Wednesday, April 26, 2006

ಮೀಸಲಾತಿ ಎಂಬ ಹುಲ್ಲುಗಾವಲು


ಉತ್ತರ ಭಾರತಕ್ಕೆ ವಿ.ಪಿ. ಸಿಂಗ್, ದಕ್ಷಿಣ ಭಾರತಕ್ಕೆ ಸಿದ್ದರಾಮಯ್ಯ!

ಹಾಗಂತ ಒಂದು ಘೋಷಣೆ ಈಚೆಗೆ ಬೆಂಗಳೂರಿನಲ್ಲಿ ನಡೆದ ಎಬಿಪಿಜೆಡಿ (ಅಖಿಲ ಭಾರತ ಪ್ರಗತಿಪರ ಜನತಾ ದಳ) ಸಮಾವೇಶದಲ್ಲಿ ಮೊಳಗಿತು.

90 ದಶಕದಲ್ಲಿ ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಿದ ಮಂಡಲ ಆಯೋಗದ ವರದಿ ನಿಮಗೆ ನೆನಪಿರಬಹುದು. ಶಿಕ್ಷಣ, ಉದ್ಯೋಗ ಹಾಗೂ ಇತರ ಕ್ಷೇತ್ರಗಳಲ್ಲಿ ಭಾರಿ ಪ್ರಮಾಣದ ಮೀಸಲಾತಿ ಕಲ್ಪಿಸುವ ಮೂಲಕ ಹಿಂದುಳಿದ ವರ್ಗಗಳ ಹೀರೋ ಆಗಲು ಹೋದ ಅಂದಿನ ಪ್ರಧಾನಿ ವಿಶ್ವನಾಥ ಪ್ರತಾಪ್ ಸಿಂಗ್ ಸಮಾಜವನ್ನು ಇಬ್ಭಾಗ ಮಾಡುವ ಬಹುದೊಡ್ಡ ಹುನ್ನಾರ ನಡೆಸಿದ್ದರು. ಅದೇ ವ್ಯಕ್ತಿ ಇದೀಗ ರಾಜ್ಯದ ಅಹಿಂದ (ಅಲ್ಪಸಂಖ್ಯಾತ ಹಿಂದುಳಿದ ದಲಿತ) ಖ್ಯಾತಿಯ ಸಿದ್ದರಾಮಯ್ಯ ಅವರೊಡನೆ ಸೇರಿ ಮತ್ತೊಮ್ಮೆ ಸಮಾಜದ ಇಬ್ಭಾಗಕ್ಕೆ ಸಜ್ಜಾಗಿದ್ದಾರೆ. ಬೆಂಕಿಗೆ ತುಪ್ಪ ಸುರಿದಂತೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹಿಂದುಳಿದವರಿಗೆ ಶೇ.27.5 ರಷ್ಟು ಮೀಸಲಾತಿ ಒದಗಿಸುವ ಬಗ್ಗೆ ಕೇಂದ್ರ ಸರಕಾರವೂ ಪ್ರಕಟಿಸಿದೆ.

ನಮ್ಮ ದೇಶದ ಸಂವಿಧಾನದ ಪ್ರಕಾರ, ಎಲ್ಲ ಭಾರತೀಯರೂ ಸಮಾನರು. ಆದರೆ ಶಿಕ್ಷಣ-ಉದ್ಯೋಗ ಪಡೆಯುವ ಸಂದರ್ಭ ಬಂದಾಗ ಮಾತ್ರ ಕೆಲವರು ಹೆಚ್ಚು ಸಮಾನರು. ಮೀಸಲಾತಿಯ ಹೆಸರಿನಲ್ಲಿ ನಡೆಯುತ್ತಿರುವ ಈ ತಾರತಮ್ಯ ಎಷ್ಟು ಸಮರ್ಥನೀಯ?

ಸ್ವಾತಂತ್ರ್ಯ ಪೂರ್ವದಲ್ಲಿ ಶೋಷಣೆಗಾಳದವರಿಗೆ ಮೀಸಲಾತಿ ಸಿಗಲಿಲ್ಲ, ಬದಲಾಗಿ ಅದು ಧರ್ಮದ ಆಧಾರವಾಗಿತ್ತು ಎಂಬುದು ಒಂದು ವಾದ. ಆಗ ನಿಜವಾಗಿಯೂ ಶೋಷಣೆಗೊಳಗಾದವರು ಮೀಸಲಾತಿಯಿಂದ ವಂಚಿತರಾಗಿದ್ದರು ಎನ್ನುವುದು ಒಪ್ಪುವ ಮಾತೇ. ಆದರೆ ಸ್ವಾತಂತ್ರ್ಯ ಸಿಕ್ಕು 60 ವರ್ಷಗಳ ಬಳಿಕವೂ ಆಗ ನಡೆದ ಅನ್ಯಾಯಕ್ಕ ಸೇಡು ತೀರಿಸಿಕೊಳ್ಳುವಂತೆ ಇನ್ನೂ ಮೀಸಲಾತಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಸರಿಯೇ? ಹಳೆಯ ಗಾಯ ಮಾಯಿಸಲು ಮತ್ತೊಂದು ಗಾಯ ಮಾಡುವುದೇ? ಭಾರತದಲ್ಲಿ ಮೀಸಲಾತಿ ಎನ್ನುವುದೊಂದು ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ. ಮೇರಾ ಭಾರತ ಮಹಾನ್ ಎಂದು ಬೀಗುವ ನಮಗೆ ಹಿಂದುಳಿದವರು ಎಂದು ಹೇಳಿಕೊಳ್ಳುವುದೇ ಒಂದು ಹಮ್ಮೆಯ ವಿಷಯ! ಮೀಸಲಾತಿಯಸೌಲಭ್ಯಗಳು ಅಷ್ಟು ಆಕರ್ಷಕವಾಗಿವೆ. ಆಧುನಿಕ ಭಾರತದಲ್ಲಿ ನೀವು ಹಿಂದುಳಿದವರಾದಷ್ಟೂ ನಿಮಗೆ ಹೆಚ್ಚು ಸೌಲಭ್ಯಗಳು ಲಭ್ಯ.

ಹಿಂದುಳಿದವರ ಸರದಾರರು: ಕರ್ನಾಟಕದಲ್ಲಿ ಸಿದ್ದರಾಮಯ್ಯನವರಂಥ ಕೆಲವೇ ಸಮುದಾಯಕ್ಕೆ ಸೇರಿದ ಸರದಾರರು, ತಾವೊಬ್ಬರೇ ಆ ಸಮುದಾಯದ ರಕ್ಷಕರು ಎಂದು ಬಿಂಬಿಸುವುದಲ್ಲದೇ, ಇತರ ಜಾತಿ, ಧರ್ಮದ ಜನರನ್ನು ನಿಂದಿಸುವ ಮೂಲಕ ಅಗ್ಗದ ಪ್ರಚಾರ ಗಳಿಸುತ್ತಿದ್ದಾರೆ. ಸಮಾಜದಲ್ಲಿ ಇವರು ಎಷ್ಟು ದೊಡ್ಡ ಕಂದಕವನ್ನು ಸೃಷ್ಟಿಸುತ್ತಿದ್ದಾರೆ ಎಂಬ ಅಂದಾಜು ಯಾರಿಗಾದರೂ ಇದೆಯೇ?

ಒಂದೆಡೆ ಪ್ರತಿಭಾ ಪಲಾಯನ ತಡೆಯಬೇಕು ಎಂದು ಬಲವಾಗಿ ಪ್ರತಿಪಾದಿಸುವವರು ನಿಜವಾಗಿಯೂ ಪ್ರತಿಭೆಯಿದ್ದವರಿಗೆ ಅವಕಾಶವನ್ನು ನಿರಾಕರಿಸುತ್ತಿರುವಾಗ ಅವರು ಅಮೆರಿಕದದಂಥ ದೇಶಗಳಿಗೆ ಹೋಗಿ ಅಲ್ಲಿನ ಅಭಿವೃದ್ಧಿಗೆ ಶ್ರಮಿಸದೇ ಬೇರೇನು ಮಾಡಿಯಾರು?

ಜಾತಿ, ಧರ್ಮ ಲಿಂಗ ತಾರತಮ್ಯವಿಲ್ಲದೇ ಪ್ರತಿಭೆ ಇದ್ದವರಿಗೆಲ್ಲ ಸಮಾನ ಅವಕಾಶ ನೀಡುವವರೆಗೂ ಮೀಸಲಾತಿಯಂಥ ಬೊಗಳೆ ನೀತಿಗಳಿಗೆ ಭಾರತ ಹುಲ್ಲುಗಾವಲಾಗಿರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

2 Comments:

At 5:01 PM, April 27, 2006, Blogger Anveshi said...

ಮೀಸಲಾತಿ ಬೇಕೇ ಬೇಕು ಎಂಬ ವಾದ ನನ್ನದು. ಅಂದರೆ... ಯಾವುದೇ ಉದ್ಯೋಗದಲ್ಲಿ ಪ್ರತಿಭಾವಂತರಿಗೇ ಮೀಸಲಾತಿ ಬೇಕು. ಯಾಕೆ ಗೊತ್ತೇ? ಪೊಗದಸ್ತಾಗಿ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳು ರೂಪಿಸುವ ಕಾನೂನಿನಿಂದ ಮುಂದೆ ಪ್ರತಿಭಾವಂತರಿಗೇ ಉದ್ಯೋಗವಿಲ್ಲದಂತಾಗುತ್ತದೆ. ಈ ಕಾರಣಕ್ಕೆ.

ಇನ್ನು ವಿ.ಪಿ.ಸಿಂಗ್, ಸಿದ್ದರಾಮಯ್ಯ ವಿಷಯ. ಮೀಸಲಾತಿ ಹಿಡಿದುಕೊಂಡು ಅವರು ಮತ ಭಿಕ್ಷಾ ಯಾತ್ರೆ ಆರಂಭಿಸಲಿ. ಸಮಾಜವನ್ನು ಇಬ್ಭಾಗಿಸಲಿ. ಅಲ್ಲೂ ದೇಶ ಒಡೆಯುವುದು ಪ್ರತಿಭಾವಂತರು ಮತ್ತು ಜಾತಿವಾದಿಗಳ ನಡುವೆ ಮಾತ್ರ ಎಂಬುದು ಅವರ ಗಮನಕ್ಕೆ ಈ ಜನ್ಮದಲ್ಲಂತೂ ಬರಲಾರದು.

ಕಾನೂನು ಮೂಲಕವೇ ಈ ಮಂದಿ ದೇಶವನ್ನು ಹಾಳುಗೆಡಹುತ್ತಾರೆ ಎಂದಾದರೆ, ಈ ದೇಶದಲ್ಲಿ ಮುಂದೊಂದು ದಿನ ಪ್ರತಿಭಾವಂತರೇ ಇಲ್ಲದಂತಾಗುತ್ತದೆ. ಇದ್ದವರೆಲ್ಲಾ ಬೇರೆ ದೇಶಗಳಿಗೆ ವಲಸೆ ಹೋಗುತ್ತಾರೆ. ಓಟಿಗಾಗಿ ಹೋರಾಡುವ ಇಂಥ ಖೂಳ ರಕ್ತಬೀಜಾಸುರ ಸಂತಾನದವರಿಗೆ ಜಯವಾಗಲಿ....!!

 
At 8:26 PM, April 27, 2006, Blogger Vishwanath said...

ಅನ್ವೇಷಿಗಳೇ,
ನೀವು ಹೇಳಿದಂತೆ ತಮ್ಮ ಬೇಳೆ ಬೇಯಿಸಿಕೊಳ್ಳುವ ಇಂತಹ ಸ್ವಾರ್ಥ ರಾಜಕಾರಣಿಗಳಿಂದಲೇ ಸಮಾಜ ಇಂದು ದಾರಿ ತಪ್ಪುತ್ತಿರುವುದು. ತಮ್ಮ ಸ್ವಾರ್ಥ ಸಾಧನೆಗೆ ಇಂಥವರು ಒಂದು ನಿರ್ದಿಷ್ಟ ಸಮುದಾಯವನ್ನು ಮೇಲೆತ್ತಿಕಟ್ಟಿ ಸಮಾಜವನ್ನು ಇಬ್ಭಾಗ ಮಾಡುತ್ತಿದ್ದಾರೆ.

ಇಂಥವರ ಸಂತತಿಗೆ ಧಿಕ್ಕಾರವಿರಲಿ.

 

Post a Comment

<< Home