Wednesday, April 19, 2006

ಕನ್ನಡಕೆ ಕಾದಾಡು ಇಂಗ್ಲೀಷು ಕಂದ!

ಕ್ಕಳಿಗೆ ಶಿಕ್ಷಣ ಇಂಗ್ಲಿಷ್ ಮಾಧ್ಯಮದಲ್ಲಿರಬೇಕೆ ಅಥವಾ ಕನ್ನಡದಲ್ಲಿರಬೇಕೇ ಎಂಬ ಬಗ್ಗೆ ಕೆಲ ದಿನಗಳ ಹಿಂದೆ ರಾಜ್ಯಾದ್ಯಂತ ಬಿರುಸಿನ ಚರ್ಚೆ ನಡೆದಿದ್ದಾಯಿತು. ಕೆಲ ಸಾಹಿತಿಗಳು ಸಂಪೂರ್ಣ ಕನ್ನಡದ ಪರ ವಾಲಿದರೆ ಇನ್ನು ಕೆಲವರು ಮೊದಲನೇ ತರಗತಿಯಿಂದಲೇ ಇಂಗ್ಲಿಷ್ ಬೇಕೇ ಬೇಕು ಎಂದರು.

ತಮಾಷೆಯೆಂದರೆ, ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕೆಂಬ ಕಟ್ಟಾ ನಿಲುವು ಹೊಂದಿದವರು ಹೊಟ್ಟೆಪಾಡಿಗೆ ಇಂಗ್ಲಿಷ್ ಅಪ್ಪಿಕೊಂಡವರು. ಹುಟ್ಟಿದ್ದು ಕರ್ನಾಟಕದಲ್ಲಿಯಾದರೂ ಕಲಿತದ್ದು ಇಂಗ್ಲೆಂಡಿನಲ್ಲಿ, ವೃತ್ತಿಯಲ್ಲಿ ಆಯ್ದುಕೊಂಡಿದ್ದು ಇಂಗ್ಲಿಷ್ ಬೋಧನೆಯನ್ನು. ಆದರೆ ಪ್ರಚಾರಕ್ಕಾಗಿ ಅವರು ಮಾಡಿದ ಚಳವಳಿಯೆಲ್ಲ ಕನ್ನಡಕ್ಕಾಗಿಯೇ!

ಸ್ವಲ್ಪ ವಾಸ್ತವದತ್ತ ಇಣುಕಿ ನೋಡಿದರೆ, ಇಂಥ ದ್ವಂದ್ವ ನೀತಿ ಗ್ರಾಮೀಣ ಪ್ರದೇಶದ ನಮ್ಮ ಯುವ ಸಮೂಹವನ್ನು ಹೇಗೆ ಹೈರಾಣ ಮಾಡಿದೆ ಎಂಬುದು ಅರಿವಾಗುತ್ತದೆ. ನಮ್ಮ ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆದರೆ ವಿಷಯವನ್ನು ತಿಳಿದುಕೊಳ್ಳುವಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಕೇವಲ ವಿಷಯ ತಿಳಿದುಕೊಂಡವರಿಗೆ ಇಂದು ಕೆಲಸ ಸಿಗುತ್ತದೆಯೇ ಎಂಬುದು ಪ್ರಶ್ನೆ. ಮಾತೃಭಾಷೆಯಲ್ಲೇ ಸಾಧನೆಗೈದ ಚೀನಾ, ಜಪಾನ್ ಉದಾಹರಣೆ ನೀಡುವವರು, ಅಲ್ಲಿನ ಸರಕಾರದ ನೀತಿಯನ್ನೂ ತಿಳಿದುಕೊಳ್ಳಬೇಕಾದ್ದು ಅಗತ್ಯ. ಈ ದೇಶಗಳಲ್ಲಿ ನೀವು ಒಳ್ಳೆಯ ಕೆಲಸ ಗಿಟ್ಟಿಸಬೇಕೆಂದರೆ, ನಿಮಗೆ ಇಂಗ್ಲಿಷ್ ಗೊತ್ತಿರಲೇ ಬೇಕೆಂದೇನೂ ಇಲ್ಲ. ಮಾತೃಭಾಷೆಗೆ ಅಲ್ಲಿ ಅಂಥ ಸ್ಥಾನಮಾನವಿದೆ.

5-6 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಜಪಾನ್ ವಾಣಿಜ್ಯ ಮಂಡಳಿಯ ಪತ್ರಿಕಾಗೋಷ್ಠಿಗೆ ಹೋದಾಗ ನನಗೆ ಆದ ಅನುಭವವೇ ಬೇರೆ. ಅಲ್ಲಿ ಬಂದಿದ್ದಾತ ಜಪಾನಿನ ದೊಡ್ಡ ಉದ್ಯಮಿ, ವ್ಯಾಪಾರ ನಿಮಿತ್ತ ಹಲವಾರು ದೇಶಗಳನ್ನು ಸುತ್ತಿದವ. ಸಭಿಕರನ್ನುದ್ದೇಶಿಸಿ ನಾಲ್ಕು ಮಾತನಾಡುವ ಸಂದರ್ಭ ಬಂದಾಗ, ಆತ ಮಾತನಾಡಿದ ಇಂಗ್ಲಿಷ್, ಕನ್ನಡ ಮಾಧ್ಯಮದಲ್ಲಿ ಕಲಿಯುವ ನಮ್ಮೂರಿನ ಹೈಸ್ಕೂಲು ಹುಡುಗನದ್ದಕ್ಕಿಂತ ಕೆಟ್ಟದಾಗಿತ್ತು. ಕೊನೆಗೆ ದುಭಾಷಿ ಆತನ ಸಹಾಯಕ್ಕೆ ಬರಬೇಕಾಯಿತು. ಆದರೂ ಅಲ್ಲಿ ಆತ ಯಶಸ್ವಿ ಉದ್ಯಮಿ. ಜಪಾನಿ ಭಾಷೆಗೆ ಅಲ್ಲಿ ಅಂಥ ಮಹತ್ವದ ಸ್ಥಾನವಿದೆ.

ಜಾಗತೀಕರಣದ ಪ್ರಬಲ ಅಲೆಗಳು ಭಾರತದ ಪ್ರತಿಯೊಂದು ಕ್ಷೇತ್ರಗಳಿಗೂ ಅಪ್ಪಳಿಸುತ್ತಿವೆ. ಇಂಥ ವಾತಾವರಣವಿರುವಾಗ
ನಿಮಗೆ ಕೇವಲ ವಿಷಯ ಜ್ಞಾನವಿದ್ದರಷ್ಟೇ ಸಾಲದು, ಅದನ್ನು ಇಂಗ್ಲಿಷಿನಲ್ಲಿ ಪ್ರಸ್ತುತಪಡಿಸುವ, ಅರಳು ಹುರಿದಂತೆ ಮಾತನಾಡುವ ತಾಕತ್ತಿದ್ದರೆ ಮಾತ್ರ ಮುಂದೆ ಸಾಗಲು ಅವಕಾಶ ಇಲ್ಲದಿದ್ದರೆ ನೀವು ರಿಜೆಕ್ಟೆಡ್ ಪೀಸ್!

ಹಳ್ಳಿಯ ಮಕ್ಕಳಿಗಿರುವಷ್ಟು ಸಾಮಾನ್ಯ ಜ್ಞಾನ ಪೇಟೆಯವರಿಗಿರುವುದಿಲ್ಲ. ಇವರದೇನಿದ್ದರೂ ಪುಸ್ತಕ ಜ್ಞಾನ. ಆದರೆ ಇಂಗ್ಲಿಷ್ ಇವರ ಪ್ಲಸ್ ಪಾಯಿಂಟ್. ಪರಿಸ್ಥಿತಿ ಹೀಗಿರುವಾಗ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಉತ್ತಮ ಇಂಗ್ಲಿಷ್ ಹೇಳಿಕೊಟ್ಟರೆ ಮುಂದೆ ಅವರು ಜಾಗತೀಕರಣದ ಪ್ರವಾಹದಲ್ಲಿ ಏಕಾಂಗಿಯಾಗುವ ಭಯ ಇರುವುದಿಲ್ಲ. ಏನಂತೀರಿ?

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ:

ಈಗ ಎಲ್ಲವೂ ಸರ್ಟಿಫಿಕೇಟ್ ಜಮಾನಾ. ನಾನು ಇಂಥವರ ಮಗ ಎಂದು ನಾನೇ ಹೇಳಿದರೆ ನಡೆಯದು; ಅದನ್ನು ತಹಸೀಲ್ದಾರ ತನ್ನ ಮುದ್ರೆ ಒತ್ತಿ ಪ್ರಮಾಣೀಕರಿಸಬೇಕು. ಹೀಗಿರುವಾಗ ಬೇರೆ ಯಾವ ಭಾರತೀಯ ಭಾಷೆಗಳಿಗಿಂತಲೂ ಯಾವ ರೀತಿಯಲ್ಲೂ ಕಡಿಮೆಯಿಲ್ಲದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲು ಒತ್ತಾಯಿಸುವುದರಲ್ಲಿ ತಪ್ಪೇನು? ಈಚೆಗೆ ಈ ವಿಷಯದ ಬಗ್ಗೆ ಕೆಲ ಕನ್ನಡ ಸಾಹಿತಿಗಳ ಕದನ, ಕುತೂಹಲದ ಘಟ್ಟ ತಲುಪಿತ್ತು. ತಮಾಷೆಯೆಂದರೆ ಅದರಲ್ಲಿ ನೇರವಾಗಿ ದಾಳಿ, ಪ್ರತಿದಾಳಿ ಮಾಡುತ್ತಿದ್ದ ಇಬ್ಬರೂ ಸಾಹಿತಿಗಳು ಹೊಟ್ಟೆಪಾಡಿಗೆ ಇಂಗ್ಲಿಷ್ ಮೊರೆ ಹೋದವರು.

ಹಣಕ್ಕಾಗಿ ಇವರು ಮಾಡಿದ್ದು ಇಂಗ್ಲಿಷ್ ಸೇವೆಯನ್ನು, ಹೆಸರಿಗೆ, ಪ್ರಚಾರಕ್ಕಾಗಿ ಬಳಸಿದ್ದು ಮಾತ್ರ ಕನ್ನಡವನ್ನು!

ಕನ್ನಡಕೆ ಹೋರಾಡು ಇಂಗ್ಲೀಷು ಕಂದ
ಕನ್ನಡವಾ ಕಾಪಾಡು ನನ್ನ ಆನಂದ!

13 Comments:

At 4:59 PM, April 20, 2006, Blogger Anveshi said...

ಸೂಚನೆ: ನಾನು ಬರೆಯುವ ನೂರಾ ಒಂದನೇ ಕಾಮೆಂಟ್ ಅಂತ ಇದು ತಿಳಿದುಕೊಂಡು ಇದನ್ನೇ ನೂರೊಂದು ಸಲ ಓದಿಕೊಳ್ಳಿ.

ಯಾಕೆಂದರೆ ನಾನು ಕೂಡ ನಿಮ್ಮ ಸಂತಾನದವ. ಅಂದರೆ ನಮ್ಮ ಮಕ್ಕಳ ಭವಿಷ್ಯ ಭದ್ರವಾಗಿರಬೇಕಾದರೆ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಬೋಧನೆ ಆರಂಭವಾಗಬೇಕು ಎಂದು ಹೇಳುವವ.

ಇದಕ್ಕೆ ನನ್ನ ಜೀವನದ ಸ್ವಾನುಭವವೇ ಉದಾಹರಣೆ. ಕನ್ನಡ ನಾಡಿನಲ್ಲೇ ಉನ್ನತ ಕೆಲಸ ನಿಮಗೆ ದೊರೆಯಬೇಕೇ? ಅರಳು ಹುರಿದಂತೆ ಇಂಗ್ಲಿಷ್ ಮಾತನಾಡುವುದು ಅತ್ಯವಶ್ಯಕ. ಈಗ ಬೆಂಗಳೂರನ್ನೇ ನೋಡಿ. ದೊಡ್ಡ ದೊಡ್ಡ ಐಟಿ, ಬಿಟಿ ಕಂಪನಿಗಳು ಅಲ್ಲಿವೆ. ಅಲ್ಲಿಯೂ ಕೆಲವು ಕನ್ನಡಿಗರು ಉನ್ನತ ಹುದ್ದೆಗಳಲ್ಲಿ ಮೆರೆಯುತ್ತಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತೇ? ಅವರು ಇಂಗ್ಲಿಷ್ ಪಟಪಟನೆ ಮಾತನಾಡುತ್ತಾರೆ, ಕನ್ನಡ ಬಿಟ್ಟು ಬೇರೆಲ್ಲಾ ಭಾಷೆ ಬರುತ್ತದೆ!

ಇಂದಿನ ದಿನಗಳಲ್ಲಿ ಹಣವೇ ಮುಖ್ಯವಾಗಿರುವಾಗ ಸ್ಥಳೀಯ ಕಂಪನಿಗಳ ಉದ್ಯೋಗದ ಬದಲು ಕೈತುಂಬಾ ಅಲ್ಲದಿದ್ದರೂ ಜೀವನಕ್ಕಾಗುವಷ್ಟು ಸಂಪಾದನೆಗೆ ಅವಕಾಶ ಮಾಡಿಕೊಡಬಲ್ಲ ಬಹುರಾಷ್ಟ್ರೀಯ ಕಂಪನಿಗಳು, ಅವುಗಳ ಬಿಪಿಒ ಮುಂತಾದೆಡೆ ಕೆಲಸ ದೊರೆಯಬೇಕೆ ? ಇಂಗ್ಲಿಷ್ ಬೇಕೇ ಬೇಕು.

ಹಾಗಂತ ಅಚ್ಚ ಕನ್ನಡದ ಸರಕಾರಿ ಉದ್ಯೋಗ ಬೇಕೆ? ಪ್ರತಿಭೆ ಇದ್ದರೂ ಮೀಸಲಾತಿ ಎಂಬ ಸಾಗರವನ್ನು ಲಂಚ-ರುಷುವತ್ತು ನೀಡಿ ದಾಟಿ ಬರಬೇಕು...!

ಹಾಗಂತ ನಾನೇನೂ ಕನ್ನಡ ವಿರೋಧಿಯಲ್ಲ. ಈಗಲೂ ಇಂಗ್ಲಿಷನ್ನು ಪ್ರೀತಿಸಲೂ ಇಲ್ಲ. ಇದಕ್ಕಾಗಿ ಕನ್ನಡದಲ್ಲೇ ಬೊಗಳೆ ಬಿಟ್ಟು ರಗಳೆ ಮಾಡುತ್ತಿರುವೆ.

ಇನ್ನು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ವಿಷಯ. ಏನು ಮಾಡಬೇಕಿದ್ದರೂ ಅದಕ್ಕೆ ಪ್ರತಿಫಲ ಇರಬೇಕು ಎನ್ನುವ ಕಾಲವಿದು. ಹೀಗಿರುವಾಗ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತರೆ ಕನ್ನಡಿಗರಿಗೆ ದೊರೆಯುವ ಪ್ರತಿಫಲ ಏನು? ತಮಿಳಿಗೆ ಶಾಸ್ತ್ರೀಯ ಸ್ಥಾನ ಮಾನ ಸಿಕ್ಕಿ ಆದ ಪ್ರಯೋಜನ ಏನು?

 
At 5:04 PM, April 20, 2006, Blogger Anveshi said...

ಹ್ಹ ಹ್ಹ ಹ್ಹ.... ನಾನು ರಗಳೆ ಮಾಡಿದ್ದು ಏನೂಂತ ಗೊತ್ತಾಯ್ತಾ? ನಂಗಂತೂ ಗೊತ್ತಾಗಿಲ್ಲ! ಅದ್ಕೆ ಸಣ್ಣದೊಂದು ಕರೆಕ್ಷನ್..... ನನ್ನ ಕಾಮೆಂಟ್ ಲಿಂಕ್ ನೇರವಾಗಿ ಆಂಗ್ಲ ಪತ್ರಿಕೆಗೆ ಹೋಗುತ್ತದೆ! ಅದು ನಾನು ಮಾಡುವ ರಗಳೆ ಅಲ್ಲ. ನನ್ನದೇನಿದ್ದರೂ ಕನ್ನಡದ ಬೊಗಳೆ!

 
At 6:22 PM, April 20, 2006, Blogger Sarathy said...

ಆಂಗ್ಲ ಭಾಷೆ ಮೇಲೆ ನಾವು ಬಹಳಷ್ಟು ಅವಲಂಬಿತರಾಗಿದ್ದೇವೆ ಎಂದರೆ ಇದರ ಅರ್ಥ ನಮ್ಮ ದೇಶ ಇನ್ನೂ ಸ್ವಾವಲಂಬಿಯಾಗಿಲ್ಲ ಎಂದೇ ಆಗುತ್ತದೆ. ಅದೇನೇ ಇರಲಿ, ಪ್ರಸ್ತುತ ಭಾರತದಲ್ಲಿ ಆಂಗ್ಲ ಭಾಷೆ ಅನಿವಾರ್ಯವಾಗಿಬಿಟ್ಟಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಏಕೆ, ಹೇಗೆ ಎಂಬ ಚರ್ಚೆಯನ್ನು ಮುಂದೆ ನಡೆಸಬಹುದು. ಆದರೆ ಒಂದು ಮಾತು,... ಶಿಕ್ಷಣ ಯಾವುದಿದ್ದರೂ ಮಾತೃಭಾಷೆಯಲ್ಲಿದ್ದರೇ ಚೆನ್ನ. ಜಗತ್ತಿನ ಅಆಇಈ ಅರಿಯಲು ತಾಯ್ನುಡಿಗೆ ಮಿಗಿಲಾದದ್ದುಂಟೆ. ಭಾರತದಲ್ಲಿ ಬಹುತೇಕ ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುವಂತೆ, ಶಾಲಾ ಮಟ್ಟದಲ್ಲಿ ಮಾತೃಭಾಷಾ ಮಾಧ್ಯಮದ ಮೂಲಕ ಶಿಕ್ಷಣ ನಡೆಯಬೇಕು ಹಾಗೂ ಜತೆಜತೆಗೆ ಆಂಗ್ಲ ಭಾಷೆ ಕಲಿಕೆಯನ್ನೂ ಕಡ್ಡಾಯಗೊಳಿಸಬೇಕು ಎಂಬುದು ನನ್ನ ಅನಿಸಿಕೆ.

 
At 4:49 PM, April 21, 2006, Blogger Vishwanath said...

ಅಸತ್ಯಾನ್ವೇಷಿಗಳು ಬರೆದ ಪ್ರತಿಕ್ರಿಯೆಯನ್ನು ಅವರೇ ಹೇಳಿದಂತೆ ನೂರಾ ಒಂದು ಸಲ ಓದಿದ್ದೇನೆ. ಕನ್ನಡನಾಡಿನಲ್ಲಿ

ಇಂಗ್ಲಿಷ್ ಅರಿಯುವಿಕೆ ಬಗ್ಗೆ ಅವರು ಹೇಳಿದ್ದರಲ್ಲಿ ಉತ್ಪ್ರೇಕ್ಷೆ ಎಂಬುದು ಇಲ್ಲವೇ ಇಲ್ಲ. ಇಂದು ಇಂಗ್ಲಿಷ್ ಇದ್ದರೆ ಮಾತ್ರ

ಎಲ್ಲ, ಇಲ್ಲದಿದ್ದರೆ ಏನೂ ಇಲ್ಲ ಎನ್ನುವ ಮನೋಭಾವ ಬೆಳೆದಿದೆ. ನಮ್ಮ ದೇಶದ ಆಳುವವರ ನೀತಿಯಿಂದಾಗಿ ಇಂಗ್ಲಿಷ್

ಅನಿವಾರ್ಯವೂ ಆಗಿಬಿಟ್ಟಿದೆ. ಕನ್ನಡಿಗರಾದ ನಮಗೆ ಕನ್ನಡದ ಮೇಲೆ ನಮಗೆ ಎಂದೆಂದಿಗೂ ಅಭಿಮಾನ ಇದ್ದೇ

ಇರುತ್ತದೆ, ಆದರೆ ಈ ಅಭಿಮಾನ ನಮ್ಮ ಹೊಟ್ಟೆ ತುಂಬಿಸುವುದಿಲ್ಲ ಇದಕ್ಕೆ ಇಂಗ್ಲಿಷ್ ಬೇಕೇ ಬೇಕು. ಇಂಗ್ಲೆಂಡಿನಲ್ಲಿ

ಕಲಿತು ಭಾರತದಲ್ಲಿ ಇಂಗ್ಲಿಷ್ ಕಲಿಸಿದವರು ಕನ್ನಡದ ಬಗ್ಗೆ ಏನೇ ಹೇಳಲಿ, ಗ್ರಾಮೀಣ ಪ್ರದೇಶದಿಂದ ಬಂದ ನಾವು,

ನಮ್ಮ ಮಕ್ಕಳೂ ಕಷ್ಟ ಪಡವುದು ಬೇಡದಿದ್ದರೆ ಒಂದನೇ ತರಗತಿಯಿಂದಲೇ ಶಿಸ್ತುಬದ್ಧ ಇಂಗ್ಲಿಷ್ ಕಲಿಕೆ ಅನಿವಾರ್ಯ.

ಇನ್ನು ಶ್ರೀಮಂತ ಭಾಷೆಯಾದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗುವ ಬಗ್ಗೆ ಹೋರಾಟ ಮಾಡುವುದರಲ್ಲಿ ತಪ್ಪೇನಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

 
At 4:54 PM, April 21, 2006, Blogger Vishwanath said...

ಸಾರಥಿಯವರೇ,
ನಮ್ಮ ದೇಶ ಸ್ವಾವಲಂಬಿಯಾಗಿಲ್ಲ, ಆಗುವುದೂ ಇಲ್ಲ. ಆಡಳಿತವಿರಬಹುದು ಅಥವಾ ಕಾನೂನಾಗಿರಬಹುದು ಸುಮಾರು ಅರ್ಧ ಶತಮಾನಗಳ ಹಿಂದೆಯೇ ಬ್ರಿಟೀಶರು ಬಿಟ್ಟು ಹೋದ ಕಂದಾಚಾರಗಳನ್ನು ನಾವಿನ್ನೂ ಚಾಚೂ ತಪ್ಪದೇ ಪಾಲಿಸುತ್ತಿದ್ದೇವೆ. ಅದರಲ್ಲಿ ಇಂಗ್ಲಿಷ್ ಕೂಡ ಒಂದು. ಈಗ ನಮಗೆ ಇಂಗ್ಲಿಷ್ ಬಿಟ್ಟಿರದಂಥ ಅನಿವಾರ್ಯ ಪರಿಸ್ಥಿತಿ ಒದಗಿದೆ. ವ್ಯಾವಹಾರಿಕ ದೃಷ್ಟಿಯಿಂದ ನೋಡಿದರೆ, ಇಂಗ್ಲಿಷ್ ಕಲಿಯುವುದರಿಂದ ನಮಗೆ ಲಾಭವೇ ಹೆಚ್ಚು. ಆದ್ದರಿಂದ ಇದನ್ನು ಒಂದನೇ ತರಗತಿಯಿಂದ ಕಲಿಸುವುದು ಅನಿವಾರ್ಯ ಕರ್ಮ!

 
At 10:21 PM, April 21, 2006, Blogger v.v. said...

ವಿಶ್ವನಾಥರವರೇ,

ಜಾಗತೀಕರಣದ ಇಂದಿನ ದಿನಗಳಲ್ಲಿ "ಸ್ವಾವಲಂಬಿ ದೇಶ" ಎಂಬ ಕಾನ್ಸೆಪ್ಟ್ ತನ್ನ ಅರ್ಥ ಕಳೆದುಕೊಳ್ಳುತ್ತಿದೆ ಎನ್ನಿಸುತ್ತದೆ. ಅಮೆರಿಕ, ಜಪಾನ್ ಚೈನಾಗಳೂ ಸಹ ಒಂದಕ್ಕೊಂದು ಅವಲಂಬಿಸಿಯೇ ಇವೆ. ಇದು ಬಹು ಮಟ್ಟಿಗೆ ಒಳ್ಳೆಯದೇ. ಪರಸ್ಪರ ವಾಣಿಜ್ಯ ಸಂಬಂಧ ಇದ್ದಾಗ ಎರಡು ದೇಶಗಳ ಮಧ್ಯೆ ಎಂತಹುದೇ ವಿವಾದ-ಸಂಘರ್ಷ ಇದ್ದರೂ, ಅದು ಪೂರ್ಣ ಪ್ರಮಾಣದ ಯುದ್ಧವಾಗಿ ಮಾರ್ಪಡುವುದು ಕಡಿಮೆ.

ಇನ್ನು ಆಂಗ್ಲ ಭಾಷೆಯ ಕಲಿಕೆಯ ವಿಚಾರ. ನಾನು ನಿಮ್ಮ (ಮತ್ತು ಅನ್ವೇಷಿಗಳ) ಮಾತನ್ನು ಒಪ್ಪುತ್ತೇನೆ. ಆಂಗ್ಲ ಭಾಷೆ ಇಂದು ಅನಿವಾರ್ಯವಾಗಿ ಬಿಟ್ಟಿದೆ. ಇದು ಭಾರತ ಅಥವಾ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ; ಜಪಾನಿನಲ್ಲಿ ಇಂಗ್ಲೀಷಿನ ಕುರಿತ ಈ ಲೇಖನ ಓದಿ. ಆ ಲೇಖನದ ಮುಖ್ಯಾಂಶಗಳು:

"English is a compulsory subject in Japanese schools. In fact, it is the only foreign languages that the vast majority of Japanese schools provide. All Japanese people now have at least 6 years of English at school, and 4 more years if they go to university. It is now common for Japanese parents to make their children learn English from the age of 5 or 6 in English schools or juku. Japan certainly has more private English conversation schools per square meter than anywhere else on earth."

ಚರ್ಚೆಗೆ ಅನುವು ಮಾಡಿಕೊಡುವ ಲೇಖನ ಬರೆದಿದ್ದೀರಿ. ಧನ್ಯವಾದಗಳು.

ವಂದನೆಗಳೊಂದಿಗೆ,

"ಸಂಜಯ"

 
At 12:44 PM, April 22, 2006, Blogger Sarathy said...

ಜಾಗತೀಕರಣದ ಈ ಸಮಯದಲ್ಲಿ "ಸ್ವಾವಲಂಬಿ" ಬಗೆಗಿನ ಕಾನ್ಸೆಪ್ಟ್ ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬಹುದು. ಮೂಲಾರ್ಥದ ಪ್ರಕಾರ, ಒಂದು ರಾಷ್ಟ್ರ ತನ್ನಲ್ಲಿನ ಉತ್ಪಾದನೆ, ವ್ಯಾಪಾರ ಇತರ ಯಾವುದೇ ಪ್ರಕ್ರಿಯೆಗಳಲ್ಲಿ ಬೇರೊಂದು ರಾಷ್ಟ್ರದ ಮೇಲೆ ಅವಲಂಬಿತವಾಗಿಲ್ಲವಾಗಲ್ಲಿ ಅದು ಸ್ವಾವಲಂಬಿ ಎಂದೆನಿಸಿಕೊಳ್ಳುತ್ತದೆ. ಶ್ಯಾಮ್ ರವರು ಹೇಳಿದ ಹಾಗೆ, ಪ್ರಸಕ್ತ ಸಂದರ್ಭದಲ್ಲಿ ಪ್ರತಿಯೊಂದು ರಾಷ್ಟ್ರವೂ ಒಂದಲ್ಲ ಒಂದು ಸಂಪನ್ಮೂಲಕ್ಕಾಗಿ ಬೇರೊಂದು ರಾಷ್ಟ್ರದ ಮೇಲೆ ಅವಲಂಬಿತವಾಗಬೇಕಿರುವುದು ಅಕ್ಷರಶಃ ಸತ್ಯ. ಆದರೆ ಈ ಅವಲಂಬನೆಯ "ರೀತಿ"ಯಲ್ಲಿ ಸ್ವಾವಲಂಬನೆಯ ತತ್ವದ ಇಂದಿನ ಅರ್ಥ ಅಡಗಿದೆ. ಜಗತ್ತಿನ ಶಕ್ತಿಶಾಲಿ ದೇಶವಾದ ಅಮೆರಿಕ ತೈಲ ಮತ್ತಿತರ ಸಂಪನ್ಮೂಲಗಳಿಗಾಗಿ ಪರಾವಲಂಬಿಯಾಗಿರುವುದು ನಿಜ. ಆದರೆ ಇತರ ದೇಶಗಳು ಅಮೆರಿಕದ ಮೇಲೆ ಹೆಚ್ಚು ಅವಲಂಬಿತವಾಗಿರುವುದು ಅಷ್ಟೇ ನಿಜ. ಅದರಿಂದಲೇ ಇಂದು ಅಮೆರಿಕ ಜಾಗತಿಕವಾಗಿ ಮಹತ್ವದ ಸ್ಥಾನ ಪಡೆದಿದೆ. ಭಾರತದಂಥ ರಾಷ್ಟ್ರಗಳು ಪ್ರತಿಯೊಂದು ತಂತ್ರಜ್ಞಾನ, ವಿಚಾರಗಳಿಗಾಗಿ ಹೊರಗಡೆ ಕೈಚಾಚಬೇಕಿರುವುದರಿಂದ ಸಹಜವಾಗಿ ತಮ್ಮ ಬೆಲೆ ಕಳೆದುಕೊಳ್ಳುತ್ತಿವೆ. ವಿಶ್ವದ ಪ್ರಬಲ ರಾಷ್ಟ್ರಗಳು ತಮ್ಮ ಅನುಕೂಲತೆಗಳಿಗೆ ತಕ್ಕಂತೆ ರೂಪಿಸುವ ಯೋಜನೆಗಳಿಗೆ ತಾಳಹಾಕಬೇಕಿರುವುದು ಇವುಗಳಿಗೆ ಅನಿವಾರ್ಯ. ಅದಕ್ಕೆ ತಕ್ಕಂತೆ ತಮ್ಮ ಆಡಳಿತ ನೀತಿ, ಆರ್ಥಿಕ ನೀತಿ ರೂಪಿಸಬೇಕು.

ಭಾರತಕ್ಕೆ ಒಲಿದ ಆಂಗ್ಲ ಸಿದ್ಧಿಯಿಂದಾಗಿ ಸಾಫ್ಟ್ ವೇರ್, ಬಿಪಿಓ ಮೊದಲಾದ ಕ್ಷೇತ್ರಗಳಲ್ಲಿ ಅದಕ್ಕೆ ಅನುಕೂಲವಾಗಿರುವುದೇನೋ ನಿಜ. ಆದರೆ ಇಂಗ್ಲೀಷ್ ಭಾಷೆಯಲ್ಲಿ ಭಾರತೀಯರು ಹಿಂದುಳಿದಿದ್ದರೆ?

"ಆಂಗ್ಲ" ಭಾಷೆ ಇಂದು ಅನಿವಾರ್ಯ ಎಂಬುದನ್ನು ಯಾರೂ ಅಲ್ಲಗಳೆಯಲಾಗುವುದಿಲ್ಲ. ಜಾಗತಿಕ ತತ್ವಗಳು ಭಾರತೀಯ ಭಾಷೆಗಳಲ್ಲಿ ಸಂಪೂರ್ಣವಾಗಿ ಲಭ್ಯವಿಲ್ಲದಿರುವುದರಿಂದ ಆಂಗ್ಲಕ್ಕೆ ಮೊರೆಹೋಗುವುದು ಅನಿವಾರ್ಯವೇ. ನನ್ನ ವಿಚಾರ ಇರುವುದು ಇಷ್ಟೇ... ಒಬ್ಬ ವ್ಯಕ್ತಿಯ ಪ್ರಾಥಮಿಕ ಜ್ಞಾನಾರ್ಜನೆಗೆ ಆಂಗ್ಲ ಭಾಷೆ ಎಷ್ಟು ಪರಿಣಾಮಕಾರಿ? ನನ್ನ ಇಡೀ ವಿದ್ಯಾಭ್ಯಾಸವನ್ನು ಆಂಗ್ಲ ಭಾಷೆಯಲ್ಲೇ ಪೂರೈಸಿದ ನಾನು ನನಗೆ ನೆನಪಿರುವಂತೆ ಏಳೆಂಟನೇ ತರಗತಿವರೆಗೂ ವಿಜ್ಞಾನ ಪುಸ್ತಕಗಳನ್ನು ಮಗ್ಗಿ(ಬೈಹಾರ್ಟ್) ಹೊಡೆಯುತ್ತಿದ್ದೆ. ಕಾನ್ಸೆಪ್ಟು(ತತ್ವ)ಗಳು ಅರ್ಥವಾಗದೇ ಕಬ್ಬಿಣಕಡಲೆಯಂತಾಗಿದ್ದವು. ಅದಕ್ಕೆ ಕಾರಣ ನನಗೆ ಆಂಗ್ಲ ಭಾಷೆಯ ಮೂಲಕ ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತಿದ್ದುದು. ಆ ವಿಜ್ಞಾನ ತತ್ವಗಳು ಮುಂದೊಂದು ದಿನ ಅರ್ಥವಾದಾಗ 'ಓಹ್ ಎಷ್ಟು ಸರಳ' ಎಂದು ಪ್ರಲಾಪಿಸಿದ್ದೆ. ಅಷ್ಟೊತ್ತಿಗಾಗಲೇ ನನ್ನ ಶಿಕ್ಷಣದ ಆಯುಸ್ಸು ಬಹುತೇಕ ಕಳೆದುಹೋಗಿತ್ತು. ಶಾಲೆಯಲ್ಲಿ ತಿಳಿದುಕೊಂಡಿರಬೇಕಿದ್ದ ವಿಚಾರಗಳನ್ನು ಕಾಲೇಜು ವಿದ್ಯಾಭ್ಯಾಸದ ಪರಮಾವಧಿಯಲ್ಲಿ ತಿಳಿದುಕೊಂಡ ನನ್ನಂಥವರ ಶಿಕ್ಷಣದ ಗುಣಮಟ್ಟ ಎಷ್ಟಿರಬಹುದೆಂಬುದನ್ನು ಊಹಿಸಿ.

ಉರು ಹೊಡೆದು ಪಾಸಾಗುವ ವಿದ್ಯಾರ್ಥಿಗಳು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೇಗೆ ನಿಭಾಯಿಸುತ್ತಾರೆ? ಮಾತೃಭಾಷೆಯಲ್ಲಿ ಶಿಕ್ಷಣ ಇದ್ದಿದ್ದರೆ ಇದು ತಪ್ಪಿಸಬಹುದಿತ್ತಲ್ಲವೆ?

 
At 1:56 PM, April 22, 2006, Blogger bhadra said...

ನಮ್ಮ ದೇಶ ಒಂದು, ನಾವೆಲ್ಲರೂ ಒಂದು ಎಂದಾಗುವವರೆವಿಗೂ, ಕನ್ನಡಿಗ, ತಮಿಳ, ತೆಲುಗ, ಮರಾಠಿಗ, ಭೈಯ್ಯಾ, ಪಂಡಾ, ಹೀಗೆ ಎಲ್ಲರೂ ಬೇರೆ ಬೇರೆ ಎಂಬ ಮನೋಭಾವವಿರುವವರೆವಿಗೂ ಕಲಿಕೆಯಲ್ಲಿ ಇಂಗ್ಲೀಷು ಬೇಕೇ ಬೇಕು. ಮನೆಯ ಮಾತು ಮಾತ್ರ ಕನ್ನಡದಲ್ಲಿ ಆಗಿರಬೇಕು. ಅಲ್ಲಿಗೆ ಇಂಗ್ಲೀಷು ನುಸುಳುವುದು ಬೇಡ. ಇಡೀ ದೇಶಕ್ಕೇ ಒಂದೇ ಭಾಷೆ ಎನ್ನುವುದು ಬರುವವರೆವಿಗೂ ಇದು ಅವಶ್ಯಕ.

ನನ್ನ ಮಕ್ಕಳು ಮುಂಬಯಿಯಲ್ಲಿ ಕಲಿಯುತ್ತಿರುವಾಗ, ಕನ್ನಡವನ್ನೇ ಕಲಿಯಿರಿ, ಇಂಗ್ಲೀಷ್ ಬೇಡ ಅನ್ನುವುದಕ್ಕಾಗುವುದಿಲ್ಲ. ಹೊಟ್ಟೆಪಾಡಿಗೆ ಅಥವಾ ಕರ್ತವ್ಯ ಕರೆಗಾಗಿ ದೇಶದ ಮೂಲೆ ಮೂಲೆಗಳಲ್ಲಿ ದುಡಿಯಬೇಕಾಗುವಾಗ, ನಮಗೆ ಹಾದಿ ತೋರಿಸುವುದು ಇಂಗ್ಲೀಷೇ. ಇಷ್ಟಾದರೂ ಮನೆಯಲ್ಲಿ ಮಾತನಾಡಲು, ಬಿಡುವಿನಲ್ಲಿ ಬರೆಯಲು, ಚಿಂತಿಸಲು ಕನ್ನಡವನ್ನು (ಮನೆಯ ಭಾಷೆಯನ್ನು) ಅಳವಡಿಸಿಕೊಳ್ಳಬೇಕಾಗಿದೆ.

 
At 4:37 AM, April 24, 2006, Blogger v.v. said...

ಸಾರಥಿಯವರೇ,
ಜಗತ್ತಿನ ಶಕ್ತಿಶಾಲಿ ದೇಶ ಅಮೆರಿಕ ಪರಾವಲಂಬಿಯಾಗಿರುವುದು ಕೇವಲ ತೈಲ ಮತ್ತಿತರ ಸಂಪನ್ಮೂಲಗಳ ವಿಷಯದಲ್ಲಿ ಮಾತ್ರವಲ್ಲ. ಭಾರತದ ಸಾಫ್ಟ್‌ವೇರ್ ಅಥವಾ ಕಾಲ್‌ಸೆಂಟರ್ ಸೇವೆ ಮುಚ್ಚಿದರೆ, ಧಕ್ಕೆಯಾಗುವುದು ಭಾರತಕ್ಕೆ ಮಾತ್ರ ಅಲ್ಲ; ಅವುಗಳ ಮೇಲೆ ಅವಲಂಬಿತವಾದ ಅಮೆರಿಕಕ್ಕೆ ಕೂಡ. ಹಾಗೆಯೇ, ಭಾರತದ ಮಾರುಕಟ್ಟೆಯನ್ನು ಅಮೆರಿಕದ ಕಂಪೆನಿಗಳಿಗೆ ಮುಚ್ಚಿದರೆ, ಭಾರತಕ್ಕೆ ಲಾಭವಾಗುವುದೋ ಇಲ್ಲವೋ - ಅಮೆರಿಕಕ್ಕೆ ನಷ್ಟವಾಗುವುದಂತೂ ನಿಜ.

"ಭಾರತದಂಥ ರಾಷ್ಟ್ರಗಳು ಪ್ರತಿಯೊಂದು ತಂತ್ರಜ್ಞಾನ, ವಿಚಾರಗಳಿಗಾಗಿ ಹೊರಗಡೆ ಕೈಚಾಚಬೇಕಿರುವುದರಿಂದ ಸಹಜವಾಗಿ ತಮ್ಮ ಬೆಲೆ ಕಳೆದುಕೊಳ್ಳುತ್ತಿವೆ." ಎಂಬ ಮಾತು ನನ್ನ ಪ್ರಕಾರ ನಿಜವಲ್ಲ. ಭಾರತದಂಥ ರಾಷ್ಟ್ರಗಳು ಜಾಗತೀಕರಣದ ಮುನ್ನಿನ ಕಾಲಕ್ಕೆ ಹೋಲಿಸಿದರೆ, ಪಾಶ್ಚಾತ್ಯ ದೇಶಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ. ತಂತ್ರಜ್ಞಾನಕ್ಕೆ ಭಾರತ ಕೈಚಾಚಿದರೆ, ಅದನ್ನು ಭಾರತಕ್ಕೆ ಮಾರಲು ವಿದೇಶಿ ಕಂಪೆನಿಗಳು ತುದಿಗಾಲಲ್ಲಿ ನಿಂತಿವೆ. ಇಂದು ಅಣು ಶಕ್ತಿಯ ವಿಚಾರದಲ್ಲಿ ಅಮೆರಿಕ ಭಾರತದ ಬಗೆಗೆ ಉದಾರ ನೀತಿ ತೋರುತ್ತಿದ್ದರೆ, ಅದು ಕೇವಲ ಭಾರತದ ಬಗೆಗಿನ ಪ್ರೇಮ ಅಥವಾ ಕನಿಕರದಿಂದ ಅಲ್ಲ; ಭಾರತದ ಪ್ರಾಮುಖ್ಯತೆಯ ಅರಿವಿನಿಂದ.

ನಾನು ಅಮೆರಿಕದಲ್ಲಿ ನೆಲೆಸಿ ಹದಿನಾರು ವರ್ಷಗಳಾಯಿತು. ೧೯೯೦ರಲ್ಲಿ ನಾನು ಇಲ್ಲಿಗೆ ಬಂದಾಗ, ಭಾರತದ ವಿಷಯ ಇಲ್ಲಿನ ಪತ್ರಿಕೆ-ಟಿ.ವಿ.ಯಲ್ಲಿ ವರದಿಯಾದರೆ, ಅದು ಕೇವಲ ಬಡತನ, ಅಪಘಾತ, ರೋಗ-ರುಜಿನ, ಅನಾಹುತಗಳಿಗೆ ಸಂಬಂಧಿಸಿದ ವಿಷಯಗಳಿಗೆ ಮಾತ್ರ. ಆದರೆ ಇಂದು ಹಾಗಲ್ಲ. ಟಿ.ವಿ.ಯಲ್ಲಿ, ದಿನಪತ್ರಿಕೆಗಳಲ್ಲಿ ಭಾರತದ ವಿಚಾರವಾಗಿ ಹಲವು ತರಹದ ವರದಿಗಳನ್ನು ನೋಡಬಹುದು. ಉದಾಹರಣೆಗೆ, ಕೆಲವೇ ದಿನಗಳ ಹಿಂದೆ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಬೆಂಗಳೂರಿನ ಬಯೋಕಾನ್ ಸಂಸ್ಥೆಯ ವಾರ್ಷಿಕ ಆದಾಯ ಪತ್ರದ ವಿವರಗಳು ಪ್ರಕಟವಾಗಿತ್ತು.

ಅಮೆರಿಕದ ಎಷ್ಟೋ ಇನ್ವೆಸ್ಟ್‌ಮೆಂಟ್ ಕಂಪೆನಿಗಳು ತಮ್ಮ ಬಂಡವಾಳವನ್ನು ಭಾರತದಲ್ಲಿ ಹೂಡಿವೆ. ಭಾರತದಂತಹ ರಾಷ್ಟ್ರಗಳಲ್ಲಿನ ಕಂಪೆನಿಗಳ ಷೇರುಗಳನ್ನೇ ಖರೀದಿಸುವ ಹಲವಾರು ಮ್ಯುಚುಯಲ್ ಫಂಡ್‌ಗಳೂ ಇವೆ.

ಜಾಗತೀಕರಣದಂತಹ ಸಂಕೀರ್ಣ ಪ್ರಸಂಗದಲ್ಲಿ ಈ ದೇಶಗಳ ಗೆಲುವು-ಸೋಲನ್ನು ನಿರ್ಧರಿಸುವುದು ಕಷ್ಟ.

ಜಾಗತೀಕರಣದ ಬೆಂಬಲಿಗನಾದ ನಾನು, ಅದರಿಂದ ಆಗುವುದೆಲ್ಲಾ ಒಳ್ಳೆಯದೇ ಎನ್ನುವುದಿಲ್ಲ. ಉದಾಹರಣೆಗೆ, ಜಾಗತೀಕರಣದಿಂದ ಪ್ರಾದೇಶಿಕ ಸಂಸ್ಕೃತಿ, ಭಾಶೆಗಳ ಮೇಲೆ ಆಗುತ್ತಿರುವ/ಆಗಬಹುದಾದ ಪರಿಣಾಮಗಳು, ಹಾಗೆಯೇ ಪರಿಸರ ನಾಶ ಇವೆಲ್ಲಾ ಅತಿ ಮುಖ್ಯ ವಿಚಾರಗಳು. ಈ ವಿಷಯಗಳ ಕುರಿತು ಇನ್ನೂ ಹೆಚ್ಚಿನ ಚರ್ಚೆ ನಡೆಯ ಬೇಕಿದೆ. ಆದರೆ, ದುರದೃಷ್ಟವಶಾತ್ ಇಂದು ನಡೆಯುತ್ತಿರುವ ಬಹುಪಾಲು ಚರ್ಚೆಗಳು ಒನ್-ಸೈಡೆಡ್ ಆಗಿವೆ.

ಇನ್ನು ಪ್ರಾಥಮಿಕ ಜ್ಞಾನರ್ಜನೆಗೆ ಇಂಗ್ಲೀಶ್ ಬಳಸುವ ವಿಷಯ: ಸಾರಥಿಯವರು ತಮ್ಮ ಅನುಭವದ ಚೌಕಟ್ಟಿನಿಂದ ತಮ್ಮ ವಾದವನ್ನು ಮಂಡಿಸಿದ್ದಾರೆ. ಆದರೆ ಆ ಚೌಕಟ್ಟು ಎಲ್ಲರಿಗೂ ಹೊಂದುವುದಿಲ್ಲ. ಉದಾಹರಣೆಗೆ, ಟಿ.ವಿ.ಶ್ರೀಯವರು ತಮ್ಮ ಮಕ್ಕಳು ಮುಂಬೈನಲ್ಲಿ ಬೆಳೆಯುತ್ತಿರುವ ವಿಚಾರ ಪ್ರಸ್ತಾಪಿಸಿದ್ದಾರೆ. ಮನೆಯಲ್ಲಿ ಕನ್ನಡ ಮಾತನಾಡುವ ನನ್ನ ಇಬ್ಬರು ಮಕ್ಕಳು ಶಾಲೆಯಲ್ಲಿ ಕಲಿಯುವುದು ಇಂಗ್ಲೀಷಿನಲ್ಲಿಯೇ. ನನಗೆ ತಿಳಿದಂತೆ, ಮಾತೃಭಾಶೆಯಲ್ಲದ ಇಂಗ್ಲೀಷಿನಲ್ಲಿ ಕಲಿಯುತ್ತಿರುವುದರಿಂದ ಅವರ ಕಲಿಕೆಯಲ್ಲಿ ಕಡಿಮೆಯಾದಂತಿಲ್ಲ. ನಾನು ಏಳನೆಯ ತರಗತಿಯವರೆಗೆ ಕನ್ನಡದಲ್ಲಿ ಅಭ್ಯಾಸ ಮಾಡಿದೆ. ಅನಂತರ ಇಂಗ್ಲೀಷ್ ಮೀಡಿಯಂ ಶಾಲೆಗೆ ಸೇರಿದೆ. ಮೊದ-ಮೊದಲು ಇಂಗ್ಲೀಷ್ ಮಾತನಾಡುವಾಗ ತೊಂದರೆ ಅನುಭವಿಸಿದ್ದನ್ನು ಬಿಟ್ಟರೆ, ನನಗೂ-ಒಂದನೆಯ ತರಗತಿಯಿಂದ ಇಂಗ್ಲೀಷಿನಲ್ಲಿ ಅಭ್ಯಾಸ ಮಾಡಿದವರಿಗೂ ಯಾವುದೇ ವ್ಯತ್ಯಾಸ ನನಗಂತೂ ಕಾಣಲಿಲ್ಲ. ಇಂಗ್ಲೀಷ್ ಮಾಧ್ಯಮದಲ್ಲಿಯೇ ಪೂರ್ಣವಾಗಿ ಓದಿ, ವಿಜ್ಞಾನ, ಗಣಿತದ ತತ್ವಗಳನ್ನು ನನ್ನಷ್ಟೇ ಚೆನ್ನಾಗಿ ಅಥವಾ ನನಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡ ಹಲವರಿದ್ದರು. ಒಟ್ಟಿನಲ್ಲಿ, ನನ್ನ ಅನುಭವದ ಪ್ರಕಾರ, ಪ್ರಾಥಮಿಕ ಜ್ಞಾನಾರ್ಜನೆ ಇಂಗ್ಲೀಷಿನಲ್ಲಿ ಆಗುವುದರಿಂದ ಶಿಕ್ಷಣದ ಗುಣಮಟ್ಟ ಕಡಿಮೆಯಾಗುವುದೆಂದು ನನಗೆ ಅನ್ನಿಸುವುದಿಲ್ಲ.

ವಂದನೆಗಳೊಂದಿಗೆ,

"ಸಂಜಯ"

 
At 4:06 PM, April 27, 2006, Blogger Sarathy said...

ಸಂಜಯರವರೆ, ಜಾಗತೀಕರಣದಂಥ ಒಂದು ಸಂಕೀರ್ಣ ವಿಷಯ ನನಗೆ ನಿಲುಕುವಂತಹುದ್ದಲ್ಲ. ಜಾಗತೀಕರಣ ಒಂದು ಒಳ್ಳೆಯ ತತ್ವವೇ ಹೌದು ಎಂಬುದನ್ನು ಒಪ್ಪಿಕೊಳ್ಳಬಹುದು. ಆದರೆ ಅದನ್ನು ಪ್ರಚುರಪಡಿಸಲು ಓಡಾಡಿದ ಪ್ರಬಲ ರಾಷ್ಟ್ರಗಳು ಅನುಸರಿಸುತ್ತಿರುವ ಕೆಲ ದ್ವಂದ್ವ ನೀತಿಗಳು ನನಗೆ ಅರ್ಥವಾಗುತ್ತಿಲ್ಲ. ಪರರಾಷ್ಟ್ರ ಕಂಪನಿಗಳಿಂದ ತಮ್ಮ ಕಂಪನಿಗಳಿಗೆ ತೊಂದರೆ (ವ್ಯಾಪಾರದ) ಎದುರಾದಲ್ಲಿ ಅವುಗಳನ್ನು ಸಂರಕ್ಷಿಸಲು ಅಮೆರಿಕ ಕ್ರಮ ಕೈಗೊಳ್ಳಲು ಮುಂದಾಗುತ್ತದೆ ಎಂಬೊಂದು ಸುದ್ದಿ ಓದಿದ ನೆನಪಿದೆ. ಉನ್ನತ ಸೌಲಭ್ಯವಿರುವ ಅಮೆರಿಕದಲ್ಲಿನ ಕಂಪನಿಗಳ ಸ್ಥಿತಿ ಹೀಗಿರಬೇಕಾದರೆ ಯಃಕಶ್ಚಿತ್ ತಂತ್ರಜ್ಞಾನದೊಂದಿದೆ ಭಾರತದಲ್ಲಿನ ಕಂಪನಿಗಳು ಜಾಗತಿಕ ಕಂಪನಿಗಳ ಸ್ಪರ್ಧೆ ಎದುರಿಸಲು ಎಷ್ಟು ಕಷ್ಟಪಡಬೇಕಾಗಬಹುದು?

ಶಕ್ತ ರಾಷ್ಟ್ರಗಳು ತಮ್ಮ ಯುದ್ಧ ಶಸ್ತ್ರಾಸ್ತ್ರಗಳನ್ನು ಬಡರಾಷ್ಟ್ರಗಳಿಗೆ ಮಾರಾಟ ಮಾಡಲು ಮುಂದಾಗುತ್ತವೆ ಆದರೆ ಅವನ್ನು ಅಭಿವೃದ್ಧಿಪಡಿಸಿಕೊಳ್ಳಲು ಆ ದೇಶಗಳಿಗೆ ಪ್ರೋತ್ಸಾಹ ನೀಡುವುದಿಲ್ಲ. ಏಕೆ?

ವಿನೂತನ ತಂತ್ರಜ್ಞಾನದೊಂದಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತಯಾರು ಮಾಡಿದಾಗ ಹಳೆಯ ಶಸ್ತ್ರಾಸ್ತ್ರಗಳು ನಿರುಪಯುಕ್ತವಾಗಿ ಉಳಿಯುತ್ತವೆ. ಅವನ್ನು ಏನು ಮಾಡುವುದು? ಬಹು ಸುಲಭವೆಂದರೆ ಅವನ್ನು ಭಾರತದಂಥ ಭಯಪೀಡಿತ, ದ್ವಂದ್ವ ಮನಸ್ಸಿನ ರಾಷ್ಟ್ರಗಳಿಗೆ ಸಾಗು ಹಾಕಿ ಬಂದಷ್ಟು ಹಣ ಗಿಂಜಿಕೊಳ್ಳುವುದು. ಈ ರಾಷ್ಟ್ರಗಳಿಗೆ ಆ ಶಸ್ತ್ರಾಸ್ತ್ರಗಳೇ ಇರುವುದರಲ್ಲೇ ಅತ್ಯಾಧುನಿಕವಾಗುವುದರಿಂದ ಅವು ಎದೆ ತಟ್ಟಿಕೊಂಡು ಬೀಗುತ್ತವೆ.

ಪ್ರಾಥಮಿಕ ಜ್ಞಾನಾರ್ಜನೆಗೆ ಇಂಗ್ಲೀಷ್ ಬಳಸುವ ವಿಚಾರದಲ್ಲಿ ನಿಮ್ಮ ಮಾತನ್ನು ನಾನು ಒಪ್ಪಿಕೊಳ್ಳುತ್ತೇನೆ. ಇಂಗ್ಲೀಷ್ ಮೂಲಕ ಕಲಿಯಬೇಕೆಂದಲ್ಲಿ ಅದಕ್ಕೆ ಪೂರಕ ವಾತಾವರಣವಿರಬೇಕು. ಮನೆಯಲ್ಲಿಯಾಗಲೀ ಅಥವಾ ಶಾಲೆಯಲ್ಲಿಯಾಗಲೀ ಇಂಗ್ಲೀಷ್ ಮಾತನಾಡುವಿಕೆಗೆ ಪ್ರೋತ್ಸಾಹವಿರಬೇಕು. ಇಲ್ಲದಿದ್ದರೆ ನಮಗೆ ಇಂಗ್ಲೀಷ್ ಸರಿಯಾಗಿ ಸಿದ್ಧಿಸದು. ಕೊಡಗಿನ ಎಷ್ಟೋ ಮನೆಗಳಲ್ಲಿ ಇಂಗ್ಲೀಷ್ ಇಂದು ಮನೆಮಾತಾಗಿದೆ. ಹಾಗೆಯೇ ಕರ್ನಾಟಕ ಪ್ರತೀ ಮನೆಗಳಲ್ಲೂ (ಗ್ರಾಮಗಳೂ ಸೇರಿ) ಇಂಗ್ಲೀಷ್ ನೆಲೆಸಬೇಕು. ಇಂದಿನ ಜಾಗತೀಕರಣದಲ್ಲಿ ಇಂಗ್ಲೀಷ್ ನಮಗೆ ಊಟ ನೀಡುವ ಅನ್ನದಾತ. ಕನ್ನಡ ಕೇವಲ ಆತ್ಮಪ್ರತಿಷ್ಠೆಗಾಗಿ. ಕನ್ನಡಲ್ಲೇ ಇರುವ ಒಂದು ಗಾದೆ ನೆನಪಿಗೆ ಬರುತ್ತದೆ... ಹೊಟ್ಟೆಗೆ ಇಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು... ಹೌದು... ಮಲ್ಲಿಗೆ ಹೂವಾಗಿರುವ ಕನ್ನಡವನ್ನು ಏಕೆ ಇರಿಸಿಕೊಳ್ಳುವುದು? ಬೇಡ. ನಮ್ಮ ಹೊಟ್ಟೆಗೆ ಅನ್ನ ನೀಡುವ ಇಂಗ್ಲೀಷ್ ಅನ್ನು ಮಾತ್ರವೇ ಬಳಸೋಣ. ಕರ್ನಾಟಕದ(ಅಥವಾ ಭಾರತದ) ಪ್ರತೀ ವ್ಯಕಿಯ ಮನೆಮಾತು ಇಂಗ್ಲೀಷ್ ಆಗುವುದರತ್ತ ಆಂಗ್ಲಾಂದೋಲನ ನಡೆಸೋಣ. ಪ್ರಪಂಚದಲ್ಲಿ ಎಷ್ಟೋ ಭಾಷೆಗಳು ಸತ್ತುಹೋಗಿವೆ. ಆ ಸತ್ತುಹೋದ ಮುಖ್ಯವಾಹಿನಿಗೆ ಕನ್ನಡವನ್ನೂ ಸೇರಿಸಿದ ಕೀರ್ತಿ ನಮಗೆ ಸಲ್ಲುತ್ತದೆ. ನಾವು ಜಾಗತಿಕ ವ್ಯಕ್ತಿಗಳಾಗಬೇಕು... ಹೌದು... ಹೌದು...

 
At 11:01 PM, April 27, 2006, Blogger v.v. said...

ಸಾರಥಿಯವರೇ,

ಭಾಷೆಯ ವಿಚಾರದಲ್ಲಿ ಭಾವಶೂನ್ಯರಾಗಿ ಚರ್ಚಿಸುವುದು ಕಷ್ಟ. ನನ್ನ ಮಾತುಗಳು ನಿಮ್ಮ ಮನಸ್ಸಿಗೆ ನೋವುಂಟು ಮಾಡಿದಂತಿದೆ. ನನ್ನ ಉದ್ದೇಶ ಖಂಡಿತ ಅದಲ್ಲ. ಅಮೆರಿಕದಲ್ಲಿ ವಾಸಮಾಡುತ್ತಾ ಕನ್ನಡದ ಬಗ್ಗೆ ಭಾವಶೂನ್ಯನಾಗಿ ಬರೆಯುವುದು ನನಗೆ ಅಂತಹ ಕಷ್ಟ ಅಲ್ಲ. ಆದರೆ, ಕನ್ನಡ ಪ್ರೀತಿ ಅತೀವವಾಗಿ ಇದ್ದು, ಕರ್ನಾಟಕದಲ್ಲಿ ನೆಲೆಸಿ, ಪ್ರತಿದಿನ ಕನ್ನಡ ಮೂಲೆಗುಂಪಾಗುತ್ತಿರುವುದನ್ನು ಗಮನಿಸುತ್ತಿರುವವರಿಗೆ, ನನ್ನಂತಹವರ ಭಾವಶೂನ್ಯತೆಯೇ ತಪ್ಪೆನಿಸಬಹುದು.

ನಾನು ಕನ್ನಡದ ಅಭಿಮಾನಿಯೋ ಅಲ್ಲವೋ ಅದನ್ನು ನಾನು ಯೋಚಿಸಿಲ್ಲ. ಆದರೆ, ಅಮೆರಿಕದಲ್ಲಿಯೇ ಹುಟ್ಟಿ ಬೆಳೆದಿರುವ ನನ್ನ ಇಬ್ಬರು ಮಕ್ಕಳೂ ಕನ್ನಡದಲ್ಲಿಯೇ ಮಾತನಾಡುವುದು, ನನ್ನ ಹಿರಿಯ ಮಗಳು ಕನ್ನಡ ಓದಲೂ-ಬರೆಯಲೂ ತಿಳಿದಿರುವುದು ನನಗೆ ಸಂತೋಷ ತಂದಿದೆ ಎಂಬುದು ಮಾತ್ರ ನಿಜ.

ಕನ್ನಡದ ಬಗೆಗಿನ ಚರ್ಚೆಯನ್ನು ಇಲ್ಲಿಗೇ ನಿಲ್ಲಿಸುತ್ತೇನೆ.

ಇನ್ನು ನೀವು ಬರೆದಿರುವ ಜಾಗತೀಕರಣದ ವಿಚಾರ -

"ಪರರಾಷ್ಟ್ರ ಕಂಪನಿಗಳಿಂದ ತಮ್ಮ ಕಂಪನಿಗಳಿಗೆ ತೊಂದರೆ (ವ್ಯಾಪಾರದ) ಎದುರಾದಲ್ಲಿ ಅವುಗಳನ್ನು ಸಂರಕ್ಷಿಸಲು ಅಮೆರಿಕ ಕ್ರಮ ಕೈಗೊಳ್ಳಲು ಮುಂದಾಗುತ್ತದೆ ಎಂಬೊಂದು ಸುದ್ದಿ ಓದಿದ ನೆನಪಿದೆ."

ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಅಮೆರಿಕದ ಮಾರುಕಟ್ಟೆ ಬಹುಮಟ್ಟಿಗೆ ಮುಕ್ತವಾಗಿದೆ ಎಂದು ನನ್ನ ಅಭಿಪ್ರಾಯ. ಉದಾಹರಣೆಗೆ, ಕಾರುಗಳ ಮಾರುಕಟ್ಟೆಯಲ್ಲಿ, ಅಮೆರಿಕದ ಕಂಪೆನಿಗಳಾದ ಜಿ.ಎಂ., ಫೋರ್ಡ್, ಕ್ರೈಸ್ಲರ್‌ಗಳು ಕಷ್ಟವನ್ನೆದುರಿಸುತ್ತಿದ್ದರೆ, ಜಪಾನಿನ ಟೊಯೊಟಾ, ಹೊಂಡಾಗಳು ಅಮೆರಿಕದ ಮಾರುಕಟ್ಟೆಯಲ್ಲಿ ವಿಜೃಂಭಿಸುತ್ತಿವೆ. ಅಮೆರಿಕದ ನಂ.೧ ಕಾರ್ ಕಂಪೆನಿಯಾದ ಜಿ.ಎಂ. ಹಲವು ವರದಿಗಳ ಪ್ರಕಾರ ದಿವಾಳಿಯ ಅಂಚಿನಲ್ಲಿದೆ.

ಇದು ಕೇವಲ ಕಾರು ಮಾರುಕಟ್ಟೆಗೆ ಮಾತ್ರ ಸೀಮಿತವಲ್ಲ. ಅಮೆರಿಕದ ೨೦೦೫ರ ಟ್ರೇಡ್ ಡೆಫಿಸಿಟ್ ೭೦೦ ಬಿಲಿಯನ್ ಡಾಲರುಗಳಿಗಿಂತಾ ಹೆಚ್ಚು. ಚೈನಾ ದೇಶದೊಂದಿಗೇ, ಅಮೆರಿಕಾ ತಾನು ರಫ್ತ್ತು ಮಾಡಿದ್ದಕ್ಕಿಂತ ಸುಮಾರು ೨೦೦ ಬಿಲಿಯನ್ ಡಾಲರುಗಳಿಗೂ ಹೆಚ್ಚಿನ ಪದಾರ್ಥಗಳನ್ನು ಆಮದು ಮಾಡಿಕೊಂಡಿತು.

ನಿಮ್ಮ ಮಾತನ್ನು ನಾನು ಸಂಪೂರ್ಣ ಅಲ್ಲಗೆಳೆಯುವುದಿಲ್ಲ. ಉದಾಹರಣೆಗೆ ವ್ಯವಸಾಯಿಕ ಉತ್ಪನ್ನಗಳಲ್ಲಿ ಅಮೆರಿಕದ ಫಾರ್ಮ್ ಸಬ್ಸಿಡಿ ನೀತಿ.

"ಶಕ್ತ ರಾಷ್ಟ್ರಗಳು ತಮ್ಮ ಯುದ್ಧ ಶಸ್ತ್ರಾಸ್ತ್ರಗಳನ್ನು ಬಡರಾಷ್ಟ್ರಗಳಿಗೆ ಮಾರಾಟ ಮಾಡಲು ಮುಂದಾಗುತ್ತವೆ ಆದರೆ ಅವನ್ನು ಅಭಿವೃದ್ಧಿಪಡಿಸಿಕೊಳ್ಳಲು ಆ ದೇಶಗಳಿಗೆ ಪ್ರೋತ್ಸಾಹ ನೀಡುವುದಿಲ್ಲ. ಏಕೆ?"

ನಿಮ್ಮ ಪ್ರಶ್ನೆಗೆ ಸರಳ ಉತ್ತರ: "ಯುದ್ಧ ಶಸ್ತ್ರಾಸ್ತ್ರಗಳ ಮಾರಾಟದಿಂದ ಲಾಭ ಬರುತ್ತದೆ, ಅದಕ್ಕೆ".

ಕೊಂಚ ಸಂಕೀರ್ಣತೆಯನ್ನು ತಂದರೆ, "ಅಭಿವೃದ್ಧಿ" ಮತ್ತು "ಪ್ರೋತ್ಸಾಹ"ಗಳ ಅರ್ಥದ ವಿಶ್ಲೇಷಣೆಯಾಗಬೇಕಿದೆ. ನರ್ಮದಾ ಅಣೆಕಟ್ಟು, ಕೈಗಾ ಅಣುಸ್ಥಾವರ ಇತ್ಯಾದಿಗಳು "ಅಭಿವೃದ್ಧಿ" ಕಾರ್ಯಕ್ರಮಗಳೇ? ವರ್ಲ್ಡ್ ಬ್ಯಾಂಕ್/ಐ.ಎಂ.ಎಫ್.ಗಳು ಇಂತಹ ಯೋಜನೆಗಳಿಗೆ ನೀಡುವ ಹಣ "ಪ್ರೋತ್ಸಾಹವೇ"?

ಒಂದಂತೂ ನಿಜ. ಅಮೆರಿಕವಿರಲಿ, ಭಾರತವಿರಲಿ, ಯಾವುದೇ ದೇಶ ತನ್ನ ಹಿತವನ್ನಷ್ಟೇ ಯೋಚಿಸುತ್ತದೆ.

ವಂದನೆಗಳೊಂದಿಗೆ,

"ಸಂಜಯ"

 
At 3:33 PM, April 28, 2006, Blogger Sarathy said...

ಸಂಜಯರವರೇ, ನರ್ಮದಾ ಅಣೆಕಟ್ಟು ನಿರ್ಮಾಣ, ಕೈಗಾ ಅಣುಸ್ಥಾವರ ಸ್ಥಾಪನೆ ಮೊದಲಾದ ಅಭಿವೃದ್ಧಿ ಯೋಜನೆಗಳು ಮತ್ತು ಅವುಗಳಿಗಾಗಿ ವಿಶ್ವಬ್ಯಾಂಕ್, ಐಎಂಎಫ್ ಮೊದಲಾದ ಹಣಕಾಸು ಸಂಸ್ಥೆಗಳು ನೀಡುವ ಪ್ರೋತ್ಸಾಹಗಳು ಎಷ್ಟು ಪರಿಣಾಮಕಾರಿಯೋ ಗೊತ್ತಿಲ್ಲ, ಆದರೆ, ಆ ಯೋಜನೆಗಳ ಸುತ್ತಮುತ್ತ ಇರುವ ಹಣಭಕ್ಷಕರ ಉದರ ವೃದ್ಧಿಸಿ ದಪ್ಪಗಾಗುತ್ತದೆ.

 
At 7:07 PM, April 28, 2006, Blogger Vishwanath said...

ಶ್ರೀಯುತ ಸಂಜಯರು ಹೇಳಿದಂತೆ ಭಾಷೆಯ ವಿಚಾರದಲ್ಲಿ ಭಾವಶೂನ್ಯರಾಗಿ ಚರ್ಚಿಸುವುದು ನಿಜಕ್ಕೂ ಕಷ್ಟ.
ಕರ್ನಾಟಕದಲ್ಲಿ ನೆಲೆಸಿದ್ದು, ನಮ್ಮ ಕಣ್ಣ ಮುಂದೆಯೇ ಕನ್ನಡ ದಿನ ದಿನಕ್ಕೂ ಅಧೋಗತಿಗಿಳಿಯುತ್ತಿರುವುದನ್ನು ಕಂಡು ಸಾರಥಿಯವರು ತಮ್ಮ ಅಭಿಪ್ರಾಯಗಳನ್ನು ಈ ರೀತಿ ವ್ಯಕ್ತಪಡಿಸಿರಬಹುದು. ಇದರಲ್ಲಿ ಯಾರೂ ಯಾರ ಮನಸ್ಸಿಗೂ ನೋವುಂಟು ಮಾಡುವ ಪ್ರಶ್ನೆಯೇ ಇಲ್ಲ.

ಹಾಗೆ ನೋಡಿದರೆ ತಾಯ್ನಾಡಿನಿಂದ ಹೊರಗಿನವರಿಗೇ ಕನ್ನಡದ ಅಭಿಮಾನ ಹೆಚ್ಚು ಎಂಬುದು ನನ್ನ ಅಭಿಪ್ರಾಯ. ನಾನು ಕಳೆದ ಏಳೆಂಟು ವರ್ಷಗಳಿಂದ ಚೆನ್ನೈನಲ್ಲಿ ನೆಲೆಸಿದ್ದೇನೆ. ಇಲ್ಲಿ ನಡೆಯುತ್ತಿರುವ ಕನ್ನಡದ ಚಟುವಟಿಕೆಗಳನ್ನು ನನ್ನ ಊರಿನಲ್ಲಿ ನೋಡಿದ ನೆನಪಿಲ್ಲ. ದೂರದ ಅಮೆರಿಕದ ವಿಭಿನ್ನ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದಿರುವ ಸಂಜಯರ ಮಕ್ಕಳು ಕನ್ನಡದಲ್ಲಿ ಮಾತನಾಡುವುದನ್ನು-ಓದುವುದನ್ನು ಕಲಿತಿದ್ದಾರೆ ಎಂದರೆ ಅವರನ್ನು (ಸಂಜಯರನ್ನು) ಕನ್ನಡದ ಅಭಿಮಾನಿಗಳಲ್ಲ ಎಂದು ಹೇಗೆ ಹೇಳುವುದು? ಕನ್ನಡದ ಕುರಿತ ಅವರ ಅಭಿಮಾನ ಪ್ರಶ್ನಾತೀತ.

ಇನ್ನು ಜಾಗತೀಕರಣದ ಬಗ್ಗೆ-

ಅಮೆರಿಕದ ಮುಕ್ತ ಮಾರುಕಟ್ಟೆ ಬಗ್ಗೆ ಕೆಲ ಸೆಮಿನಾರುಗಳಲ್ಲಿ ಅಮೆರಿಕನ್ನರೇ ಹೇಳಿದ್ದನ್ನು ಕೇಳಿದ್ದೆ. ಈಗ ಸಂಜಯರು ಅದನ್ನೇ ಉದಾಹರಣೆಸಹಿತ ಹೇಳಿದ್ದರಿಂದ ಮನದಟ್ಟಾಗಿದೆ.

ಭಾಷೆಯಾಗಲೀ, ಆರ್ಥಿಕ ವಿಷಯವಾಗಲೀ ಅಥವಾ ಬೇರಾವುದೇ ವಿಷಯಗಳ ಬಗ್ಗೆ ಶ್ರೀಯುತ ಸಂಜಯರು ಆಳ ಅಧ್ಯಯನದೊಂದಿಗೆ ಮಂಡಿಸುವ ವಾದ ನಿಜಕ್ಕೂ ಚಿಂತನೆಗೆ ಯೋಗ್ಯ. ಇದರಲ್ಲಿ ನೋವಿನ ಪ್ರಶ್ನೆಯೇ ಇಲ್ಲ, ನಾವು ಚರ್ಚಿಸಿದಷ್ಟೂ ನಮಗೆ ವೈಚಾರಿಕ ಲಾಭವೇ ಹೆಚ್ಚು ಎಂಬುದು ನನ್ನ ಅಭಿಮತ. ಸಾರಥಿಯವರೂ ಇದನ್ನು ಒಪ್ಪುತ್ತಾರೆ ಎಂದುಕೊಂಡಿದ್ದೇನೆ. ಚಿಂತನೆಗೆ ಒರೆ ಹಚ್ಚುವ ಇನ್ನೂ ಇಂಥ ಹಲವಾರು ಚರ್ಚೆಗಳು ನಡೆಯಲಿ.

ಅರ್ಥಪೂರ್ಣ ವಿಚಾರ-ವಿನಿಮಯದಲ್ಲಿ ಪಾಲ್ಗೊಂಡ ಶ್ರೀಯುತ ಸಂಜಯ ಅವರಿಗೆ, ಸಾರಥಿಯವರಿಗೆ ಹಾಗೂ ಅನ್ವೇಷಿಗಳಿಗೆ ಧನ್ಯವಾದಗಳು.

ನಮಸ್ಕಾರಗಳೊಂದಿಗೆ,

ವಿಶ್ವನಾಥ

 

Post a Comment

<< Home