Tuesday, May 30, 2006

ಒಡೆದ ಮನೆಯಾದ ಬಿಜೆಪಿ

ಭಾರತೀಯ ಜನತಾ ಪಕ್ಷ ಒಂದು ಶಿಸ್ತಿನ ರಾಜಕೀಯ ಪಕ್ಷ ಎಂಬ ಮಾತು ಈಗ ಬರೀ ಕ್ಲೀಷೆಯಾಗಿಬಿಟ್ಟಿದೆ.

BS Yadiyurappaಪಕ್ಷದ ನಾಯಕತ್ವದ ವಿರುದ್ಧ ಕೇಂದ್ರದಲ್ಲಿ ಉಮಾ ಭಾರತಿ ಮತ್ತು ಮದನ್ ಲಾಲ್ ಖುರಾನಾ ಅವರು ಬಂಡೇಳುವಲ್ಲಿಂದ ಹಿಡಿದು ಕರ್ನಾಟಕದಲ್ಲಿ ಯಡಿಯೂರಪ್ಪ ಮತ್ತು ಅನಂತಕುಮಾರ್ ಎಂಬೆರಡು ಬಣಗಳು ಪರಸ್ಪರ ಕತ್ತಿ ಮಸೆಯುತ್ತ ಹೇಳಿಕೆ-ಪ್ರತಿ ಹೇಳಿಕೆಗಳನ್ನು ಕೊಡುತ್ತಿರುವುದನ್ನು ನೋಡಿದರೆ ಈ ಪಕ್ಷದ ಅವನತಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ರಾಜ್ಯದಲ್ಲಿ ಈ ಪಕ್ಷ ಅವನತಿ ಹೊಂದಲು ಕಾಂಗ್ರೆಸ್ ಅಥವಾ ಜೆಡಿ ಎಸ್‌ಗಳೇ ಬೇಕಿಲ್ಲ ಅದಕ್ಕೆ ಅನಂತಕುಮಾರ್, ಬಸವರಾಜ್ ಪಾಟೀಲ್ ಯತ್ನಾಳ್ ರಂಥ ಒಳಗಿನ ಮೀರ್ ಸಾಧಕ್ ರೇ ಸಾಕು.

ರಾಜ್ಯ ಬಿಜೆಪಿಯಲ್ಲಿ ಕಳೆದ ಅನೇಕ ದಿನಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಆಗಾಗ ಬಹಿರಂಗಗೊಂಡರೂ ಈಗ ನಿರ್ಣಾಯಕ ಹಂತ ತಲುಪಿದಂತೆ ಕಾಣುತ್ತಿದೆ.

ಗುಂಪುಗಾರಿಕೆ ದಿನೇ ದಿನೇ ಬೆಳೆಯುತ್ತಿದೆ. ಹೊರಗಿನಿಂದ ನೋಡಿದರೆ ಬಿಜೆಪಿಯಲ್ಲಿ ಎರಡು ವಿಷಯಗಳು ಪ್ರಮುಖವಾಗಿ ಎದ್ದು ಕಾಣುತ್ತವೆ.

ಒಂದನೆಯದು ಆ ಪಕ್ಷದಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಅನಂತಕುಮಾರ್ ಪರಸ್ಪರ ಪ್ರತ್ಯೇಕ ಕೋಟೆಗಳನ್ನೇ ಕಟ್ಟಿಕೊಂಡಿದ್ದಾರೆ.

ಎರಡನೆಯದಾಗಿ, ಭಿನ್ನಾಭಿಪ್ರಾಯ ಬಂದಾಗ ಅವರಲ್ಲೇ ಬಗೆಹರಿಸಿಕೊಳ್ಳುವ ಸಮಾಲೋಚನಾ ತಂತ್ರದ ಬಹುದೊಡ್ಡ ಕೊರತೆ.

ಅಧಿಕಾರದ ವಿಷಯ ಬಂದಾಗಲೆಲ್ಲ ಯಡಿಯೂರಪ್ಪ ಮತ್ತು ಅನಂತಕುಮಾರ್ ತಮ್ಮ ಮಟ್ಟದಲ್ಲಿ ಮುಸುಕಿನ ಗುದ್ದಾಟ ನಡೆಸಿದ್ದಾರೆ. ಈ ಹಿಂದೆ ಪಕ್ಷದಲ್ಲಿ ಪ್ರಾಬಲ್ಯ ಸ್ಥಾಪಿಸುBasanagowda Patil Yatnalವಲ್ಲಿ, ಯಡಿಯೂರಪ್ಪ ವಿರುದ್ಧ ಅದೇ ಕೋಮಿನ ವ್ಯಕ್ತಿಗಳನ್ನು ತಿರುಗಿ ಬೀಳಿಸುವಲ್ಲಿ ಅನಂತಕುಮಾರ ಯಶಸ್ವಿಯಾಗಿ ಶಕುನಿ ಪಾತ್ರ ನಿರ್ವಹಿಸಿದ್ದಾರೆ. ಬಿ.ಬಿ. ಶಿವಪ್ಪ, ಜಗದೀಶ್ ಶೆಟ್ಟರ್, ಬಸವರಾಜ್ ಪಾಟೀಲ್ ಯತ್ನಾಳ್ ಅವರನ್ನು ಯಡಿಯೂರಪ್ಪ ವಿರುದ್ಧ ಬಹಿರಂಗ ಕಾಳಗಕ್ಕೆ ಇಳಿಸುವಲ್ಲಿ ಅನಂತ್ ಪಾತ್ರ ಎಂಥದು ಎಂಬುದು ಎಲ್ಲರಿಗೂ ಗೊತ್ತಿದೆ.

ಇದರಿಂದ ಯಡಿಯೂರಪ್ಪ ಕೂಡ ಹಿಂದೇನೂ ಬಿದ್ದಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಅನಂತ್ ಬಣದವರನ್ನು ಯಶಸ್ವಿಯಾಗಿ ಮೂಲೆಗುಂಪು ಮಾಡಿದ್ದಾರೆ. ಬಿಜೆಪಿ-ಜೆಡಿ ಎಸ್ ಸರಕಾರದ ಸಚಿವ ಸಂಪುಟವನ್ನು ಗಮನಸಿದರೆ ಯಡಿಯೂರಪ್ಪ ಎಂಥ ಮರ್ಮಾಘಾತ ನೀಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

ಮಗು ಚಿವುಟಿ, ತೊಟ್ಟಿಲು ತೂಗುವುದು:
ಇತ್ತ ಕರ್ನಾಟಕದಲ್ಲೂ ತನ್ನ ಇರುವಿಕೆ ಎದ್ದು ಕಾಣಬೇಕು ಅತ್ತ ದೆಹಲಿಯಲ್ಲೂ ತಾನು ಚಲಾವಣೆಯಲ್ಲಿರಬೇಕು ಎಂಬ ಹಂಬಲದಿಂದ ಪಕ್ಷದಲ್ಲಿ ಒಳಗೊಳಗೇ ಗುಪ್ತವಾಗಿ ಬಂಡಾಯದ ತಿದಿ ಒತ್ತುವ ಮೂಲಕ ರಾಯಚೂರಿನಿಂದ ಬೆಂಗಳೂರಿನವರೆಗೆ ಬೆಂಕಿ ಹರಡುವಲ್ಲಿ ಅನಂತಕುಮಾರ್ ಯಶಸ್ವಿಯಾಗಿದ್ದಾರೆ.

ಅತ್ತ ಬಿಜಾಪುರದಲ್ಲಿ ಯಡಿಯೂರಪ್ಪ ವಿರುದ್ಧ ಯತ್ನಾಳ್ ಬೆಂಕಿಯುಗುಳುವಂತೆ ಮಾಡಿ, ರಾಯಚೂರಿನಲ್ಲಿ ಬಂದು ಅವರೊಬ್ಬ (ಯತ್ನಾಳ್) ಮಹಾ ದುರಂಧರ ನಾಯಕ ಎನ್ನುವುದು. ಮರುದಿನ ಬೆಂಗಳೂರಿಗೆ ಬಂದು ಪಕ್ಷದಲ್ಲಿ ಭಿನ್ನಾಭಿಪ್ರಾಯಗಳೇ ಇಲ್ಲ ಎಂದು ಕೊಲ್ಗೇಟ್ ನಗೆ ಬೀರುವುದು ಇದೆಲ್ಲ ಅನಂತ್ ಶೈಲಿ. ಮಗು ಚಿವುಟಿ ಅಳುವಂತೆ ಮಾಡಿ ಮತ್ತೆ ಬಂದು ತೊಟ್ಟಿಲು ತೂಗುವ ಸೋಗನ್ನೂ ಅನಂತ್ ಮಾಡುತ್ತಾರೆ.

ಕಳೆದ 40 ವರ್ಷಗಳಿಂದ ಬಿಜೆಪಿಯಲ್ಲಿರುವ ಯಡಿಯೂರಪ್ಪ ಕೂಡ ತಮ್ಮ ವಿರೋಧಿಗಳು ಎನ್ನಲಾದವರ ವಿರುದ್ಧ ಬಹಿರಂಗವಾಗಿ ಮಾಡುತ್ತಿರುವ ಟೀಕೆ-ಟಿಪ್ಪಣಿಗಳನ್ನು ನೋಡಿದರೆ ಅವರ ರಾಜಕೀಯ ಅಪ್ರಬುದ್ಧತೆಯ ಬಹಿರಂಗ ದರ್ಶನವಾಗುತ್ತಿದೆ.

ಬಿಜೆಪಿ ಎಂಥ ಹೀನಮಟ್ಟಕ್ಕೆ ಇಳಿದಿದೆ ಎಂಬುದಕ್ಕೆ ಈಚಿನ ಶೋಭಾ ಕರಂದ್ಲಾಜೆ ಪ್ರಕರಣವೇ ಸಾಕ್ಷಿ.

ಬಿಜೆಪಿಯಲ್ಲಿ ಮಹಿಳೆಯರಿಗೆ ಆದ್ಯತೆ ಕಡಿಮೆ ಎಂಬುದು ಈ ವರೆಗೆ ಇದ್ದ ಅತಿ ದೊಡ್ಡ ಆರೋಪ. ಇಂಥದ್ದರಲ್ಲಿ ದಕ್ಷಿಣ ಕನ್ನಡದ ಶಾಸಕಿ ಶೋಭಾ ಕರಂದ್ಲಾಜೆ ಅವರನ್ನು ಸಚಿವೆಯಾಗಿ ಆಯ್ಕೆ ಮಾಡಲು ಪಕ್ಷದ ಒಂದು ಬಣ ಯೋಚಿಸಿರಬಹುದು. ಅದಕ್ಕೆ ಇನ್ನೊಂದು ಬಣ ವಿರೋಧಿಸಿದ ರೀತಿ ಗಮನಿಸಿದರೆ ಈ ಪಕ್ಷ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡುತ್ತದೆ. ಶೋಭಾ ಅವರನ್ನು ನೇಮಿಸುವಲ್ಲಿ ಯಡಿಯೂರಪ್ಪ 'ವಿಶೇಷ ಮಮತೆ' ತೋರುತ್ತಿದ್ದಾರೆ ಎಂಬಲ್ಲಿಂದ ಹಿಡಿದು ಅವರಿಬ್ಬರ ಮಧ್ಯೆ ಸಂಬಂಧ ಇದೆ ಎಂಬ ಮಟ್ಟದವರೆಗೂ ವಿರೋಧಿ ಬಣದ ಮಾತುಗಳು ಪತ್ರಿಕೆಗಳಲ್ಲಿ ವರ್ಣರಂಜಿತವಾಗಿ ಪ್ರಕಟವಾದವು. Ananth Kumar

ಭಾರತೀಯ ಮೌಲ್ಯಗಳನ್ನು ತಾವೇ ಗುತ್ತಿಗೆ ಹಿಡಿದಿದ್ದೇವೆ ಎಂದು ಆಗಾಗ ಸಾರ್ವಜನಿಕವಾಗಿ ಬೆನ್ನು ತಟ್ಟಿಕೊಳ್ಳುವ ಪಕ್ಷದ ನಾಯಕರು ತಮ್ಮ ಸಹೋದ್ಯೋಗಿ ಮಹಿಳೆಗೆ ನೀಡುತ್ತಿರುವ ಗೌರವವಿದು. ಇನ್ನು ಬೇರೆಯವರಿಗೆ ಇವರು ಎಂಥ ಗೌರವ ನೀಡಬಲ್ಲರು?

ಕರ್ನಾಟಕದಲ್ಲಿ ಏನಾದರೂ ಜೆಡಿ ಎಸ್-ಬಿಜೆಪಿ ಸರಕಾರ ಕುಸಿದು ಬಿದ್ದರೆ ಅದು ಬೇರೆ ವಿರೋಧಿ ಪಕ್ಷದ ಚಿತಾವಣೆಯಿಂದಲ್ಲ ಬದಲಾಗಿ ಬಿಜೆಪಿ ಆಂತರಿಕ ವೈರುಧ್ಯಗಳಿಂದ ಮಾತ್ರ.

ಈ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಾಗ ದಕ್ಷಿಣ ಭಾರತದಲ್ಲಿ ಕರ್ನಾಟಕದಿಂದಲೇ ಬಿಜೆಪಿ ಅಧಿಕಾರದತ್ತ ದಾಪುಗಾಲು ಎಂದು ಅರುಣ್ ಜೈಟ್ಲಿ ಘೋಷಿಸಿದ್ದರು. ಈ ಯಾದವೀ ಕಲಹ ನೋಡಿದರೆ ಕರ್ನಾಟಕದಿಂದಲೇ ಪಕ್ಷದ ಅವನತಿ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

Friday, May 05, 2006

ಜನಾಬ್ ನೌಶಾದ್ ಅಲಿ ಅಮರ್ ರಹೇ


ಸುಹಾನಿ ರಾತ್ ಢೇಲ್ ಚುಕೆ ನಾ ಜಾನೆ ತುಮ್ ಕಬ್ ಆವೋಗೆ
ಜಹಾಸೆ ಋತು ಬದಲ್ ಚುಕೆ ನಾ ಜಾನೆ ತುಮ್ ಕಬ್ ಆವೋಗೆ
ತಡಪ ರಹೇ ಹೈ ಹಮ್ ಯಹಾ ತುಮ್ಹಾರೆ ಇಂತಜಾರ್ ಮೇ...


ಹೀಗೊಂದು ಹಾಡು ಮುಂಬೈ ವಿವಿಧ ಭಾರತಿಯಿಂದ ತೇಲಿ ಬರುತ್ತಿದ್ದರೆ ಬೇರೆಯದೇ ಆದ ಲೋಕಕ್ಕೆ ತೆರಳುತ್ತಿದ್ದೆ ನಾನು. ಮತ್ತೆ ವಾಸ್ತವಕ್ಕೆ ಬರುತ್ತಿದ್ದುದು, "ದೋಸ್ತೋ, ನೌಶಾದ್ ಅಲಿಕೆ ಏಕ್ ಓರ್ ಗೀತ್ ಸುನೀಯೆ" ಎಂದು ನಿರೂಪಕಿ ಹೇಳಿದಾಗಲೇ.

ಅದಿನ್ನೂ ಹದಿನಾರರ ವಯಸು, ಹುಚ್ಚುಖೋಡಿ ಮನಸು. ಕಂಡ ಕನಸಿಗೆ ಲೆಕ್ಕವಿಲ್ಲ, ಕಲ್ಪನೆಗಳಿಗೆ ಸೀಮೆಯಿಲ್ಲ. ಹೈಸ್ಕೂಲಿನಲ್ಲಿ ಎರಡು ವರ್ಷ ಮುಗಿಸಿ ಹತ್ತನೆಯ ತರಗತಿಗೆ ಕಾಲಿಡುವ ದಿನಗಳವು. "ಮುಂದೆ ಬೋರ್ಡ್ ಎಕ್ಸಾಮ್ ಹೆಂಗ್ ಓದ್ತೀಯೋ ನೋಡು" ಎಂದು ಬೆದರಿಸುತ್ತಿರುವವರು ಒಂದೆಡೆಯಾದರೆ, ಶಾಲೆಯಲ್ಲಿ ನಕ್ಕು ಮಾತಾಡಿಸಿದ ಗೆಳತಿಯ ಮಾತುಗಳು ಹೊಸ ಭಾವನಾ ಲೋಕಕ್ಕೇ ಕರೆದೊಯ್ಯುತ್ತಿದ್ದವು. ಇವೆಲ್ಲ ದುಮ್ಮಾನ-ಗೊಂದಲಗಳನ್ನು ಮರೆಯಲು ನಾನು ಆಗಷ್ಟೇ ಕಂಡುಕೊಂಡ ಆಪ್ತ ಮಿತ್ರ- ಮುಂಬೈ ವಿವಿಧ ಭಾರತಿ! ರಾತ್ರಿ ಊಟ ಮಾಡಿ ಮಲಗುವ ಮುನ್ನ ಚಾಪೆ ಹಾಸಿ, ತಲೆದಿಂಬಿನ ಬಳಿ ಪುಟ್ಟ ಟ್ರಾನ್ಸಿಸ್ಟರ್ ಇಟ್ಟು, ದೀಪ ಆರಿಸಿ ಮಲಗಿದರೆ ಆ ಲೋಕವೇ ಬೇರೆ.

ಪ್ರೀತಿ-ಪ್ರೇಮ, ದಾಂಪತ್ಯದ ಬಗ್ಗೆ ನನ್ನಲ್ಲಿ ಅನೇಕ ಕಾಲ್ಪನಿಕ ವಿಚಾರಗಳನ್ನು ಬಿತ್ತಿದವರು ಇಬ್ಬರು. ಒಬ್ಬವರು ನಮ್ಮವರೇ ಆದ ಪ್ರೇಮಕವಿ ಮೈಸೂರು ಮಲ್ಲಿಗೆಯ ಕಂಪು ಸೂಸಿದ ಶ್ರೀ ಕೆ.ಎಸ್. ನರಸಿಂಹಸ್ವಾಮಿ, ಇನ್ನೊಬ್ಬರು ಜನಾಬ್ ನೌಶಾದ್ ಅಲಿ(ಯಾಸ್) ಜನಾಬ್ ನೌಶಾದ್ ಸಾಹಬ್.

ಸ್ನೇಹದ ಮಾತುಗಳನ್ನೇ ಪ್ರೇಮವೆಂದು ತಿಳಿದ ನನ್ನಂಥವನಿಗೆ ಭಾವನಾಲೋಕಕ್ಕೆ ನೂಕಿ,

"ಪ್ಯಾರ್ ಕಿಯಾ ತೋ ಡರನಾ ಕ್ಯಾ, ಹಮ್ ಪ್ಯಾರ್ ಕಿಯಾ ಹೈ ಮಗರ್ ಚೋರಿ ನ ಕಿಯಾ..."

ಎಂದು ಮೊಹ್ಮದ್ ರಫಿ, ಲತಾ ಮಂಗೇಶ್ಕರ್, ಬಡೇ ಘುಲಾಂ ಅಲಿ ಖಾನ್ ಕೋರಸ್‌ನಲ್ಲಿ ಹಾಡುತ್ತಿದ್ದರೆ ಹಾಗೂ

"ಮೊಹಬ್ಬತ್ ಜಿಂದಾಬಾದ್...."

ಎಂಬ ಹಾಡು ತೇಲಿ ಬಂದರೆ ಇವರೆಲ್ಲಾ ನನ್ನನ್ನೇ ಬೆನ್ನು ತಟ್ಟಿ ಹಾಡಿದಷ್ಟು ಸಂತೋಷ!

ನನ್ನಂಥ ಇನ್ನೂ ಎಷ್ಟೋ ಹುಡುಗರೆದೆಯಲ್ಲಿ ಪ್ರೇಮದ ಕಿಚ್ಚು ಹಚ್ಚಿದ್ದ ಜನಾಬ್ ನೌಶಾದ್ ಅಲಿ ಮೇ 5, 2006 ರಂದು ಮುಂಬೈನಲ್ಲಿ ತಮ್ಮ 86ರ ತುಂಬು ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ.


ನೌಶಾದ್ ಸಾಹೇಬರು ಕೇವಲ ಪ್ರೀತಿ-ಪ್ರೇಮದ ಬಗ್ಗೆಯಷ್ಟೇ ಅಲ್ಲದೇ ಜೀವನದ ಇನ್ನೊಂದು ಮಗ್ಗುಲಿನ ಬಗ್ಗೆ ಮನಮುಟ್ಟುವಂತೆ ಗೀತೆಗಳನ್ನು ರಚಿಸಿದ್ದಾರೆ. ಆದರೆ ಜೀವನ ಎಂದರೆ ಏನು ಎಂದೇ ಗೊತ್ತಿರದ ನನಗೆ ತಟ್ಟಿದ್ದು ಪ್ರೀತಿ-ಪ್ರೇಮದ ಹಾಡುಗಳು ಮಾತ್ರ!

ನಲವತ್ತರ ದಶಕದಲ್ಲೇ ಕೀರ್ತಿಯ ಉತ್ತುಂಗಕ್ಕೇರಿದ ನೌಶಾದ್ ಅಲಿ ಅವರ ಜೀವನ ಹೂವಿನ ಹಾಸುಗೆಯೇನೂ ಆಗಿರಲಿಲ್ಲ. ಒಂದು ಕಾಲದಲ್ಲಿ ಅವರು ದಿಕ್ಕಿಲ್ಲದೇ ಫುಟ್ ಪಾತ್ ನಲ್ಲಿ ಅಡ್ಡಾಡುವ ದಿನಗಳೂ ಇದ್ದವಂತೆ. ಅಂಥ ಮುಳ್ಳುಗಳ ಮಧ್ಯವೇ ಅಲ್ಲವೇ ಗುಲಾಬಿ ರೂಪು ತಳೆಯುವುದು.

ಹಿಂದಿ ಚಿತ್ರಗಳ ಸಂಗೀತ ಸಂಯೋಜನೆಯಲ್ಲಿ ಪಾಶ್ಚಿಮಾತ್ಯ ಸಂಗೀತ ಅಳವಡಿಕೆ, ಹಿಂದೂಸ್ತಾನಿ ಸಂಗೀತ ಪರಂಪರೆಯನ್ನು ಚಿತ್ರಗೀತೆಗಳಿಗೂ ವಿಸ್ತರಿಸಿದ್ದು, ಹಾಡಿನ ಮಧ್ಯೆ ಸಂಭಾಷಣೆಗಳ ಸೇರ್ಪಡೆಯಂಥ ಹೊಸ ಹೊಸ ಪ್ರಯೋಗಗಳನ್ನು ಮಾಡಿದ ಗುಲಾಮ್ ಅಲಿ ಸಾಹೇಬರು ಹಿಂದಿ ಚಲನಚಿತ್ರ ಕ್ಷೇತ್ರದಲ್ಲಿ ನೂತನ ಭಾಷ್ಯವನ್ನೇ ಬರೆದಿದ್ದಾರೆ. ಮೊಗಲೇ ಆಜಂ ಮತ್ತು ತಾಜ ಮಹಲ್ ನಂಥ ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಅತ್ಯುತ್ಕೃಷ್ಟ ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿದ ಹಿರಿಮೆಯೂ ಜನಾಬ್ ರಿಗಿದೆ.

1919ರಲ್ಲಿ ಉತ್ತರ ಪ್ರದೇಶದ ಬಡ ಮುಸ್ಲಿಂ ಕುಟುಂಬದಲ್ಲಿ ಆರಂಭವಾದ ಅವರ ಜೀವನಯಾತ್ರೆ ಮುಂಬೈನಲ್ಲಿ ಮುಗಿದಿದೆ. ಜನಾಬ್ ನೌಶಾದ್ ಅಲಿ ಸಂಗೀತ ಇರುವವರೆಗೂ ಅಮರ.

Thursday, May 04, 2006

ಮರೆಯಾದ "ಮಹಾಜನ"




ಉತ್ತಮರಿಗೆ ಅಲ್ಪಾಯುಷ್ಯ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ.

ಭಾರತೀಯ ಜನತಾ ಪಕ್ಷದ ಮುಂಚೂಣಿ ನಾಯಕ, ಉತ್ತಮ ವಾಗ್ಮಿ, ಸಂಘಟಕ ಪ್ರಮೋದ ಮಹಾಜನ ಅವರ ಅಕಾಲಿಕ ನಿಧನ ಕೇವಲ ಅವರು ಪ್ರತಿನಿಧಿಸಿದ ಪಕ್ಷಕ್ಕಷ್ಟೇ ಅಲ್ಲ ಭಾರತೀಯ ರಾಜಕಾರಣಕ್ಕೇ ಒಂದು ನಷ್ಟ.

ಪ್ರಮೋದ ಮಹಾಜನ ಎಂದೊಡನೆ ಅವರ ಕಂಚಿನ ಕಂಠ, ಮಾತಿನ ಓಘಕ್ಕೆ ತಕ್ಕ ಅವರ ಹಾವ-ಭಾವಗಳು ನಮ್ಮ ಕಣ್ಮುಂದೆ ಸುಳಿದು ಹೋಗುತ್ತವೆ. ನಿನ್ನೆ-ಮೊನ್ನೆಯವರೆಗೂ ನಮ್ಮ ಕಣ್ಣಮುಂದೆ ಇದ್ದ ವ್ಯಕ್ತಿ ಇಂದು ಮರೆಯಾದರು ಎಂಬುದನ್ನು ನಂಬುವುದು ಕಷ್ಟ.

ಪ್ರಮೋದ್ ವೆಂಕಟೇಶ್ ಮಹಾಜನ ಮಹಾರಾಷ್ಟ್ರದ ಭೀಡ್ ಜಿಲ್ಲೆಯ ಗ್ರಾಮವೊಂದರ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದ ಹುಡುಗ ಭಾರತೀಯ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು ಒಂದು ರೋಚಕ ಕಥನ.

ಶಾಲಾ ಶಿಕ್ಷಕರಾಗಿದ್ದ ತಂದೆ ವೆಂಕಟೇಶ ಮಹಾಜನ ಇಹಲೋಕ ತ್ಯಜಿಸಿದಾಗ ಪ್ರಮೋದ್ ಗೆ ಕೇವಲ 21 ವರ್ಷ ವಯಸ್ಸು. ಆ ಚಿಕ್ಕ ಹರೆಯದಲ್ಲೇ ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಮತ್ತು ತಾಯಿಯ ಹೊಣೆ ಹೊರಬೇಕಾದ ಸಂದರ್ಭ. ಚಿಕ್ಕ ವಯಸ್ಸಿನಲ್ಲಿ ದೊರೆತ ಇಂಥ ಜವಾಬ್ದಾರಿಯೇ ಅವರನ್ನು ಜೀವನದಲ್ಲಿ ಪಳಗಿಸಿರಬೇಕು.

ಆರೆಸ್ಸೆಸ್ ಪ್ರಚಾರಕರಾಗಿ ಅವರು ಅಳವಡಿಸಿಕೊಂಡ ಶಿಸ್ತು, ಸಂಘಟನಾ ಚಾತುರ್ಯವೇ ಹಿರಿಯ ರಾಜಕೀಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಅವರಂಥ ನಾಯಕರು ಪ್ರಮೋದ್ ಅವರನ್ನು ತಮ್ಮ ರಾಜಕೀಯ ಸಲಹಾಕಾರರಂಥ ಸ್ಥಾನಕ್ಕೆ ನೇಮಿಸಿಕೊಳ್ಳಲು ಕಾರಣವಾಯ್ತು.

"ಅಟಲ್ ಕೋ ಹಠಾವ್, ಅಟಲ್ ಕೋ ಹಠಾವ್ ಪುಕಾರ್ ಆ ರಹೇ ಹೈ, ಮಗರ್ ಏ ಪ್ರಶ್ನ ದೇಶ ಕೇ ಸಾಮ್ನೆ ಆ ರಹಾ ಹೈ ಕಿಸ್ಕೋ ಬಿಠಾವ್, ಕಿಸ್ಕೋ" ಎಂದು ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ಸಾರ್ವಜನಿಕ ಸಭೆಯೊಂದರಲ್ಲಿ ಮಾಡಿದ ಭಾಷಣದ ಪ್ರಾಸಬದ್ಧ ಸಾಲೊಂದು ಇನ್ನೂ ನನ್ನ ತಲೆಯಲ್ಲಿ ಗುನುಗುಡುತ್ತಿದೆ. ಇದು ಒಂದು ಉದಾಹರಣೆಯಷ್ಟೇ. ಭಾಷಣ ಮಾಡುವುದಕ್ಕಿಂತ ಮುನ್ನ ಪ್ರಮೋದ್ ಮಹಾಜನ್ ಪಕ್ಕಾ ಹೋಂ ವರ್ಕ್ ಮಾಡುತ್ತಿದ್ದರು ಎಂಬುದಕ್ಕೆ ಅವರು ಭಾಷಣದಲ್ಲಿ ಕೋಟ್ ಮಾಡುತ್ತಿದ್ದ ಹೇಳಿಕೆಗಳೇ ಸಾಕ್ಷಿ.

ಚುನಾವಣೆಯಲ್ಲಿ ಕೇವಲ ಒಂದೇ ಬಾರಿ ಗೆದ್ದರೂ, ಹಲವಾರು ದಶಕಗಳಿಂದ ರಾಜಕಾರಣದಲ್ಲಿದ್ದವರಿಗಿಂತ ಹೆಚ್ಚಿನ ಜನಪ್ರಿಯತೆ ಗಳಿಸಿದ್ದ ಪ್ರಮೋದ್ ಮಹಾಜನ್ ಹಠಾತ್ ನಿರ್ಗಮಿಸಿದ್ದಾರೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ, ಈ ವಜ್ರಾಘಾತವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದಯಪಾಲಿಸಲಿ.