Friday, May 29, 2009

ಮತಭಾರತ ಮತ್ತು ಮಧ್ಯಮ ವರ್ಗ

ಅದು ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು.

ವಿಧಾನಸೌಧ ಹಾಗೂ ರಾಜಭವನಕ್ಕೆ ಕೂಗಳತೆ ದೂರದಲ್ಲಿರುವ ಜಿಪಿಒ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ ಸ್ಟೇಬಲ್ ತಿಮ್ಮಯ್ಯ ಅಲಿಯಾಸ್ ಮೀಸೆ ತಿಮ್ಮಯ್ಯ, ಬೆಂಗಳೂರಿನ ಭಾರಿ ಟ್ರಾಫಿಕ್ಕಿನ ನಡುವೆಯೆಯೂ ವಿಧಾನಸೌಧ - ರಾಜಭವನಕ್ಕೆ ಎಡತಾಕುವ ಗಣ್ಯರ ಪಡೆಗೆ ದಾರಿಮಾಡಿಕೊಡುತ್ತ, ಜನರೊಂದಿಗೆ ಸ್ನೇಹದಿಂದ ಇದ್ದರು. ಒಂದು ದಿನ ಅದೇ ವೃತ್ತದಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿ ಬಾಲಕಿಯೊಬ್ಬಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ತಿಮ್ಮಯ್ಯ ಅಸುನೀಗಿದರು. ತಮ್ಮ ಗಿರಿಜಾ ಮೀಸೆ ಮತ್ತು ನಯ-ವಿನಯದಿಂದ ಜನಮನ್ನಣೆ ಗಳಿಸಿದ್ದ ಮೀಸೆ ತಿಮ್ಮಯ್ಯ ದುರಂತ ಸಾವಿಗೀಡಾದ ಬಳಿಕ ಆತ ಕರ್ತವ್ಯ ನಿರ್ವಹಿಸುತ್ತಿದ್ದ ವೃತ್ತಕ್ಕೆ ಅವರ ಹೆಸರನ್ನೇ ಇಡಬೇಕು ಎಂದು ಪತ್ರಿಕೆಗಳಲ್ಲಿ ಓದುಗರು ಮಾಡಿದ ಆಗ್ರಹಕ್ಕೆ ಮಣಿದ ಅಂದಿನ ಮುಖ್ಯಮಂತ್ರಿ ಎಚ್. ಡಿ. ದೇವೇಗೌಡರು ತಿಮ್ಮಯ್ಯ ವೃತ್ತ ಎಂದು ನಾಮಕರಣ ಮಾಡಲು ಶಿಫಾರಸು ಮಾಡಿದರು.

ಕೆಲವೇ ವರ್ಷಗಳ ಹಿಂದೆ ಮುಖ್ಯಮಂತ್ರಿ ಯಾದವರೂ ಪತ್ರಿಕೆಗಳನ್ನು ಓದುತ್ತಿದ್ದರು, ಅದರಲ್ಲಿ ಪ್ರಕಟವಾದ ಓದುಗರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು ಎಂಬುದಕ್ಕೆ ಮೇಲಿನ ಉದಾಹರಣೆ ಸಾಕ್ಷಿ. ಆದರೆ ಇಂದು ಮಂತ್ರಿ ಮಾಗಧರಾರೂ ಪತ್ರಿಕೆಗಳನ್ನೇ ಓದುತ್ತಿಲ್ಲ ಎಂಬ ಭಾವನೆ ಜನರಲ್ಲಿ ಬೇರೂರುವಂತಾಗಿದೆ. ತಾವು ಹೇಳಿದ್ದು, ಜಾಹೀರಾತು ನೀಡಿದ್ದು ಪತ್ರಿಕೆಗಳಲ್ಲಿ ಪ್ರಕಟವಾಗಿದೆಯೇ ಇಲ್ಲವೇ ಎಂಬುದನ್ನು ನೋಡಲು ಮಾತ್ರ ಕಣ್ಣು ತೆಗೆಯುವ ರಾಜಕಾರಣಿಗಳು ಜನರ ಸಮಸ್ಯೆಗಳನ್ನು ಮಾತ್ರ ಕಣ್ಣಿಗೆ - ಕಿವಿಗೆ ಹಾಕಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಅವರದೇನಿದ್ದರೂ ಏಕಮುಖ ಸಂವಹನ.

ಕೆಲ ದಿನಗಳ ಹಿಂದೆ ಸಚಿವರೊಬ್ಬರು ತಮ್ಮ ಅಂಕಣದಲ್ಲಿ ವರ್ಷದಿಂದ ವರ್ಷಕ್ಕೆ ಮತದಾನ ಕಡಿಮೆಯಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇನ್ನೂ ಮುಂದುವರಿದು ಕಡಿಮೆ ಮತದಾನವಾಗುವ ಬಗ್ಗೆ ಚುನಾವಣಾ ಆಯೋಗ ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದೂ ವ್ಯಾಖ್ಯಾನಿಸಿದ್ದರು. ಮತದಾನ ಕಡಿಮೆಯಾಗಲು, ಅದರಲ್ಲೂ ಮಧ್ಯಮ ವರ್ಗದ ಜನ ಮತಗಟ್ಟೆಗಳತ್ತ ಸುಳಿಯದಿರಲು ಕಾರಣವೇನು ಎಂದು ರಾಜಕಾರಣಿಗಳು ಚಿಂತಿಸಿದ್ದಾರೆಯೇ?

ಚುನಾವಣೆ ಬಂದಾಗ ಮಾತ್ರ ನಮ್ಮ ಜನ ರಾಜಕಾರಣಿಗಳನ್ನು ಹತ್ತಿರದಿಂದ ನೋಡಲು ಸಾಧ್ಯ. ಅವರ ರೋಡ್ ಷೋ ಗಳೇನು, ಕೊಳಗೇರಿಗೆ ಗುಡಿಸಲುಗಳಿಗೆ ಭೇಟಿಗಳೇನು... ಅವರು ಪಾರ್ಕ್ ನಲ್ಲೂ ಹಾಜರ್, ತರಕಾರಿ ಮಂಡಿಯಲ್ಲೂ ಜೀ ಹುಜೂರ್! ಅದೇ ಚುನಾವಣೆ ಮುಗಿದ ಮೇಲೆ? ಅವರ ಸುತ್ತ ಹುತ್ತ ಬೆಳೆದುಬಿಡುತ್ತದೆ.

ಪ್ರತಿವರ್ಷ ಜೂನ್ ತಿಂಗಳು ಸಮೀಪಿಸಿದಂತೆ ಖಾಸಗಿ ಶಾಲೆಗಳು ವಿಧಿಸುವ ದುಬಾರಿ ಶುಲ್ಕ, ಹಣ ಕೀಳಲು ಅವು ಕಂಡಿರುವ ದಾರಿಗಳ ಸರಮಾಲೆಯ ಗೋಳಿನ ಕತೆಗಳು ಪತ್ರಿಕೆಗಳ 'ಸಂಪಾದಕರಿಗೆ ಪತ್ರ' ವಿಭಾಗದಲ್ಲಿ ಪ್ರಕಟವಾಗುವುದು ಸಾಮಾನ್ಯ. ಆದರೆ ಇಂಥ ಎಷ್ಟು ಪತ್ರಗಳಿಗೆ ಸಂಬಂಧಿಸಿದ ಸಚಿವರು, ಅಧಿಕಾರಿಗಳು ಉತ್ತರ ನೀಡಿದ್ದಾರೆ? ಎರಡೂವರೆ ವರ್ಷದ ಮಗುವಿಗೆ 25 ಸಾವಿರ ರೂಪಾಯಿ ಶುಲ್ಕ ವಸೂಲು ಮಾಡುವ ಶಾಲೆಯ ಆಡಳಿತ ಮಂಡಳಿಯನ್ನು ಯಾವ ಜನಪ್ರತಿನಿಧಿಯಾದರೂ ಪ್ರಶ್ನಿಸಿದ್ದಾರಾ? ಉಹುಂ ಇಲ್ಲ. ಏಕೆಂದರೆ ಇಂದು ಶಿಕ್ಷಣದ ಹೆಸರಿನಲ್ಲಿ ನಡೆಯುತ್ತಿರುವ 'ದಂಧೆ'ಯಲ್ಲಿ ಪಕ್ಷಭೇದ ಮರೆತು ರಾಜಕಾರಣಿಗಳು ಫಲಾನುಭವಿಗಳು. ಶಾಲೆಯ ದಾರಿ ದೂರವಿಲ್ಲ ಆದರೆ ಈ ದಾರಿ ಬಲು ದುಬಾರಿ ಎಂಬುದು ಸರಕಾರದ ಗಮನಕ್ಕೆ ಬಂದಂತಿಲ್ಲ.

ಅಂಕೆಮೀರಿ ಹಣ ವಸೂಲು ಮಾಡುವ ಶಾಲೆಗಳ ಬಗ್ಗೆ ಯಾರಿಗೆ ದೂರು ನೀಡಬೇಕು ಎಂಬುದು ಅನೇಕ ಪಾಲಕರಿಗೆ ಗೊತ್ತಿಲ್ಲ. ದುಬಾರಿ ಶುಲ್ಕ ತೆತ್ತು ಬೇಸತ್ತಿರುವ ಪಾಲಕರು ಪತ್ರಿಕೆಗಳ ಗಮನಕ್ಕೆ ತಂದರೂ ಪ್ರಯೋಜನವಾಗದಾದಾಗ ಶಾಲೆಯ ಫೀಸು ಕಟ್ಟಿ ಇನ್ನೊದು ವರ್ಷದ ವರೆಗೆ ಅಸಹಾಯಕರಾಗಿ ಬಿಡುತ್ತಾರೆ.

ಇನ್ನು ಶಿಕ್ಷಣದ ನಂತರ ಮಧ್ಯಮ ವರ್ಗದ ಬಹುಮುಖ್ಯ ಆದ್ಯತೆ ಸ್ವಂತ ಸೂರು. ಬೆಂಗಳೂರಿನಂಥ ಊರಿನಲ್ಲಿ ಮೂರು ಜನರ ಪುಟ್ಟ ಸಂಸಾರಕ್ಕೆ ಬಾಡಿಗೆ ಮನೆ ಬೇಕೆಂದರೆ ಏಳೆಂಟು ಸಾವಿರ ಬಾಡಿಗೆ ಕಕ್ಕಬೇಕು. ಹಾಗಿದ್ದರೆ ಬಾಡಿಗೆ ನಿಯಂತ್ರಣ ಕಾಯ್ದೆ ಅನ್ನುವುದೊಂದು ಇದೆಯಾ? ಇದಕ್ಕೂ ಒಂದು ಇಲಾಖೆ ಇದೆಯಾ? ಗೊತ್ತಿಲ್ಲ. ಸರಕಾರೀ ಬಂಗಲೆಗಳಲ್ಲಿ ವಾಸ ಮಾಡುವ ನಮ್ಮ ದೊರೆಗಳಿಗೆ ಇದರ ಉಸಾಬರಿಯಾದರೂ ಏಕೆ ಬೇಕು? ಅವರಿಗೆ ಬೇಕಿರುವುದು 'ಭದ್ರ' ಸರಕಾರ ನಡೆಸುವಷ್ಟು ತಲೆ ಎಣಿಕೆ, ಐದು ವರ್ಷ ಜಡದ್ದು ರಾಜ್ಯಭಾರ.

ಸಾರ್ವಜನಿಕರ ಮುಖವಾಣಿಯಂತಿರುವ ಪತ್ರಿಕೆಗಳು - ಪ್ರಜಾಪ್ರತಿನಿಧಿಗಳ ಮಧ್ಯೆ ಹೀಗೇ ಕಂದರ ಬೆಳೆಯುತ್ತಾ ಹೋದರೆ ಪ್ರಜಾಪ್ರಭುತ್ವಕ್ಕೆ ಅರ್ಥವಾದರೂ ಏನು? ತಮ್ಮ ಮೂಲಭೂತ ಅಗತ್ಯಗಳಿಗೆ ಸ್ಪಂದಿಸದ ರಾಜಕೀಯ ಪಕ್ಷಗಳ ಬಗ್ಗೆ ಜನರಿಗಿರುವ ಅಸಹನೆ ಪೂರ್ಣ ಪ್ರಮಾಣದ ಮತದಾನ ಬಹಿಷ್ಕಾರಕ್ಕೆ ಕಾರಣವಾದರೆ ಗತಿಯೇನು? ಅಧಿಕಾರದಲ್ಲಿರುವವರು, ಅಧಿಕಾರಕ್ಕೆ ಬರಬೇಕೆನ್ನುವವರು ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ.

Saturday, May 09, 2009

ಕಪ್ಪು ಹಣವೂ ಕಂಗಾಲು ನಾಯಕರೂ...

ಈ ಲೋಕಸಭಾ ಚುನಾವಣೆಯಲ್ಲಿ ಭಾರಿ ಸುದ್ದಿಯಾಗುತ್ತಿರುವುದೆಂದರೆ ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ಭಾರತಕ್ಕೆ ತಂದೇ ಸಿದ್ಧ ಎಂದು ರಾಜಕೀಯ ಪಕ್ಷವೊಂದು ಪಣತೊಟ್ಟಿದೆ!

ಮಾಧ್ಯಮಗಳಲ್ಲಿ ಈ ಬಗ್ಗೆ ಭಾರಿ ಚರ್ಚೆಯೂ ಆಗಿದೆ. ಪರ-ವಿರೋಧ ಮಾತನಾಡುವವರ ಮೂತಿಗೆ ಮೈಕ್ ತಿವಿದು ಅವರು ಉದುರಿಸಿದ್ದನ್ನೆಲ್ಲ ನಮಗೆ ರವಾನಿಸಿಯೂ ಆಗಿದೆ!

ಸ್ವಿಸ್ ಬ್ಯಾಂಕ್ ನಲ್ಲಿ ಹಣವಿರುವ ವಿಚಾರ ನಮ್ಮ ರಾಜಕೀಯ ನಾಯಕರಿಗೆ ದಿಢೀರ್ ಆಗಿ ನೆನಪಾಗಿದ್ದದರೂ ಯಾಕೆ? ನಾನು ಶಾಲೆಗೆ ಹೋಗುತ್ತಿದ್ದಾಗಲೇ (ಸುಮಾರು 20 ವರ್ಷಗಳ ಹಿಂದೆ), ನಮ್ಮ ರಾಜ್ಯದ ಮುಖ್ಯಮಂತ್ರಿಯೊಬ್ಬರು ಬ್ಲ್ಯಾಕ್ ಮನಿ ಇಡಲೆಂದೇ ಸ್ವಿಜರ್ ಲ್ಯಾಂಡ್ ಗೆ ಹೋಗುತ್ತಾರೆ ಎಂದು ಮಾತಾಡಿಕೊಳ್ಳುತ್ತ ಹೋಗ್ತಾ ಇದ್ದೆವು. ಅಷ್ಟು ಅಥವಾ ಅದಕ್ಕಿಂತಲೂ ಹಳೆಯದಾದ ವಿಚಾರ ದಿಢೀರ್ ಅಂತ ಚುನಾವಣಾ ಸಮಯದಲ್ಲೇ ನಮ್ಮ ರಾಜಕಾರಣಿಗಳ ಮಂಡೆ ಹೂಕ್ಕು ಬಡಬಡಿಸುವಂತೆ ಮಾಡಿತು?

ಕಾರಣ ಸಿಂಪಲ್. ಈವರೆಗೆ ನಡೆದ ಚುನಾವಣೆಗಳಲ್ಲಿ ಮಂದಿರ, ಮಸೀದೆ, ಭಯೋತ್ಪಾದನೆ, ಆಲೂಗಡ್ಡೆ, ಈರುಳ್ಳಿ... ಎಲ್ಲ ವಿಚಾರಗಳೂ ಪ್ರಸ್ತಾಪವಾಗಿ ಸವಕಲಾದವು-ಅದಕ್ಕೆ ಸ್ವಲ್ಪ ಹೊಸತನವಿರಲಿ ಎಂದು ಯೋಚಿಸಿರಬಹುದು ನಮ್ಮ ರಾಜಕಾರಣಿಗಳು.

ನಮ್ಮವರಿಗೆ ಸ್ವಿಸ್ ಬ್ಯಾಂಕ್ ನಿಂದ ಕಪ್ಪು/ಕಡುಗಪ್ಪು ಹಣ ತರುವ ಬಗ್ಗೆ ನಿಜವಾದ ಕಾಳಜಿ ಇದೆ ಎಂದೇ ಅಂದುಕೊಂಡರೂ, ಈ ರೀತಿ ಟಾಮ್ ಟಾಮ್ ಮಾಡಿದರೆ ಹಣ ಇತ್ತವರು ಅಲ್ಲೇ ಇಟ್ಟು ಇವರು ಬಂದು ತೆಗೆದುಕೊಂಡು ಹೋಗಲಿ ಎಂದು ನಿರುಮ್ಮಳವಾಗಿರುತ್ತಾರಾ?


ನಿಜವಾಗಿ ಕಪ್ಪು ಹಣ ಪತ್ತೆ ಹಚ್ಚುವ ಬಗ್ಗೆ ಇವರಿಗೆ ನಿಜವಾಗಿಯೂ ಕಾಳಜಿ ಇದ್ದಾರೆ , ಅದನ್ನು ತಮ್ಮ ಕಾಲಬುಡದಿಂದಲೇ ಆರಂಭಿಸಬೇಕು. ಇದಕ್ಕಾಗಿ ಇವರೇನು ಸ್ವಿಜರ್ ಲ್ಯಾಂಡ್ ವರೆಗೆ ಪಾದ ಬೆಳೆಸಬೇಕಿಲ್ಲ!

ಈಚೆಗೆ ಚುನಾವಣಾ ನಾಮಪತ್ರ ಸಲ್ಲಿಸುವಾಗ ಪ್ರತಿಯೊಬ್ಬ ರಾಜಕಾರಣಿಯೂ ಘೋಷಿಸಿದ ಆಸ್ತಿ ನೋಡಿದರೆ, ನಿಜವಾಗಿಯೂ ದುಡಿದು ಸಂಪಾದಿಸಿದವರು, ತೆರಿಗೆ ಕಟ್ಟಿದವರು ಇಷ್ಟು ಹಣ ಗಳಿಸಲು ಸಾಧ್ಯವೇ ಎಂಬುದು ಅನ್ನಿಸುವುದಿಲ್ಲವೇ? ಇನ್ನು ಇವರು ರಾಜಾರೋಷವಾಗಿ ಘೋಷಿಸಿದ್ದೆ ಇಷ್ಟಾದರೆ ಗುಳುಂ ಮಾಡಿದ್ದು ಎಷ್ಟಿರಬಹುದು? ಹತ್ತಾರು, ನೂರಾರು ಕೋಟಿ ರೂಪಾಯಿ ಘೋಷಿಸಿದವರೆಲ್ಲ ಮಹಾರಾಜರೇ, ಚಕ್ರವರ್ತಿಗಳೇ? ಖಂಡಿತ ಅಲ್ಲ ನಮ್ಮ ಸೇವೆಗೆ ಟೊಂಕ ಕಟ್ಟಿ ನಿಂತ ಮಹಾ ಸೇವಕರಿವರು! ಈ ಮಹಾ ಸೇವಕರು ಖಾದಿ ಧರಿಗಳಾಗುವುದಕ್ಕಿಂತ ಮುನ್ನ ಎಷ್ಟು ಆಸ್ತಿ ಹೊಂದಿದ್ದರು, ಖಾದಿಧಾರಿಗಳಾದ ಮೇಲೆ ಎಷ್ಟು ಕಪ್ಪ ಪಡೆದರು, ದಿನೇ ದಿನೇ ಆ ಕಪ್ಪವೇ ಹೇಗೆ ಕಡುಗಪ್ಪು ಹಣವಾಯಿತು ಎಂಬುದರ ಮೂಲವನ್ನು ಬೆನ್ನತ್ತಿದರೆ ಸ್ವಿಜರ್ ಲ್ಯಾಂಡ್ ಬಗ್ಗೆ ಜಪಿಸಬೇಕಿಲ್ಲ!

ಸ್ವಯಂಘೋಷಿತ ಮಣ್ಣಿನ ಮಕ್ಕಳು, ಗ್ರಾಮದ ನೀರು ಕುಡಿದು ಅಲ್ಲೇ ವಾಸ್ತವ್ಯ ಮಾಡುವವರು, ಬಡತನ ನಿರ್ಮೂಲನೆ ಮಾಡುತ್ತೇನೆ ಎನ್ನುತ್ತಲೇ ಹೊಟ್ಟೆ ಬೆಳೆಸಿಕೊಂಡವರು , ಸಮರ್ಥರು -ನಿರ್ಣಾಯಕರು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿರುವವರು ಜನಸೇವೆಯನ್ನೇ ತಮ್ಮ ಕಸುಬನ್ನಾಗಿರಿಸಿಕೊಂಡು ನೂರು-ಸಾವಿರ ಕೋಟಿ ಹೇಗೆ ಸಂಪಾದಿಸಿದರು? ಮೊದಲು ಇವರ ಕಪ್ಪು ಹಣ ಹೊರಬಂದರೆ ಆ ಹಣದಲ್ಲೇ ನೂರಾರು ಸೇತುವೆಗಳನ್ನು ಕಟ್ಟಬಹುದು, ಸಾವಿರಾರು ಮೈಲಿ ರಸ್ತೆ ನಿರ್ಮಿಸಬಹುದು.

ಅಷ್ಟಕ್ಕೂ ಕಪ್ಪು ಹಣದ ವಿಚಾರ ಚುನಾವಣಾ ವಿಚಾರವಾಗಬೇಕಿತ್ತಾ? ನಮ್ಮಲ್ಲಿ ಬೇರೆ ಸಮಸ್ಯೆಗಳಿಲ್ಲವೇ ?
ಸರಕಾರಕ್ಕೆ ನಿಯತ್ತಾಗಿ ತೆರಿಗೆ ಕಟ್ಟಿದರೂ ನಮಗೆ ಉತ್ತಮ ಕುಡಿಯುವ ನೀರು ಸಿಗುತ್ತಿಲ್ಲ, ಬೆಂಗಳೂರಿನಲ್ಲಿ ದುಡಿಮೆಯ ಶೇ.30 ರಷ್ಟು ದುಡ್ಡು ಕಕ್ಕಿದರೂ ಒಂದು ಪುಟ್ಟ ಬಾಡಿಗೆ ಮನೆ ಪಡೆಯಲಾಗದ ಮಧ್ಯಮ ವರ್ಗ, ರೈತ ಬೆಳೆದ ಈರುಳ್ಳಿಗೆ ಸಿಗುವುದು ಕೇವಲ ಎರಡೇ ರೂಪಾಯಿ- ಅದೇ ಈರುಳ್ಳಿ ಮಾರುಕಟ್ಟೆಯಲ್ಲಿ ಹನ್ನೆರಡು ರೂಪಾಯಿ, ಅನಿಯಮಿತ ಮಳೆ, ಅದರಲ್ಲೂ ಬಂದ ಬೆಳೆಗೆ ಸಿಗುವುದು ಇಂಥ ಬೆಲೆ ... ಇದರಿಂದ ರೋಸಿಹೋದ ನಮ್ಮ ರೈತರ ಮಕ್ಕಳು ಬೆಂಗಳೂರಿನತ್ತ ಮುಖ ಮಾಡಿ ಕಟ್ಟಡ ನಿರ್ಮಾಣದಲ್ಲೋ , ಸೆಕ್ಯೊರಿಟಿ ಗಾರ್ಡ್ ಗಳಾಗೋ ದುಡಿಯುತ್ತಿದ್ದಾರೆ . ಇಂಥವರನ್ನು ಮೇಲೆತ್ತಲು, ನೊಂದವರಿಗೆ ನ್ಯಾಯ ಒದಗಿಸುವುದು ಚುನಾವಣಾ ವಿಷಯ ಏಕಾಗುವುದಿಲ್ಲ? ಹುಡುಕಿದರೂ ಉತ್ತರ ಸಿಗುತ್ತಿಲ್ಲ ನಿಮಗೆ ಗೊತ್ತಾದರೆ ತಿಳಿಸಿ.

Wednesday, May 06, 2009

ಜನ ಮರುಳೋ ಜಾತ್ರೆ ಮರುಳೋ!

ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ನೀಡಿರುವ ಹೇಳಿಕೆ "Say no to Bangalore and yes to Buffalo" ಭಾರತದಲ್ಲಿ ಅದರಲ್ಲೂ ಬೆಂಗಳೂರಿನ ಐಟಿ ಉದ್ಯಮದಲ್ಲಿ ಸಂಚಲನವನ್ನೇ ಮೂಡಿಸಿದೆ .
ಇದೇನು ಒಬಾಮ ಏಕಾ ಏಕಿ ಸಿಡಿಸಿದ ಬಾಂಬ್ ಅಲ್ಲ . ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದಾಗಲೇ ಒಬಾಮ ಹೊರಗುತ್ತಿಗೆ ವಿರುಧ್ಧ ಸತತ ವಾಗಿ ಟೀಕಿಸುತ್ತಲೇ ಇದ್ದರು . ಆಗೆಲ್ಲ ನಾವು ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.
ಒಮ್ಮೆ ನೆನಪು ಮಾಡಿಕೊಳ್ಳಿ.
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣಾ ಪ್ರಚಾರ ಉತ್ತುಂಗದಲ್ಲಿದ್ದಾಗ ನಮ್ಮ ಮಾಧ್ಯಮಗಳು ವರ್ತಿಸಿದ ರೀತಿಯನ್ನು. ಒಬಾಮ ಸೀನಿದರು ಸುದ್ದಿಯೇ ಹೂ... ಬಿಟ್ಟರೂ ಸುದ್ದಿಯೇ. ಖಾಸಗಿ ಪ್ರಸಾರಕ್ಕಾಗಿ ಇರುವ ಪತ್ರಿಕೆ ಗಳಿಂದ ಹಿಡಿದು ರಾಜ್ಯ - ರಾಷ್ಟ್ರ ಮಟ್ಟದ ಪತ್ರಿಕೆಗಳು ಎನ್ನಿಸಿಕೊಂಡವು ಪ್ರತಿದಿನ ಮುಖಪುಟದಲ್ಲಿ ಒಬಾಮ ಸುದ್ದಿ ಪ್ರಕಟಿಸಿ. ಟಿವಿ ಚಾನೆಲ್ ನವರದ್ದು ಬೇರೆಯೇ ಕಥೆ. ಅವರು ಮುಖಕ್ಕೆ ಎರಡು ಇಂಚು ಬಣ್ಣ ಬಳಿದುಕೊಂಡು ರಾಯ್ಟರ , ಎಪಿ ನಂಥ ಸುದ್ದಿಸಂಸ್ಥೆ ಗಳು ಕಳಿಸಿದ ಕ್ಲಿಪ್ಪಿಂಗ್ ಗಳನ್ನೇ ಕಣ್ಣಿಗೊತ್ತಿಕೊಂಡು ತಮ್ಮದೇ ಮನೆಯ ಸುದ್ದಿಯೇನೋ ಎಂಬಂತೆ ಪ್ರಚಾರ ಮಾಡಿ ಕೃತಾರ್ಥರಾದರು.

ಹಾಗಾದರೆ ಸುದ್ದಿಯನ್ನು ಪ್ರಸಾರ ಮಾಡಬಾರದೇ ಎಂದು ಕೆಲವರು ವಾದಿಸಬಹುದು. ಅಂಥವರಿಗೆ, ಈ ಪಾಟಿ ಪ್ರಚಾರ ಅಗತ್ಯವಿತ್ತೆ ಎಂಬುದು ನನ್ನ ಪ್ರಶ್ನೆ.

ನಮ್ಮ ಬೆಂಗಳೂರು ಮಹಾನಗರ ಪಾಲಿಕೆ ನಿರ್ಮಲ ಬೆಂಗಳೂರು ಎಂದು ಹೇಳಿಕೊಂಡು ಕಲಾಸಿಪಾಳ್ಯವನ್ನು ಗಬ್ಬು ನಾರಲು ಬಿಟ್ಟಿರುವುದು , ಕೊಡ ನೀರಿಗಾಗಿ ಮೈಲುಗಟ್ಟಲೆ ನಡೆದು ಹೋಗುವ ನಮ್ಮ ಉತ್ತರ ಕರ್ನಾಟಕದ ಹೆಣ್ಣುಮಕ್ಕಳು , ಯಾವ ಬೆಳೆ ಬೆಳೆದರು ನಷ್ಟವನ್ನೇ ಅನುಭವಸಿ ಕಣ್ಣೀರು ಕೊಡಿ ಹರಿಸುತ್ತಿರುವ ರೈತ , ಐದು ಸಾವಿರ ರೂಪಾಯಿ ಕಕ್ಕಿದರೂ ನಾಲ್ಕು ಜನ ಕಾಲು ಚಾಚಬಹುದಾದ ಮನೆ ಸಿಗದೇ ಪರದಾಡುತ್ತಿರುವ ಮಧ್ಯಮ ವರ್ಗ ನಮ್ಮ ಮಾಧ್ಯಮದವರಿಗೆ ಕಾಣುವುದಿಲ್ಲ ; ನೋಡಲು ಇವರಿಗೆ ಇಷ್ಟವೂ ಇಲ್ಲ! ಏಕೆಂದರೆ ಬರೀ ಸ್ಥಳೀಯ ಸುದ್ದಿಗಳನ್ನು ಪ್ರಕಟಿಸಿದರೆ ಎಲ್ಲಿ ನಮ್ಮದು ಲೋಕಲ್ ಪತ್ರಿಕೆಯಾಗಿ ಬಿಡುತ್ತದೋ ಎಂಬ ಭೀತಿ!

ಹಾಗಾದರೆ "No to bangalore" ಎಂದು ಒಬಾಮ ಗುಡುಗಿದ್ದು ತಪ್ಪಾ? ಖಂಡಿತ ಅಲ್ಲ.

ಆತ ಅಮೆರಿಕದ ಪ್ರಜೆಗಳಿಂದ ಆಯ್ಕೆಯಾಗಿದ್ದಾರೆಯೇ ಹೊರತು ಭಾರತೀಯರಿಂದಲ್ಲ . ಅಲ್ಲಿನ ಜನರ ಹಿತ ಕಾಪಾಡುವುದು ಆತನ ಕರ್ತವ್ಯ .

ಒಬಾಮ ಹೇಳಿಕೆಯಿಂದ ಭಾರತೀಯರು ತಲ್ಲಣಗೊಂಡಿರುವುದು ನಮ್ಮ ಗುಲಾಮಗಿರಿಯನ್ನು ತೋರಿಸುತ್ತದೆ . ಅರವತ್ತು ವರ್ಷಗಳ ಹಿಂದೆ ನಾವು ಬ್ರಿಟೀಷರ ದಾಸ್ಯದಲ್ಲಿದ್ದರೆ ಇಂದು ಅಮೆರಿಕದ ಗುಲಾಮರಾಗಿದ್ದೇವೆ . ಅಮೆರಿಕಾ ಒಮ್ಮೆ ಸೀನಿದರೆ ಸಾಕು ನಮ್ಮ ಮೂಗಿನಲ್ಲಿ ಸಿಂಬಳ ಧಾರಾಕಾರವಾಗಿ ಹರಿಯುತ್ತದೆ!

ಕೂಲಿಗಾಗಿ ಕಾಳು! :
ಇನ್ನೊಬ್ಬರ ಕೂಲಿಗಾಗಿ ಕಾಯ್ದು ಹೊಟ್ಟೆ ಹೊರೆದುಕೊಳ್ಳುತ್ತಿರುವ ಭಾರಿ ಜನಸಂಪನ್ಮೂಲದ ದೇಶ ಎಂದು ಹೇಳಿಕೊಳ್ಳುವ ನಾವು ಸ್ವಂತ ಉದ್ಯೋಗಗಳನ್ನು ಸೃಷ್ಟಿಸಿಕೊಳ್ಳದೆ ಇದ್ದುದು ಯಾರ ತಪ್ಪು?
ಇಂಥ ಆಲೋಚನೆಗಳನ್ನು ಮಾಡುವುದನ್ನು ಬಿಟ್ಟು ಒಬಾಮ ನನ್ನು ಅಂದು ವೈಭವೀಕರಿಸಿದ ಮಾಧ್ಯಮಗಳೇ ಇಂದು ಖಳನಾಯಕನಂತೆ ಬಿಂಬಿಸುತ್ತಿವೆ . ಮಾಧ್ಯಮಗಳಲ್ಲಿ ಪ್ರಕಟ/ಪ್ರಸಾರವಾಗಿದ್ದನ್ನೇ ನಂಬುವ ನಮ್ಮ ಜನ ಸರಿ / ತಪ್ಪುಗಳ ವಿಶ್ಲೇಷಣೆ ಮಾಡುವುದನ್ನು ಬಿಟ್ಟು ಒಬಾಮ ಗೆ ಹಿಡಿಶಾಪ ಹಾಕುತ್ತಿದ್ದಾರೆ?

ಜನ ಮರುಳೋ ಜಾತ್ರೆ ಮರುಳೋ...!