ಭೇಷ್ ಬಿಬಿಎಂಪಿ!
ಪ್ರತಿದಿನ ಪತ್ರಿಕೆ ತೆಗೆಯುತ್ತಲೇ ಒಂದು ಪುಟದಲ್ಲಾದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಕನಿಷ್ಠ ಒಂದು ದೂರಾದರೂ ಖಂಡಿತ ಇರುತ್ತದೆ.
ಕೆಲ ಪತ್ರಿಕೆಗಳಲ್ಲಿ ಓದುಗರು ಪತ್ರ ಬರೆದು ಹಾಳಾದ ರಸ್ತೆ ಸರಿಪಡಿಸಿ, ಬೀದಿದೀಪ ಹಾಕಿಸಿ, ಬೀದಿನಾಯಿ ಕಾಟ ತಪ್ಪಿಸಿ, ಕಸ ಎತ್ತಿಸಿ ಇಂಥವೇ ನೂರಾರು ದೂರುಗಳೊಂದಿಗೆ ತಮ್ಮ ಸಮಸ್ಯೆಗಳನ್ನು ಹರವಿಕೊಂಡಿರುತ್ತಾರೆ. ಕೆಲವೊಮ್ಮೆ ಇವಾವುವೂ ಇರದಿದ್ದರೆ ಪತ್ರಿಕೆಗಳೇ ಕುಂದುಕೊರತೆಗಳ ಆಕ್ಷೇಪವೆತ್ತುತ್ತವೆ. ಅನೇಕ ಬಾರಿ ಇಂಥ ಆಕ್ಷೇಪಗಳು ಸಾರ್ವಜನಿಕರ ಪರವಾಗಿ ಇದ್ದರೆ ಇನ್ನು ಕೆಲ ಬಾರಿ ಇನ್ನಾರದೋ ಮೇಲೆ ಸಿಟ್ಟು ತೀರಿಸಿಕೊಳ್ಳಲು ಸುದ್ದಿ ಪ್ರಕಟವಾದಂತೆ ಕಾಣುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಬೆಂಗಳೂರಿನ ಮೆಜಸ್ಟಿಕ್ ಸುತ್ತ ಸುಸ್ಸುಕೋರರ (ಗೋಡೆಗೆ ಮೂತ್ರ ವಿಸರ್ಜಿಸುವವರ) ಹಾಗೂ ಎಲ್ಲೆಂದರಲ್ಲಿ ಸಿನಿಮಾ ಪೋಸ್ಟರ್ ಅಂಟಿಸುವವರ ಹಾವಳಿ ವಿಪರೀತವಾದಾಗ ಇದಕ್ಕೆ ಪರಿಹಾರ ಕಂಡುಹಿಡಿಯಲು ಎಲ್ಲಾ ಗೋಡೆಗಳ ಮೇಲೆ ಪ್ರಕೃತಿ ಸೌಂದರ್ಯದ, ಪ್ರವಾಸಿ ತಾಣಗಳ ಸುಂದರ ಚಿತ್ರಕಲೆಗಳನ್ನು ಬಿಡಿಸಲು ಬಿಬಿಎಂಪಿ ನಿರ್ಧರಿಸಿತು. ಅದರಂತೆಯೇ ಕಾರ್ಯರೂಪಕ್ಕೂ ಇಳಿಯಿತು. ಪ್ರಾಯಶಃ ಗೋಡೆ ಅಂದಗೆಡಿಸುವವರನ್ನು ಹತ್ತಿಕ್ಕಲು ಯಾವುದೇ ಮಹಾನಗರ ಪಾಲಿಕೆ ದೇಶದಲ್ಲೇ ಕೈಗೊಂಡ ವಿನೂತನ ಪ್ರಯೋಗವಿದು. ಆದರೆ ಕೆಲ ಪತ್ರಿಕೆಗಳು ಇದರಲ್ಲೂ ಹುಳುಕು ಕಂಡು ಹಿಡಿಯುವ ಪ್ರಯತ್ನ ಮಾಡಿದವು.
ಪತ್ರಿಕೆಗಳಲ್ಲಿ ದೂರುಗಳು ಪ್ರಕಟವಾದಾಗಲೆಲ್ಲ ಬಿಬಿಎಂಪಿ ಅದಕ್ಕೆ ಸ್ಪಷ್ಟೀಕರಣ ನೀಡಿದ್ದು, ಕಾಮಗಾರಿ ಕೈಗೆತ್ತಿಕೊಂಡಿರುವ ಹೇಳಿಕೆ ನೀಡಿದ್ದನ್ನು ನಾವು ಓದುತ್ತೇವೆ. ಆದರೆ, ಬಿಬಿಎಂಪಿ ಸಮಸ್ಯೆಗೆ ಸ್ಪಂದಿಸಿಕ್ಕಿಂತ ದೂರು ಪ್ರಕಟಿಸಿದ ಪತ್ರಿಕೆಯೇ ತನ್ನ ವರದಿಯ ಪರಿಣಾಮ, ಫಲಶ್ರುತಿ ಎಂಬ ಶಹಬ್ಬಾಶ್ ಗಿರಿ ಕೊಟ್ಟುಕೊಂಡಾಗ ಬಿಬಿಎಂಪಿ ಬಗ್ಗೆ ಕನಿಕರಪಟ್ಟಿದ್ದೇನೆ. ಬಿಬಿಎಂಪಿಯದ್ದು ಎಂಥ ಥ್ಯಾಂಕ್ ಲೆಸ್ ಜಾಬ್ ಅಲ್ಲವೇ ಎಂದು ಅನ್ನಿಸಿದ್ದೂ ಇದೆ. ಬೆಂಗಳೂರು ಇರೋವರ್ಗೂ ಬಿಬಿಎಂಪಿಗೆ ಬೈಗುಳ ತಪ್ಪಿದ್ದಲ್ಲ!
ಈಚೆಗೆ ನಮ್ಮ ಬೀದಿಯಲ್ಲಿ ಕಳೆದ ಹಲವಾರು ತಿಂಗಳಿಂದ ಬೀದಿದೀಪವೇ ಇರಲಿಲ್ಲ. ಇದರಿಂದಾಗಿ ಕೆಲ ಮನೆಗಳಲ್ಲಿ ಕಳ್ಳತನವೂ ನಡೆಯಿತು. ಆಗ ನನಗೆ ಹೊಳೆದದ್ದು http://www.bbmponline.org/ ವೆಬ್ ಸೈಟ್. ಸುಮ್ಮನೇ ಒಂದು ಪ್ರಯತ್ನ ಮಾಡೋಣ ಅಂತ ಪಾಲಿಕೆ ಆಯುಕ್ತರು ಹಾಗೂ ಆಡಳಿತಾಧಿಕಾರಿಗಳಿಗೆ ಸಮಸ್ಯೆಯನ್ನು ವಿವರಿಸಿ ಒಂದು ಇ-ಮೇಲ್ ಮಾಡಿದೆ. ಆಶ್ಚರ್ಯವೆಂಬಂತೆ ನಾನು ಇ-ಮೇಲ್ ಕಳುಹಿಸಿದ ಮೂರೇ ದಿನಗಳಲ್ಲಿ ನಮ್ಮ ಬೀದಿಯಲ್ಲಿನ ದೀಪಗಳು ರಿಪೇರಿಯಾದವು. ಇದಕ್ಕಿಂತ ಖುಷಿಯ ಸಂಗತಿ ಬೇರೇನಿದೆ ಹೇಳಿ? ಬಿಬಿಎಂಪಿ ಇಷ್ಟು ಕ್ಷಿಪ್ರವಾಗಿ ಕಾರ್ಯಪ್ರವೃತ್ತವಾಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಇಷ್ಟೇ ಅಲ್ಲ ಈಚೆಗೆ ಬಿಬಿಎಂಪಿ ಸಾರ್ವಜನಿಕ ಸಂಪರ್ಕಾಧಿಕಾರಿಗಳಿಂದ ಇ-ಮೇಲ್ ಬಂದಿದ್ದು, ನಿಮ್ಮ ಬಡಾವಣೆಯಲ್ಲಿ ಬೇರೆ ಯಾವುದಾದರೂ ಸಮಸ್ಯೆಗಳಿದ್ದರೆ ತಿಳಿಸಿ, ಅದನ್ನು ಸರಿಪಡಿಸುವುದಾಗಿ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ಪ್ರದೇಶದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ನೀವೂ ಈ ವಿಳಾಸಕ್ಕೆ ಇ-ಮೇಲ್ ಗೆ ಕಳಿಸಬಹುದು: bbmpalike@gmail.com
ನಿಜಕ್ಕೂ ಬಿಬಿಎಂಪಿ ಅಭಿನಂದನಾರ್ಹ ಅಲ್ಲವೇ?
0 Comments:
Post a Comment
<< Home