Tuesday, November 24, 2009

ಕಿರಾಣಿ ಅಂಗಡೀಲಿ ಸಾರಾಯಿ ಮಾರಾಟ!

ಕ್ಷಿಣ ಭಾರತದ ಪ್ರತಿಭಾನ್ವಿತ ನಟ ಪ್ರಕಾಶ್ ರೈ ಅವರ ಖಾಸಗಿ ಜೀವನದ ಬಗ್ಗೆ ಟಿವಿ ಚಾನೆಲ್ ಒಂದು ಈಚೆಗೆ ಗಾಳಿಮಾತು ಬಿತ್ತರಿಸಿದ ಪರಿಣಾಮ ಘಾಸಿಗೊಂಡ ರೈ ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಗ್ಗೆ ಮಾಧ್ಯಮ ಮಿತ್ರರೊಬ್ಬರು ಬ್ಲಾಗ್ ನಲ್ಲಿ ಬರೆದಿದ್ದಾರೆ.

ತಮ್ಮ ವಿಚಿತ್ರ ತೆವಲುಗಳಿಗೆ ಮಾಧ್ಯಮಗಳನ್ನು ಮಾಧ್ಯಮವಾಗಿ ಉಪಯೋಗಿಸುವ ಪತಕರ್ತರ ಜಾಯಮಾನ ಇಂದು ನಿನ್ನೆಯದಲ್ಲ (ಬೇಸರವೆನಿಸಿದರೂ ಪತ್ರಕರ್ತರ ಬಗ್ಗೆ ಈ ಮಾತು ಹೇಳಲೇಬೇಕಿನಿಸಿದೆ). ಸಾರ್ವಜನಿಕ ಜೀವನದಲ್ಲಿರುವವರೂ ನಮ್ಮಂತೆಯೇ ಮನುಷ್ಯರು ಅವರಿಗೂ ನಮ್ಮ ಮನೆಗಳಲ್ಲಿರುವಂತೆಯೇ ಸಮಸ್ಯೆಗಳಿರುತ್ತವೆ ಎಂಬ ಕನಿಷ್ಠ ಜ್ಞಾನ ನಮ್ಮ ಪತ್ರಕರ್ತರಿಗೆ ಏಕೆ ಇರುವುದಿಲ್ಲ?

ಪ್ರಕಾಶ್ ರೈ ಇನ್ನೊಬ್ಬರನ್ನು ಮದುವೆಯಾಗಿರುವುದು, ನಟನೊಬ್ಬ ಹೇರ್ ಡೈ ಮಾಡಿಸಿಕೊಂಡಿರುವುದು, ನಟಿಯೊಬ್ಬಳು ಸ್ತನ ಚಿಕಿತ್ಸೆ ಮಾಡಿಕೊಂಡಿರುವುದು sheer personal matters! ಇದಕ್ಕೆ TV 1 to 10 ಪತ್ರಕರ್ತರ ಅಪ್ಪಣೆ ಬೇಕೆ?
ಇಂಥ ಸುದ್ದಿಗಳನ್ನು ವರದಿ ಮಾಡುವಾಗ ಇದರಿಂದ ಆಗಬಹುದಾದ ಪರಿಣಾಮ ಅಥವಾ ಜನರಿಗೆ ಯಾವ ರೀತಿಯಲ್ಲಿ ಇದರಿಂದ ಅನುಕೂಲವಾಗುತ್ತದೆ ಎಂಬ ಪತ್ರಿಕೋದ್ಯಮದ ಮೂಲ ಪಾಠದ ಬಗ್ಗೆ ಒಂದು ಕ್ಷಣ ಯೋಚಿಸಿದರೆ ಅಚಾತುರ್ಯಗಳು ನಡೆಯುವುದಿಲ್ಲ.

ಟಿಆರ್ ಪಿ, ಪ್ರಸರಣ ಸಂಖ್ಯೆ ಏರಿಸಿಕೊಳ್ಳಬೇಕೆಂಬ ಒಂದಂಶದ ಕಾರ್ಯಸೂಚಿಯೇನಾದರೂ ನಮ್ಮ ಮಿತ್ರರಿಗೆ ಇದ್ದರೆ ತಮ್ಮ ಚಾನೆಲ್-ಪತ್ರಿಕೆಗೆ ಅಂಟಿಕೊಂಡಿರುವ ಸುದ್ದಿ ಎಂಬ ಪದವನ್ನು ತೆಗೆದು ಬೇರೆ ಹೆಸರಿನ್ನಿಟ್ಟುಕೊಳ್ಳುವುದು ಒಳ್ಳೆಯದು. ಏಕೆಂದರೆ ನಾನು ಓದಿದ ಒಂದು ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿ ಅತಿ ಹೆಚ್ಚು ಓದುಗರು ಬಯಸುವ ಎರಡು ವಿಷಯಗಳೆಂದರೆ ಸೆಕ್ಸ್ ಮತ್ತು ಜ್ಯೋತಿಷ್ಯ. ಸುದ್ದಿ ಹೆಸರಿನಲ್ಲಿ ಇಂಥ ಓದುಗರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸುದ್ದಿ ಪ್ರಕಟಿಸಿದರೆ-ಬಿತ್ತರಿಸಿದರೆ ತಮ್ಮ ಪತ್ರಿಕೆ-ಚಾನೆಲ್ ನ ಹೆಸರನ್ನೂ ಪತ್ರಕರ್ತರು ಬದಲಿಸಿಕೊಳ್ಳಬೇಕು.

ಇಲ್ಲದಿದ್ದರೆ ಕಿರಾಣಿ ಅಂಗಡಿ ಲೈಸನ್ಸ್ ಪಡೆದು ಸಾರಾಯಿ ಮಾರಿದಂತಾಗುತ್ತದೆ!

2 Comments:

At 3:30 PM, November 24, 2009, Blogger Keshav.Kulkarni said...

ಇಲ್ಲಿ ಇಂಗ್ಲಂಡಿನಲ್ಲಿ ಎಲ್ಲ ಕಿರಾಣಿ ಅಂಗಡಿಗಳಲ್ಲೂ ಸರಾಯಿ ಸಿಗುತ್ತದೆ :))

 
At 5:07 PM, November 29, 2009, Blogger Vishwanath said...

ಕುಲಕರ್ಣಿಯವರಿಗೆ,

ನಮಸ್ಕಾರ.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

'ಕಿರಾಣಿ ಅಂಗಡಿ', 'ಸಾರಾಯಿ ಮಾರಾಟ' ಎಂದು ನಾನು ಬ್ಲಾಗ್ ನಲ್ಲಿ ಬಳಸಿದ ಉಪಮೆಗಳನ್ನೇ ನೀವು ವಾಸ್ತವವಾಗಿ ಭ್ರಮಿಸಿ ಇಂಗ್ಲೆಂಡ್ ನ ಕಿರಾಣಿ ಅಂಗಡಿಗಳಲ್ಲಿ ಸಾರಾಯಿ ಮಾರಾಟ ಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದೀರಿ.

ಅಸಲಿಗೆ ವಿಷಯ ಅದಲ್ಲ.

ದಿನಪತ್ರಿಕೆ, ಕುಟುಂಬದವರೆಲ್ಲ ಓದುವ ಸಮೃದ್ಧ ಪತ್ರಿಕೆ ಎಂದೆಲ್ಲ ಹೇಳಿಕೊಳ್ಳುವ ಕೆಲ ಪತ್ರಿಕೆಯವರು ಟ್ಯಾಬ್ಲಾಯ್ಡ್ ಗಳನ್ನೂ ಮೀರಿಸುವಂತೆ ಜನರ ಖಾಸಗಿ ಜೀವನದಲ್ಲಿ ಪ್ರವೇಶಿಸುವ, ಯಾವುದೇ ಆಧಾರಗಳಿಲ್ಲದೇ ಗುಸು-ಗುಸು ಸುದ್ದಿಯನ್ನು ಪ್ರಕಟಿಸುವುದು ಎಷ್ಟು ಸರಿ ಎನ್ನುವುದು ನನ್ನ ಆಕ್ಷೇಪವಾಗಿತ್ತು.

ಇಂಗ್ಲೆಂಡ್ ನ ಟ್ಯಾಬ್ಲಾಯ್ಡ್ ಗಳಲ್ಲಿ ಇಂಥ ಸುದ್ದಿ ಪ್ರಕಟಗೊಳ್ಳುತ್ತವೆ ನಮ್ಮ ದಿನಪತ್ರಿಕೆಗಳಲ್ಲಿ ಏಕೆ ಪ್ರಕಟಿಸಬಾರದು ಎಂಬ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ. 1998ರಲ್ಲಿ ಇಂಗ್ಲೆಂಡ್ ಗೆ ಫೆಲೊಶಿಪ್ ಪಡೆದು ತೆರಳಿದ್ದ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಅಲ್ಲಿನ ಟ್ಯಾಬ್ಲಾಯ್ಡ್ ನಲ್ಲಿ ಎಂಥ ರೀತಿಯ ಸುದ್ದಿಗಳು ಇರುತ್ತವೆ ಎಂಬ ಬಗ್ಗೆ ಬರೆದ ಪತ್ರವೊಂದು 'ಹಾಯ್ ಬೆಂಗಳೂರ್' ನಲ್ಲಿ ಪ್ರಕಟವಾಗಿತ್ತು. ಅದರ ಕೆಲ ಸಾಲುಗಳನ್ನು ಇಲ್ಲಿ ಕೊಟ್ಟಿದ್ದೇನೆ ಓದಿ: "ರಾಣಿ ಸೀನದಿದ್ದರೆ ಡಲ್ ಡೇ ಎಂದು ಅಲವತ್ತುಕೊಳ್ಳುವ ಪತ್ರಕರ್ತರು, ರಾಜಮನೆತನದ ಸುದ್ದಿ ಕೊಡುವುದಿಲ್ಲ ಎಂದು ಪತ್ರಿಕೆಯನ್ನು ಟೀಕಿಸುವ ಜನರು, ಟೂತ್ ಪೇಸ್ಟ್ ನ ಕೊನೆಯ ಹುಂಡು ಇರುವ ತನಕವೂ ಹಿಚುಕುತ್ತಾನೆ ಎಂದು ರಾಜಕುಮಾರ ಚಾರ್ಲ್ಸ್ ನನ್ನು ಗೇಲಿ ಮಾಡುವ ಪತ್ರಿಕೆಗಳು, ಮುದ್ದು ನಾಯಿ ಮರಿಗಾಗಿ ಮದುವೆಯನ್ನೇ ಮುಂದಕ್ಕೆ ಹಾಕಿದ ನಟಿ ಜೋ ಸುನೆ, ಐದನೇ ವಿಚ್ಛೇದನಕ್ಕೆ ಸಿದ್ಧತೆ ನಡೆಸಿರುವ ರೂಪದರ್ಶಿ ಮಾರ್ಟಿನ್ ಪ್ರೈಸ್, ಎಂಥ ದಟ್ಟ ಜನಸಂದಣಿಯನ್ನೂ ದರಕರಿಸದೇ ಮೈಮರೆತು ಚುಂಬಿಸುವ ಯುವಕ-ಯುವತಿಯರು..." ಹೀಗೆ ಅಲ್ಲಿನ ಟ್ಯಾಬ್ಲಾಯ್ಡ್ ಗಳ ಬಗ್ಗೆ ಭಟ್ಟರು ತುಂಬಾ ಸೊಗಸಾಗಿ ಬರೆದಿದ್ದಾರೆ.

ಈಗ ಹೇಳಿ, ಇಂಗ್ಲೆಂಡಿನ ಕಿರಾಣಿ ಅಂಗಡಿಗಳಲ್ಲಿ ಸಾರಾಯಿ ಮಾರುತ್ತಾರೆ ಎಂದಾಕ್ಷಣ ನಮ್ಮ ಹುಬ್ಳಿ-ಧಾರ್ವಾಡದ ವೆಂಕೋಬ ಶೆಟ್ಟರೂ ತಮ್ಮ ಕಿರಾಣಿ ಅಂಗಡಿಯಲ್ಲಿ ಸಾರಾಯಿ ಮಾರಬೇಕೆ?

 

Post a Comment

<< Home