ಪತ್ರಿಕೋದ್ಯಮ ಮತ್ತು ಜಾತಿ
ಈಚೆಗೆ ಮಿತ್ರರೊಬ್ಬರ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಿದ್ದಾಗ 'ಯಡಿಯೂರಪ್ಪ ತುಂಬಾ ಮುಂಗೋಪಿ ಕಣ್ರೀ, ಶೆಟ್ಟರ್ ಸಚಿವ ಸ್ಥಾನ ತಪ್ಪಿಸಬಾರದಿತ್ತು ಈಗ ಅನುಭವಿಸುತ್ತಿದ್ದಾರೆ ನೋಡಿ' ಎಂದು ಒಂದೇ ಉಸುರಿನಲ್ಲಿ ಪ್ರಸಕ್ತ ರಾಜಕೀಯ ಪರಿಸ್ಥಿತಿಯ ವಿಶ್ಲೇಷಣೆ ಮಾಡಿಬಿಟ್ಟರು.
ಇದೇ ವಿಷಯದ ಬಗ್ಗೆ ಒಂದೆರಡು ನಿಮಿಷ ಮಾತನಾಡಿದಾಗ ಆ ದಿನದ ಪತ್ರಿಕೆಯಲ್ಲಿ ಪ್ರಕಟವಾದ ವಿಶ್ಲೇಷಣೆಯೇ ಅವರ ವಿಚಾರ ಲಹರಿಗೆ ತಳಹದಿಯಾಗಿತ್ತು ಎಂಬುದು ತಿಳಿಯಿತು. ಕಳೆದ ಹಲವಾರು ವರ್ಷಗಳಿಂದಲೂ ಪತ್ರಿಕಾ ಕ್ಷೇತ್ರದಲ್ಲಿರುವ ಆ ನನ್ನ ಮಿತ್ರ ಪತ್ರಿಕೆಯ ಡೆಸ್ಕ್ ಪತ್ರಕರ್ತರ ವರದಿಗಳಿಗೆ ಮಾರು ಹೋಗಿರುವಾಗ ಶ್ರೀಸಾಮಾನ್ಯರ ಪಾಡೇನು?
ಕನ್ನಡದಲ್ಲಿ ಪ್ರಕಟವಾಗುವ ಕೆಲ ಪತ್ರಿಕೆಗಳು ಕಾಗ್ರೆಸ್, ಬಿಜೆಪಿ, ಜನತಾದಳ ಎಂಬ ಪಾರ್ಶ್ವ ವಾಯುವಿಗೆ ತುತ್ತಾಗಿರುವುದು ನಮಗೆಲ್ಲ ಗೊತ್ತೇ ಇದೆ. ಈ ಹಳದಿ ಕಣ್ಣಿನ ಪತ್ರಿಕೆಗಳಲ್ಲೇ ಕೆಲವಕ್ಕೆ ಒಂದೇ ಪಕ್ಷದಲ್ಲಿರುವ ಜಾತಿಯವರಿಗೆ ಮೀಸಲಾದವು. ಅವುಗಳಲ್ಲಿ 'ಕರ್ನಾಟಕದ ನಂಬರ ಒನ್ ಪತ್ರಿಕೆ' ತೋರುತ್ತಿರುವ ಪಾತ್ರ ಆಶ್ಚರ್ಯವೆನಿಸುತ್ತಿದೆ.
ಇಡೀ ಕರ್ನಾಟಕವನ್ನೇ ಒತ್ತೆ ಇಟ್ಟುಕೊಂಡಿರುವ ರೆಡ್ಡಿಗಳ ಸೂತ್ರ ಯಾರ ಕೈಯಲ್ಲಿದೆ ಎಂಬುದು ಜಗಜ್ಜಾಹೀರಾಗಿದ್ದರೂ ನಂಬರ್ ಒನ್ ಪತ್ರಿಕೆ ಮಾತ್ರ ಬೇರೆ ರೀತಿಯಲ್ಲಿ ಚಿತ್ರಣ ನೀಡುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ತಮಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬುದಕ್ಕೆ ಹುಬ್ಬಳ್ಳಿ-ಧಾರವಾಡದಲ್ಲಿ ಬಸ್ಸಿಗೆ ಬೆಂಕಿ ಹಚ್ಚಿದ ಗೌರವಾನ್ವಿತ ಸಭಾಪತಿಗಳಾದ ಶೆಟ್ಟರು ಈ ಹಿಂದೆ ಯಡಿಯೂರಪ್ಪನವರನ್ನು ಶಿಕಾರಿಪುರದಲ್ಲಿ ಶತಾಯಗತಾಯ ಸೋಲಿಸಲು ಜನರನ್ನು ಅಟ್ಟಿದ್ದು ತುಂಬಾ ಜನರಿಗೆ ಗೊತ್ತಿಲ್ಲ. ಇಂಥ ಶೆಟ್ಟರಿಗೆ ಮಹಾನ್ ರಾಷ್ಟ್ರೀಯ ನೇತಾರ ಅನಂತಕುಮಾರ್ ಸಾಥ್ ನೀಡುತ್ತಿರುವುದೂ ಅಷ್ಟೇ ಸತ್ಯ. ಸದಾ ಪರದೆಯ ಹಿಂದೆಯೇ ನಿಂತು ಯಡಿಯೂರಪ್ಪ ವಿರುದ್ದ ಬಸವರಾಜ ಪಾಟೀಲ್ ಯತ್ನಾಳ್, ಬಿ.ಬಿ. ಶಿವಪ್ಪ ನಂತಹ ಸ್ವಜಾತಿಯವರನ್ನೇ ಛೂ ಬಿಟ್ಟು ತೀಟೆ ತೀರಿಸಿಕೊಳ್ಳುವ ಅನಂತಕುಮಾರ್ ಈಗ ನವದೆಹಲಿಯಲ್ಲಿ ರಾಜ್ಯದ ಪ್ರಸಕ್ತ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರಂತೆ! ಮಗುವಿನ ಕುಂಡೆ ಹಿಂಡಿ ಮತ್ತೆ ಸಮಾಧಾನ ಮಾಡುವ ಕಲೆ ಅನಂತಕುಮಾರ್ ಗೆ ಕರತಲಾಮಲಕ! ವಿಮಾನದಲ್ಲಿ ಕುಮಾರಸ್ವಾಮಿ-ರಾಧಿಕಾ ಅಕ್ಕಪಕ್ಕ ಕುಳಿತು ಮಾರಿಷಸ್ ಗೆ ಹೋದ ವಿಷಯಗಳು ಪತ್ರಿಕೆ ತಲುಪುವಾಗ ಅನಂತಕುಮಾರರ ಕುಟಿಲ ತಂತ್ರಗಳ ಬಗ್ಗೆ ಒಂದೂ ಮಾತನಾಡದ ನಂಬರ್ ಒನ್ ಪತ್ರಿಕೆ ಸಾಲದ್ದೆಂಬಂತೆ 'ಬಿಕ್ಕಟ್ಟಿನಲ್ಲಿ ಅನಂತ ಪಾತ್ರವಿಲ್ಲ' ಎಂಬ ಕ್ಲೀನ್ ಚಿಟ್ ಸಹ ನೀಡಿದೆ. ಅಡ್ರೆಸ್ಸೇ ಇಲ್ಲದವರು ಯಡಿಯೂರಪ್ಪ ವಿರುದ್ಧ ನೀಡುವ ಹೇಳಿಕೆಗಳನ್ನು ನಂಬರ್ ಒನ್ ಪತ್ರಿಕೆ ದೊಡ್ಡದಾಗಿ ಪ್ರಕಟಿಸುವ ಮೂಲಕ ಯಾರಿಂದಲೋ ಶಾಭಾಷ್ ಗಿರಿ ಪಡೆಯುತ್ತಿದೆ ಎಂಬ ಗುಮಾನಿ ಬರುತ್ತಿದೆ.
ಇಂಥ ಪತ್ರಿಕೆಗೆ ಛೆ ಛೆ ಅನ್ನದೇ ಏನೆನ್ನಬೇಕು?
ಪರಿಹಾರ ಕಾಮಗಾರಿ ಎಲ್ಲಿ ನಡೆಯುತ್ತಿದೆ?: ಈಚೆಗೆ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆ ಹಾವಳಿಯಲ್ಲಿ ಸಂತ್ರಸ್ತರಾದವರಿಗೆ ಪರಿಹಾರ ಕಾಮಗಾರಿ ಎಲ್ಲಿ ನಡೆಯುತ್ತಿದೆ ಎಂದು ಬೆಂಗಳೂರಿನ ಹವಾನಿಯಂತ್ರಿತ ಪಕ್ಷದ ಕಚೇರಿಯಲ್ಲಿ ಕುಳಿತು ಪ್ರಶ್ನೆ ಕೇಳುವ ರಾಜಕಾರಣಿಗಳು, ಝಗಮಗಿಸುವ ಲೈಟ್-ಕ್ಯಾಮರಾ ಎದುರು ಆಸೀನರಾಗುವ ಪತ್ರಕರ್ತರು ಪದೇ ಪದೇ ಕೇಳುತ್ತಿದ್ದಾರೆ. ಸಂತ್ರಸ್ತ ಪ್ರದೇಶಗಳಿಗೆ ಹೋಗಿ ಈ ಪ್ರಶ್ನೆಗಳನ್ನು ಕೇಳಿದ್ದರೆ ಅವರು ಹೇಳುವಲ್ಲಿ ಸತ್ಯಾಂಶ ಇರಬಹುದು ಎಂಬ ಸಂಶಯವಾದರೂ ಬರುತ್ತಿತ್ತು. ಆದರೆ ಹವಾನಿಯಂತ್ರಿತ ನಗರಿಯಲ್ಲಿ ಡೆಸ್ಕ್ ರಾಜಕಾರಣ/ಪತ್ರಿಕೋದ್ಯಮ ಮಾಡುತ್ತ ಪರಿಹಾರ ಕಾರ್ಯ ಎಲ್ಲಿ ಎಂದು ಕೇಳಿದರೆ ಅವರಿಗೆ ಉತ್ತರ ಎಲ್ಲಿ ಸಿಗುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಂದು ವಿಜಾಪುರ ಜಿಲ್ಲೆಯಲ್ಲಿದ್ದರೆ ನಾಳೆ ಗುಲ್ಬರ್ಗದಲ್ಲಿ ಮತ್ತೊಂದು ದಿನ ರಾಯಚೂರು, ಕೊಪ್ಪಳದಲ್ಲಿ ಕೇಂದ್ರ ಮಂತ್ರಿಗಳನ್ನು ಕರೆದುಕೊಂಡು ಸುತ್ತುತ್ತಿರುವುದು ಇವರ ಕಣ್ಣಿಗೇಕೆ ಕಾಣುತ್ತಿಲ್ಲ ಎಂದು ಆಶ್ಚರ್ಯವೆನಿಸುತ್ತದೆ.
ಸಹೃದಯಿ ಮುನಿಯಪ್ಪ: ಈಚೆಗೆ ಉತ್ತರ ಕರ್ನಾಟಕದಲ್ಲಿ ಪರಿಹಾರ ಕಾಮಗಾರಿಗೆ ಚಾಲನ ನೀಡುವ ಸಂದರ್ಭದಲ್ಲಿ ತೆರಳಿದ್ದ ಕೇಂದ್ರ ರೇಲ್ವೆ ಖಾತೆ ಸಹಾಯಕ ಸಚಿವ ಮುನಿಯಪ್ಪ, ಯಡಿಯೂರಪ್ಪ ಕಾರ್ಯವೈಖರಿ ಮೆಚ್ಚಿ ಹೆದರಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದಿದ್ದನ್ನೇ ಕೆಲ ಪತ್ರಿಕೆಗಳು ಬಿಜೆಪಿಗೆ ಕಾಂಗ್ರೆಸ್ ಬೆಂಬಲ ಎಂಬರ್ಥದ ಶೀರ್ಷಿಕೆಯನ್ನು ನೀಡಿದವು. ಮುನಿಯಪ್ಪ ಅಷ್ಟೇ ಅಲ್ಲ ಯಡಿಯೂರಪ್ಪ ಕಾರ್ಯವೈಖರಿ ಮೆಚ್ಚುವ ಎಲ್ಲರೂ ಹೇಳುವ ಮಾತಿದು. ಕಷ್ಟಪಟ್ಟ ಗೆಳಯನೊಬ್ಬ ಸಂಕಷ್ಟದಲ್ಲಿರುವಾಗ ಹೇಳುವ ಸಾಂತ್ವನದ ನುಡಿಗಳೇ ಮುನಿಯಪ್ಪ ಅವರನ್ನು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದನ್ನೇ ಅಪಾರ್ಥ ಮಾಡಿಕೊಂಡರೆ ಹೇಗೆ.
0 Comments:
Post a Comment
<< Home