Thursday, July 13, 2006

ಶಹಬ್ಬಾಶ್ ಮುಂಬೈಕಾರ್!

Mumbai back on track
ಮುಂಬೈನಲ್ಲಿ ಜೂನ್ 11, 2006 ರ ಸಂಜೆ 6-20 ರಿಂದ 6-32 ರ ವರೆಗೆ ಕೇವಲ ಹನ್ನೆರಡೇ ನಿಮಿಷಗಳಲ್ಲಿ 7 ಬಾರಿ ಸಂಭವಿಸಿದ ಭಾರಿ ಸ್ಫೋಟಕ್ಕೆ 200ಕ್ಕೂ ಹೆಚ್ಚು ಮುಗ್ಧ ಜನರು ಸಾವನ್ನಪ್ಪಿರುವ ಸುದ್ದಿ ಬೆಳಗಿನ ಪತ್ರಿಕೆಗಳಲ್ಲಿ ಅಚ್ಚಾಗಿ ಅದರ ಶಾಯಿ ಆರುವ ಮುನ್ನವೇ ಜುಲೈ 12ರ ಬೆಳಗ್ಗೆ ಅಲ್ಲಿನ ಜನಜೀವನ ಮಾಮೂಲಿ ಸ್ಥಿತಿಗೆ ಬಂದಾಗಿತ್ತು.

ಅದೇ ಮುಂಬೈ ಸೆಂಟ್ರಲ್-ವಿರಾರ್ ಮಾರ್ಗದ ರೈಲುಗಳಲ್ಲಿ ಜನ ಮತ್ತೆ ತಮ್ಮ "ರೋಜ್ ಕಾ ರೋಟಿ" ಗಾಗಿ ಪಯಣ ಬೆಳೆಸಿದರು. ನಿನ್ನೆಯ ಘಟನೆಗೆ ಬೆದರಿ ಯಾರೂ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಬಹುತೇಕ ಎಲ್ಲಾ ಕಚೇರಿಗಳಲ್ಲಿ ಮಹಿಳೆಯರೂ ಸೇರಿದಂತೆ ಹಂಡ್ರೆಡ್ ಪರ್ಸೆಂಟ್ ಅಟೆಂಡೆನ್ಸ್. ಅದೇ ಮುಂಬೈಕಾರರ ಸ್ಪೆಶಾಲಿಟಿ.

ಇದೇ ನಮ್ಮ ಬೆಂಗಳೂರಿನಲ್ಲಾಗಿದ್ದರೆ?

ಘಟನೆಯ ಹಿಂದೆಯೇ ಬಂದ್‌ಗೆ ಕರೆ. ಪೊಲೀಸರತ್ತ ಕಲ್ಲು ತೂರಾಟ, ಹಿಂಸಾಚಾರ. ಶಾಲಾ-ಕಾಲೇಜುಗಳಿಗೆ ರಜೆ. ಅಂಗಡಿ-ಮುಂಗಟ್ಟುಗಳಿಗೆ ಅಘೋಷಿತ ಬಂದ್. ಉಗ್ರಗಾಮಿಗಳ ದುಷ್ಕೃತ್ಯಕ್ಕಿಂತಲೂ ನಮ್ಮವರ ಉಪಟಳವೇ ಸಹಿಸದಂತಾಗಿ ಬಿಡುತ್ತಿತ್ತು.

ಮುಂಬೈನಲ್ಲಿ ನಿನ್ನೆ ಬಾಂಬ್ ಸ್ಫೋಟಿಸಿದಾಗಿನಿಂದ ನಡೆದ ಬೆಳವಣಿಗೆಗಳನ್ನು ನೋಡಿದರೆ ಮುಂಬೈಗರಿಂದ ನಾವು ಕಲಿಯಬೇಕಿರುವುದು ತುಂಬಾ ಇದೆ ಅನ್ನಿಸುತ್ತದೆ.

ಘಟನಾ ಸ್ಥಳಕ್ಕೆ ಪೊಲೀಸರು ತಲುಪುವ ಮೊದಲೇ ರೇಲ್ವೆ ಹಳಿಯ ಅಕ್ಕಪಕ್ಕದ ಮನೆಯಲ್ಲಿದ್ದವರು ಜನರ ನೆರವಿಗೆ ಧಾವಿಸಿಯಾಗಿತ್ತು. ತೀವ್ರವಾಗಿ ಗಾಯಗೊಂಡವರಿಗೆ ಕೆಲವರು ಸ್ಥಳದಲ್ಲೇ ಶುಶ್ರೂಷೆ ಮಾಡಿದರೆ, ಇನ್ನು ಹಲವರು ತಮ್ಮ ಮೊಬೈಲ್ ಫೋನ್ ನೀಡಿ ಅವರ ಮನೆಯವರೊಂದಿಗೆ ಮಾತನಾಡಲು ಸಹಾಯ ಮಾಡುತ್ತಿದ್ದರು. ಸತ್ತ ನತದೃಷ್ಟರ ಮೃತದೇಹಗಳನ್ನು ಸಾಗಿಸಲು ಕೆಲವರು ತಮ್ಮ ಮನೆಯಲ್ಲಿನ ಬೆಡ್ ಶೀಟ್ ಒದಗಿಸಿದರು, ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ದಾರಿಪಾಲಾಗಿದ್ದ ಜನರಿಗೆ ತಮ್ಮ ಸ್ವಂತ ವಾಹನಗಳಲ್ಲಿ ಮನೆ ಮುಟ್ಟಿಸಿದವರು ಇನ್ನಾರೋ.

ಒಬ್ಬರಿಗೊಬ್ಬರಿಗೆ ನಂಟಿಲ್ಲ. ಆದರೂ ಊರೆಲ್ಲಾ ನೆಂಟರು. ಮುಂಬೈ ಮಣ್ಣಿನ ಗುಣವೇ ಅಂಥದ್ದು. ಕ್ಷಣಮಾತ್ರದಲ್ಲಿ ಅದು ನಿಮ್ಮನ್ನು ಆತ್ಮೀಯರನ್ನಾಗಿಸಿಬಿಡುತ್ತದೆ.

ಸ್ಫೋಟದ ಗಾಯಾಳುಗಳಿಗೆ ರಕ್ತದ ಅಗತ್ಯವಿದೆ ಎಂದು ರೇಡಿಯೊ-ಟಿವಿಗಳಲ್ಲಿ ಪ್ರಸಾರವಾಗಿದ್ದೇ ತಡ. ಮುಂಬೈ ಆಸ್ಪತ್ರೆಗಳಿಗೆ ರಕ್ತದಾನಿಗಳ ಪ್ರವಾಹವೇ ಹರಿದು ಬಂತು. ರಕ್ತದ ಬಾಟಲಿಗಳು ತುಂಬಿ ತುಳುಕುವಷ್ಟು ರಕ್ತ ಭರ್ತಿಯಾಯಿತು. ಕೊನೆಗೆ ಆಸ್ಪತ್ರೆಯವರೇ "ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವಷ್ಟು ರಕ್ತ ಸಂಗ್ರಹವಾಗಿದೆ. ಸದ್ಯಕ್ಕೆ ರಕ್ತದ ಅವಶ್ಯಕತೆಯಿಲ್ಲ" ಎಂದು ಮಾಧ್ಯಮಗಳ ಮೂಲಕ ತಿಳಿಸಿ, ಒತ್ತಾಯಪೂರ್ವಕವಾಗಿ ರಕ್ತದಾನ ನಿಲ್ಲಿಸಬೇಕಾಯಿತು.

ಅದು ಮುಂಬೈಕಾರರ "ರಕ್ತ ಸಂಬಂಧ".

"ಎಷ್ಟೇ ಬಾಂಬ್ ಗಳು ಸ್ಫೋಟಗೊಂಡರೂ ನಾವು ಧೃತಿಗೆಡುವುದಿಲ್ಲ" ಎಂಬ ಸಂದೇಶ ಸಾರುವಂತೆ ಎಂದಿನಂತೆ ಇಂದೂ ತಮ್ಮ ಜೀವನ ಆರಂಭಿಸಿರುವ ಮುಂಬೈ ಜನರ ಸ್ಫೂರ್ತಿ ಕಂಡು ಉಗ್ರಗಾಮಿಗಳು ಕೈ ಕೈ ಹಿಸುಕಿಕೊಂಡಿರಬೇಕು. ಉಗ್ರರೂ ಮನುಷ್ಯರೇ. ಅವರಿಗೂ ಹೆಂಡತಿ, ಮಕ್ಕಳು, ತಂದೆ, ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮ ಇದ್ದಾರೆ. ಬಾಂಬ್ ದಾಳಿಗೆ ಸಿಲುಕಿ ಸತ್ತವರೂ ಕೂಡ ಇಂಥದೇ ಸಂಬಂಧವಿರುವ ಮನುಷ್ಯರು. ಇವರ ಬಂಧುಗಳ ಶಾಪ ದುಷ್ಟರಿಗೆ ತಟ್ಟದೇ ಇದ್ದೀತೆ? ಮುಂಬಾದೇವಿ ಅವರನ್ನು ಕ್ಷಮಿಸಿಯಾಳೆ?

ಮುಂಬೈನಲ್ಲಿ ಸ್ಫೋಟ ಸಂಭವಿಸಿದ ದಿನವೇ ಶ್ರೀನಗರದಲ್ಲೂ ಸ್ಫೋಟ ಸಂಭವಿಸಿದೆ. ಅಲ್ಲೂ ಕೂಡ ಮುಗ್ಧರ ಮೇಲೆ. ಆದರೆ ಅಲ್ಲಿನ ಜನರ ಪ್ರತಿಕ್ರಿಯೆ ಹೇಗಿತ್ತು ಎಂಬುದು ನಮಗೆಲ್ಲ ಗೊತ್ತೇ ಇದೆ.

ಮುಗ್ಧ, ಬಡ, ಅಲ್ಪಸಂಖ್ಯಾತ ಹಿಂದೂಗಳನ್ನು ರಾಕ್ಷಸರೂಪಿ ಉಗ್ರಗಾಮಿಗಳು ಸಾಲಾಗಿ ನಿಲ್ಲಿಸಿ ಗುಂಡು ಹೊಡೆದು ಸಾಯಿಸುತ್ತಿದ್ದರೆ, ಅಲ್ಲಿನ ಜನ ಬಹಿರಂಗವಾಗಿ ಎದೆ-ಎದೆ ಬಡಿದುಕೊಂಡು ಉಗ್ರರಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ.

ಅದೇ ಮುಂಬೈಗೂ-ಶ್ರೀನಗರಕ್ಕೂ ಇರುವ ವ್ಯತ್ಯಾಸ.

ಮುಂಬೈಕಾರರಿಗೆ ಶಹಬ್ಬಾಶ್ ಎಂದರೆ ಕಾಶ್ಮೀರಿಗಳಿಗೆ ಏನೆನ್ನಬೇಕು?

Wednesday, July 12, 2006

ಬಾಂಬೆ ಡೈಯಿಂಗ್!


ದೇಶದ ವಾಣಿಜ್ಯ ನಗರಿ ಬಾಂಬೆ ಅಲಿಯಾಸ್ ಮುಂಬೈ ವರುಣನ ರೌದ್ರಾವತಾರದಿಂದ ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೊಂದು ಅನಾಹುತ. ಬೃಹನ್ನಗರದ ಜೀವನಾಡಿ ಲೋಕಲ್ ಟ್ರೇನಿನಲ್ಲಿ ದಿನದ ಕೆಲಸ ಮುಗಿಸಿ ಸಂಜೆ ಮನೆಗೆ ತೆರಳುತ್ತಿದ್ದ ಮುಗ್ಧ ನಾಗರಿಕರ ಮಾರಣಹೋಮ. ಕೇವಲ ಹನ್ನೆರಡೇ ನಿಮಿಷಗಳಲ್ಲಿ ಏಳು ಕಡೆ ಏಕಕಾಲಕ್ಕೆ ಜುಲೈ 11, 2006 ರಂದು ಸಂಭವಿಸಿದ ಸ್ಫೋಟದಲ್ಲಿ ನೂರಾರು ಮುಗ್ಧರು ಮಸಣದ ಹಾದಿ ಹಿಡಿದಿದ್ದಾರೆ.

ಮೊನ್ನೆ ವಾರಾಣಸಿಯಾಯಿತು, ನಿನ್ನೆ ಬೆಂಗಳೂರಿನ ವಿಜ್ಞಾನ ಕೇಂದ್ರ, ಇವತ್ತು ಮುಂಬೈ, ಶ್ರೀನಗರ ನಾಳೆ ಯಾವ ಊರು, ಯಾವ ಸ್ಥಳದ ಮೇಲೆ ಮಾನವರೂಪಿ ರಾಕ್ಷಸರು ಬಲೆ ಹೆಣೆದಿದ್ದಾರೋ ಗೊತ್ತಿಲ್ಲ.

1993ರ ಸರಣಿ ಸ್ಪೋಟದ ಬಳಿಕ ಮುಂಬೈ ಕನಿಷ್ಠ 2-3 ದೊಡ್ಡ ಪ್ರಮಾಣದ ಸ್ಫೋಟ ಕಂಡಿದೆ. ಆದರೆ ಮುಂಬೈಕಾರರು ಧೃತಿಗೆಟ್ಟಿಲ್ಲ. ಅದನ್ನೇ ಅವರ ವೀಕ್‌ನೆಸ್ ಎಂದು ತಿಳಿದಿರುವ ಉಗ್ರಗಾಮಿಗಳ ಮತ್ತೆ ಮತ್ತೆ ಅವರ ಮೇಲೆ ದಾಳಿ ಮಾಡುತ್ತಿದ್ದಾರೆ.

ಬಾಂಬೆಯಲ್ಲಿ ಬಾಂಬ್ ಸ್ಫೋಟವಾಗಿದೆ, ಬಾಗ್ದಾದಿನಲ್ಲಿ ಸ್ಫೋಟಿಸಿದ ಗ್ರೆನೇಡ್ ದಾಳಿಗೆ ನೂರಾರು ಜನ ಸತ್ತಿದ್ದಾರೆ, ಮತ್ತೆಲ್ಲೋ ನಡೆದ ಉಗ್ರರ ಕೃತ್ಯಕ್ಕೆ ಇನ್ನೆಷ್ಟೋ ಜನ ಸತ್ತಿದ್ದಾರೆ ಎಂದು ಟಿವಿ ಸುದ್ದಿ ಕೇಳುತ್ತಿದ್ದರೆ, ನಾವು ಚಹಾ ಕುಡಿಯುತ್ತ ಹತ್ತರ ಜೊತೆಗೇ ಅದೂ ಹನ್ನೊಂದನೇ ಸುದ್ದಿಯಂಬಂತೆ ನೋಡುತ್ತ ಕುಳಿತು ಬಿಡುತ್ತೇವೆ. ಅಷ್ಟರ ಮಟ್ಟಿಗೆ ನಾವು ಭಾವನಾಶೂನ್ಯರಾಗಿಬಿಟ್ಟಿದ್ದೇವೆ.

ಇಂಥ ಸುದ್ದಿಗಳೆಲ್ಲ ನಮಗೆ ಚಹಾದ ಜೋಡಿ ಚೂಡಾದ್ಹಾಂಗ!

ದೇಶ, ಭಾಷೆ, ಗಡಿ, ಅಧಿಕಾರ, ರಾಜಕೀಯ ಎಲ್ಲಾ ಪ್ರತಿಷ್ಠೆಗಳ ಆಚೆ ನಿಂತು ನೋಡಿದರೆ ಮಾನವೀಯತೆಯ ಮೇಲೆ ನಡೆಯುತ್ತಿರುವ ನಿರಂತರ ವ್ಯಭಿಚಾರವಿದು.

ಈ ಮುಜಾಹಿದೀನ್ ಪಿಶಾಚಿಗಳಿಗೆ ಜನರನ್ನು ಕೊಲ್ಲಿ ಎಂದು ಆ ಖುದಾ ಆಜ್ಞಾಪಿಸಿದ್ದಾನಂತೆ. ಉಗ್ರಗಾಮಿ ಕೃತ್ಯದಂಥ ಘೋರ ಅಸ್ತ್ರದ ಮೂಲಕ ಇನ್ನೊಬ್ಬರ ಬದುಕುವ ಹಕ್ಕು ಕಸಿಯುವುದನ್ನು ಯಾವ ಖುದಾ ಮೆಚ್ಚುತ್ತಾನೆ?

ನಮಗೆ ಉಗ್ರರ ಆಕ್ರಮಣ ಇದೇನೂ ಹೊಸದಲ್ಲ. ಅನೇಕ ಬಾರಿ ಇಂಥ ದಾಳಿಗಳನ್ನು ಎದುರಿಸಿದ್ದೇವೆ, ಎದುರಿಸುತ್ತಿದ್ದೇವೆ. ಆದರೂ ನಮಗೆ ಇದರ ವಿರುದ್ಧ ಒಂದು ನಿರ್ಣಾಯಕವಾದಂಥ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದರೆ ನಾಚಿಗೆಗೇಡು.

ಇಲ್ಲಿ ಜನ ಸಾಮಾನ್ಯರು ತಮ್ಮದಲ್ಲದ ತಪ್ಪಿಗೆ ರೈಲು ಡಬ್ಬಿಗಳಲ್ಲಿ, ದೇವಸ್ಥಾನದಲ್ಲಿ, ವಿಜ್ಞಾನ ಮಂದಿರದಲ್ಲಿ ಛಿದ್ರ ಛಿದ್ರವಾಗಿ ಸಿಡಿದು ಸಾಯುತ್ತಿದ್ದರೆ ಅತ್ತ ದೆಹಲಿಯಲ್ಲಿ ಎ ಯಿಂದ ಝಡ್‌ವರೆಗಿನ ಏಳು ಸುತ್ತಿನ ಭದ್ರತಾ ಕೋಟೆಯಲ್ಲಿ ಗುಂಡು ನಿರೋಧಕ ಕವಚ ತೊಟ್ಟ ಗೃಹ ಸಚಿವ, ಪ್ರಧಾನಿಯಾದಿಯಾಗಿ ಆಳುವ-ವಿರೋಧ ಪಕ್ಷದ ನಾಯಕರು ಜನರಿಗೆ ಶಾಂತಿಯಿಂದಿರುವಂತೆ, ಇಂಥ ಸಂಕಷ್ಟವನ್ನು ಎದುರಿಸುವಂತೆ ಕರೆ ಕೊಡುತ್ತಾರೆ. ಇಂಥ ಕೆಲಸಕ್ಕೆ ಬಾರದ ಕರೆ ಕೊಡುವುದರಿಂದ ಅವರಪ್ಪನದೇನು ಗಂಟು ಹೋಗುವುದಿಲ್ಲವಲ್ಲ. ಏಕೆಂದರೆ ಇಂಥ ಸ್ಫೋಟಗಳಲ್ಲಿ ಅವರ ಹೆಂಡಿರು-ಮಕ್ಕಳು ಸಾಯುವುದಿಲ್ಲವಲ್ಲ. ಅದಕ್ಕೇ ಅವರಿಗೆ ಶ್ರೀಸಾಮಾನ್ಯನ ತಳಮಳವೂ ಅರ್ಥವಾಗುವುದಿಲ್ಲ.

ಭಾರಿ ಸಂಖ್ಯೆಯ ಭದ್ರತಾ ಪಡೆ, ಅಷ್ಟೇ ಚುರುಕಾದ ಗುಪ್ತಚರ ಪಡೆ ಹೊಂದಿರುವ ನಮ್ಮ ದೇಶಕ್ಕೆ ಇಂಥ ದಾಳಿಗಳನ್ನು ಮಾಡುವವರು ಯಾರು ಎಂಬುದು ಗೊತ್ತಾಗುವುದಿಲ್ಲವೇ? ಈ ಪ್ರಮಾಣದ ಘಟನೆಗಳು ಸ್ಥಳೀಯರ ನೆರವಿಲ್ಲದೇ ಕೇವಲ ವಿದೇಶಿಯರಿಂದ ಮಾತ್ರ ಸಾಧ್ಯ ಎಂದರೆ ನಂಬಲು ಸಾಧ್ಯವೇ ಇಲ್ಲ. ನಮ್ಮೊಳಗೇ ಇದ್ದು ಎಂಜಲು ಕಾಸಿಗೆ ನಮ್ಮವರ ಮೇಲೇ ಬಾಂಬು ಹಾಕುವ ದುಷ್ಟರನ್ನು ಹಿಡಿಯಲು ಸಾಧ್ಯವಾಗದ ನಮ್ಮ ರಕ್ಷಣಾ ವ್ಯವಸ್ಥೆ ಇದ್ದರೆಷ್ಟು ಬಿಟ್ಟರೆಷ್ಟು. ಒಬ್ಬ ಮಹಾಭ್ರಷ್ಟ ಸಚಿವ ಇಂಥ ಪ್ರದೇಶದಲ್ಲಿ ಹಾಯ್ದು ಹೋಗುತ್ತಾನೆ ಎಂದರೆ ಆತ ಬರುವುದಕ್ಕಿಂತ ಮುನ್ನ ಎಷ್ಟು ಬಾರಿ ರಕ್ಷಣಾ
ತಪಾಸಣೆಯಾಗಿರುತ್ತದೋ, ಅದಲ್ಲದೇ ಆತನ ರಕ್ಷಣೆಗೆ ಒಂದು ಪಡೆಯೇ ನಿಯೋಜಿತವಾಗಿರುತ್ತದೆ. ಹಾಗಿದ್ದರೆ ನಮ್ಮ ರಕ್ಷಣಾ ವ್ಯವಸ್ಥೆಯೇನಿದ್ದರೂ ಕೇವಲ ಗಣ್ಯರ-ಅತಿ ಗಣ್ಯರ ರಕ್ಷಣೆಗೆ ಮಾತ್ರ ಮೀಸಲಾಗಿದೆಯೇ? ಶ್ರೀ ಸಾಮಾನ್ಯರ ಜೀವಕ್ಕೆ ಬೆಲೆಯೇ ಇಲ್ಲವೇ ಎಂಬ ಪ್ರಶ್ನೆ ನನಗೆ ಸದಾ ಕಾಡುತ್ತದೆ.

ಇತ್ತ ಸ್ನೇಹದ ನಾಟಕವಾಡುವ ನಮ್ಮ ನೆರೆಯ ದೇಶ ಇನ್ನೊಂದೆಡೆ ಗಡ್ಡಧಾರಿ ಹೆ(ಮ)ಡ್ಡರ ಬೆನ್ನುಬಾಗುವಷ್ಟು ಮದ್ದುಗುಂಡು ಹೇರಿ ಇಂಥ ದಾಳಿಗೆ ಪ್ರೇರೇಪಿಸುತ್ತದೆ. ಬಳಿಕ ಸ್ಫೋಟವನ್ನು "ಉಗ್ರವಾಗಿ" ಖಂಡಿಸಿ ಮೊಸಳೆ ಕಣ್ಣೀರು ಸುರಿಸಿ ಪ್ರಚಾರ ಪಡೆಯುತ್ತದೆ.

ಸಮಸ್ಯೆಗೆ ಷಷ್ಠ್ಯಬ್ದಿ:

ನಮಗೆ ಸ್ವಾತಂತ್ರ್ಯ ಸಿಕ್ಕು 60 ವರ್ಷ ಆಗುತ್ತ ಬಂತು. ಕಾಶ್ಮೀರ ಸಮಸ್ಯೆಗೂ ಈಗ ಷಷ್ಠ್ಯಬ್ದಿ! ಆರು ದಶಕಗಳ ಅವಧಿಯಲ್ಲಿ ಈ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿರುವುದು ಮಾತ್ರ ಎರಡೂ ದೇಶಗಳ ರಾಜಕೀಯ ನಾಯಕರಲ್ಲಿನ ಇಚ್ಛಾಶಕ್ತಿಯನ್ನೇ ಪ್ರಶ್ನಿಸುವಂತಿದೆ. ಒಂದು ವಾದದ ಪ್ರಕಾರ ಈ ಸಮಸ್ಯೆ ಬಗೆಹರಿಯುವುದು ಉಭಯ ದೇಶಗಳ ನಾಯಕರಿಗೂ ಬೇಕಾಗಿಲ್ಲ. ಏಕೆಂದರೆ ಇದೊಂದು ಚಿನ್ನದ ಮೊಟ್ಟೆಯಿಡುವ ಕೋಳಿ.

ಪ್ರತಿಬಾರಿ ಸ್ಫೋಟವಾದಾಗಲೆಲ್ಲ ಈ ಕೋಳಿ ಮೊಟ್ಟೆಯಿಡುತ್ತದೆ, ಎರಡು ದೇಶಗಳ ಹಪಾಹಪಿಗಳು ಬಾಚಿಕೊಳ್ಳುತ್ತವೆ. ಇವತ್ತು ಮುಂಬೈ, ನಾಳೆ ಬೆಂಗಳೂರು, ನಾಡಿದ್ದು ದೆಹಲಿಯಲ್ಲಿ ಸ್ಫೋಟ ಸಂಭವಿಸುತ್ತಾ ಹೋಗುತ್ತವೆ. ನಾವು ಮಾತ್ರ ತಟ್ಟೆಯಲ್ಲಿ ಅನ್ನ ಕಿವುಚುತ್ತ ಇಂದಿನ ಸ್ಫೋಟಕ್ಕೆ ಇನ್ನೊಂದು ಸೇರ್ಪಡೆ ಎಂದು ಅದೇ ನಿರ್ವಿಣ್ಣ ಭಾವದಲ್ಲಿ ತುತ್ತು ಬಾಯಿಗಿಡುತ್ತೇವೆ.

ಮತ್ತೆ ಆಗಸ್ಟ್ 15 ಬಂದಾಗ ಭಾರತ ಮಾತಾ ಕಿ ಜೈ ಅನ್ನುತ್ತೇವೆ. ಆಗಸ್ಟ್ 15 ಪ್ರತಿವರ್ಷ ಬರುತ್ತದೆ-ಹೋಗುತ್ತದೆ; ಕಾಶ್ಮೀರ, ಸಿಯಾಚಿನ್ ವಿವಾದ ಇದ್ದಲ್ಲೇ ಇರುತ್ತವೆ, ಮಾರಣಹೋಮ ಮುಂದುವರಿಯುತ್ತಾ ಹೋಗುತ್ತದೆ.

ಭಾರತ ಮಾತಾ ಕಿ ಜೈ!

Friday, July 07, 2006

ಸಂಪ್ರದಾಯ ಎಂಬ ರಗಳೆ ಸೆಕ್ಯುಲರ್ ಎಂಬ ಬೊಗಳೆ!

Shabarimale Ayyappa
ಕಳೆದ 10-15 ದಿನಗಳಿಂದ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಎಲ್ಲಾ ಪತ್ರಿಕೆಗಳು, ಪ್ರಮುಖ ಇಂಗ್ಲಿಷ್ ಟಿವಿ ಚಾನೆಲ್‌ಗಳಲ್ಲಿ ಒಂದೇ ಮಂತ್ರ.

ಜಯಮಾಲಾ, ಜಯಮಾಲಾ, ಜಯಮಾಲಾ...

19 ವರ್ಷಗಳ ಹಿಂದೆ ನಟಿ ಜಯಮಾಲಾ ಅಯ್ಯಪ್ಪನ ಗರ್ಭಗುಡಿ ಪ್ರವೇಶ, ಶಬರಿಮಲೆ ದೇವಸ್ಥಾನದ ತಂ(ಕಂ)ತ್ರಿ ಉನ್ನಿಕೃಷ್ಣನ ಸ್ಫೋಟಕ ಜ್ಯೋತಿಷ್ಯ, ಅಲ್ಲಿನ ದೇವಾಲಯ ಮಂಡಳಿಯ ಉಗ್ರ ಹೇಳಿಕೆ, ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳ ಪತ್ರಿಕೆ-ಟಿವಿ ಚಾನೆಲ್‌ಗಳಲ್ಲಿ ಸಂಚಲನ. 'ಸೋ ಕಾಲ್ಡ್ ಸೆಕ್ಯುಲರ್' ರಾಜಕೀಯ ಪಕ್ಷಗಳಿಂದ ಥರಾವರಿ ಹೇಳಿಕೆ, ಪತ್ರಿಕೆಗಳ 'ಸಂಪಾದಕರಿಗೆ ಪತ್ರ' ಅಂಕಣದಲ್ಲಿ ಪರ-ವಿರೋಧ ಹೇಳಿಕೆ, ದೇಶದ ಎದುರು ಭಯಂಕರ ಸಮಸ್ಯೆಯೇ ಎದುರಾಗಿಬಿಟ್ಟಿದೆಯೇನೋ ಎಂಬಂಥ ಆತಂಕ, ಇಷ್ಟರಲ್ಲೇ ಜಗತ್ತೆ ಮುಳುಗಿ ಹೋಗುತ್ತಿದೆ ಎಂಬ ಅರ್ಥ ಬರುವಂತೆ ಟಿವಿಗಳಲ್ಲಿ ಸಂದರ್ಶನ-ವಿಶ್ಲೇಷಣೆ.

ಏನಿದು ಹುಚ್ಚಾಟ? ಇದಕ್ಕಿಲ್ಲವೇ ಕೊನೆ?

ಶಬರಿಮಲೆಯಲ್ಲಿ ಈಚೆಗೆ ನಡೆದ ಅಷ್ಟಮಂಗಳದಲ್ಲಿ, ಕವಡೆ ಹಾಕಿ ಅಳೆದು-ಸುರಿದು ಲೆಕ್ಕಹಾಕಿ, 'ಅಯ್ಯಪ್ಪಸ್ವಾಮಿಗೆ ಭಯಂಕರ ಕೋಪ ಬಂದುಬಿಟ್ಟಿದೆ. ಆತನ ಸಹನೆ-ತಾಳ್ಮೆಯನ್ನು ಜನ ದೌರ್ಬಲ್ಯವೆಂದು ತಿಳಿದಿದ್ದಾರೆ. ಸ್ವಾಮಿ ಕಣ್ಣು ಬಿಟ್ಟಾ ಅಂದ್ರೆ... ಎಲ್ಲರನ್ನೂ ಸುಟ್ಟು ಬೂದಿ ಮಾಡಿ ಬಿಟ್ಟಾನು' ಎಂದು ಚಿಕ್ಕಮಕ್ಕಳಿಗೆ ಬೆದರಿಸಿ ಬಾಯಿಗೆ ತುತ್ತು ತುರುಕುವಂತೆ ಉನ್ನಿಕೃಷ್ಣ ಉಲಿದಿದ್ದೇ ತಡ, ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳಲ್ಲಿ ಮಿಂಚಿನ ಸಂಚಲನವಾಗಿಬಿಟ್ಟಿತು.

ಇಷ್ಟಕ್ಕೂ, ಬೊಗಳೆ ಪಂಡಿತ ಉನ್ನಿಕೃಷ್ಣನಿಗೆ ಜ್ಞಾನೋದಯವಾಗಿ 19 ವರ್ಷಗಳ ಹಿಂದೆ ನಡೆದ ಸಂಗತಿಯನ್ನು ಕರಾರುವಾಕ್ಕಾಗಿ ಹೇಳಿಬಿಟ್ಟನೇ?

ಈಚೆಗೆ ಜಯಮಾಲಾ ಅವರೇ ಸ್ವತಃ ತಾವು 1987ರಲ್ಲಿ ಶಬರಿಮಲೆ ದೇವಸ್ಥಾನ ಪ್ರವೇಶಿಸಿದ್ದರ ಬಗ್ಗೆ ದೇವಾಲಯದ ಮಂಡಳಿಗೆ ಪ್ರಾಮಾಣಿಕವಾಗಿ ತಿಳಿಸಿದ್ದೇ ಆಕೆಗೆ ಮುಳುವಾಯಿತು. ಇದನ್ನೇ ನೆಪವಾಗಿರಿಸಿಕೊಂಡ ಉನ್ನಿಕೃಷ್ಣ ಮಹಾ ತತ್ವಜ್ಞಾನಿಯಂತೆ ಅಯ್ಯಪ್ಪನಿಗೆ ಅಪಚಾರವಾಗಿದೆ ಎಂದು ಹೇಳಿಬಿಟ್ಟ.

ಇಲ್ಲಿ ನಿಜಕ್ಕೂ ಅಪಚಾರವಾಗಿದ್ದು ಅಯ್ಯಪ್ಪನಿಗಲ್ಲ, ಜಯಮಾಲಾಗೆ, ಇಡೀ ಸ್ತ್ರೀ ಸಂಕುಲಕ್ಕೆ.

Jayamalaಇಂಥದೇ ಕೋಮಿನ ಜನ ತನ್ನಲ್ಲಿಗೆ ಬರಬೇಕು, ನಿರ್ದಿಷ್ಟ ಲಿಂಗದ, ನಿರ್ದಿಷ್ಟ ವಯಸ್ಸಿನ (ಶಬರಿಮಲೆಯಲ್ಲಿರುವಂತೆ 10-50 ವಯಸ್ಸಿಗೆ ಮಹಿಳೆಯರಿಗೆ ದೇವಾಲಯದ ಪ್ರವೇಶ ನಿಷಿದ್ಧ)ವರು ಮಾತ್ರ ಸಾನಿಧ್ಯಕ್ಕೆ ಬರಬೇಕು ಎಂದು ಯಾವ ದೇವರಾದರೂ ಎಲ್ಲಿಯಾದರೂ, ಯಾವ ಸರಕಾರಕ್ಕೆ ಅಥವಾ ದೇವಸ್ಥಾನ ಮಂಡಳಿಗೆ ಕರಾರು ವಿಧಿಸಿ, ಛಾಪಾ ಕಾಗದದ ಮೇಲೆ ಸಹಿ ಹಾಕಿಸಿಕೊಂಡಿದ್ದಾನೆಯೇ?

ಇದೆಲ್ಲ ದೇವರ ಹೆಸರಿನಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮಾಡಿಕೊಂಡ ಕಾನೂನು; ದೇವರಿಗೆ ಮಾಡಿದ, ಮಾಡುತ್ತಿರುವ ಅವಹೇಳನ.

ದೇಶದಲ್ಲೇ ಅತ್ಯಂತ ಹೆಚ್ಚಿನ ಅಕ್ಷರಸ್ಥರನ್ನು ಹೊಂದಿರುವ ಕೇರಳ ಇಂಥದೇ ಮಂತ್ರ-ತಂತ್ರಗಳ ಮೌಢ್ಯದಿಂದಾಗಿ ಇನ್ನೂ ಹಿಂದುಳಿದಿದೆ. ತನ್ನ ಹಿಂದುಳಿದ ಈ ವೈರಸ್ ಅನ್ನು ಇತರರಿಗೂ ಹರಡುತ್ತಿದೆ.

ರಗಳೆ ರಾಜಕೀಯ:

ಅಪ್ಪಟ ಸೆಕ್ಯುಲರ್ ಎಂದು ಹೇಳಿಕೊಳ್ಳುವ ರಾಹುಕಾಲ, ಗುಳಿಕ ಕಾಲ, ಯಮಗಂಡಕ ಕಾಲ ಗಳನ್ನು ನೋಡಿಯೇ ಹೇಳಿಕೆ ನೀಡುವ, ದಿನಬೆಳಗಾದರೆ ಕುರ್ಚಿ ಉಳಿಸಿಕೊಳ್ಳಲು ಮಠಗಳನ್ನು ಸುತ್ತಿ ಸ್ವಾಮಿಗಳ ಕಾಲು ಒತ್ತುವ ರಾಜಕೀಯ ಪುಢಾರಿಗಳು, ಊರಿಗೊಂದು ದಾರಿಯಾದರೆ ತಮಗೇ ಇನ್ನೊಂದು ದಾರಿಯಂತಿರುವ ಬುದ್ಧಿವಾ(ವ್ಯಾ)ದಿಗಳು ಜಯಮಾಲಾ ವಿವಾದ ಹುಟ್ಟಿದ್ದೇ ತಡ ಚಿತ್ರ-ವಿಚಿತ್ರ ಹೇಳಿಕೆ ಕೊಡಲು ಆರಂಭಿಸಿದ್ದಾರೆ. ಸ್ವಯಂಘೋಷಿತ ಈ ಸೆಕ್ಯುಲರ್ ಗಳು ಇಂಥದೇ ವಿವಾದ ಬೇರೆ ಅಲ್ಪಸಂಖ್ಯಾತ ಸಮುದಾಯದಲ್ಲಾಗಿದ್ದರೆ ತಮಗೂ-ಅದಕ್ಕೂ ಸಂಬಂಧವೇ ಇಲ್ಲದಂತೆ ಜಾಣಗಿವುಡರಾಗಿಬಿಡುತ್ತಿದ್ದರು. ಇದೇ ಇವರ ಓಟ್ ಬ್ಯಾಂಕ್ ರಾಜಕೀಯ.

ಸಂಪ್ರದಾಯವೆಂಬ ಅರ್ಥವಿಲ್ಲದ, ವೈಜ್ಞಾನಿಕವಲ್ಲದ ಬೊಗಳೆ, ಸ್ವಾರ್ಥದ ರಾಜಕೀಯ ರಗಳೆಗಿಂತ ಪ್ರಜ್ಞಾಪೂರ್ವಕವಾಗಿ ಯೋಚಿಸಿದರೆ ಜಯಮಾಲಾ ವಿವಾದ ಒಂದು ಸುದ್ದಿಯೇ ಅಲ್ಲ.

ಏನಂತೀರಿ?