Tuesday, April 18, 2006

ನಾನು ಬ(ಭ)ಡವಿ ಆತ ಬ(ಭ)ಡವ...!

ನಾನು ಬಡವಿ, ಆತ ಬಡವ ಹೊಲಸೇ ನಮ್ಮ ಬದುಕು....!


ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಬರುವ ಮೇ ತಿಂಗಳು ನಡೆಯಲಿದ್ದು, ಇದಕ್ಕಿಂತ ಮುನ್ನ ಅಭ್ಯರ್ಥಿಗಳ ಆಸ್ತಿ ಘೋಷಣೆ ಎಂಬ ಪ್ರಹಸನ ನಡೆಯುತ್ತಿದೆ.

ಕಳೆದ 50 ವರ್ಷಗಳಿಂದ ರಾಜಕೀಯದಲ್ಲಿರುವ ಕರುಣಾನಿಧಿ, ಪರಂಪರಾಗತವಾಗಿ ಕಳೆದ 50 ವರ್ಷ ದೇಶದ ಚುಕ್ಕಾಣಿ ಹಿಡಿದ ಮನೆತನದ ಸೋನಿಯಾ, ಸತತ 25 ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಸಿಪಿಎಂ ನ ಬುದ್ಧದೇವ ಭಟ್ಟಾಚಾರ್ಯ ಅವರ ಬಳಿ ಒಂದೂ ಕಾರ್ ಇಲ್ಲವಂತೆ! ಹೇಗೆ-ಎಲ್ಲಿಂದ ನಗಬೇಕೋ ತಿಳಿಯದಷ್ಟು ಕಕ್ಕಾಬಿಕ್ಕಿಯಾಗುತ್ತಿದೆ.
ಕರುಣಾನಿಧಿ ಅವರೇ ಘೋಷಿಸಿರುವಂತೆ ಅವರ ಇಬ್ಬರು ಹೆಂಡತಿಯರ ಹೆಸರಿನಲ್ಲಿರುವ ಆಸ್ತಿ-ಪಾಸ್ತಿ ಕೇವಲ 25 ಕೋಟಿ ರೂಪಾಯಿ. ತಮಿಳುನಾಡಿನ ಈ ಸಂತನಿಗೆ ತನ್ನದ್ದೆಂದು ಹೇಳಿಕೊಳ್ಳುವ ಒಂದು ಮನೆ, ಕಾರೂ ಇಲ್ಲವಂತೆ, ಪಾಪ! ಹಾಗಿದ್ದರೆ ಇವರ ಹೆಂಡತಿ ಮಕ್ಕಳು ಇವರಿಗೆ ಸೇರಿಲ್ಲವೇ?

ಇನ್ನು, ಕಳೆದ 50 ವರ್ಷಗಳಿಂದ ಅಧಿಕಾರದ ಸುಪ್ಪತ್ತಿಗೆಯಲ್ಲಿರುವ ಮನೆತನದು ಹೆಣ್ಣುಮಗಳು, ತ್ಯಾಗದ ಅಪರಾವತಾರ ಸೋನಿಯಾ ಗಾಂಧಿ ಗಳಿಕೆ ಕೇವಲ ಐದೇ ಕೋಟಿ ರೂಪಾಯಿಯಂತೆ. ಸುಳ್ಳಿಗೂ ಒಂದು ಮಿತಿ ಬೇಡವೇ? ತಮ್ಮ ಹೆಸರಿನ ಜೊತೆಗೆ ಗಾಂಧಿ ಎಂದು ಅಂಟಿಸಿಕೊಂಡು ಬಿಟ್ಟರೆ ಸಾಕೆ? ದೇಶದ ಬಡತನ ಕಂಡು ಅರೆಬತ್ತಲೆ ಬಟ್ಟೆ ತೊಟ್ಟ ಆ ಫಕೀರನೆಲ್ಲಿ, ಆತನ ಹೆಸರು ಹೇಳಿ ಹೊಟ್ಟೆ ಹೊರೆಯುವ ಈ ನಾಲಾಯಕ್ಕರೆಲ್ಲಿ?

ಸದಾ ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಬಗ್ಗೆ ಮಾತನಾಡುವ, ದುಡಿತ ಎಂಬುದೇನು ಎಂಬುದೇ ಗೊತ್ತಿರದ, ಗಾಂಧಿ ತತ್ವಗಳನ್ನು ಬೊಗಳುವ ಇವರು ಅವರಿವರ ಹೆಸರಲ್ಲಿ ಇಷ್ಟು ಸಂಪಾದಿಸಿದ್ದಾದರೂ ಹೇಗೆ (ಬಹಿರಂಗಪಡಿಸಿರುವುದು ಇಷ್ಟು, ಗುಟ್ಟಾಗಿರುವುದು ಇನ್ನೆಷ್ಟೋ?)

ಇಷ್ಟಾದರೂ ಇವರೇ ನಮ್ಮ ನಾಯಕರು, ಇವರು ಹೇಳಿದ್ದೇ ಕಾನೂನು, ಗಿಮಿಕ್ಕಿಗಾಗಿ ಕೊಟ್ಟ ರಾಜೀನಾಮೆಯೇ ಒಂದು ದೊಡ್ಡ ತ್ಯಾಗ!

ತಮಿಳುನಾಡಿನ ಪುರುಚ್ಚಿ ತಲೈವಿ (ಕ್ರಾಂತಿ ನಾಯಕಿ) ಜಯಲಲಿತಾ ಆಸ್ತಿ ಕೇವಲ 125 ಕೋಟಿ ರೂಪಾಯಿಯಂತೆ. ಹಾಗಿದ್ದರೆ ಜಯಾಗಿಂತ ಸೋನಿಯಾ ಬ(ಭ)ಡವಿ!

ಒಂದೆಡೆ ತಿನ್ನಲು ಅನ್ನವಿಲ್ಲದೇ, ಪದವಿಯಿದ್ದರೂ ಉದ್ಯೋಗವಿಲ್ಲದೇ ಯುವಕರು ಪೇಚಾಡುತ್ತಿರುವಾಗ ಈ ಭಡವ- ಭಡವಿಯರು ಅಟ್ಟಹಾಸ ಮೆರೆಯುತ್ತಿದ್ದಾರೆ.

ಮೇರಾ ಭಾರತ್ ಮಹಾನ್!

1 Comments:

At 1:59 PM, April 19, 2006, Blogger Anveshi said...

ಹೌದು ವಿಶ್ವನಾಥ್,
ನಮ್ಮ ಗಾಂಧಿ ಕುಟುಂಬದ ಭಡತನ ಕಂಡು ಮನಸ್ಸು ಮಮ್ಮಲ ಮರುಗುತ್ತಿದೆ. ಓಡಾಡಲು ಅಂತ ಒಂದು ಕಾರು ಕೂಡ ಇಲ್ಲ... ಮಾಡಲು ಸೂಕ್ತವಾದ ಒಂದು ಉದ್ಯೋಗ ಇಲ್ಲ.

ಈ ಕಾರಣಕ್ಕೆ ಸೋನಿಯಾಗೆ ಸರಕಾರದಲ್ಲಿ ಕೆಲಸವಿಲ್ಲದ ಸಲಹಾ ಸಮಿತಿಯೊಂದನ್ನು ಸೃಷ್ಟಿಸಿ, ಅದಕ್ಕೊಂದು ಮುಖ್ಯಸ್ಥರ ಹುದ್ದೆಯನ್ನೂ ಸೃಷ್ಟಿಸಿ, ಪೀಠವೇರಿಸಲಾಗಿತ್ತು.

ಅನಂತರ ಎಲ್ಲರ ಬಾಯಲ್ಲೂ, ಇಂದಿರಾ, ರಾಜೀವ್ ಹೆಸರು ಹೇಳಿಸಿ, ಪ್ರಿಯಾಂಕರನ್ನು ಮುಂದಕ್ಕೆ ತಳ್ಳಿ ರಾಯ್ ಬರೇಲಿಯಿಂದ ಲೋಕಸಭೆಗೆ ಆರಿಸಿ ಕಳುಹಿಸಲಾಯಿತು. ಅಲ್ಲೂ ಈಗ "ತ್ಯಾಗಮಯಿ" ಪಟ್ಟವನ್ನು (ಬೇರಾರಿಗೂ ನಿಲುಕದಂತೆ) ಇನ್ನಷ್ಟು ಎತ್ತರಕ್ಕೇರಿಸಲು ಮತ್ತೆ ಚುನಾವಣೆ ನಡೆಸುವಂತೆ ಮಾಡಿದ ಮಹಾತಾಯಿ ಸೋನಿಯಾ.

ಈಕೆಯನ್ನೇ ನಂಬಿಕೊಂಡಿದ್ದ ಭಾರತದ ಪ್ರಜೆಗಳ ತೆರಿಗೆ ಹಣವೆಲ್ಲಾ ಆಕೆಯ ವೇತನಕ್ಕೆ, ಅಧಿಕೃತ ವಿದೇಶ ಪ್ರವಾಸಗಳಿಗೆ (ಅದನ್ನು ಸಂಶೋಧನಾ ಯಾತ್ರೆ, ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ಧಿ ಯಾತ್ರೆ ಎಂದು ಕರೆಯುವುದು ಕಡ್ಡಾಯ), ವಿವಿಧ ಸೌಲಭ್ಯಗಳಿಗೆ ಸಾಕಾಗುತ್ತದೆ.

ಅಷ್ಟು ಮಾತ್ರವಲ್ಲ, ಉಳಿದ ಹಣ ಆಗಾಗ ತ್ಯಾಗ ಮಾಡುತ್ತಾ, ಲೋಕಸಭೆ ಕ್ಷೇತ್ರದಲ್ಲಿ ಮತ್ತೆ ಮತ್ತೆ ಚುನಾವಣೆ ನಡೆಸುವುದಕ್ಕೆ ಖರ್ಚಾಗುತ್ತದೆ. ಇನ್ನು ಹಣವಾದರೂ ಆಕೆಯ ಬಳಿ ಎಲ್ಲಿ ಉಳಿದೀತು?

 

Post a Comment

<< Home