Friday, November 20, 2009

ತಂದೆ-ತಾಯಿ ಓಳು ಬರಿ ಓಳು!

ಗ್ಗೆ ಕೆಲವೇ ತಿಂಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ಸಮಾರಂಭವನ್ನು ನೆನಪಿಸಿಕೊಳ್ಳಿ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ತವರು ಜಿಲ್ಲೆಯಲ್ಲಿ ನಡೆದ ಬೃಹತ್ ಸಭೆಯಲ್ಲಿ ಬಳ್ಳಾರಿ ಜಗಜಟ್ಟಿ ಜನಾರ್ಧನ ರೆಡ್ಡಿ ಆಡಿದ ಮಾತನ್ನು ಯಾರಾದರೂ ಕೇಳಿದರೆ ತೊಡೆ ತಟ್ಟಿ ನಿಂತಿರುವ ಈಗಿನ ರೆಡ್ಡಿ ಈತನೇನಾ ಎಂಬ ಅನುಮಾನ ಬರದೇ ಇರದು.
ಸಭೆ ಆರಂಭವಾಗುತ್ತಲೇ ಯಡಿಯೂರಪ್ಪನವರ ಪಾದ ಮುಟ್ಟಿ ನಮಸ್ಕರಿಸಿದ್ದ ಜನಾರ್ಧನ ರೆಡ್ಡಿ ಇವರು ನಮಗೆ ತಂದೆ ಸಮಾನ; ನಿರೀಕ್ಷೆಗೂ ಮೀರಿ ಸರಕಾರದಲ್ಲಿ ತಮಗೆ (ರೆಡ್ಡಿ ಸಹೋದರರಿಗೆ) ಸ್ಥಾನಮಾನ ಕೊಟ್ಟಿದ್ದಕ್ಕೆ ಮಾತೇ ಹೊರಡುತ್ತಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡುವ, ಲಕ್ಷಾಂತರ ಮಂದಿಗೆ ಉದ್ಯೋಗ ದೊರಕಿಸಿಕೊಡುವ ಮಾತನಾಡಿದ್ದ ಜನಾರ್ಧನ ರೆಡ್ಡಿ ಇಂದು ಜಟ್ಟಿಯೂ ನಾಚುವಂತೆ ತಂದೆಯ ವಿರುದ್ಧವೇ ತೊಡೆ ತಟ್ಟಿ ನಿಂತಿದ್ದಾರೆ ಎಂದರೆ ಸೋಜಿಗವಾಗುತ್ತದೆ.

ಕೇವಲ ಐದು ವರ್ಷಗಳ ಹಿಂದೆ ಬಳ್ಳಾರಿಯ ಈ ರೆಡ್ಡಿಗಳ ಹೆಸರು ಬಳ್ಳಾರಿ-ಸೊಂಡೂರು ಫಾಸಲೆಯಾಚೆಗೆ ಯಾರಿಗಾದರೂ ತಿಳಿದಿದ್ದರೆ ಅದು ಆಂಧ್ರದಲ್ಲಿನ ಅವರ ನೆಂಟರಿಗೆ ಮಾತ್ರ! ರಾಜ್ಯದಲ್ಲಿ ರೆಡ್ಡಿಗಳಿಗಿಂತಲೂ ಹೆಚ್ಚು ರೊಕ್ಕ ಇರುವ ಮಲ್ಯನಂತಹ ಮಂದಿ ಅನೇಕರಿದ್ದಾರೆ. ಆದರೆ ಅವರು ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರಲು ಬಿಜೆಪಿಯಂತಹ ಚಿಮ್ಮು ಹಲಗೆ (spring board) ಸಿಗದಿದ್ದರಿಂದಲೋ ಅಥವಾ ಕೇವಲ ಒಂದು ರಾಜ್ಯಸಭಾ ಸೀಟು ಖರೀದಿಲು ಮಾತ್ರ ಅವಕಾಶ ಸಿಕ್ಕಿದ್ದರಿಂದಲೋ ಅವರು ತಾವಾಯ್ತು ತಮ್ಮ ಉದ್ಯಮವಾಯ್ತು ಎಂಬ ಮಟ್ಟಿಗೆ ಇದ್ದು ಬಿಟ್ಟಿದ್ದಾರೆ.

ಆದರೆ ಪಕ್ಕಾ ವ್ಯಾಪಾರಿ ಬುದ್ಧಿಯ ರೆಡ್ಡಿಗಳಿಗೆ ಸುಷ್ಮಾ ಸ್ವರಾಜ್ ರಂಥ ತಾಯಿ ಸಿಕ್ಕಿದ್ದೇ ತಡ ಬಳ್ಳಾರಿಯಿಂದ ಶುರುವಿಟ್ಟುಕೊಂಡು ಇಂದು ಇಡೀ ರಾಜ್ಯವನ್ನೇ ಆಪೋಷಣ ತೆಗೆದುಕೊಳ್ಳುವಮಟ್ಟಿಗೆ ಬಂದಿದ್ದಾರೆ. ಹೇಗಿದೆ ತಾಯಿಯ ಮಹಿಮೆ?

ಈಗಾಗಲೇ ತಾಯಿಯನ್ನು ಕಳೆದುಕೊಂಡಿರುವ ನಮಗೆ ಸುಷ್ಮಾ ಅವರೇ ತಾಯಿ ಎಂದು ಅಲವತ್ತುಕೊಂಡಿದ್ದ ರೆಡ್ಡಿಗಳು ಮೊನ್ನೆ ಬಿಜೆಪಿ ಭಿನ್ನಮತ ಭುಗಿಲೆದ್ದಿದ್ದಾಗ (ಭುಗಿಲೆಬ್ಬಿಸಿದಾಗ) ಸಾಕ್ಷಾತ್ ಆ ತಾಯಿಯೇ ಭಿನ್ನಮತ ನಿಲ್ಲಿಸುವಂತೆ ಹೇಳಿದರೂ ಹದಿನಾಲ್ಕು ದಿನ ರೆಡ್ಡಿಗಳು ರಚ್ಚೆ ಹಿಡಿದಿದ್ದೇಕೆ?

ಇದೇನಾ ಮಮತೆಯ ತಾಯಿಗೆ ಮುದ್ದಿನ ಮಕ್ಕಳ ಮರ್ಯಾದೆ?

ಅದಕ್ಕೇ ಹೇಳಿದ್ದು ರಾಜಕೀಯದಲ್ಲಿ ತಂದೆ-ತಾಯಿ ಎಲ್ಲ ಓಳು ಬರೀ ಓಳು ಅಂತ!

0 Comments:

Post a Comment

<< Home