ಊರೆಲ್ಲ ನೆಂಟರು...
ಊರೆಲ್ಲ ನೆಂಟರು ಹಣದ ಗಂಟಿದ್ದರೆ
ಕುಣಿದು ಕುಂಬಿಡುವುದು ಜಗವು...
ರೊಟ್ಟಿಯ ಗಂಟೊಂದು ಕೈಯೊಳಗಿದ್ದರೆ ನಾಯಿಗಳೇರ ಬಹವು...
ಕಾಂಗ್ರೆಸ್ಸಿಗರೂ ಅಸಹ್ಯಪಡುವಂತೆ ಒಬ್ಬರ ಕುತ್ತಿಗೆ ಪಟ್ಟಿಯನ್ನು ಇನ್ನೊಬ್ಬರು ಹಿಡಿದು ನಡುರಸ್ತೆಯಲ್ಲೇ ದಿನಾ ಜಗಳಕ್ಕಿಳಿದಿರುವ ಬಿಜೆಪಿ ನಾಯಕರ ವರ್ತನೆ ನೋಡಿ ಜಾನಪದ ಗೀತೆಯ ಮೇಲಿನ ಸಾಲುಗಳು ನೆನಪಿಗೆ ಬಂದವು.
ಕೇವಲ ಮೂರು-ನಾಲ್ಕು ತಿಂಗಳ ಹಿಂದೆ ಇನ್ನೇನು ಲೋಕಸಭಾ ಚುನಾವಣೆ ನಿರ್ಣಾಯಕ ಹಂತದಲ್ಲಿದೆ, ಮುಂದೆ ಬಿಜೆಪಿ ರಾಷ್ಟ್ರದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಮಾಧ್ಯಮಗಳ ವರದಿಯಿಂದ ಅಧಿಕಾರಕ್ಕೆ ಬಂದೇ ಬಿಟ್ಟೆವು ಎಂಬ ಭ್ರಮೆಯಲ್ಲಿದ್ದ ಈ ನಾಯಕರು ರಾಜ್ಯ, ರಾಷ್ಟ್ರಮಟ್ಟದ ಮಾಧ್ಯಮಗಳಿಗೆ ಸಂದರ್ಶನ ನೀಡಿ ತಮ್ಮದು party with a difference ಎಂದು ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ, ಚುನಾವಣೆಯಲ್ಲಿ ಮಹಾಪತನ ಕಂಡಿದ್ದೇ ತಡ, party with many differences ಎಂದು ಈ ನಾಯಕಮಣಿಗಳು ನಾಚಿಕೆಯಿಲ್ಲದೇ ಅವಕಾಶ ಸಿಕ್ಕ ಕಡೆಯಲ್ಲೆಲ್ಲ ಹೇಳಿಕೊಂಡು ಹೋಗುತ್ತಿದ್ದಾರೆ.
ಅಧಿಕಾರವಿದ್ದಾಗ ಎಲ್ಲರೂ ಸ್ನೇಹಿತರೂ, ಎಲ್ಲರೂ ಎಲ್ಲರಿಗೂ ನಾಯಕರು. ಕೆಲವರ ಕೃಪೆಯಿಂದ, ವಶೀಲಿಯಿಂದ ಅಧಿಕಾರ ಗದ್ದುಗೆ ಏರಿದಾಗ ಅವರಿಗೆ ಒಂದು ರೀತಿಯ ಅಮ್ನೀಶಿಯಾ ಅಮರಿಕೊಂಡಿರುತ್ತದೆ. ಅವರಿಗೆ ಕಂದಹಾರ್, ಗೋಧ್ರಾ, ಪೋಖ್ರಾನ್ ಯಾವುದೂ ನೆನಪಿರುವುದಿಲ್ಲ. ಪ್ರತಿ ವಿವಾದಾತ್ಮಕ ವಿಷಯದ ಬಗ್ಗೆಯೂ ತಮ್ಮಪಕ್ಷ ಮಾಡಿದ್ದೇ ಸರಿ ಎಂದು ಕೊಚ್ಚಿಕೊಳ್ಳುತ್ತಿದ್ದ ಇವರು ಈಗ ಥರ್ಡ್ ಅಂಪೈರ್ ನಂತೆ ಮಾತನಾಡಲು ಶುರುವಿಟ್ಟುಕೊಂಡಿದ್ದಾರೆ.
ಸದಾ ಬಿಜೆಪಿಯವರ ಕಾಲೆಳೆಯಲು ಹವಣಿಸುತ್ತಿದ್ದ ಕಾಂಗ್ರೆಸ್, ಸಮಾಜವಾದಿ ಪಕ್ಷಗಳೇ ಇಂದು ಸಾರ್ವಜನಿಕವಾಗಿ ಬಿಜೆಪಿ ನಾಯಕರು ಕಚ್ಚಾಟದಲ್ಲಿ ತೊಡಗಿರುವುದನ್ನು ನೋಡಿ ಮರುಕಪಡುತ್ತಿದ್ದಾರೆ ಎಂದರೆ ಪ್ರತಿಪಕ್ಷಗಳಿಗೆ ಈ ಕಚ್ಚಾಟ ಯಾವ ಪರಿ ಅಸಹ್ಯ ತಂದಿದೆ ಎಂಬುದನ್ನು ಊಹಿಸಬಹುದು.
ಇದನ್ನೆಲ್ಲ ಗಮನಿಸುತ್ತಿದ್ದರೆ ಬಿಜೆಪಿಯವರಿಗೆ ಅಧಿಕಾರ ಸಿಗದೇ ಇದ್ದುದೇ ಒಳ್ಳೆಯದಾಯಿತು ಎಂದು ಅನ್ನಿಸುತ್ತಿದೆ. ಏನಂತೀರಿ?