ಸಂಪ್ರದಾಯ ಎಂಬ ರಗಳೆ ಸೆಕ್ಯುಲರ್ ಎಂಬ ಬೊಗಳೆ!
ಕಳೆದ 10-15 ದಿನಗಳಿಂದ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಎಲ್ಲಾ ಪತ್ರಿಕೆಗಳು, ಪ್ರಮುಖ ಇಂಗ್ಲಿಷ್ ಟಿವಿ ಚಾನೆಲ್‌ಗಳಲ್ಲಿ ಒಂದೇ ಮಂತ್ರ.
ಜಯಮಾಲಾ, ಜಯಮಾಲಾ, ಜಯಮಾಲಾ...
19 ವರ್ಷಗಳ ಹಿಂದೆ ನಟಿ ಜಯಮಾಲಾ ಅಯ್ಯಪ್ಪನ ಗರ್ಭಗುಡಿ ಪ್ರವೇಶ, ಶಬರಿಮಲೆ ದೇವಸ್ಥಾನದ ತಂ(ಕಂ)ತ್ರಿ ಉನ್ನಿಕೃಷ್ಣನ ಸ್ಫೋಟಕ ಜ್ಯೋತಿಷ್ಯ, ಅಲ್ಲಿನ ದೇವಾಲಯ ಮಂಡಳಿಯ ಉಗ್ರ ಹೇಳಿಕೆ, ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳ ಪತ್ರಿಕೆ-ಟಿವಿ ಚಾನೆಲ್‌ಗಳಲ್ಲಿ ಸಂಚಲನ. 'ಸೋ ಕಾಲ್ಡ್ ಸೆಕ್ಯುಲರ್' ರಾಜಕೀಯ ಪಕ್ಷಗಳಿಂದ ಥರಾವರಿ ಹೇಳಿಕೆ, ಪತ್ರಿಕೆಗಳ 'ಸಂಪಾದಕರಿಗೆ ಪತ್ರ' ಅಂಕಣದಲ್ಲಿ ಪರ-ವಿರೋಧ ಹೇಳಿಕೆ, ದೇಶದ ಎದುರು ಭಯಂಕರ ಸಮಸ್ಯೆಯೇ ಎದುರಾಗಿಬಿಟ್ಟಿದೆಯೇನೋ ಎಂಬಂಥ ಆತಂಕ, ಇಷ್ಟರಲ್ಲೇ ಜಗತ್ತೆ ಮುಳುಗಿ ಹೋಗುತ್ತಿದೆ ಎಂಬ ಅರ್ಥ ಬರುವಂತೆ ಟಿವಿಗಳಲ್ಲಿ ಸಂದರ್ಶನ-ವಿಶ್ಲೇಷಣೆ.
ಏನಿದು ಹುಚ್ಚಾಟ? ಇದಕ್ಕಿಲ್ಲವೇ ಕೊನೆ?
ಶಬರಿಮಲೆಯಲ್ಲಿ ಈಚೆಗೆ ನಡೆದ ಅಷ್ಟಮಂಗಳದಲ್ಲಿ, ಕವಡೆ ಹಾಕಿ ಅಳೆದು-ಸುರಿದು ಲೆಕ್ಕಹಾಕಿ, 'ಅಯ್ಯಪ್ಪಸ್ವಾಮಿಗೆ ಭಯಂಕರ ಕೋಪ ಬಂದುಬಿಟ್ಟಿದೆ. ಆತನ ಸಹನೆ-ತಾಳ್ಮೆಯನ್ನು ಜನ ದೌರ್ಬಲ್ಯವೆಂದು ತಿಳಿದಿದ್ದಾರೆ. ಸ್ವಾಮಿ ಕಣ್ಣು ಬಿಟ್ಟಾ ಅಂದ್ರೆ... ಎಲ್ಲರನ್ನೂ ಸುಟ್ಟು ಬೂದಿ ಮಾಡಿ ಬಿಟ್ಟಾನು' ಎಂದು ಚಿಕ್ಕಮಕ್ಕಳಿಗೆ ಬೆದರಿಸಿ ಬಾಯಿಗೆ ತುತ್ತು ತುರುಕುವಂತೆ ಉನ್ನಿಕೃಷ್ಣ ಉಲಿದಿದ್ದೇ ತಡ, ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳಲ್ಲಿ ಮಿಂಚಿನ ಸಂಚಲನವಾಗಿಬಿಟ್ಟಿತು.
ಇಷ್ಟಕ್ಕೂ, ಬೊಗಳೆ ಪಂಡಿತ ಉನ್ನಿಕೃಷ್ಣನಿಗೆ ಜ್ಞಾನೋದಯವಾಗಿ 19 ವರ್ಷಗಳ ಹಿಂದೆ ನಡೆದ ಸಂಗತಿಯನ್ನು ಕರಾರುವಾಕ್ಕಾಗಿ ಹೇಳಿಬಿಟ್ಟನೇ?
ಈಚೆಗೆ ಜಯಮಾಲಾ ಅವರೇ ಸ್ವತಃ ತಾವು 1987ರಲ್ಲಿ ಶಬರಿಮಲೆ ದೇವಸ್ಥಾನ ಪ್ರವೇಶಿಸಿದ್ದರ ಬಗ್ಗೆ ದೇವಾಲಯದ ಮಂಡಳಿಗೆ ಪ್ರಾಮಾಣಿಕವಾಗಿ ತಿಳಿಸಿದ್ದೇ ಆಕೆಗೆ ಮುಳುವಾಯಿತು. ಇದನ್ನೇ ನೆಪವಾಗಿರಿಸಿಕೊಂಡ ಉನ್ನಿಕೃಷ್ಣ ಮಹಾ ತತ್ವಜ್ಞಾನಿಯಂತೆ ಅಯ್ಯಪ್ಪನಿಗೆ ಅಪಚಾರವಾಗಿದೆ ಎಂದು ಹೇಳಿಬಿಟ್ಟ.
ಇಲ್ಲಿ ನಿಜಕ್ಕೂ ಅಪಚಾರವಾಗಿದ್ದು ಅಯ್ಯಪ್ಪನಿಗಲ್ಲ, ಜಯಮಾಲಾಗೆ, ಇಡೀ ಸ್ತ್ರೀ ಸಂಕುಲಕ್ಕೆ.
ಇಂಥದೇ ಕೋಮಿನ ಜನ ತನ್ನಲ್ಲಿಗೆ ಬರಬೇಕು, ನಿರ್ದಿಷ್ಟ ಲಿಂಗದ, ನಿರ್ದಿಷ್ಟ ವಯಸ್ಸಿನ (ಶಬರಿಮಲೆಯಲ್ಲಿರುವಂತೆ 10-50 ವಯಸ್ಸಿಗೆ ಮಹಿಳೆಯರಿಗೆ ದೇವಾಲಯದ ಪ್ರವೇಶ ನಿಷಿದ್ಧ)ವರು ಮಾತ್ರ ಸಾನಿಧ್ಯಕ್ಕೆ ಬರಬೇಕು ಎಂದು ಯಾವ ದೇವರಾದರೂ ಎಲ್ಲಿಯಾದರೂ, ಯಾವ ಸರಕಾರಕ್ಕೆ ಅಥವಾ ದೇವಸ್ಥಾನ ಮಂಡಳಿಗೆ ಕರಾರು ವಿಧಿಸಿ, ಛಾಪಾ ಕಾಗದದ ಮೇಲೆ ಸಹಿ ಹಾಕಿಸಿಕೊಂಡಿದ್ದಾನೆಯೇ?
ಇದೆಲ್ಲ ದೇವರ ಹೆಸರಿನಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮಾಡಿಕೊಂಡ ಕಾನೂನು; ದೇವರಿಗೆ ಮಾಡಿದ, ಮಾಡುತ್ತಿರುವ ಅವಹೇಳನ.
ದೇಶದಲ್ಲೇ ಅತ್ಯಂತ ಹೆಚ್ಚಿನ ಅಕ್ಷರಸ್ಥರನ್ನು ಹೊಂದಿರುವ ಕೇರಳ ಇಂಥದೇ ಮಂತ್ರ-ತಂತ್ರಗಳ ಮೌಢ್ಯದಿಂದಾಗಿ ಇನ್ನೂ ಹಿಂದುಳಿದಿದೆ. ತನ್ನ ಹಿಂದುಳಿದ ಈ ವೈರಸ್ ಅನ್ನು ಇತರರಿಗೂ ಹರಡುತ್ತಿದೆ.
ರಗಳೆ ರಾಜಕೀಯ:
ಅಪ್ಪಟ ಸೆಕ್ಯುಲರ್ ಎಂದು ಹೇಳಿಕೊಳ್ಳುವ ರಾಹುಕಾಲ, ಗುಳಿಕ ಕಾಲ, ಯಮಗಂಡಕ ಕಾಲ ಗಳನ್ನು ನೋಡಿಯೇ ಹೇಳಿಕೆ ನೀಡುವ, ದಿನಬೆಳಗಾದರೆ ಕುರ್ಚಿ ಉಳಿಸಿಕೊಳ್ಳಲು ಮಠಗಳನ್ನು ಸುತ್ತಿ ಸ್ವಾಮಿಗಳ ಕಾಲು ಒತ್ತುವ ರಾಜಕೀಯ ಪುಢಾರಿಗಳು, ಊರಿಗೊಂದು ದಾರಿಯಾದರೆ ತಮಗೇ ಇನ್ನೊಂದು ದಾರಿಯಂತಿರುವ ಬುದ್ಧಿವಾ(ವ್ಯಾ)ದಿಗಳು ಜಯಮಾಲಾ ವಿವಾದ ಹುಟ್ಟಿದ್ದೇ ತಡ ಚಿತ್ರ-ವಿಚಿತ್ರ ಹೇಳಿಕೆ ಕೊಡಲು ಆರಂಭಿಸಿದ್ದಾರೆ. ಸ್ವಯಂಘೋಷಿತ ಈ ಸೆಕ್ಯುಲರ್ ಗಳು ಇಂಥದೇ ವಿವಾದ ಬೇರೆ ಅಲ್ಪಸಂಖ್ಯಾತ ಸಮುದಾಯದಲ್ಲಾಗಿದ್ದರೆ ತಮಗೂ-ಅದಕ್ಕೂ ಸಂಬಂಧವೇ ಇಲ್ಲದಂತೆ ಜಾಣಗಿವುಡರಾಗಿಬಿಡುತ್ತಿದ್ದರು. ಇದೇ ಇವರ ಓಟ್ ಬ್ಯಾಂಕ್ ರಾಜಕೀಯ.
ಸಂಪ್ರದಾಯವೆಂಬ ಅರ್ಥವಿಲ್ಲದ, ವೈಜ್ಞಾನಿಕವಲ್ಲದ ಬೊಗಳೆ, ಸ್ವಾರ್ಥದ ರಾಜಕೀಯ ರಗಳೆಗಿಂತ ಪ್ರಜ್ಞಾಪೂರ್ವಕವಾಗಿ ಯೋಚಿಸಿದರೆ ಜಯಮಾಲಾ ವಿವಾದ ಒಂದು ಸುದ್ದಿಯೇ ಅಲ್ಲ.
ಏನಂತೀರಿ?
4 Comments:
ಅಪ್ಪಾ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡ್ರಂತೆ...ಹಂಗಾತು ಈ ಎಪಿಸೋಡು!
ಸಂಪ್ರದಾಯ ಎನ್ನೋದು ಯಾವುದೋ ಒಂದು ನಿರ್ದಿಷ್ಟ ಕಾರಣಕ್ಕೆ ಯಾವುದೋ ಸನಾತನ ಕಾಲದಲ್ಲಿ ಮಾಡಿದ್ದು.ಅದು ಈಗೀನ ಕಾಲಕ್ಕೆ ಪ್ರಸ್ತುತವೇ ಇಲ್ಲವೇ ಅನ್ನುವ ಒಂದು ಅವಲೋಕನ ಮಾಡಬೇಡವೇ ??
ಸುಮ್ಮನೆ ಜ್ಯೋತಿಷ ಅದು ಇದು ಅನ್ನುವಂತೆ ಕೂಗಾಡಿಬಿಟ್ಟರೆ ಆಯಿತೇ? ಆಲ್ಲಿ ಆಗಿದ್ದಾದರೂ ಏನು? ಸ್ತ್ರೀಯೊಬ್ಬಳು ದೇವಾಲಯ ಪ್ರವೇಶ ಮಾಡಿದ್ದು..ಒಂದು ಪ್ರಮಾದವೇ??
ಅನೇಕ ಜ್ವಲಂತ ಸಮಸ್ಯೆಗಳಿರುವಾಗ ಇಂತವುಕ್ಕೇ ತಲೆಕೆಡಸಿಕೊಳ್ಳಬೇಕೇ? ನಮ್ಮ ಮಾಧ್ಯಮದವರಿಗೆ ಬೇರೆ ಏನೂ ಸಿಗಲಿಲ್ಲವೇ?
Shiv Avare,
namma sutta jwalanta samasyegaliruvaga, mahileyobbaru devalaya praveshisiddanne dodda suddi maadidavarige enannabeko thiliyadu.
thadavaagi pratikriyisiddakke kshameyirali. Nanna system nalli koncha font problem.
matte bareyuttene.
Adakke kanglishnalli uttara.
ಅರೆ,
ನಮ್ಮ ಬ್ಯುರೋ ಹೆಸರೇಕೆ ಕೆಡಿಸುತ್ತಿದ್ದೀರಿ ವಿಶ್ವನಾಥರೇ,
ಜಯಮಾಲಾ ಮಾಡಿದ (ಮಾಡಿದ್ದರೆ) ತಪ್ಪನ್ನೆಲ್ಲಾ ನಮ್ಮ ಬೊಗಳೆ-ರಗಳೆ ಬ್ಯುರೋದ ಮುಸುಡಿಗೆ ಒರೆಸಿದ್ದೀರಿ....
ಹಾಗಾಗಿ ಇಲ್ಲಿ ಅರಚಾಡುವುದು ಅನಿವಾರ್ಯವಾಯಿತು.
-------
ಅಲ್ಲ, ಜಯಮಾಲಾಗೆ ಪ್ರಚಾರದ ಕೊರತೆ ಕಾಡಿದ್ದೇಕೆ ಅಂತ ಅರ್ಥವಾಗಿಲ್ಲ. ಈ ಕೊರತೆ ಸಹಿಸಲಾರದೆ ಪ್ರಚಾರಕ್ಕಾಗಿಯೇ ಇದನ್ನೆಲ್ಲಾ ಮಾಡಿರಬಹುದೇ?
Anveshigale!
Nimma bureu da hasarannu kedisalu aaguttilla endu thilisalu vishadisutteve!
Idaralli Jayamala pracharakkinta devastanada adalita mandali tha
nu maaduththiruva suligeyinda berede janara gamana seleyalu thantrigala moolaka hoodiruva tantravidu.
Post a Comment
<< Home