಿ ಲಾರಿಗಳಿಗೆ ಒಂದು ಸಾವಿರ ರೂಪಾಯಿ ಶುಲ್ಕ ವಿಧಿಸಿದ ತಕ್ಷಣ ಮೈಯೆಲ್ಲ ಬೆಂಕಿಬಿದ್ದಿದೆ.

ಬಿಜೆಪಿ ಇನ್ನುಮೇಲಾದರೂ ಪಾಠ ಕಲಿತು ಪಕ್ಷಕ್ಕೆ ಹತ್ತೇ ಸ್ಥಾನ ಬಂದರೂ ಚಿಂತೆಯಿಲ್ಲ ಇಂಥ ಪಾಪದ ಹಣ ಮಾಡಿರುವ ಜನರ ಸುದ್ದಿಗೆ ಹೋಗದಿದ್ದರೆ ಒಳ್ಳೆಯದು.
ಹರಕೆಯ ಕುರಿ ಶೆಟ್ಟರ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಮಂತ್ರಿಯಾಗುವ ಕನಸು ಕಂಡಿದ್ದ ಜಗದೀಶ ಶೆಟ್ಟರ, ಸಚಿವ ಸ್ಥಾನ ಸಿಗದಿದ್ದಾಗ ನಿರಾಶರಾಗಿ ತಮ್ಮ ಬೆಂಬಲಿಗರಿಂದ ಹುಬ್ಬಳ್ಳಿ- ಧಾರವಾಡದಲ್ಲಿ ಬಸ್ಸಿಗೆ ಬೆಂಕಿ ಹಚ್ಚಿಸುವ ಮೂಲಕ ಪಕ್ಷಕ್ಕೆ ಧಮಕಿ ಹಾಕಿದ್ದರು. ಈಗ ನಾಯಿ ಹಸಿದಿತ್ತು ಅನ್ನ ಹಳಸಿತ್ತು ಎನ್ನುವ ಹಾಗೆ, ರೆಡ್ಡಿಗಳ ಆವಾಂತರದ ಲಾಭ ಪಡೆಯಲು ಮುಖ್ಯಮಂತ್ರಿ ಗಾದಿಯ ಕನಸು ಕಾಣುತ್ತ ಒಳಗೊಳಗೇ ಮುಸು ಮುಸು ನಗುತ್ತಿದ್ದಾರೆ. ಆದರೆ, ಶೆಟ್ಟರೇನಾದರೂ ರೆಡ್ಡಿಗಳ ಖೆಡ್ಡಾಗೆ ಬಿದ್ದರೆ ಅವರನ್ನು ರೆಡ್ಡಿಗಳು ಟಿಶ್ಯೂ ಪೇಪರ್ ನಂತೆ ಒರೆಸಿ ಬೀಸಾಕುವುದರಲ್ಲಿ ಸಂಶಯವಿಲ್ಲ, ರೆಡ್ಡಿಗಳಿಗೆ ಬೇಕಾಗಿರುವುದು ತಮ್ಮ ಉದ್ಯಮಕ್ಕೆ ಅನುಕೂಲವಾಗುವ ಒಬ್ಬ ರಬ್ಬರ ಸ್ಟ್ಯಾಂಪ್ ಮುಖ್ಯಮಂತ್ರಿ. ಶೆಟ್ಟರಿಗೆ ಬೇಕಾಗಿರುವುದು ಶತಾಯ ಗತಾಯ ಮುಖ್ಯಮಂತ್ರಿ ಗಾದಿ. ರಾಜ್ಯ ಲೂಟಿಯಾದರೇನೂ ಅವರಿಗಿಲ್ಲ ಚಿಂತೆ!

ಅನಂತ್ ಮೌನ: ಅನಗತ್ಯವಿದ್ದಾಗಲೆಲ್ಲ ತಾನಾಗಿಯೇ ಬಂದು ಪೋಸ್ ನೀಡುವ ಅನಂತಕುಮಾರ್ ಈಗ ಎಲ್ಲಿದ್ದಾರೆ. ರಾಜ್ಯದಲ್ಲಿ ಸರಕಾರವೇ ಉರುಳುವ ಪರಿಸ್ಥಿತಿ ಎದುರಾಗಿದ್ದರೂ ತಮಗೇನೂ ಗೊತ್ತೇ ಇಲ್ಲವೇನೋ ಎಂಬಂತೆ ಭೂಪಾಲ್ ನಲ್ಲಿ ಕುಳಿತಿದ್ದು, ಅರುಣ್ ಜೇಟ್ಲಿ ಆಗಮನವಾದ ಬಳಿಕ ಬೆಂಗಳೂರಿ "ದೌಡಾಯಿಸಿ" ತಾನೊಬ್ಬ ದೊಡ್ಡ ನಾಯಕ ಎಂದು ಪೋಸು ನೀಡುವುದರಲ್ಲಿ ಅನಂತ್ ತೊಡಗಿದ್ದಾರೆ. ಕುಂಡಿ ಚಿವುಟಿ ನಂತರ ಸಮಾಧಾನ ಮಾಡುವುದೇ ಅನಂತ್ ಗೆ ಒಂದು ರೀತಿ ಖುಷಿ ಕೊಡುವ ಕೆಲಸ. ಅನಂತಕುಮಾರ್ ಬೆಂಬಲವಿಲ್ಲದಿದ್ದರೆ ಶೆಟ್ಟರ, ಬಸನಗೊಡ ಪಾಟೀಲ್ ಯತ್ನಾಳ್ ಚಿಗುರಿಕೊಳ್ಳಲು ಸಾಧ್ಯವೇ?

ರಾಜ್ಯಪಾಲರ ಮೌನ: ಮುಖ್ಯಮಂತ್ರಿ ಏನೇ ಹೇಳಿಕೆ ನೀಡಿದರೂ ಅದನ್ನು ವಿರೋಧಿಸಲೆಂದೇ ಇರುವ ಕಾಂಗ್ರೆಸ್ ನ ಸಿದ್ದರಾಮಯ್ಯ, ಉಗ್ರ(ಪ್ಪ), ಡಿ.ಕೆ. ಶಿವಕುಮಾರ - ಸರಕಾರದಲ್ಲಿರುವವರೇ ಇಂಥ ಬಿಕ್ಕಟ್ಟು ಸೃಷ್ಟಿಸಿದಾಗ ಅವಕಾಶ ಉಪಯೋಗಿಸಿಕೊಳ್ಳುವುದನ್ನು ಬಿಟ್ಟಾರೆಯೇ? ಸರಕಾರದಲ್ಲಿ ಎಲ್ಲವೂ ಸುಸೂತ್ರವಾಗಿದ್ದು ಸುರಳೀತ ಆಡಳಿತ ನೀಡುತ್ತಿರುವಾಗಲೇ ಮೊಸರಲ್ಲಿ ಕಲ್ಲು ಹುಡುಕಿ ರಾಜ್ಯ ಸರಕಾರವನ್ನು ಪತನ ಮಾಡಲೆಂದೇ ದೆಹಲಿಯಿಂದ ರಾಜ್ಯಕ್ಕೆ ಆಮದು ಮಾಡಿಕೊಂಡಿರುವ ರಾಜ್ಯಪಾಲರ ಹಿತ್ತಾಳೆ ಕಿವಿಗೆ ಸರಕು ಸುರಿಯುವ ಈ ಮಂದಿ ಈಗಾಗಲೇ ರಾಜ್ಯ ಸರಕಾರದ ಪತನಕ್ಕೆ ರಾಜಭವನದಲ್ಲಿ ಸ್ಕೆಚ್ ಹಾಕಿದಂತೆ ಕಾಣುತ್ತದೆ. ಆದ್ದರಿಂದಲೇ ಈ ಪರಿಸ್ಥಿತಿಯಲ್ಲೂ ರಾಜ್ಯಪಾಲರಿಂದ ಒಂದು ಕಿಮಕ್ ಕೂಡ ಇಲ್ಲ. ಕಾಂಗ್ರೆಸ್ ಈ ತಪ್ಪನ್ನೇನಾದರೂ ಎಸಗಿದರೆ ಈಗಿರುವ ಅಷ್ಟೋ-ಇಷ್ಟೋ ಸ್ಥಾನಗಳನ್ನೂ ಕಳೆದುಕೊಂಡು ಮೂಲೆಗುಂಪಾಗಬೇಕಾಗುತ್ತದೆ ಎನ್ನುವುದು ಶತಸ್ಸಿದ್ಧ.

0 Comments:

Post a Comment

<< Home