Tuesday, April 18, 2006

ಕನ್ನಡಿಗರು ಕೆಟ್ಟವರಾ?

"ನಟಿಗರ್ ರಾಜ್ ಕುಮಾರ್ ಸಾವರದಕೂ, ಬೆಂಗಳೂರಿಲ್ ಬಸ್ ಬರ್ನ್ ಪಣ್ರದಕೂ ಎನ್ನ ಸಂಬಂದಂ? " (ನಟ ರಾಜ್ ಕುಮಾರ್ ಸಾಯುವುದಕ್ಕೂ, ಬಸ್ ಸುಡುವುದಕ್ಕೂ ಎಲ್ಲಿಯ ಸಂಬಂಧ) ಅಂತ ತಮಿಳು ಮಿತ್ರನೊಬ್ಬ ಮೊನ್ನೆ ಕೇಳಿದ.

ಆತನಿಗೆ ಏನು ಹೇಳಬೇಕೆನ್ನುವುದೇ ನನಗೆ ತೋಚಲಿಲ್ಲ. ಒಂದು ಕ್ಷಣ ನನಗೆ ನಾಚಿಕೆಯೂ ಆದಂತಾಯಿತು. ಕನ್ನಡ ಸಂಸ್ಕೃತಿ, ಭಾಷೆಯ ಶ್ರೀಮಂತಿಕೆಯ ಬಗ್ಗೆ ಆಗಾಗ ಕೊಚ್ಚಿಕೊಳ್ಳುವ ನನಗೆ ಅವಮಾನ ಮಾಡಬೇಕೆಂದೇ ಆತ ಆ ಪ್ರಶ್ನೆ ಕೇಳಿದನೇ ಎಂಬ ಅನುಮಾನವೂ ಆಯ್ತು.

ಡಾ.ರಾಜ್ ಕುಮಾರ್ ಮತ್ತು ಹಿಂಸೆ ಒಂದಕ್ಕೊಂದು ತದ್ವಿರುದ್ಧ ಪದಗಳು. ತಮ್ಮ ಜೀವಿತವಿಡೀ ನಯ, ವಿನಯ, ಸೌಮ್ಯತೆ, ಮುಗ್ಧತೆ, ಸರಳ ಜೀವನಕ್ಕೆ ಹೆಸರಾದ ರಾಜ್ ಕುಮಾರ್ ಅವರು ಇಹಲೋಕ ತ್ಯಜಿಸಿದಾಗ ಅವರ ಹೆಸರಿನ ಜೊತೆ ಹಿಂಸೆಯ ಬಗ್ಗೆ ಮಾತನಾಡಬೇಕು ಅಥವಾ ಅದನ್ನು ಕೇಳಬೇಕೆನ್ನುವುದೇ ಒಂದು ದೊಡ್ಡ ಹಿಂಸೆ.

ಡಾ.ರಾಜ್ ಅಭಿಮಾನಿಗಳು ಎಂದು ಲೇಬಲ್ ಅಂಟಿಸಿಕೊಂಡ ಈ ಜನ ಮಾಡಿದ ದುಷ್ಕೃತ್ಯಗಳು ಅಭಿಮಾನಿಗಳು ಎಂದೆನಿಸಿಕೊಂಡವರು ಮಾಡುವ ಕೆಲಸವೇ? ತಮಿಳುನಾಡಿನ ಬಸ್ಸಿಗೆ ಕಲ್ಲು, ಬಡ ಪೊಲೀಸ್ ಪೇದೆಯ ಜಜ್ಜಿ ಕೊಲೆ, ಪೊಲೀಸ್ ಠಾಣೆಗೆ ಬೆಂಕಿ, ಪೆಟ್ರೋಲ್ ಪಂಪ್ ಸುಟ್ಟು ಬೂದಿ... ಇವೇನಾ ಅಭಿಮಾನಿಗಳ ಕೆಲಸ? ಇವರೇನು ಮನುಷ್ಯರೇ ಅಥವಾ ರಾಕ್ಷಸರೇ?

ಈ ಪರಿ ಹಿಂಸಾಚಾರದ ಪರಮಾವಧಿಯನ್ನು ಕಂಡು ಡಾ.ರಾಜ್ ಆತ್ಮ ಒಳಗೇ ನೊಂದಿರಬಹುದು.
ಡಾ.ರಾಜ್ ಪಾರ್ಥಿವ ಶರೀರದೆದುರು ಕುಳಿತ ರಾಜ್ ಪುತ್ರರು ಒತ್ತಿ ಬರುವ ದುಃಖದಲ್ಲೇ ಶಾಂತರಾಗಿರುವಂತೆ ಅಭಿಮಾನಿಗಳನ್ನು ಬೇಡಿಕೊಂಡರೆ, ಅವರನ್ನು ನೋಡಿ ಚಪ್ಪಾಳೆ ತಟ್ಟಿ ನಗುತ್ತಿದ್ದವರು, ಅಂತಿಮ ಯಾತ್ರೆಯ ವಾಹನದೆದುರು ಕುಡಿದು ಕುಪ್ಪಳಿಸಿದವರು ಕೇವಲ ಕನ್ನಡಿಗರಷ್ಟೇ ಅಲ್ಲ ಮಾನವ ಕುಲಕ್ಕೇ ಕಳಂಕ. ಸದಾ ತನ್ನ ಅಭಿಮಾನಿಗಳನ್ನು "ದೇವರೇ" ಎಂದು ಸಂಬೋಧಿಸುತ್ತಿದ್ದ ಹಿರಿಯ ಜೀವಕ್ಕೆ ಮಾಡಿದ ಘೋರ ಅನ್ಯಾಯವಿದು.

ಮೂರು ವರ್ಷಗಳ ಹಿಂದೆ ಚೆನ್ನೈನಲ್ಲೂ ತಮಿಳು ಚಿತ್ರರಂಗದ ಖ್ಯಾತ ನಟ ಶಿವಾಜಿ ಗಣೇಶನ್ ವಿಧಿವಶರಾದರು. ಖ್ಯಾತಿಯಲ್ಲಿ ಡಾ.ರಾಜ್ ಅವರಿಗಿಂತ ಶಿವಾಜಿಯೇನೂ ಕಮ್ಮಿಯಿರಲಿಲ್ಲ. ಅವರಿಗೂ ಅಪಾರ ಅಭಿಮಾನಿ ಬಳಗವಿತ್ತು. ಆದರೆ ಅವರು ನಿಧನರಾದಾಗ ನಗರದ ಒಂದೇ ಒಂದು ಕಡೆ ಹಿಂಸೆಯ ಘಟನೆಗಳಾಗಲಿ, ದಳ್ಳುರಿಯಾಗಲಿ ಕಂಡು ಬರಲಿಲ್ಲ.

80 ರ ದಶಕದಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜನಪ್ರಿಯ ನಟ ಎಂ.ಜಿ.ರಾಮಚಂದ್ರನ್ (ಎಂಜಿಆರ್) ನಿಧನರಾದಾಗ ಚೆನ್ನೈನಲ್ಲಿ ಅಲ್ಪ ಪ್ರಮಾಣದ ಹಿಂಸಾಚಾರ ವರದಿಯಾಗಿದ್ದು ನಿಜ. ಅದು ಕೇವಲ ಡಿಎಂಕೆ ಪಕ್ಷದವರ ಕೆಲ ಆಸ್ತಿ ಪಾಸ್ತಿ ಹಾನಿಗೊಳಿಸುವುದಕ್ಕೆ ಸೀಮಿತವಾಗಿವಾಗಿತ್ತೇ ಹೊರತು ಮೊನ್ನೆ ಬೆಂಗಳೂರಿನಲ್ಲಿ ಸಂಭವಿಸಿದ ತಲೆತಗ್ಗಿಸುವಂತಹ ಘಟನೆಗಳೇನೂ ನಡೆಯಲಿಲ್ಲ.

ಕಳೆದ ಏಳು ವರ್ಷಗಳಿಂದ ಚೆನ್ನೈನಲ್ಲಿ ವಾಸಿಸುವ ನನಗೆ, ಎಂದೂ ಕನ್ನಡ ಚಿತ್ರ ನೋಡದ ಕೆಲ ತಮಿಳು ಮಿತ್ರರು ಡಾ.ರಾಜ್ ಕುಮಾರ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದು ನಿಜಕ್ಕೂ ನನಗೆ ಮೆಚ್ಚುಗೆಯಾಯಿತು. ಸದಾ ತಮಿಳರನ್ನು, ತಮಿಳು ಭಾಷೆಯನ್ನು ಹಿಯಾಳಿಸುವ ನಾವೆಷ್ಟು ಒಳ್ಳೆಯವರು ಎಂಬ ಪ್ರಶ್ನೆಯೂ ಸುಳಿದು ಹೋಯ್ತು.

ಡಾ.ರಾಜ್ ನಿಧನಕ್ಕೆ ಕಂಬನಿ ಮಿಡಿದ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್, "ಐ ಲಾಸ್ಟ್ ಮೈ ಫಾದರ್ ಇನ್ ಕರ್ನಾಟಕ" ಎಂದು ದುಃಖಿಸಿದ ಶಿವಾಜಿ ಗಣೇಶನ್ ಪುತ್ರ ಪ್ರಭು, ಅವರ ಹೃದಯ ವೈಶಾಲ್ಯಕ್ಕೆ ಸಾಕ್ಷಿ.

ಕೆಲ ಅನಾಗರಿಕರು ಮಾಡಿದ ತಪ್ಪಿಗೆ ಇಡೀ ಕನ್ನಡ ಸಮುದಾಯಕ್ಕೇ ಕಳಂಕ. ಇಂಥ ಅನಾಗರಿಕರ ಸಂತತಿ ನಾಶವಾಗಲಿ. ಕನ್ನಡದ ಹಿರಿಮೆ-ಹೆಮ್ಮೆ ಎತ್ತಿ ಹಿಡಿಯುವಂತಾಗಲಿ. ತಿಳಿಗೇಡಿಗಳು ಮಾಡಿದ ತಪ್ಪನ್ನು ಹಿರಿಯ ಚೇತನ ಕ್ಷಮಿಸಲಿ.

3 Comments:

At 6:57 PM, April 18, 2006, Blogger Sarathy said...

ಪ್ರಿಯ ವಿಶ್ವನಾಥ್ ಅವರೇ, ಬೆಂಗಳೂರಿನಲ್ಲಿ ನಾಗರಿಕತೆ ಎಂಬುದು ಸತ್ತು ಬಹಳ ವರ್ಷಗಳೇ ಆಗಿ ಹೋಗಿದೆ. ಅದೊಂದು ಅನಾಗರಿಕರ ಅಗರವಾಗಿಬಿಟ್ಟಿದೆ. ಬಸ್ ಸುಡುವ ಸಂಸ್ಕೃತಿ ಬೆಂಗಳೂರಿನ ಪಡ್ಡೆ ಹೈಕಳಿಗೆ ಮೈಗೂಡಿಕೊಂಡಿದೆ. ತಮಿಳರನ್ನು ದುರಭಿಮಾನಿಗಳೆಂದೂ ಪದೇ ಪದೇ ದೂರುವ ನಾವು ನಮ್ಮ ಅಭಿಮಾನವನ್ನೂ ಎಂದೂ ಪ್ರಶ್ನಿಸಿಕೊಂಡವರಲ್ಲ.

 
At 7:32 PM, April 18, 2006, Blogger Vishwanath said...

ಪ್ರಿಯ ಸಾರಥಿ ಅವರೇ,
ಬೆಂಗಳೂರಿನ ಈಚಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ, ನಿಮ್ಮ ಮಾತುಗಳು ನಿಜವೇನೋ ಎಂದೆನಿಸುತ್ತದೆ. ಕೇವಲ ಬಾಯ್ಮಾತಿನಲ್ಲಿ ಕನ್ನಡ ಪ್ರೇಮ ತೋರುವ ಬದಲು ಕನ್ನಡತನ ಎಂದರೇನು ಎಂಬುದನ್ನು ನಮ್ಮ ಹೈಕ್ಳು ಅರಿತುಕೊಂಡರೆ ಅವರಿಗೂ-ನಾಡಿಗೂ ಕ್ಷೇಮ.

 
At 1:47 PM, April 19, 2006, Blogger Anveshi said...

ಪ್ರಿಯ ವಿಶ್ವನಾಥ್,
ಡಾ.ರಾಜ್ ನಿಧನರಾದ ತಕ್ಷಣ ಕಿಡಿಗೇಡಿಗಳು ಬೆಂಗಳೂರಿನಾದ್ಯಂತ ಚಡ್ಡಿಯೊಳಗೆ ಇರುವೆ ಹೊಕ್ಕವರಂತೆ ಓಡಾಡಿ ದಾಂಧಲೆ ಎಬ್ಬಿಸಿದ್ದು ನೋಡಿದರೆ ಇದೆಲ್ಲಾ ಪೂರ್ವಯೋಜಿತ ಘಟನೆ ಎಂಬ ಶಂಕೆ ಮೂಡುತ್ತದೆ

ಅದೇ ರೀತಿ, ಒಂದು ಸರಕಾರದ ಹೆಸರಿಗೆ ಮಸಿ ಬಳಿಯುವುದಕ್ಕೋ, ಬೆಂಗಳೂರೆಂಬ ಉದ್ಯಾನ ನಗರಿಗೆ ಬೆಂಕಿಯಲ್ಲಿ ಬೆಂದ ಊರು ಎಂಬ ಹೆಸರು ಬರಿಸುವುದಕ್ಕೋ, ಅಥವಾ ಇದೆಲ್ಲಕ್ಕಿಂತ ಹೆಚ್ಚಾಗಿ ಸರಕಾರ ಉರುಳಿಸುವ ಷಡ್-ಯಂತ್ರ ಜೋಡಿಸುವ ಕೆಲಸಕ್ಕೋ ಈ ----ಮಕ್ಳು (ತಪ್ಪು ತಿಳ್ಕೋ ಬ್ಯಾಡಿ, ಹೈಕ್ಳು ಎಂಬುದರ ದ್ಭವ ರೂಪ!) ಏನು ಮಾಡಲೂ ತಯಾರಿದ್ದಾರೆಂದರೆ (ಎಲ್ಲವನ್ನೂ ಸಿದ್ಧತೆ ಮಾಡಿಕೊಂಡಿದ್ದರಲ್ವ?) ಡಾ.ರಾಜ್ ಹೇಗೆ ದಿಢೀರಂತ ನಮ್ಮನ್ನು ಬಿಟ್ಟು ಹೋದರು ಎಂಬ ಘಟನೆಯ ಮೇಲೂ ಸಂದೇಹ ನನಗೆ.

ಅದ್ರ ಹಿಂದೆ ಕೂಡ ಈ ಸಮಾಜಘಾತುಕ ಸಂಘದ ಸದಸ್ಯರ ಕೈವಾಡವಿದೆಯೇ?

 

Post a Comment

<< Home