Wednesday, April 26, 2006

ಮೀಸಲಾತಿ ಎಂಬ ಹುಲ್ಲುಗಾವಲು


ಉತ್ತರ ಭಾರತಕ್ಕೆ ವಿ.ಪಿ. ಸಿಂಗ್, ದಕ್ಷಿಣ ಭಾರತಕ್ಕೆ ಸಿದ್ದರಾಮಯ್ಯ!

ಹಾಗಂತ ಒಂದು ಘೋಷಣೆ ಈಚೆಗೆ ಬೆಂಗಳೂರಿನಲ್ಲಿ ನಡೆದ ಎಬಿಪಿಜೆಡಿ (ಅಖಿಲ ಭಾರತ ಪ್ರಗತಿಪರ ಜನತಾ ದಳ) ಸಮಾವೇಶದಲ್ಲಿ ಮೊಳಗಿತು.

90 ದಶಕದಲ್ಲಿ ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಿದ ಮಂಡಲ ಆಯೋಗದ ವರದಿ ನಿಮಗೆ ನೆನಪಿರಬಹುದು. ಶಿಕ್ಷಣ, ಉದ್ಯೋಗ ಹಾಗೂ ಇತರ ಕ್ಷೇತ್ರಗಳಲ್ಲಿ ಭಾರಿ ಪ್ರಮಾಣದ ಮೀಸಲಾತಿ ಕಲ್ಪಿಸುವ ಮೂಲಕ ಹಿಂದುಳಿದ ವರ್ಗಗಳ ಹೀರೋ ಆಗಲು ಹೋದ ಅಂದಿನ ಪ್ರಧಾನಿ ವಿಶ್ವನಾಥ ಪ್ರತಾಪ್ ಸಿಂಗ್ ಸಮಾಜವನ್ನು ಇಬ್ಭಾಗ ಮಾಡುವ ಬಹುದೊಡ್ಡ ಹುನ್ನಾರ ನಡೆಸಿದ್ದರು. ಅದೇ ವ್ಯಕ್ತಿ ಇದೀಗ ರಾಜ್ಯದ ಅಹಿಂದ (ಅಲ್ಪಸಂಖ್ಯಾತ ಹಿಂದುಳಿದ ದಲಿತ) ಖ್ಯಾತಿಯ ಸಿದ್ದರಾಮಯ್ಯ ಅವರೊಡನೆ ಸೇರಿ ಮತ್ತೊಮ್ಮೆ ಸಮಾಜದ ಇಬ್ಭಾಗಕ್ಕೆ ಸಜ್ಜಾಗಿದ್ದಾರೆ. ಬೆಂಕಿಗೆ ತುಪ್ಪ ಸುರಿದಂತೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹಿಂದುಳಿದವರಿಗೆ ಶೇ.27.5 ರಷ್ಟು ಮೀಸಲಾತಿ ಒದಗಿಸುವ ಬಗ್ಗೆ ಕೇಂದ್ರ ಸರಕಾರವೂ ಪ್ರಕಟಿಸಿದೆ.

ನಮ್ಮ ದೇಶದ ಸಂವಿಧಾನದ ಪ್ರಕಾರ, ಎಲ್ಲ ಭಾರತೀಯರೂ ಸಮಾನರು. ಆದರೆ ಶಿಕ್ಷಣ-ಉದ್ಯೋಗ ಪಡೆಯುವ ಸಂದರ್ಭ ಬಂದಾಗ ಮಾತ್ರ ಕೆಲವರು ಹೆಚ್ಚು ಸಮಾನರು. ಮೀಸಲಾತಿಯ ಹೆಸರಿನಲ್ಲಿ ನಡೆಯುತ್ತಿರುವ ಈ ತಾರತಮ್ಯ ಎಷ್ಟು ಸಮರ್ಥನೀಯ?

ಸ್ವಾತಂತ್ರ್ಯ ಪೂರ್ವದಲ್ಲಿ ಶೋಷಣೆಗಾಳದವರಿಗೆ ಮೀಸಲಾತಿ ಸಿಗಲಿಲ್ಲ, ಬದಲಾಗಿ ಅದು ಧರ್ಮದ ಆಧಾರವಾಗಿತ್ತು ಎಂಬುದು ಒಂದು ವಾದ. ಆಗ ನಿಜವಾಗಿಯೂ ಶೋಷಣೆಗೊಳಗಾದವರು ಮೀಸಲಾತಿಯಿಂದ ವಂಚಿತರಾಗಿದ್ದರು ಎನ್ನುವುದು ಒಪ್ಪುವ ಮಾತೇ. ಆದರೆ ಸ್ವಾತಂತ್ರ್ಯ ಸಿಕ್ಕು 60 ವರ್ಷಗಳ ಬಳಿಕವೂ ಆಗ ನಡೆದ ಅನ್ಯಾಯಕ್ಕ ಸೇಡು ತೀರಿಸಿಕೊಳ್ಳುವಂತೆ ಇನ್ನೂ ಮೀಸಲಾತಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಸರಿಯೇ? ಹಳೆಯ ಗಾಯ ಮಾಯಿಸಲು ಮತ್ತೊಂದು ಗಾಯ ಮಾಡುವುದೇ? ಭಾರತದಲ್ಲಿ ಮೀಸಲಾತಿ ಎನ್ನುವುದೊಂದು ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ. ಮೇರಾ ಭಾರತ ಮಹಾನ್ ಎಂದು ಬೀಗುವ ನಮಗೆ ಹಿಂದುಳಿದವರು ಎಂದು ಹೇಳಿಕೊಳ್ಳುವುದೇ ಒಂದು ಹಮ್ಮೆಯ ವಿಷಯ! ಮೀಸಲಾತಿಯಸೌಲಭ್ಯಗಳು ಅಷ್ಟು ಆಕರ್ಷಕವಾಗಿವೆ. ಆಧುನಿಕ ಭಾರತದಲ್ಲಿ ನೀವು ಹಿಂದುಳಿದವರಾದಷ್ಟೂ ನಿಮಗೆ ಹೆಚ್ಚು ಸೌಲಭ್ಯಗಳು ಲಭ್ಯ.

ಹಿಂದುಳಿದವರ ಸರದಾರರು: ಕರ್ನಾಟಕದಲ್ಲಿ ಸಿದ್ದರಾಮಯ್ಯನವರಂಥ ಕೆಲವೇ ಸಮುದಾಯಕ್ಕೆ ಸೇರಿದ ಸರದಾರರು, ತಾವೊಬ್ಬರೇ ಆ ಸಮುದಾಯದ ರಕ್ಷಕರು ಎಂದು ಬಿಂಬಿಸುವುದಲ್ಲದೇ, ಇತರ ಜಾತಿ, ಧರ್ಮದ ಜನರನ್ನು ನಿಂದಿಸುವ ಮೂಲಕ ಅಗ್ಗದ ಪ್ರಚಾರ ಗಳಿಸುತ್ತಿದ್ದಾರೆ. ಸಮಾಜದಲ್ಲಿ ಇವರು ಎಷ್ಟು ದೊಡ್ಡ ಕಂದಕವನ್ನು ಸೃಷ್ಟಿಸುತ್ತಿದ್ದಾರೆ ಎಂಬ ಅಂದಾಜು ಯಾರಿಗಾದರೂ ಇದೆಯೇ?

ಒಂದೆಡೆ ಪ್ರತಿಭಾ ಪಲಾಯನ ತಡೆಯಬೇಕು ಎಂದು ಬಲವಾಗಿ ಪ್ರತಿಪಾದಿಸುವವರು ನಿಜವಾಗಿಯೂ ಪ್ರತಿಭೆಯಿದ್ದವರಿಗೆ ಅವಕಾಶವನ್ನು ನಿರಾಕರಿಸುತ್ತಿರುವಾಗ ಅವರು ಅಮೆರಿಕದದಂಥ ದೇಶಗಳಿಗೆ ಹೋಗಿ ಅಲ್ಲಿನ ಅಭಿವೃದ್ಧಿಗೆ ಶ್ರಮಿಸದೇ ಬೇರೇನು ಮಾಡಿಯಾರು?

ಜಾತಿ, ಧರ್ಮ ಲಿಂಗ ತಾರತಮ್ಯವಿಲ್ಲದೇ ಪ್ರತಿಭೆ ಇದ್ದವರಿಗೆಲ್ಲ ಸಮಾನ ಅವಕಾಶ ನೀಡುವವರೆಗೂ ಮೀಸಲಾತಿಯಂಥ ಬೊಗಳೆ ನೀತಿಗಳಿಗೆ ಭಾರತ ಹುಲ್ಲುಗಾವಲಾಗಿರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

Saturday, April 22, 2006

ಕನ್ನಡ-ಇಂಗ್ಲಿಷ್ ಒಂದು ಅರ್ಥಪೂರ್ಣ ಚರ್ಚೆ


'ಕನ್ನಡಕೆ ಹೋರಾಡು ಇಂಗ್ಲೀಷು ಕಂದ' ಪೋಸ್ಟಿಗೆ- ಅನ್ವೇಷಿ, ಕನ್ನಡ ಸಾರಥಿ ಮತ್ತು ಶ್ರೀ ಸಂಜಯ ರಿಂದ ಅರ್ಥಪೂರ್ಣ ಪ್ರತಿಕ್ರಿಯೆ ಬಂದಿದೆ. ಸಂಜಯ ಅವರು ಹೇಳಿರುವಂತೆ ಇದು ಮಹತ್ವದ ವಿಷಯವೇ. ಕನ್ನಡ-ಇಂಗ್ಲಿಷ್ ಕಲಿಕೆಯ ವಿಷಯ ಇಂದು ರಾಜ್ಯದಲ್ಲಿ ಭಾರಿ ವಿವಾದವನ್ನೇ ಹುಟ್ಟು ಹಾಕಿದೆ.

"ಜಾಗತೀಕರಣದ ಇಂದಿನ ದಿನಗಳಲ್ಲಿ "ಸ್ವಾವಲಂಬಿ ದೇಶ" ಎಂಬ ಕಾನ್ಸೆಪ್ಟ್ ತನ್ನ ಅರ್ಥ ಕಳೆದುಕೊಳ್ಳುತ್ತಿದೆ" ಎಂಬ ಸಂಜಯರ ಮಾತನ್ನು ನಾನು ನೂರಕ್ಕೆ ನೂರರಷ್ಟು ಒಪ್ಪುತ್ತೇನೆ. ಏಕೆಂದರೆ ಮುಕ್ತ ಆರ್ಥಿಕ ನೀತಿ, ಸಾರಿಗೆ-ಸಂಪರ್ಕ ಕ್ರಾಂತಿಯಿಂದಾಗಿ ಇಂದು ವಿಶ್ವವೇ ಒಂದು ತೆರೆದ ಬಾಗಿಲಾಗಿದೆ. ಹೀಗಿರುವಾಗ ಜಗತ್ತಿನ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯೂ ಇನ್ನೊಂದೆಡೆ ಇರುವವರೊಂದಿಗೆ ಸಂವಹನ ಮಾಡಲು ಸಾಧ್ಯವಾಗಿದೆ. ಹೀಗಿರುವಾಗ ಭೌಗೋಳಿಕ ಗಡಿ ಗೆ ಇಲ್ಲಿ ಎಲ್ಲೆ ಇಲ್ಲ.

ಈಚೆಗೆ ಇನ್ಫೋಸಿಸ್ ಸಂಸ್ಥಾಪಕ ಶ್ರೀ ನಾರಾಯಣಮೂರ್ತಿ ಅವರು ಹೇಳಿದಂತೆ, ಸ್ವತಂತ್ರ ಭಾರತದ ನಂತರ ಯಾವ ಸರಕಾರಗಳೂ ನೀಡದಷ್ಟು ಉದ್ಯೋಗಾವಕಾಶಗಳನ್ನು ಪ್ರಸಕ್ತ ಐಟಿ ಮತ್ತು ಐಟಿ ಬೆಂಬಲಿತ ಸೇವಾ (ಐಟಿ ಎನೇಬಲ್ಡ್ ಸರ್ವಿಸ್) ಉದ್ಯಮ ನೀಡಿದೆ. ಈ ಮಾತನ್ನೂ ನಾನು ಒಪ್ಪುತ್ತೇನೆ. ಇಲ್ಲದಿದ್ದರೆ ಇಂದು ಬೆಂಗಳೂರಿನಲ್ಲಿ ಕೇವಲ ಬಿಎ, ಬಿಕಾಂ, ಬಿಎಸ್ಸಿ ಕಲಿತ ಯುವಕ-ಯುವತಿಯರಿಗೆ ಕಾಲ್ ಸೆಂಟರ್ ಮತ್ತು ಬಿಪಿಒ ಗಳಲ್ಲಿ ಉದ್ಯೋಗ ಎಲ್ಲಿ ಸಿಗುತ್ತಿತ್ತು?

ಕಡಿಮೆ ಹಣಕ್ಕೆ ಭಾರತೀಯರನ್ನು ದುಡಿಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳು ಶೋಷಣೆ ಮಾಡುತ್ತಿವೆ ಎಂಬ ಆರೋಪಗಳು ಇನ್ನೊಂದೆಡೆ ಇದ್ದರೂ, ಮಾನವ ಸಂಪನ್ಮೂಲವೇ ಭಾರತದ ಬಹುದೊಡ್ಡ ಶಕ್ತಿಯಾಗಿರುವಾಗ ನಿರುದ್ಯೋಗದಿಂದ ಅಂಡಲೆಯುವುದಕ್ಕಿಂತತಿಂಗಳಿಗೆ 8-10 ಸಾವಿರ ರೂಪಾಯಿ ಸಂಬಳ ತರುವ ಇಂಥ ಕೆಲಸ ಒಳ್ಳೆಯದಲ್ಲವೇ? ಟೀಕೆ ಮಾಡುವವರು, ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಬಗೆಹರಿಸುವ ಬಗ್ಗೆ ಕಾರ್ಯರೂಪಕ್ಕೆ ಇಳಿಸುವ ಸಲಹೆಗಳನ್ನು ನೀಡುತ್ತಾರಾ? ಉಹ್ಜ್ಞೂ ಇಲ್ಲ.

ಜಾಗತೀಕರಣವನ್ನು ನಾವು ಒಪ್ಪುತ್ತೇವೋ ಬಿಡುತ್ತೇವೆ ಅದು ಬೇರೆ ಮಾತು. ಆದರೆ ಇದು ಇಂದು ಅನಿವಾರ್ಯವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಉದಾಹರಣೆಗೆ ಜಾಗತೀಕರಣದ ಗಾಳಿಗೆ ಮೈ ಒಡ್ಡಿಕೊಂಡ ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳು ಹೇಗೆ ಬೆಳೆದವು ಹಾಗೂ ಕಮ್ಯುನಿಸ್ಟ್ ಕಟು ಸಿದ್ಧಾಂತಕ್ಕೆ ಕಟ್ಟು ಬಿದ್ದ ಕೇರಳ ಶೇಕಡಾ ನೂರರಷ್ಟು ಸಾಕ್ಷರತೆ ಇದ್ದರೂ ಹೇಗೆ ಹಿಂದುಳಿಯಿತು ಎಂಬುದನ್ನು ಗಮನಿಸಿದರೇ ಗೊತ್ತಾಗುತ್ತದೆ ವ್ಯತ್ಯಾಸ. ಇಂದು ಕೇರಳದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪಾಸಾದವರೂ ರಿಕ್ಷಾ ಓಡಿಸುತ್ತಿದ್ದಾರೆ ಎಂಬುದು ಅಲ್ಲಿನ ಪರಿಸ್ಥಿತಿಗೆ ಹಿಡಿದ ಕನ್ನಡಿ.

"ಇಂಗ್ಲಿಷ್ ಮಾತನಾಡುವಾಗ ನನಗೊಂಥರ ಕೀಳರಿಮೆ ಕಾಡುತ್ತೆ" ಎಂದು ಈಚೆಗೆ ಬಾಲಿವುಡ್ ನ ಪ್ರತಿಭಾನ್ವಿತ ನಟ ನಾನಾ ಪಾಟೇಕರ್ ಹೇಳಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ನಮ್ಮಂತೆ ಭಾಷಾ ಮಾಧ್ಯಮದಲ್ಲೇ ಕಲಿತು ಉದ್ಯಮದಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆದರೂ ನಾನಾಗೆ ಇಂಗ್ಲಿಷ್ ಹೇಗೆ ಕಾಡಿದೆ ಎಂಬುದಕ್ಕೆ ಈ ಹೇಳಿಕೆ ಸಾಕ್ಷಿ.

ಏತನ್ಮಧ್ಯೆ, ಒಂದನೇ ತರಗತಿಯಿಂದ ಇಂಗ್ಲಿಷ್ ಸದ್ಯಕ್ಕಿಲ್ಲ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಶಿಕ್ಷಕರ ಕೊರತೆಯೇ ಇದಕ್ಕೆ ಕಾರಣ ಎಂದೂ ಅವರು ಹೇಳಿದ್ದಾರೆ. ರಕ್ಷಣೆ, ಭದ್ರತೆಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಸರಕಾರಕ್ಕೆ ಶಿಕ್ಷಣ ಒಂದು ಮಹತ್ವದ ವಿಷಯ ಎಂಬುದು ಅರಿವಾಗುವುದು ಯಾವಾಗ?

ಇನ್ನು, ಜಪಾನಿನಲ್ಲಿ ಇಂಗ್ಲಿಷ್ ಕಲಿಕೆಯ ಬಗ್ಗೆ ಈಗ ಉಂಟಾಗಿರುವ ಜಾಗೃತಿ ಹಾಗೂ ಅದರ ಬಗ್ಗೆ ಕೆಲವು ಮಹತ್ವದ ಮಾಹಿತಿಯಿರುವ ಪುಟ ನೀಡಿರುವ ಸಂಜಯರಿಗೆ ತುಂಬಾ ಧನ್ಯವಾದಗಳು.

ಈ ವಿಷಯದ ಬಗ್ಗೆ ಓದುಗ ಪ್ರಭುಗಳ ಸಲಹೆ-ಟೀಕೆಗಳಿಗೆ ಸ್ವಾಗತ.
---

ಈ ಚರ್ಚೆಗೆ ಅನುವು ಮಾಡಿಕೊಟ್ಟ ಪ್ರತಿಕ್ರಿಯೆಗಳನ್ನು ಈ ಕೆಳಗೆ ಕೊಟ್ಟಿದ್ದೇನೆ-

ಅಸತ್ಯಾನ್ವೇಷಿ ಹೇಳಿದ್ದು...

ಸೂಚನೆ: ನಾನು ಬರೆಯುವ ನೂರಾ ಒಂದನೇ ಕಾಮೆಂಟ್ ಅಂತ ಇದು ತಿಳಿದುಕೊಂಡು ಇದನ್ನೇ ನೂರೊಂದು ಸಲ ಓದಿಕೊಳ್ಳಿ.

ಯಾಕೆಂದರೆ ನಾನು ಕೂಡ ನಿಮ್ಮ ಸಂತಾನದವ. ಅಂದರೆ ನಮ್ಮ ಮಕ್ಕಳ ಭವಿಷ್ಯ ಭದ್ರವಾಗಿರಬೇಕಾದರೆ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಬೋಧನೆ ಆರಂಭವಾಗಬೇಕು ಎಂದು ಹೇಳುವವ.

ಇದಕ್ಕೆ ನನ್ನ ಜೀವನದ ಸ್ವಾನುಭವವೇ ಉದಾಹರಣೆ. ಕನ್ನಡ ನಾಡಿನಲ್ಲೇ ಉನ್ನತ ಕೆಲಸ ನಿಮಗೆ ದೊರೆಯಬೇಕೇ? ಅರಳು ಹುರಿದಂತೆ ಇಂಗ್ಲಿಷ್ ಮಾತನಾಡುವುದು ಅತ್ಯವಶ್ಯಕ. ಈಗ ಬೆಂಗಳೂರನ್ನೇ ನೋಡಿ. ದೊಡ್ಡ ದೊಡ್ಡ ಐಟಿ, ಬಿಟಿ ಕಂಪನಿಗಳು ಅಲ್ಲಿವೆ. ಅಲ್ಲಿಯೂ ಕೆಲವು ಕನ್ನಡಿಗರು ಉನ್ನತ ಹುದ್ದೆಗಳಲ್ಲಿ ಮೆರೆಯುತ್ತಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತೇ? ಅವರು ಇಂಗ್ಲಿಷ್ ಪಟಪಟನೆ ಮಾತನಾಡುತ್ತಾರೆ, ಕನ್ನಡ ಬಿಟ್ಟು ಬೇರೆಲ್ಲಾ ಭಾಷೆ ಬರುತ್ತದೆ!

ಇಂದಿನ ದಿನಗಳಲ್ಲಿ ಹಣವೇ ಮುಖ್ಯವಾಗಿರುವಾಗ ಸ್ಥಳೀಯ ಕಂಪನಿಗಳ ಉದ್ಯೋಗದ ಬದಲು ಕೈತುಂಬಾ ಅಲ್ಲದಿದ್ದರೂ ಜೀವನಕ್ಕಾಗುವಷ್ಟು ಸಂಪಾದನೆಗೆ ಅವಕಾಶ ಮಾಡಿಕೊಡಬಲ್ಲ ಬಹುರಾಷ್ಟ್ರೀಯ ಕಂಪನಿಗಳು, ಅವುಗಳ ಬಿಪಿಒ ಮುಂತಾದೆಡೆ ಕೆಲಸ ದೊರೆಯಬೇಕೆ ? ಇಂಗ್ಲಿಷ್ ಬೇಕೇ ಬೇಕು.

ಹಾಗಂತ ಅಚ್ಚ ಕನ್ನಡದ ಸರಕಾರಿ ಉದ್ಯೋಗ ಬೇಕೆ? ಪ್ರತಿಭೆ ಇದ್ದರೂ ಮೀಸಲಾತಿ ಎಂಬ ಸಾಗರವನ್ನು ಲಂಚ-ರುಷುವತ್ತು ನೀಡಿ ದಾಟಿ ಬರಬೇಕು...!

ಹಾಗಂತ ನಾನೇನೂ ಕನ್ನಡ ವಿರೋಧಿಯಲ್ಲ. ಈಗಲೂ ಇಂಗ್ಲಿಷನ್ನು ಪ್ರೀತಿಸಲೂ ಇಲ್ಲ. ಇದಕ್ಕಾಗಿ ಕನ್ನಡದಲ್ಲೇ ಬೊಗಳೆ ಬಿಟ್ಟು ರಗಳೆ ಮಾಡುತ್ತಿರುವೆ.

ಇನ್ನು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ವಿಷಯ. ಏನು ಮಾಡಬೇಕಿದ್ದರೂ ಅದಕ್ಕೆ ಪ್ರತಿಫಲ ಇರಬೇಕು ಎನ್ನುವ ಕಾಲವಿದು. ಹೀಗಿರುವಾಗ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತರೆ ಕನ್ನಡಿಗರಿಗೆ ದೊರೆಯುವ ಪ್ರತಿಫಲ ಏನು? ತಮಿಳಿಗೆ ಶಾಸ್ತ್ರೀಯ ಸ್ಥಾನ ಮಾನ ಸಿಕ್ಕಿ ಆದ ಪ್ರಯೋಜನ ಏನು?

4:59 PM, April 20, 2006

---

ಸಾರಥಿ ಹೇಳಿದ್ದು...

ಆಂಗ್ಲ ಭಾಷೆ ಮೇಲೆ ನಾವು ಬಹಳಷ್ಟು ಅವಲಂಬಿತರಾಗಿದ್ದೇವೆ ಎಂದರೆ ಇದರ ಅರ್ಥ ನಮ್ಮ ದೇಶ ಇನ್ನೂ ಸ್ವಾವಲಂಬಿಯಾಗಿಲ್ಲ ಎಂದೇ ಆಗುತ್ತದೆ. ಅದೇನೇ ಇರಲಿ, ಪ್ರಸ್ತುತ ಭಾರತದಲ್ಲಿ ಆಂಗ್ಲ ಭಾಷೆ ಅನಿವಾರ್ಯವಾಗಿಬಿಟ್ಟಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಏಕೆ, ಹೇಗೆ ಎಂಬ ಚರ್ಚೆಯನ್ನು ಮುಂದೆ ನಡೆಸಬಹುದು. ಆದರೆ ಒಂದು ಮಾತು,... ಶಿಕ್ಷಣ ಯಾವುದಿದ್ದರೂ ಮಾತೃಭಾಷೆಯಲ್ಲಿದ್ದರೇ ಚೆನ್ನ. ಜಗತ್ತಿನ ಅಆಇಈ ಅರಿಯಲು ತಾಯ್ನುಡಿಗೆ ಮಿಗಿಲಾದದ್ದುಂಟೆ. ಭಾರತದಲ್ಲಿ ಬಹುತೇಕ ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುವಂತೆ, ಶಾಲಾ ಮಟ್ಟದಲ್ಲಿ ಮಾತೃಭಾಷಾ ಮಾಧ್ಯಮದ ಮೂಲಕ ಶಿಕ್ಷಣ ನಡೆಯಬೇಕು ಹಾಗೂ ಜತೆಜತೆಗೆ ಆಂಗ್ಲ ಭಾಷೆ ಕಲಿಕೆಯನ್ನೂ ಕಡ್ಡಾಯಗೊಳಿಸಬೇಕು ಎಂಬುದು ನನ್ನ ಅನಿಸಿಕೆ.

6:22 PM, April 20, 2006
-----

ವಿಶ್ವನಾಥ ಬಸವನಾಳಮಠ ಹೇಳಿದ್ದು...

ಅಸತ್ಯಾನ್ವೇಷಿಗಳು ಬರೆದ ಪ್ರತಿಕ್ರಿಯೆಯನ್ನು ಅವರೇ ಹೇಳಿದಂತೆ ನೂರಾ ಒಂದು ಸಲ ಓದಿದ್ದೇನೆ. ಕನ್ನಡನಾಡಿನಲ್ಲಿ ಇಂಗ್ಲಿಷ್ ಅರಿಯುವಿಕೆ ಬಗ್ಗೆ ಅವರು ಹೇಳಿದ್ದರಲ್ಲಿ ಉತ್ಪ್ರೇಕ್ಷೆ ಎಂಬುದು ಇಲ್ಲವೇ ಇಲ್ಲ. ಇಂದು ಇಂಗ್ಲಿಷ್ ಇದ್ದರೆ ಮಾತ್ರ

ಎಲ್ಲ, ಇಲ್ಲದಿದ್ದರೆ ಏನೂ ಇಲ್ಲ ಎನ್ನುವ ಮನೋಭಾವ ಬೆಳೆದಿದೆ. ನಮ್ಮ ದೇಶದ ಆಳುವವರ ನೀತಿಯಿಂದಾಗಿ ಇಂಗ್ಲಿಷ್ ಅನಿವಾರ್ಯವೂ ಆಗಿಬಿಟ್ಟಿದೆ. ಕನ್ನಡಿಗರಾದ ನಮಗೆ ಕನ್ನಡದ ಮೇಲೆ ನಮಗೆ ಎಂದೆಂದಿಗೂ ಅಭಿಮಾನ ಇದ್ದೇ

ಇರುತ್ತದೆ, ಆದರೆ ಈ ಅಭಿಮಾನ ನಮ್ಮ ಹೊಟ್ಟೆ ತುಂಬಿಸುವುದಿಲ್ಲ ಇದಕ್ಕೆ ಇಂಗ್ಲಿಷ್ ಬೇಕೇ ಬೇಕು. ಇಂಗ್ಲೆಂಡಿನಲ್ಲಿ ಕಲಿತು ಭಾರತದಲ್ಲಿ ಇಂಗ್ಲಿಷ್ ಕಲಿಸಿದವರು ಕನ್ನಡದ ಬಗ್ಗೆ ಏನೇ ಹೇಳಲಿ, ಗ್ರಾಮೀಣ ಪ್ರದೇಶದಿಂದ ಬಂದ ನಾವು,

ನಮ್ಮ ಮಕ್ಕಳೂ ಕಷ್ಟ ಪಡವುದು ಬೇಡದಿದ್ದರೆ ಒಂದನೇ ತರಗತಿಯಿಂದಲೇ ಶಿಸ್ತುಬದ್ಧ ಇಂಗ್ಲಿಷ್ ಕಲಿಕೆ ಅನಿವಾರ್ಯ. ಇನ್ನು ಶ್ರೀಮಂತ ಭಾಷೆಯಾದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗುವ ಬಗ್ಗೆ ಹೋರಾಟ ಮಾಡುವುದರಲ್ಲಿ ತಪ್ಪೇನಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

4:49 PM, April 21, 2006
---

ವಿಶ್ವನಾಥ ಬಸವನಾಳಮಠ ಹೇಳಿದ್ದು...

ಸಾರಥಿಯವರೇ,
ನಮ್ಮ ದೇಶ ಸ್ವಾವಲಂಬಿಯಾಗಿಲ್ಲ, ಆಗುವುದೂ ಇಲ್ಲ. ಆಡಳಿತವಿರಬಹುದು ಅಥವಾ ಕಾನೂನಾಗಿರಬಹುದು ಸುಮಾರು ಅರ್ಧ ಶತಮಾನಗಳ ಹಿಂದೆಯೇ ಬ್ರಿಟೀಶರು ಬಿಟ್ಟು ಹೋದ ಕಂದಾಚಾರಗಳನ್ನು ನಾವಿನ್ನೂ ಚಾಚೂ ತಪ್ಪದೇ ಪಾಲಿಸುತ್ತಿದ್ದೇವೆ. ಅದರಲ್ಲಿ ಇಂಗ್ಲಿಷ್ ಕೂಡ ಒಂದು. ಈಗ ನಮಗೆ ಇಂಗ್ಲಿಷ್ ಬಿಟ್ಟಿರದಂಥ ಅನಿವಾರ್ಯ ಪರಿಸ್ಥಿತಿ ಒದಗಿದೆ. ವ್ಯಾವಹಾರಿಕ ದೃಷ್ಟಿಯಿಂದ ನೋಡಿದರೆ, ಇಂಗ್ಲಿಷ್ ಕಲಿಯುವುದರಿಂದ ನಮಗೆ ಲಾಭವೇ ಹೆಚ್ಚು. ಆದ್ದರಿಂದ ಇದನ್ನು ಒಂದನೇ ತರಗತಿಯಿಂದ ಕಲಿಸುವುದು ಅನಿವಾರ್ಯ ಕರ್ಮ!

4:54 PM, April 21, 2006

----
ಸಂಜಯರು ಹೇಳಿದ್ದು...

ವಿಶ್ವನಾಥರವರೇ,
ಜಾಗತೀಕರಣದ ಇಂದಿನ ದಿನಗಳಲ್ಲಿ "ಸ್ವಾವಲಂಬಿ ದೇಶ" ಎಂಬ ಕಾನ್ಸೆಪ್ಟ್ ತನ್ನ ಅರ್ಥ ಕಳೆದುಕೊಳ್ಳುತ್ತಿದೆ ಎನ್ನಿಸುತ್ತದೆ. ಅಮೆರಿಕ, ಜಪಾನ್ ಚೈನಾಗಳೂ ಸಹ ಒಂದಕ್ಕೊಂದು ಅವಲಂಬಿಸಿಯೇ ಇವೆ. ಇದು ಬಹು ಮಟ್ಟಿಗೆ ಒಳ್ಳೆಯದೇ. ಪರಸ್ಪರ ವಾಣಿಜ್ಯ ಸಂಬಂಧ ಇದ್ದಾಗ ಎರಡು ದೇಶಗಳ ಮಧ್ಯೆ ಎಂತಹುದೇ ವಿವಾದ-ಸಂಘರ್ಷ ಇದ್ದರೂ, ಅದು ಪೂರ್ಣ ಪ್ರಮಾಣದ ಯುದ್ಧವಾಗಿ ಮಾರ್ಪಡುವುದು ಕಡಿಮೆ.

ಇನ್ನು ಆಂಗ್ಲ ಭಾಷೆಯ ಕಲಿಕೆಯ ವಿಚಾರ. ನಾನು ನಿಮ್ಮ (ಮತ್ತು ಅನ್ವೇಷಿಗಳ) ಮಾತನ್ನು ಒಪ್ಪುತ್ತೇನೆ. ಆಂಗ್ಲ ಭಾಷೆ ಇಂದು ಅನಿವಾರ್ಯವಾಗಿ ಬಿಟ್ಟಿದೆ. ಇದು ಭಾರತ ಅಥವಾ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ; ಜಪಾನಿನಲ್ಲಿ ಇಂಗ್ಲೀಷಿನ ಕುರಿತ ಈ ಲೇಖನ ಓದಿ. ಆ ಲೇಖನದ ಮುಖ್ಯಾಂಶಗಳು:

"English is a compulsory subject in Japanese schools. In fact, it is the only foreign languages that the vast majority of Japanese schools provide. All Japanese people now have at least 6 years of English at school, and 4 more years if they go to university. It is now common for Japanese parents to make their children learn English from the age of 5 or 6 in English schools or juku. Japan certainly has more private English conversation schools per square meter than anywhere else on earth."

ಚರ್ಚೆಗೆ ಅನುವು ಮಾಡಿಕೊಡುವ ಲೇಖನ ಬರೆದಿದ್ದೀರಿ. ಧನ್ಯವಾದಗಳು.

ವಂದನೆಗಳೊಂದಿಗೆ,

"ಸಂಜಯ"

Wednesday, April 19, 2006

ಕನ್ನಡಕೆ ಕಾದಾಡು ಇಂಗ್ಲೀಷು ಕಂದ!

ಕ್ಕಳಿಗೆ ಶಿಕ್ಷಣ ಇಂಗ್ಲಿಷ್ ಮಾಧ್ಯಮದಲ್ಲಿರಬೇಕೆ ಅಥವಾ ಕನ್ನಡದಲ್ಲಿರಬೇಕೇ ಎಂಬ ಬಗ್ಗೆ ಕೆಲ ದಿನಗಳ ಹಿಂದೆ ರಾಜ್ಯಾದ್ಯಂತ ಬಿರುಸಿನ ಚರ್ಚೆ ನಡೆದಿದ್ದಾಯಿತು. ಕೆಲ ಸಾಹಿತಿಗಳು ಸಂಪೂರ್ಣ ಕನ್ನಡದ ಪರ ವಾಲಿದರೆ ಇನ್ನು ಕೆಲವರು ಮೊದಲನೇ ತರಗತಿಯಿಂದಲೇ ಇಂಗ್ಲಿಷ್ ಬೇಕೇ ಬೇಕು ಎಂದರು.

ತಮಾಷೆಯೆಂದರೆ, ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕೆಂಬ ಕಟ್ಟಾ ನಿಲುವು ಹೊಂದಿದವರು ಹೊಟ್ಟೆಪಾಡಿಗೆ ಇಂಗ್ಲಿಷ್ ಅಪ್ಪಿಕೊಂಡವರು. ಹುಟ್ಟಿದ್ದು ಕರ್ನಾಟಕದಲ್ಲಿಯಾದರೂ ಕಲಿತದ್ದು ಇಂಗ್ಲೆಂಡಿನಲ್ಲಿ, ವೃತ್ತಿಯಲ್ಲಿ ಆಯ್ದುಕೊಂಡಿದ್ದು ಇಂಗ್ಲಿಷ್ ಬೋಧನೆಯನ್ನು. ಆದರೆ ಪ್ರಚಾರಕ್ಕಾಗಿ ಅವರು ಮಾಡಿದ ಚಳವಳಿಯೆಲ್ಲ ಕನ್ನಡಕ್ಕಾಗಿಯೇ!

ಸ್ವಲ್ಪ ವಾಸ್ತವದತ್ತ ಇಣುಕಿ ನೋಡಿದರೆ, ಇಂಥ ದ್ವಂದ್ವ ನೀತಿ ಗ್ರಾಮೀಣ ಪ್ರದೇಶದ ನಮ್ಮ ಯುವ ಸಮೂಹವನ್ನು ಹೇಗೆ ಹೈರಾಣ ಮಾಡಿದೆ ಎಂಬುದು ಅರಿವಾಗುತ್ತದೆ. ನಮ್ಮ ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆದರೆ ವಿಷಯವನ್ನು ತಿಳಿದುಕೊಳ್ಳುವಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಕೇವಲ ವಿಷಯ ತಿಳಿದುಕೊಂಡವರಿಗೆ ಇಂದು ಕೆಲಸ ಸಿಗುತ್ತದೆಯೇ ಎಂಬುದು ಪ್ರಶ್ನೆ. ಮಾತೃಭಾಷೆಯಲ್ಲೇ ಸಾಧನೆಗೈದ ಚೀನಾ, ಜಪಾನ್ ಉದಾಹರಣೆ ನೀಡುವವರು, ಅಲ್ಲಿನ ಸರಕಾರದ ನೀತಿಯನ್ನೂ ತಿಳಿದುಕೊಳ್ಳಬೇಕಾದ್ದು ಅಗತ್ಯ. ಈ ದೇಶಗಳಲ್ಲಿ ನೀವು ಒಳ್ಳೆಯ ಕೆಲಸ ಗಿಟ್ಟಿಸಬೇಕೆಂದರೆ, ನಿಮಗೆ ಇಂಗ್ಲಿಷ್ ಗೊತ್ತಿರಲೇ ಬೇಕೆಂದೇನೂ ಇಲ್ಲ. ಮಾತೃಭಾಷೆಗೆ ಅಲ್ಲಿ ಅಂಥ ಸ್ಥಾನಮಾನವಿದೆ.

5-6 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಜಪಾನ್ ವಾಣಿಜ್ಯ ಮಂಡಳಿಯ ಪತ್ರಿಕಾಗೋಷ್ಠಿಗೆ ಹೋದಾಗ ನನಗೆ ಆದ ಅನುಭವವೇ ಬೇರೆ. ಅಲ್ಲಿ ಬಂದಿದ್ದಾತ ಜಪಾನಿನ ದೊಡ್ಡ ಉದ್ಯಮಿ, ವ್ಯಾಪಾರ ನಿಮಿತ್ತ ಹಲವಾರು ದೇಶಗಳನ್ನು ಸುತ್ತಿದವ. ಸಭಿಕರನ್ನುದ್ದೇಶಿಸಿ ನಾಲ್ಕು ಮಾತನಾಡುವ ಸಂದರ್ಭ ಬಂದಾಗ, ಆತ ಮಾತನಾಡಿದ ಇಂಗ್ಲಿಷ್, ಕನ್ನಡ ಮಾಧ್ಯಮದಲ್ಲಿ ಕಲಿಯುವ ನಮ್ಮೂರಿನ ಹೈಸ್ಕೂಲು ಹುಡುಗನದ್ದಕ್ಕಿಂತ ಕೆಟ್ಟದಾಗಿತ್ತು. ಕೊನೆಗೆ ದುಭಾಷಿ ಆತನ ಸಹಾಯಕ್ಕೆ ಬರಬೇಕಾಯಿತು. ಆದರೂ ಅಲ್ಲಿ ಆತ ಯಶಸ್ವಿ ಉದ್ಯಮಿ. ಜಪಾನಿ ಭಾಷೆಗೆ ಅಲ್ಲಿ ಅಂಥ ಮಹತ್ವದ ಸ್ಥಾನವಿದೆ.

ಜಾಗತೀಕರಣದ ಪ್ರಬಲ ಅಲೆಗಳು ಭಾರತದ ಪ್ರತಿಯೊಂದು ಕ್ಷೇತ್ರಗಳಿಗೂ ಅಪ್ಪಳಿಸುತ್ತಿವೆ. ಇಂಥ ವಾತಾವರಣವಿರುವಾಗ
ನಿಮಗೆ ಕೇವಲ ವಿಷಯ ಜ್ಞಾನವಿದ್ದರಷ್ಟೇ ಸಾಲದು, ಅದನ್ನು ಇಂಗ್ಲಿಷಿನಲ್ಲಿ ಪ್ರಸ್ತುತಪಡಿಸುವ, ಅರಳು ಹುರಿದಂತೆ ಮಾತನಾಡುವ ತಾಕತ್ತಿದ್ದರೆ ಮಾತ್ರ ಮುಂದೆ ಸಾಗಲು ಅವಕಾಶ ಇಲ್ಲದಿದ್ದರೆ ನೀವು ರಿಜೆಕ್ಟೆಡ್ ಪೀಸ್!

ಹಳ್ಳಿಯ ಮಕ್ಕಳಿಗಿರುವಷ್ಟು ಸಾಮಾನ್ಯ ಜ್ಞಾನ ಪೇಟೆಯವರಿಗಿರುವುದಿಲ್ಲ. ಇವರದೇನಿದ್ದರೂ ಪುಸ್ತಕ ಜ್ಞಾನ. ಆದರೆ ಇಂಗ್ಲಿಷ್ ಇವರ ಪ್ಲಸ್ ಪಾಯಿಂಟ್. ಪರಿಸ್ಥಿತಿ ಹೀಗಿರುವಾಗ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಉತ್ತಮ ಇಂಗ್ಲಿಷ್ ಹೇಳಿಕೊಟ್ಟರೆ ಮುಂದೆ ಅವರು ಜಾಗತೀಕರಣದ ಪ್ರವಾಹದಲ್ಲಿ ಏಕಾಂಗಿಯಾಗುವ ಭಯ ಇರುವುದಿಲ್ಲ. ಏನಂತೀರಿ?

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ:

ಈಗ ಎಲ್ಲವೂ ಸರ್ಟಿಫಿಕೇಟ್ ಜಮಾನಾ. ನಾನು ಇಂಥವರ ಮಗ ಎಂದು ನಾನೇ ಹೇಳಿದರೆ ನಡೆಯದು; ಅದನ್ನು ತಹಸೀಲ್ದಾರ ತನ್ನ ಮುದ್ರೆ ಒತ್ತಿ ಪ್ರಮಾಣೀಕರಿಸಬೇಕು. ಹೀಗಿರುವಾಗ ಬೇರೆ ಯಾವ ಭಾರತೀಯ ಭಾಷೆಗಳಿಗಿಂತಲೂ ಯಾವ ರೀತಿಯಲ್ಲೂ ಕಡಿಮೆಯಿಲ್ಲದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲು ಒತ್ತಾಯಿಸುವುದರಲ್ಲಿ ತಪ್ಪೇನು? ಈಚೆಗೆ ಈ ವಿಷಯದ ಬಗ್ಗೆ ಕೆಲ ಕನ್ನಡ ಸಾಹಿತಿಗಳ ಕದನ, ಕುತೂಹಲದ ಘಟ್ಟ ತಲುಪಿತ್ತು. ತಮಾಷೆಯೆಂದರೆ ಅದರಲ್ಲಿ ನೇರವಾಗಿ ದಾಳಿ, ಪ್ರತಿದಾಳಿ ಮಾಡುತ್ತಿದ್ದ ಇಬ್ಬರೂ ಸಾಹಿತಿಗಳು ಹೊಟ್ಟೆಪಾಡಿಗೆ ಇಂಗ್ಲಿಷ್ ಮೊರೆ ಹೋದವರು.

ಹಣಕ್ಕಾಗಿ ಇವರು ಮಾಡಿದ್ದು ಇಂಗ್ಲಿಷ್ ಸೇವೆಯನ್ನು, ಹೆಸರಿಗೆ, ಪ್ರಚಾರಕ್ಕಾಗಿ ಬಳಸಿದ್ದು ಮಾತ್ರ ಕನ್ನಡವನ್ನು!

ಕನ್ನಡಕೆ ಹೋರಾಡು ಇಂಗ್ಲೀಷು ಕಂದ
ಕನ್ನಡವಾ ಕಾಪಾಡು ನನ್ನ ಆನಂದ!

Tuesday, April 18, 2006

ನಾನು ಬ(ಭ)ಡವಿ ಆತ ಬ(ಭ)ಡವ...!

ನಾನು ಬಡವಿ, ಆತ ಬಡವ ಹೊಲಸೇ ನಮ್ಮ ಬದುಕು....!


ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಬರುವ ಮೇ ತಿಂಗಳು ನಡೆಯಲಿದ್ದು, ಇದಕ್ಕಿಂತ ಮುನ್ನ ಅಭ್ಯರ್ಥಿಗಳ ಆಸ್ತಿ ಘೋಷಣೆ ಎಂಬ ಪ್ರಹಸನ ನಡೆಯುತ್ತಿದೆ.

ಕಳೆದ 50 ವರ್ಷಗಳಿಂದ ರಾಜಕೀಯದಲ್ಲಿರುವ ಕರುಣಾನಿಧಿ, ಪರಂಪರಾಗತವಾಗಿ ಕಳೆದ 50 ವರ್ಷ ದೇಶದ ಚುಕ್ಕಾಣಿ ಹಿಡಿದ ಮನೆತನದ ಸೋನಿಯಾ, ಸತತ 25 ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಸಿಪಿಎಂ ನ ಬುದ್ಧದೇವ ಭಟ್ಟಾಚಾರ್ಯ ಅವರ ಬಳಿ ಒಂದೂ ಕಾರ್ ಇಲ್ಲವಂತೆ! ಹೇಗೆ-ಎಲ್ಲಿಂದ ನಗಬೇಕೋ ತಿಳಿಯದಷ್ಟು ಕಕ್ಕಾಬಿಕ್ಕಿಯಾಗುತ್ತಿದೆ.
ಕರುಣಾನಿಧಿ ಅವರೇ ಘೋಷಿಸಿರುವಂತೆ ಅವರ ಇಬ್ಬರು ಹೆಂಡತಿಯರ ಹೆಸರಿನಲ್ಲಿರುವ ಆಸ್ತಿ-ಪಾಸ್ತಿ ಕೇವಲ 25 ಕೋಟಿ ರೂಪಾಯಿ. ತಮಿಳುನಾಡಿನ ಈ ಸಂತನಿಗೆ ತನ್ನದ್ದೆಂದು ಹೇಳಿಕೊಳ್ಳುವ ಒಂದು ಮನೆ, ಕಾರೂ ಇಲ್ಲವಂತೆ, ಪಾಪ! ಹಾಗಿದ್ದರೆ ಇವರ ಹೆಂಡತಿ ಮಕ್ಕಳು ಇವರಿಗೆ ಸೇರಿಲ್ಲವೇ?

ಇನ್ನು, ಕಳೆದ 50 ವರ್ಷಗಳಿಂದ ಅಧಿಕಾರದ ಸುಪ್ಪತ್ತಿಗೆಯಲ್ಲಿರುವ ಮನೆತನದು ಹೆಣ್ಣುಮಗಳು, ತ್ಯಾಗದ ಅಪರಾವತಾರ ಸೋನಿಯಾ ಗಾಂಧಿ ಗಳಿಕೆ ಕೇವಲ ಐದೇ ಕೋಟಿ ರೂಪಾಯಿಯಂತೆ. ಸುಳ್ಳಿಗೂ ಒಂದು ಮಿತಿ ಬೇಡವೇ? ತಮ್ಮ ಹೆಸರಿನ ಜೊತೆಗೆ ಗಾಂಧಿ ಎಂದು ಅಂಟಿಸಿಕೊಂಡು ಬಿಟ್ಟರೆ ಸಾಕೆ? ದೇಶದ ಬಡತನ ಕಂಡು ಅರೆಬತ್ತಲೆ ಬಟ್ಟೆ ತೊಟ್ಟ ಆ ಫಕೀರನೆಲ್ಲಿ, ಆತನ ಹೆಸರು ಹೇಳಿ ಹೊಟ್ಟೆ ಹೊರೆಯುವ ಈ ನಾಲಾಯಕ್ಕರೆಲ್ಲಿ?

ಸದಾ ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಬಗ್ಗೆ ಮಾತನಾಡುವ, ದುಡಿತ ಎಂಬುದೇನು ಎಂಬುದೇ ಗೊತ್ತಿರದ, ಗಾಂಧಿ ತತ್ವಗಳನ್ನು ಬೊಗಳುವ ಇವರು ಅವರಿವರ ಹೆಸರಲ್ಲಿ ಇಷ್ಟು ಸಂಪಾದಿಸಿದ್ದಾದರೂ ಹೇಗೆ (ಬಹಿರಂಗಪಡಿಸಿರುವುದು ಇಷ್ಟು, ಗುಟ್ಟಾಗಿರುವುದು ಇನ್ನೆಷ್ಟೋ?)

ಇಷ್ಟಾದರೂ ಇವರೇ ನಮ್ಮ ನಾಯಕರು, ಇವರು ಹೇಳಿದ್ದೇ ಕಾನೂನು, ಗಿಮಿಕ್ಕಿಗಾಗಿ ಕೊಟ್ಟ ರಾಜೀನಾಮೆಯೇ ಒಂದು ದೊಡ್ಡ ತ್ಯಾಗ!

ತಮಿಳುನಾಡಿನ ಪುರುಚ್ಚಿ ತಲೈವಿ (ಕ್ರಾಂತಿ ನಾಯಕಿ) ಜಯಲಲಿತಾ ಆಸ್ತಿ ಕೇವಲ 125 ಕೋಟಿ ರೂಪಾಯಿಯಂತೆ. ಹಾಗಿದ್ದರೆ ಜಯಾಗಿಂತ ಸೋನಿಯಾ ಬ(ಭ)ಡವಿ!

ಒಂದೆಡೆ ತಿನ್ನಲು ಅನ್ನವಿಲ್ಲದೇ, ಪದವಿಯಿದ್ದರೂ ಉದ್ಯೋಗವಿಲ್ಲದೇ ಯುವಕರು ಪೇಚಾಡುತ್ತಿರುವಾಗ ಈ ಭಡವ- ಭಡವಿಯರು ಅಟ್ಟಹಾಸ ಮೆರೆಯುತ್ತಿದ್ದಾರೆ.

ಮೇರಾ ಭಾರತ್ ಮಹಾನ್!

ಕನ್ನಡಿಗರು ಕೆಟ್ಟವರಾ?

"ನಟಿಗರ್ ರಾಜ್ ಕುಮಾರ್ ಸಾವರದಕೂ, ಬೆಂಗಳೂರಿಲ್ ಬಸ್ ಬರ್ನ್ ಪಣ್ರದಕೂ ಎನ್ನ ಸಂಬಂದಂ? " (ನಟ ರಾಜ್ ಕುಮಾರ್ ಸಾಯುವುದಕ್ಕೂ, ಬಸ್ ಸುಡುವುದಕ್ಕೂ ಎಲ್ಲಿಯ ಸಂಬಂಧ) ಅಂತ ತಮಿಳು ಮಿತ್ರನೊಬ್ಬ ಮೊನ್ನೆ ಕೇಳಿದ.

ಆತನಿಗೆ ಏನು ಹೇಳಬೇಕೆನ್ನುವುದೇ ನನಗೆ ತೋಚಲಿಲ್ಲ. ಒಂದು ಕ್ಷಣ ನನಗೆ ನಾಚಿಕೆಯೂ ಆದಂತಾಯಿತು. ಕನ್ನಡ ಸಂಸ್ಕೃತಿ, ಭಾಷೆಯ ಶ್ರೀಮಂತಿಕೆಯ ಬಗ್ಗೆ ಆಗಾಗ ಕೊಚ್ಚಿಕೊಳ್ಳುವ ನನಗೆ ಅವಮಾನ ಮಾಡಬೇಕೆಂದೇ ಆತ ಆ ಪ್ರಶ್ನೆ ಕೇಳಿದನೇ ಎಂಬ ಅನುಮಾನವೂ ಆಯ್ತು.

ಡಾ.ರಾಜ್ ಕುಮಾರ್ ಮತ್ತು ಹಿಂಸೆ ಒಂದಕ್ಕೊಂದು ತದ್ವಿರುದ್ಧ ಪದಗಳು. ತಮ್ಮ ಜೀವಿತವಿಡೀ ನಯ, ವಿನಯ, ಸೌಮ್ಯತೆ, ಮುಗ್ಧತೆ, ಸರಳ ಜೀವನಕ್ಕೆ ಹೆಸರಾದ ರಾಜ್ ಕುಮಾರ್ ಅವರು ಇಹಲೋಕ ತ್ಯಜಿಸಿದಾಗ ಅವರ ಹೆಸರಿನ ಜೊತೆ ಹಿಂಸೆಯ ಬಗ್ಗೆ ಮಾತನಾಡಬೇಕು ಅಥವಾ ಅದನ್ನು ಕೇಳಬೇಕೆನ್ನುವುದೇ ಒಂದು ದೊಡ್ಡ ಹಿಂಸೆ.

ಡಾ.ರಾಜ್ ಅಭಿಮಾನಿಗಳು ಎಂದು ಲೇಬಲ್ ಅಂಟಿಸಿಕೊಂಡ ಈ ಜನ ಮಾಡಿದ ದುಷ್ಕೃತ್ಯಗಳು ಅಭಿಮಾನಿಗಳು ಎಂದೆನಿಸಿಕೊಂಡವರು ಮಾಡುವ ಕೆಲಸವೇ? ತಮಿಳುನಾಡಿನ ಬಸ್ಸಿಗೆ ಕಲ್ಲು, ಬಡ ಪೊಲೀಸ್ ಪೇದೆಯ ಜಜ್ಜಿ ಕೊಲೆ, ಪೊಲೀಸ್ ಠಾಣೆಗೆ ಬೆಂಕಿ, ಪೆಟ್ರೋಲ್ ಪಂಪ್ ಸುಟ್ಟು ಬೂದಿ... ಇವೇನಾ ಅಭಿಮಾನಿಗಳ ಕೆಲಸ? ಇವರೇನು ಮನುಷ್ಯರೇ ಅಥವಾ ರಾಕ್ಷಸರೇ?

ಈ ಪರಿ ಹಿಂಸಾಚಾರದ ಪರಮಾವಧಿಯನ್ನು ಕಂಡು ಡಾ.ರಾಜ್ ಆತ್ಮ ಒಳಗೇ ನೊಂದಿರಬಹುದು.
ಡಾ.ರಾಜ್ ಪಾರ್ಥಿವ ಶರೀರದೆದುರು ಕುಳಿತ ರಾಜ್ ಪುತ್ರರು ಒತ್ತಿ ಬರುವ ದುಃಖದಲ್ಲೇ ಶಾಂತರಾಗಿರುವಂತೆ ಅಭಿಮಾನಿಗಳನ್ನು ಬೇಡಿಕೊಂಡರೆ, ಅವರನ್ನು ನೋಡಿ ಚಪ್ಪಾಳೆ ತಟ್ಟಿ ನಗುತ್ತಿದ್ದವರು, ಅಂತಿಮ ಯಾತ್ರೆಯ ವಾಹನದೆದುರು ಕುಡಿದು ಕುಪ್ಪಳಿಸಿದವರು ಕೇವಲ ಕನ್ನಡಿಗರಷ್ಟೇ ಅಲ್ಲ ಮಾನವ ಕುಲಕ್ಕೇ ಕಳಂಕ. ಸದಾ ತನ್ನ ಅಭಿಮಾನಿಗಳನ್ನು "ದೇವರೇ" ಎಂದು ಸಂಬೋಧಿಸುತ್ತಿದ್ದ ಹಿರಿಯ ಜೀವಕ್ಕೆ ಮಾಡಿದ ಘೋರ ಅನ್ಯಾಯವಿದು.

ಮೂರು ವರ್ಷಗಳ ಹಿಂದೆ ಚೆನ್ನೈನಲ್ಲೂ ತಮಿಳು ಚಿತ್ರರಂಗದ ಖ್ಯಾತ ನಟ ಶಿವಾಜಿ ಗಣೇಶನ್ ವಿಧಿವಶರಾದರು. ಖ್ಯಾತಿಯಲ್ಲಿ ಡಾ.ರಾಜ್ ಅವರಿಗಿಂತ ಶಿವಾಜಿಯೇನೂ ಕಮ್ಮಿಯಿರಲಿಲ್ಲ. ಅವರಿಗೂ ಅಪಾರ ಅಭಿಮಾನಿ ಬಳಗವಿತ್ತು. ಆದರೆ ಅವರು ನಿಧನರಾದಾಗ ನಗರದ ಒಂದೇ ಒಂದು ಕಡೆ ಹಿಂಸೆಯ ಘಟನೆಗಳಾಗಲಿ, ದಳ್ಳುರಿಯಾಗಲಿ ಕಂಡು ಬರಲಿಲ್ಲ.

80 ರ ದಶಕದಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜನಪ್ರಿಯ ನಟ ಎಂ.ಜಿ.ರಾಮಚಂದ್ರನ್ (ಎಂಜಿಆರ್) ನಿಧನರಾದಾಗ ಚೆನ್ನೈನಲ್ಲಿ ಅಲ್ಪ ಪ್ರಮಾಣದ ಹಿಂಸಾಚಾರ ವರದಿಯಾಗಿದ್ದು ನಿಜ. ಅದು ಕೇವಲ ಡಿಎಂಕೆ ಪಕ್ಷದವರ ಕೆಲ ಆಸ್ತಿ ಪಾಸ್ತಿ ಹಾನಿಗೊಳಿಸುವುದಕ್ಕೆ ಸೀಮಿತವಾಗಿವಾಗಿತ್ತೇ ಹೊರತು ಮೊನ್ನೆ ಬೆಂಗಳೂರಿನಲ್ಲಿ ಸಂಭವಿಸಿದ ತಲೆತಗ್ಗಿಸುವಂತಹ ಘಟನೆಗಳೇನೂ ನಡೆಯಲಿಲ್ಲ.

ಕಳೆದ ಏಳು ವರ್ಷಗಳಿಂದ ಚೆನ್ನೈನಲ್ಲಿ ವಾಸಿಸುವ ನನಗೆ, ಎಂದೂ ಕನ್ನಡ ಚಿತ್ರ ನೋಡದ ಕೆಲ ತಮಿಳು ಮಿತ್ರರು ಡಾ.ರಾಜ್ ಕುಮಾರ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದು ನಿಜಕ್ಕೂ ನನಗೆ ಮೆಚ್ಚುಗೆಯಾಯಿತು. ಸದಾ ತಮಿಳರನ್ನು, ತಮಿಳು ಭಾಷೆಯನ್ನು ಹಿಯಾಳಿಸುವ ನಾವೆಷ್ಟು ಒಳ್ಳೆಯವರು ಎಂಬ ಪ್ರಶ್ನೆಯೂ ಸುಳಿದು ಹೋಯ್ತು.

ಡಾ.ರಾಜ್ ನಿಧನಕ್ಕೆ ಕಂಬನಿ ಮಿಡಿದ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್, "ಐ ಲಾಸ್ಟ್ ಮೈ ಫಾದರ್ ಇನ್ ಕರ್ನಾಟಕ" ಎಂದು ದುಃಖಿಸಿದ ಶಿವಾಜಿ ಗಣೇಶನ್ ಪುತ್ರ ಪ್ರಭು, ಅವರ ಹೃದಯ ವೈಶಾಲ್ಯಕ್ಕೆ ಸಾಕ್ಷಿ.

ಕೆಲ ಅನಾಗರಿಕರು ಮಾಡಿದ ತಪ್ಪಿಗೆ ಇಡೀ ಕನ್ನಡ ಸಮುದಾಯಕ್ಕೇ ಕಳಂಕ. ಇಂಥ ಅನಾಗರಿಕರ ಸಂತತಿ ನಾಶವಾಗಲಿ. ಕನ್ನಡದ ಹಿರಿಮೆ-ಹೆಮ್ಮೆ ಎತ್ತಿ ಹಿಡಿಯುವಂತಾಗಲಿ. ತಿಳಿಗೇಡಿಗಳು ಮಾಡಿದ ತಪ್ಪನ್ನು ಹಿರಿಯ ಚೇತನ ಕ್ಷಮಿಸಲಿ.

Monday, April 17, 2006

ಸಾಂಸ್ಕೃತಿಕ ರಾಯಭಾರಿ ನಿರ್ಗಮನ

ಯುಗಪುರುಷ ಡಾ.ರಾಜ್‌ಕುಮಾರ್ ಗೆ ಅಕ್ಷರ ನಮನ


ಕರ್ನಾಟಕ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವಾಗಲೇ ಸುವರ್ಣ ಸರಪಳಿಯ ಮಹತ್ವದ ಕೊಂಡಿಯೊಂದು ಕಳಚಿಕೊಂಡಿದೆ. ಸುವರ್ಣ ಸಂಭ್ರಮದ ಹಬ್ಬದ ನಾಡಿನಲ್ಲಿ ಸೂತಕದ ಛಾಯೆ ಕವಿದಿದೆ. ಕಳೆದ ಐದು ದಶಕಗಳಿಂದ ಇಡೀ ಜಗತ್ತಿಗೇ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿದ್ದವರು ಶಾಶ್ವತ ನಿವೃತ್ತಿ ಪಡೆದು ಕಾಣದ ಲೋಕಕ್ಕೆ ಸರಿದಿದ್ದಾರೆ. ಯುಗಾದಿ ಕಳೆದ ಕೇವಲ ಹದಿನೈದೇ ದಿನಗಳಲ್ಲಿ ಯುಗಾಂತ್ಯವಾಗಿದೆ. ಚಿತ್ರರಂಗ ಬಡವಾಗಿದೆ. ವಜ್ರದೇಹಿ, ಯೋಗಿ, ಬಂಗಾರದ ಮನುಷ್ಯ ಮಣ್ಣಿನಲ್ಲಿ ಲೀನವಾಗಿದ್ದಾರೆ.

ಡಾ.ರಾಜ್‌ಕುಮಾರ್ ಇಹಲೋಕ ತ್ಯಜಿಸಿದ್ದಾರೆ.

ಚಿತ್ರ ರಸಿಕರಿಗೆ ಆರಾಧ್ಯದೈವ, ಚಿತ್ರಪ್ರೇಮಿಗಳಿಗೆ ಅಣ್ಣಾವ್ರು, ಸರೀಕರ ಪಾಲಿಗೆ ರಾಜಣ್ಣ, ಕಿರಿಯರಿಗೆ ಅಪ್ಪಾಜಿ, ಕೆಲವರಿಗೆ ಡಾ.ರಾಜ್‌ಕುಮಾರ್, ಇನ್ನು ಹಲವರಿಗೆ ಡಾ.ರಾಜ್‌.

ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್ ಪ್ರೀತಿಯಿಂದ ಕರೆಸಿಕೊಂಡಿದ್ದು ಹೀಗೆ.

ಕೇವಲ ಮೂರನೆಯ ತರಗತಿವರೆಗೆ ಓದಿ, ಚಿತ್ರರಂಗದ ಉನ್ನತ ಹಂತ (ಸ್ಯಾಚುರೇಶನ್ ಪಾಯಿಂಟ್) ತಲುಪಿದರೂ, ಸಿರಿವಂತಿಕೆಯನ್ನು ಕಂಕುಳಲ್ಲೇ ಇರಿಸಿಕೊಂಡಿದ್ದರೂ, ಸದಾ ನಯ-ವಿನಯ, ಸರಳ ಜೀವನ, ಸಾತ್ವಿಕ ನಡೆ-ನುಡಿಯಿಂದ ಇಡೀ ನಾಡಿನ-ದೇಶದ ಗಮನ ಸೆಳೆದ ಹಿರಿಯ ಚೇತನ ಡಾ.ರಾಜ್‌ಕುಮಾರ್ ನಮ್ಮೊಂದಿಗಿಲ್ಲ ಎಂದರೆ ನಂಬಲು ಸಾಧ್ಯವೇ ಆಗುತ್ತಿಲ್ಲ.
ನಾನು ಚಲನಚಿತ್ರಗಳನ್ನು ಅಷ್ಟಾಗಿ ನೋಡದಿದ್ದರೂ ಡಾ.ರಾಜ್ ಒಬ್ಬ ವ್ಯಕ್ತಿಯಾಗಿ, ಶಕ್ತಿಯಾಗಿ ಅಷ್ಟಾಗಿ ಏಕೆ ಮೆಚ್ಚುಗೆಯಾಗುತ್ತಾರೆ ಎಂಬ ಪ್ರಶ್ನೆಗೆ ನನ್ನಷ್ಟಕ್ಕೆ ನಾನೇ ಕಂಡುಕೊಂಡ ಉತ್ತರವೆಂದರೆ- ರಾಜ್ ನಮ್ಮಲ್ಲಿ ನಮ್ಮವರೊಬ್ಬರಾಗಿದ್ದರು.

ಡಾ.ರಾಜ್ ಮಾಡದ ಪಾತ್ರಗಳು ಯಾವುದಾದರೂ ಇದೆಯೇ? ಬೇಟೆಗಾರ ಬೇಡ, ಬೆವರು ಸುರಿಸಿ ದುಡಿವ ರೈತ, ಕಾಫಿ ತೋಟದಲ್ಲಿ ರೈಟರ್, ಕುಸ್ತಿಪಟು, ಪೊಲೀಸ್, ಅಧ್ಯಾಪಕ, ಕೆಲಸಗಾರ, ಮಧ್ಯಮವರ್ಗದ ಬಡಜೀವ, ಕೂಲಿಗಾರ, ಕರುಣಾಮಯಿ ಅಣ್ಣ-ತಮ್ಮ, ವಾತ್ಸಲ್ಯದ ಅಪ್ಪ, ಕವಿ, ಯುವ ಪ್ರೇಮಿ, ಶಿಕ್ಷಕ, ಉಪನ್ಯಾಸಕ, ಪ್ರೊಫೆಸರ್ ... ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ತಾನು ಮಾಡಿದ ಪಾತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಈ ಮಹಾನ್ ನಟ ಸಮಾಜದ ಪ್ರತಿಯೊಂದು ವರ್ಗದಲ್ಲೂ ತನ್ನನ್ನು ಗುರುತಿಸಿಕೊಂಡಿದ್ದರು. ನಟಸಾರ್ವಭೌಮ ಎಂಬ ಹೆಸರಿಗೆ ಅತ್ಯಂತ ಸೂಕ್ತ ಅನ್ವರ್ಥಕ. ಪತ್ರಿಕೆಗಳಲ್ಲಿ ಬಂದಂತೆ ಕರ್ನಾಟಕ ರತ್ನ, ಪದ್ಮಭೂಷಣ, ಪದ್ಮವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಹೀಗೆ ಹಲವಾರು ಪ್ರಶಸ್ತಿಗಳಿಗೆ ಡಾ.ರಾಜ್ ಅವರಿಂದ ಗೌರವ ಬಂದಿತು.

ಡಾ.ರಾಜ್ ಅವರ ಸಿನಿಮಾಗಳನ್ನು ನೋಡಿದವರು, ಈ ಮಹಾನ್ ನಟನದು ಕೇವಲ ಅಭಿನಯವಷ್ಟೇ ಅಲ್ಲ, ನಿಜ ಜೀವನದಲ್ಲಿ ನಮ್ಮ ಕಷ್ಟ-ಭಾವನೆಗಳನ್ನೇ ಅವರು ಪ್ರತಿನಿಧಿಸಿದ್ದಾರೆ ಎಂಬ ಭಾವ ಮೂಡುತ್ತದೆ.

ಆದರೆ 77 ರ ಹರೆಯದಲ್ಲೂ ತಾವಿನ್ನೂ ಕಲಿಯಬೇಕಿರುವುದು ಬಹಳಷ್ಟಿದೆ, ಚಿತ್ರರಂಗ ಒಂದು ಸಮುದ್ರ, ತಮಗೆ ಸಂದ ಪ್ರಶಸ್ತಿಗಳೆಲ್ಲ ಅಭಿಮಾನಿ ದೇವರ ಹಾರೈಕೆ ಎಂದೇ ನಮ್ರತೆಯಿಂದ ನುಡಿಯುತ್ತಿದ್ದ ಅಭಿಮಾನಿಗಳ ಈ ಮಹಾನ್ ಪೂಜಾರಿ, ನಿರಹಂಕಾರಿ- ಯುವಪೀಳಿಗೆಗೆ ಆದರ್ಶಪ್ರಾಯ. ಕೀರ್ತಿ, ಸಂಪತ್ತಿನ ಬೆಟ್ಟವೇರಿದರೂ ತನ್ನನ್ನು ಮಾತ್ರ ಇರುವೆಯೊಂದಿಗೆ ಗುರುತಿಸಿಕೊಳ್ಳುತ್ತಿದ್ದ ಈ ಚೇತನ ನಮಗೆಲ್ಲ ಸ್ಫೂರ್ತಿ; “ನೀನು ಮುಗಿಲು ನಾವು ನೆಲ...”.

ಕನ್ನಡ ಮಣ್ಣಿನ ಬಂಗಾರದ ಮನುಷ್ಯ, ಚಿತ್ರಲೋಕದ ಧ್ರುವತಾರೆ, ಕನ್ನಡದ ಕಂಠೀರವ, ಕನ್ನಡದ ಕಣ್ಮಣಿ ಕಣ್ಮುಚ್ಚಿದಾಗ ತಮ್ಮ ಪಾಲಿನ ಆರಾಧ್ಯ ದೈವದ ಅಂತಿಮ ದರ್ಶನ ಪಡೆಯಲು ಸೇರಿದ ಜನಸಾಗರವೇ ಅವರ ಜನಪ್ರಿಯತೆಗೆ ಸಾಕ್ಷಿ. ಶರಣರ ಸಾವು ಮರಣದಲ್ಲೇ ಅಲ್ಲವೇ ಗೊತ್ತಾಗುವುದು?

ಕೆಲವರು ಹೇಳುವಂತೆ ತಮಿಳುನಾಡಿಗೊಬ್ಬ ಎಂಜಿಆರ್, ಆಂಧ್ರಪ್ರದೇಶಕ್ಕೊಬ್ಬ ಎನ್‌ಟಿಆರ್ ಇದ್ದಂತೆ ಕರ್ನಾಟಕಕ್ಕೊಬ್ಬ ಡಾ.ರಾಜ್‌ಕುಮಾರ್ ಎಂಬ ಮಾತನ್ನು ನಾನಂತೂ ಒಪ್ಪುವುದಿಲ್ಲ. ಡಾ.ರಾಜ್ ಇವರಿಬ್ಬರಿಗಿಂತಲೂ ಭಿನ್ನ ಎಂಬುದೇ ನನ್ನ ಸ್ಪಷ್ಟ ಅಭಿಪ್ರಾಯ. ತಾವು ಮಾಡಿದ ನಟನೆಯನ್ನೇ ನಂಬಿ ತಮಗೆ ಗೌರವ ನೀಡಿದ ಜನರ ಪ್ರೀತಿಯನ್ನೇ ಕ್ಯಾಶ್ ಮಾಡಿಕೊಂಡ ತಮಿಳು, ಆಂಧ್ರದ ...ಆರ್ ದ್ವಯರು ಅಧಿಕಾರದ ಅಮಲಿನಲ್ಲಿ ಮೆರೆಯಲಿಲ್ಲವೇ? ತಮಿಳಿಗರ ಕುಕ್ಕಿ ತಿನ್ನುವ ಬಡತನ, ತೆಲುಗರ ಅನಕ್ಷರತೆಯನ್ನೇ ಬಂಡವಾಳವಾಗಿಸಿಕೊಂಡು, ಮುಗ್ಧ ಜನರ ಭಾವನೆಗಳನ್ನು ಸ್ವಾರ್ಥಕ್ಕೆ ಬಳಸಿಕೊಂಡ ಆ ನಟರೆಲ್ಲಿ, ಮನಸ್ಸು ಮಾಡಿದ್ದರೆ 80 ರ ದಶಕದಲ್ಲೇ ಕರ್ನಾಟಕದ ಮುಖ್ಯಮಂತ್ರಿಯಾಗಿ ಮೆರೆಯಬಹುದಾಗಿದ್ದ ಅವಕಾಶವನ್ನು ಎಡಗಾಲಿನಿಂದ ಒದ್ದ ಈ ನಟಸಾರ್ವಭೌಮನೆಲ್ಲಿ? ಹೋಲಿಕೆ ಕೂಡ ಅಸಾಧ್ಯ. ಡಾ.ರಾಜ್ ಗೆ ಡಾ.ರಾಜ್ ಅವರೇ ಸಾಟಿ.

ಡಾ.ರಾಜ್ ಅಭಿನಯದಲ್ಲಿ ಸಕ್ರಿಯವಾಗಿದ್ದ ದಿನಗಳಲ್ಲಿ, ಈ ನಟ ಶಿಶುವಿಹಾರದ ಹುಡುಗನಿಂದ 80 ರ ವಯಸ್ಸಿನ ಅಜ್ಜಿವರೆಗೂ ಎಲ್ಲರ ಮನಸೂರೆಗೊಂಡ ಮಹಾನ್ ನಟ. ನನ್ನದೇ ಉದಾಹರಣೆ ಹೇಳಬೇಕೆಂದರೆ, ನಾನಿನ್ನೂ ಆಗ ಆರನೇ ತರಗತಿಯಲ್ಲಿದ್ದಾಗ 70ರ ಹರೆಯದಲ್ಲಿದ್ದ ನನ್ನ ಅಜ್ಜಿ ಡಾ.ರಾಜ್‌ಕುಮಾರ್ ಫ್ಯಾನ್! ರಾಜ್‌ಕುಮಾರ್ ಸಿನಿಮಾ ಬಂದರಂತೂ ನಮ್ಮನ್ನು ನೆಪವಾಗಿರಿಸಿಕೊಂಡು ಸಿನಿಮಾ ನೋಡಲು ಕರೆದುಕೊಂಡು ಹೋಗಿಬಿಡುತ್ತಿತ್ತು ನಮ್ಮಜ್ಜಿ! ಸಿನಿಮಾದಲ್ಲಿ ಡಾ.ರಾಜ್ ಗೆ ಕಷ್ಟದ ಸನ್ನಿವೇಶ ಬಂದರೆ ಅಜ್ಜಿಯ ಸೀರೆ ತೊಯ್ದು ತೊಪ್ಪೆ. ಮನೆಗೆ ಬಂದ ಮೇಲೂ ಕೂಡ "ಆ ಧೋಳು ಮಾರಾಯ್ಗ ದೇವ್ರು ಅಂಥಾ ಕಷ್ಟಾ ಕೊಡಬಾರದಿತ್ತು" ಎಂದು ಮಮ್ಮಲ ಮರಗುತ್ತಿತ್ತು ಅಜ್ಜಿ. ಒಬ್ಬ ನಟನ ನಟನೆಗೆ ಇದಕ್ಕಿಂತ ಹೆಚ್ಚು ಗೌರವ-ಪುರಸ್ಕಾರ ಬೇಕೆ?

ಡಾ.ರಾಜ್ ಅವರನ್ನು ನಾನು ನೇರವಾಗಿ ನೋಡಿದ್ದು ಒಂದೇ ಒಂದು ಬಾರಿ. ಅದು 1982ರಲ್ಲಿ. ಆಗಿನ್ನೂ ನನಗೆ ಆರು ವರ್ಷ. ಗೋಕಾಕ್ ಚಳವಳಿಯ ಉತ್ತುಂಗದ ದಿನಗಳವು. ಗೋಕಾಕ್ ವರದಿಯನ್ನು ಜಾರಿಗೊಳಿಸಲು ಜನಜಾಗೃತಿ ಮೂಡಿಸುವಲ್ಲಿ ಡಾ.ರಾಜ್ ನೇತೃತ್ವದಲ್ಲಿ ಚಿತ್ರನಟರ ತಂಡ ನಮ್ಮೂರು ರಟ್ಟೀಹಳ್ಳಿಗೂ ಬಂದಿತ್ತು. ಬಸ್ಸಿನ ಮೇಲೆ ನಿಂತು "ನಾನಿರುವುದೆ ನಿಮಗಾಗಿ, ನಾಡಿರುವುದೆ ನಮಗಾಗಿ, ಕಣ್ಣೀರೇಕೆ, ಬಿಸಿಯುಸಿರೇಕೆ..." ಎಂದು ಕಂಚಿನ ಕಂಠದಿಂದ ಡಾ.ರಾಜ್ ಹಾಡಿದ ಹಾಡು, ಉರಿ ಬಿಸಿಲಲ್ಲೂ ತಂದೆಯ ಹೆಗಲೇರಿ ಕುಳಿತು ಕಣ್ತುಂಬಿಕೊಂಡ ಡಾ.ರಾಜ್ ಮುಖ 24 ಸುದೀರ್ಘ ವರ್ಷಗಳ ಬಳಿಕವೂ ಇನ್ನೂ ಹಸುರಾಗಿಯೇ ಇದೆ. ಹಾಗೆಯೇ ಇರುತ್ತದೆ.

ಇಂಥ ಮಹಾನ್ ನಟ ತಮ್ಮ ಮನೋಜ್ಞ ಅಭಿನಯ, ಸಿರಿಕಂಠದಿಂದ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ. ದೇವರು ಹಿರಿಯ ಚೇತನದ ಆತ್ಮಕ್ಕೆ ಚಿರಶಾಂತಿ ನೀಡಲಿ.

ದೇಹಕ್ಕೆ ಸಾವುಂಟು, ಆತ್ಮಕ್ಕಲ್ಲ. ಡಾ.ರಾಜ್‌ಕುಮಾರ್ ಎಂಬ ಧ್ರುವತಾರೆ ಕನ್ನಡ ಇರುವವರೆಗೂ ಅಜರಾಮರ.

ಡಾ.ರಾಜ್‌ಕುಮಾರ್ ಅಮರ್ ರಹೇ!

Saturday, April 15, 2006

ಐಟಿ ಚಳಿಗಾಲ ಅಡಗಲು ಸ್ಥಳವೆಲ್ಲಿ!

ಬೆಂಗಳೂರು ನಮ್ಮಂಥವರಿಗಲ್ಲಾರಿ...

ಎಂದು ಈಚೆಗೆ ಸ್ನೇಹಿತರೊಬ್ಬರು ಬೇಸರಿಸಿಕೊಂಡರು. ಬೆಂಗಳೂರಿನಲ್ಲಿ ಮನುಷ್ಯ ಜೀವನವೊಂದನ್ನು ಬಿಟ್ಟರೆ ಮಿಕ್ಕಿದ್ದೆಲ್ಲ ತುಟ್ಟಿ. ತರಕಾರಿ, ಹಾಲು, ಬಸ್ಸು, ಕರೆಂಟು, ಮನೆ ಬಾಡಿಗೆ, ಉಡುಗೆ-ತೊಡುಗೆ ಹೀಗೆ ಪಟ್ಟಿ ಇನ್ನೂ ಬೆಳೆಯುತ್ತಾ ಹೋಗುತ್ತದೆ.

ಹಾಗಾದರೆ ಶ್ರೀ ಸಾಮಾನ್ಯನಿಗೆ ಬೆಂಗಳೂರಿನಲ್ಲಿ ಜೀವಿಸುವ ಹಕ್ಕೇ ಇಲ್ಲವೇ? ಏನಾಯ್ತು ಬೆಂಗಳೂರಿಗೆ ಎಲ್ಲಿ ತಪ್ಪಿತು ತಾಳ?

ತಿಂಗಳಿಗೆ 10-12 ಸಾವಿರ ರೂಪಾಯಿ ಸಂಬಳ ಪಡೆಯುವ ನಮ್ಮಂಥ ಮಧ್ಯಮ ವರ್ಗದವರಿಗೆ ಬೆಂಗಳೂರು ಜೀವನ ಇಂದು ದುರ್ಭರವಾಗುತ್ತಿದೆ. ಚಿಕ್ಕ ಮನೆಗೆ ಯದ್ವಾತದ್ವಾ ಬಾಡಿಗೆ ಕೇಳುವ ಮಾಲಿಕ, ಸಮೀಪದ ಕೋಲಾರದಲ್ಲೇ ಬೆಳೆಯುವ ಕೆಜಿ ಟೊಮ್ಯಾಟೊಗೆ 12 ರೂಪಾಯಿ, ಹೊಸಕೋಟೆಯ ಸುತ್ತಮುತ್ತಲಿಂದ ರೈತರಿಂದ ಲೀಟರ್‌ಗೆ ಎಂಟು ರೂಪಾಯಿಗೆ ಹಾಲು ಖರೀದಿಸಿ ಜನರಿಗೆ 16 ರೂಪಾಯಿಗೆ ಮಾರುವ ಸರಕಾರ, ಎರಡು ಕಿಮಿ ಸ್ಟಾಪಿಗೆ 5 ರೂಪಾಯಿ ಪೀಕಿಸುವ ಕಂಡಕ್ಟರ್, 60 ಬೈ 40 ಸೈಟಿಗೆ 40 ರಿಂದ 50 ಲಕ್ಷ ಕೇಳುವ ಭೂಮಾಲಿಕ... ಏನಿದು ನಾನ್ ಸೆನ್ಸ್?

ಕೇಳಿದರೆ ಐಟಿ ಹಬ್, ಐಟಿ ಕ್ಯಾಪಿಟಲ್, ಐಟಿ ಸಿಟಿ, ಹೈಟೆಕ್ ಸಿಟಿ ಎಂದೆಲ್ಲಾ ಹೇಳುತ್ತಾರೆ. ಹಾಗಾದರೆ ಐಟಿಯಲ್ಲಿ ಕೆಲಸ
ಮಾಡುವವರಿಗೆ ಮಾತ್ರ ಬೆಂಗಳೂರೇ? ನಾವೂ ಮನುಷ್ಯರಲ್ಲವೇ?

ಬೆಂಗಳೂರಿನಲ್ಲಿ ಶ್ರೀಸಾಮಾನ್ಯನಿಗೆ ಈ ರೀತಿಯ ಅನ್ಯಾಯ ನೋಡುತ್ತಿದ್ದರೆ, ಅಲ್ಲೂ ಒಂದು ಸರಕಾರವಿದೆ, ಕಾನೂನು-ಸುವ್ಯವಸ್ಥೆ ಇದೆ ಎಂದೆನಿಸುವುದೇ ಇಲ್ಲ. ಅನಗತ್ಯವಾಗಿ ಏರುತ್ತಿರುವ ಬೆಲೆ ನಿಯಂತ್ರಣ ಸಾಧ್ಯವೇ ಇಲ್ಲವೇ?

ಬೆಂಗಳೂರಿಗೆ ಐಟಿ ಉದ್ಯಮ ಕಾಲಿಟ್ಟಂದಿನಿಂದ ಜನಜೀವನ ತುಟ್ಟಿಯಾಗಿಬಿಟ್ಟಿದೆ. ಇಲ್ಲಿ ಸಂಬಳ ಶುರುವಾಗುವುದೇ 30 ಸಾವಿರ ರೂಪಾಯಿಯಿಂದ. ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಸಾಫ್ಟ್‌ವೇರ್ ಎಂಜಿನಿಯರುಗಳಾಗಿದ್ದರಂತೂ ತಿಂಗಳಿಗೆ 60 ಸಾವಿರ ರೂಪಾಯಿ ಸಂಬಳ. ಅವರು ಎಷ್ಟು ಬೆಲೆ ತೆತ್ತಾದರೂ ತಮಗೆ ಬೇಕಾದುದನ್ನು ಕೊಂಡುಕೊಳ್ಳಬಲ್ಲರು. ಅದಕ್ಕೆ ಅಲ್ಲಿ ಎಲ್ಲ ವಸ್ತುಗಳ ಬೆಲೆ ಗಗನಮುಖಿ. ಬೇರೆಯವರ ಗತಿ?

ಈಚೆಗೆ ಫ್ಯಾಬ್ ಸಿಟಿ ಕರ್ನಾಟಕದ ಕೈ ತಪ್ಪಿದ್ದಕ್ಕೆ ಅನೇಕ ಮಾಧ್ಯಮಗಳು ಆಕಾಶವೇ ಕಳಚಿ ಬಿತ್ತು ಎನ್ನುವ ರೀತಿಯಲ್ಲಿ ಬರೆದವು. ಇದಕ್ಕೆ ಪ್ರತಿಯಾಗಿ ಆಂಧ್ರಪ್ರದೇಶಕ್ಕಿಂತ ನಮ್ಮ ರಾಜ್ಯ ಹೆಚ್ಚಿನ ಸೌಲತ್ತು ಕೊಡುವುದಾಗಿ ಸವಾಲಿನ ರೀತಿಯಲ್ಲಿ ಹೇಳಿದರು ನಮ್ಮ ಮುಖ್ಯಮಂತ್ರಿ.

ಫ್ಯಾಬ್ ಸಿಟಿ ಬಂದು ಅಗ್ಗದ ದರದಲ್ಲಿ ನಮ್ಮದೇ ನೀರು, ವಿದ್ಯುತ್ ಪಡೆದು ನಮ್ಮ ವಾತಾವರಣವನ್ನೇ ಕಲುಷಿತಗೊಳಿಸಿ ತಮಿಳರಿಗೋ, ತೆಲುಗರಿಗೋ ಇಲ್ಲವೇ ಬಿಹಾರದವನಿಗೋ ಉದ್ಯೋಗ ಕೊಟ್ಟು, ನಮ್ಮ ಜೀವನವನ್ನು ಅಧೋಗತಿಗಿಳಿಸುವ ಇಂಥ ಫ್ಯಾಬ್ ಸಿಟಿಗಳು ಇದ್ದರೆಷ್ಟು ಬಿಟ್ಟರೆಷ್ಟು. ನಾಗೇಶ ಹೆಗಡೆಯವರು ಬರೆದಂತೆ-ಫ್ಯಾಬ್ ಸಿಟಿಯಂಥ ಐಟಿ ಕಂಪನಿಗಳು ನಮ್ಮಲ್ಲಿಗೇ ಬರಬೇಕೆಂದೇನೂ ಇಲ್ಲ. ಕನ್ನಡಿಗರಿಗೆ ನಿಜವಾದ ಸಾಮರ್ಥ್ಯ ಇದ್ದರೆ ಫ್ಯಾಬ್ ಸಿಟಿಯಿದ್ದಲ್ಲಿಗೇ ನಮ್ಮವರು ಹೋಗುತ್ತಾರೆ.

ಈಗ ಪ್ರಾರಂಭವಾಗಿರುವ ಐಟಿ ಚಳಿಗಾಲ ಹೀಗೇ ಮುಂದುವರಿದರೆ ಅಡಗಲು ಸ್ಥಳವೆಲ್ಲಿ?

Wednesday, April 12, 2006

ಕೃತಜ್ಞತೆ


ಕನ್ನಡದ ಎಲ್ಲಾ ಬ್ಲಾಗಿಗರಿಗೂ ನಮಸ್ಕಾರ.

ಕನ್ನಡದ ನೆಟ್ ಜಗತ್ತಿನಲ್ಲಿ ಈಚೆಗೆ ಬ್ಲಾಗಿಂಗ್ ನಿಧಾನ ಸಂಚಲನ ಉಂಟು ಮಾಡುತ್ತಿದೆ. ಸಾಹಿತ್ಯ, ಹಾಸ್ಯ, ಶೈಕ್ಷಣಿಕ, ಗಂಭೀರ ಬ್ಲಾಗ್ ನೋಡಿ ಆಸ್ವಾದಿಸಿದ್ದ ನನಗೆ ಇದೀಗ ಈ ಜಗತ್ತಿನಲ್ಲಿ ಪಯಣಿಸುವ ಪಾಸ್ ಸಿಕ್ಕಿದೆ! ಬ್ಲಾಗ್ ಎಂದರೆ ವೆಬ್-ಲಾಗ್ ಎಂದಷ್ಟೇ ಗೊತ್ತಿದ್ದ ನನಗೆ, ಇದರಲ್ಲಿ ಒಂದು ಖಾತೆ ತೆರೆಯಲು ಒತ್ತಾಯಿಸಿದ ಗೆಳೆಯ ವಿಜಯಸಾರಥಿ ಮತ್ತು ನನ್ನದೇ ಬ್ಲಾಗ್ ರಚಿಸುವಲ್ಲಿ ಸಹಕರಿಸಿದ ಮತ್ತೊಬ್ಬ ಗೆಳೆಯ ಅವಿನಾಶ್ ಅವರಿಗೆ ಕೃತಜ್ಞತೆ.

ಜಗತ್ತಿನ ಚಲನವಲನಗಳನ್ನು ವಿಶ್ವಪುಟದಲ್ಲಿ ದಾಖಲಿಸುವ ಉದ್ದೇಶ ನನ್ನದು. ಇದಕ್ಕೆ ನಿಮ್ಮ ಸಲಹೆ-ಸಹಕಾರವೂ ಬೇಕು.

ಸಿರಿಗನ್ನಡಂ ಗೆಲ್ಗೆ.

-ವಿಶ್ವನಾಥ