ಪುಂಡಾಟಕ್ಕೆ ಕೊನೆಯೆಲ್ಲಿ?
ಅಂಬೇಡ್ಕರ್ ಪ್ರತಿಮೆಗೆ ಅಪಮಾನ: ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆಗೆ ನಾಲ್ವರ ಬಲಿ, ಅಂಬೇಡ್ಕರ್ ಮೂರ್ತಿ ಭಗ್ನ: ಬೀದರ್, ನಾಗಪುರ, ಕಾನ್ಪುರ... ಉದ್ವಿಗ್ನ
ಈಚೆಗೆ ಪತ್ರಿಕೆಗಳಲ್ಲಿ ಈ ಸುದ್ದಿಗಳು ಸಾಮಾನ್ಯವಾಗಿಬಿಟ್ಟಿವೆ. ಯಾರೋ ಕಿಡಿ(ತಿಳಿ)ಗೇಡಿಗಳು ಮಾಡಿದ ಕೃತ್ಯಕ್ಕೆ ಹಿಂಸಾರೂಪದ ಪ್ರತಿಭಟನೆಯೇ? ಅಮೂಲ್ಯ ಜೀವಗಳ ಬಲಿಯೇ? ಮೂರ್ತಿಗೆ ಅವಮಾನ ಮಾಡಿದಾಕ್ಷಣ ಮಹಾನಾಯಕ ಅಂಬೇಡ್ಕರ್ ಅವರಿಗೆ ಅವಮಾನವಾಗಿಬಿಡುತ್ತದೆಯೇ?
ಈಚೆಗೆ ಚೆನ್ನೈನಲ್ಲಿ ರಸ್ತೆ ಕಾಮಗಾರಿಗಾಗಿ ವೃತ್ತವೊಂದರಲ್ಲಿದ್ದ ಅಂಬೇಡ್ಕರ್ ಪ್ರತಿಮೆಯನ್ನು ತಾತ್ಕಾಲಿಕವಾಗಿ ರಸ್ತೆಬದಿಗೆ ಇರಿಸಿದ್ದೇ ದೊಡ್ಡ ರಾದ್ಧಾಂತಕ್ಕೆ ಕಾರಣವಾಯಿತು. ನಾಲ್ಕಾರು ಮೋಟರ್ ಸೈಕಲ್ ಗಳಲ್ಲಿ ಬಂದವರು (ಪೊಲೀಸರ ಪ್ರಕಾರ ದಲಿತ್ ಪ್ಯಾಂಥರ್ಸ್ ಕಾರ್ಯಕರ್ತರು) ಮಿಂಚಿನ ವೇಗದಲ್ಲಿ ನಾಲ್ಕು ಸರಕಾರಿ ಬಸ್ಸಿನ ಗಾಜಗಳಿಗೆ ಕಲ್ಲೆಸೆದು ಪರಾರಿಯಾದರು.
ಅಂಬೇಡ್ಕರ್ ಅವರ 50ನೇ ಪುಣ್ಯತಿಥಿ ಸಮೀಪಿಸಿದಂತೆ ಈಚೆಗೆ ಬೀದರ್, ಕಾನ್ಪುರ ಗಳಲ್ಲೂ ಯಾರೋ ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ಇದೇ ಧಾಟಿಯ ಉಗ್ರ ಪ್ರತಿಭಟನೆ ವ್ಯಕ್ತವಾಗಿದೆ. ಜನರನ್ನು ಪ್ರಚೋದಿಸಲು ಕೆಲ ಪಕ್ಷಗಳು ಇದನ್ನು ರಾಜಕೀಯಗೊಳಿಸಿ ಬಂದ್ ಗೆ ಕರೆ ನೀಡಿ, ಹಿಂಸಾಚಾರಕ್ಕೂ ಪ್ರಚೋದನೆ ನೀಡಿವೆ. ಇದಕ್ಕೆ ಪ್ರತಿಯಾಗಿ ಪೊಲೀಸ್ ಗೋಲಿಬಾರ್ ನಲ್ಲಿ 6 ಜನ ಸಾವನ್ನಪ್ಪಿದ್ದಾರೆ.
ಇಡೀ ದೇಶಕ್ಕೆ ಸಂವಿಧಾನವನ್ನು ನೀಡಿದ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ತುಂಬಾ ಬಾಲಿಶವೆನಿಸುತ್ತದೆ. ಅವರೊಬ್ಬ ಎಲ್ಲಾ ಸಮುದಾಯಕ್ಕೂ ಸೇರಿದ ವ್ಯಕ್ತಿ ಎಂದು ಬಿಂಬಿತವಾದಾಗ ಮಾತ್ರ ಇಂಥ ಅನರ್ಥಗಳು ಆಗಾಗ ನಡೆಯುವುದಿಲ್ಲ.
ಇಲ್ಲದಿದ್ದರೆ ಇಂಥ ಹಿಂಸಾಕೃತ್ಯಗಳಿಂದ ಸಮಾಜದಲ್ಲಿ ದಲಿತರ ಬಗ್ಗೆ ಎಂಥ ಸಂದೇಶ ರವಾನೆಯಾಗುತ್ತದೆ ಎಂಬುದನ್ನು ನಾವೆಲ್ಲ ಗಂಭೀರವಾಗಿ ಯೋಚಿಸಬೇಕು.