ಒಡೆದ ಮನೆಯಾದ ಬಿಜೆಪಿ
ಭಾರತೀಯ ಜನತಾ ಪಕ್ಷ ಒಂದು ಶಿಸ್ತಿನ ರಾಜಕೀಯ ಪಕ್ಷ ಎಂಬ ಮಾತು ಈಗ ಬರೀ ಕ್ಲೀಷೆಯಾಗಿಬಿಟ್ಟಿದೆ.
ಪಕ್ಷದ ನಾಯಕತ್ವದ ವಿರುದ್ಧ ಕೇಂದ್ರದಲ್ಲಿ ಉಮಾ ಭಾರತಿ ಮತ್ತು ಮದನ್ ಲಾಲ್ ಖುರಾನಾ ಅವರು ಬಂಡೇಳುವಲ್ಲಿಂದ ಹಿಡಿದು ಕರ್ನಾಟಕದಲ್ಲಿ ಯಡಿಯೂರಪ್ಪ ಮತ್ತು ಅನಂತಕುಮಾರ್ ಎಂಬೆರಡು ಬಣಗಳು ಪರಸ್ಪರ ಕತ್ತಿ ಮಸೆಯುತ್ತ ಹೇಳಿಕೆ-ಪ್ರತಿ ಹೇಳಿಕೆಗಳನ್ನು ಕೊಡುತ್ತಿರುವುದನ್ನು ನೋಡಿದರೆ ಈ ಪಕ್ಷದ ಅವನತಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ರಾಜ್ಯದಲ್ಲಿ ಈ ಪಕ್ಷ ಅವನತಿ ಹೊಂದಲು ಕಾಂಗ್ರೆಸ್ ಅಥವಾ ಜೆಡಿ ಎಸ್‌ಗಳೇ ಬೇಕಿಲ್ಲ ಅದಕ್ಕೆ ಅನಂತಕುಮಾರ್, ಬಸವರಾಜ್ ಪಾಟೀಲ್ ಯತ್ನಾಳ್ ರಂಥ ಒಳಗಿನ ಮೀರ್ ಸಾಧಕ್ ರೇ ಸಾಕು.
ರಾಜ್ಯ ಬಿಜೆಪಿಯಲ್ಲಿ ಕಳೆದ ಅನೇಕ ದಿನಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಆಗಾಗ ಬಹಿರಂಗಗೊಂಡರೂ ಈಗ ನಿರ್ಣಾಯಕ ಹಂತ ತಲುಪಿದಂತೆ ಕಾಣುತ್ತಿದೆ.
ಗುಂಪುಗಾರಿಕೆ ದಿನೇ ದಿನೇ ಬೆಳೆಯುತ್ತಿದೆ. ಹೊರಗಿನಿಂದ ನೋಡಿದರೆ ಬಿಜೆಪಿಯಲ್ಲಿ ಎರಡು ವಿಷಯಗಳು ಪ್ರಮುಖವಾಗಿ ಎದ್ದು ಕಾಣುತ್ತವೆ.
ಒಂದನೆಯದು ಆ ಪಕ್ಷದಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಅನಂತಕುಮಾರ್ ಪರಸ್ಪರ ಪ್ರತ್ಯೇಕ ಕೋಟೆಗಳನ್ನೇ ಕಟ್ಟಿಕೊಂಡಿದ್ದಾರೆ.
ಎರಡನೆಯದಾಗಿ, ಭಿನ್ನಾಭಿಪ್ರಾಯ ಬಂದಾಗ ಅವರಲ್ಲೇ ಬಗೆಹರಿಸಿಕೊಳ್ಳುವ ಸಮಾಲೋಚನಾ ತಂತ್ರದ ಬಹುದೊಡ್ಡ ಕೊರತೆ.
ಅಧಿಕಾರದ ವಿಷಯ ಬಂದಾಗಲೆಲ್ಲ ಯಡಿಯೂರಪ್ಪ ಮತ್ತು ಅನಂತಕುಮಾರ್ ತಮ್ಮ ಮಟ್ಟದಲ್ಲಿ ಮುಸುಕಿನ ಗುದ್ದಾಟ ನಡೆಸಿದ್ದಾರೆ. ಈ ಹಿಂದೆ ಪಕ್ಷದಲ್ಲಿ ಪ್ರಾಬಲ್ಯ ಸ್ಥಾಪಿಸುವಲ್ಲಿ, ಯಡಿಯೂರಪ್ಪ ವಿರುದ್ಧ ಅದೇ ಕೋಮಿನ ವ್ಯಕ್ತಿಗಳನ್ನು ತಿರುಗಿ ಬೀಳಿಸುವಲ್ಲಿ ಅನಂತಕುಮಾರ ಯಶಸ್ವಿಯಾಗಿ ಶಕುನಿ ಪಾತ್ರ ನಿರ್ವಹಿಸಿದ್ದಾರೆ. ಬಿ.ಬಿ. ಶಿವಪ್ಪ, ಜಗದೀಶ್ ಶೆಟ್ಟರ್, ಬಸವರಾಜ್ ಪಾಟೀಲ್ ಯತ್ನಾಳ್ ಅವರನ್ನು ಯಡಿಯೂರಪ್ಪ ವಿರುದ್ಧ ಬಹಿರಂಗ ಕಾಳಗಕ್ಕೆ ಇಳಿಸುವಲ್ಲಿ ಅನಂತ್ ಪಾತ್ರ ಎಂಥದು ಎಂಬುದು ಎಲ್ಲರಿಗೂ ಗೊತ್ತಿದೆ.
ಇದರಿಂದ ಯಡಿಯೂರಪ್ಪ ಕೂಡ ಹಿಂದೇನೂ ಬಿದ್ದಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಅನಂತ್ ಬಣದವರನ್ನು ಯಶಸ್ವಿಯಾಗಿ ಮೂಲೆಗುಂಪು ಮಾಡಿದ್ದಾರೆ. ಬಿಜೆಪಿ-ಜೆಡಿ ಎಸ್ ಸರಕಾರದ ಸಚಿವ ಸಂಪುಟವನ್ನು ಗಮನಸಿದರೆ ಯಡಿಯೂರಪ್ಪ ಎಂಥ ಮರ್ಮಾಘಾತ ನೀಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ಮಗು ಚಿವುಟಿ, ತೊಟ್ಟಿಲು ತೂಗುವುದು:
ಇತ್ತ ಕರ್ನಾಟಕದಲ್ಲೂ ತನ್ನ ಇರುವಿಕೆ ಎದ್ದು ಕಾಣಬೇಕು ಅತ್ತ ದೆಹಲಿಯಲ್ಲೂ ತಾನು ಚಲಾವಣೆಯಲ್ಲಿರಬೇಕು ಎಂಬ ಹಂಬಲದಿಂದ ಪಕ್ಷದಲ್ಲಿ ಒಳಗೊಳಗೇ ಗುಪ್ತವಾಗಿ ಬಂಡಾಯದ ತಿದಿ ಒತ್ತುವ ಮೂಲಕ ರಾಯಚೂರಿನಿಂದ ಬೆಂಗಳೂರಿನವರೆಗೆ ಬೆಂಕಿ ಹರಡುವಲ್ಲಿ ಅನಂತಕುಮಾರ್ ಯಶಸ್ವಿಯಾಗಿದ್ದಾರೆ.
ಅತ್ತ ಬಿಜಾಪುರದಲ್ಲಿ ಯಡಿಯೂರಪ್ಪ ವಿರುದ್ಧ ಯತ್ನಾಳ್ ಬೆಂಕಿಯುಗುಳುವಂತೆ ಮಾಡಿ, ರಾಯಚೂರಿನಲ್ಲಿ ಬಂದು ಅವರೊಬ್ಬ (ಯತ್ನಾಳ್) ಮಹಾ ದುರಂಧರ ನಾಯಕ ಎನ್ನುವುದು. ಮರುದಿನ ಬೆಂಗಳೂರಿಗೆ ಬಂದು ಪಕ್ಷದಲ್ಲಿ ಭಿನ್ನಾಭಿಪ್ರಾಯಗಳೇ ಇಲ್ಲ ಎಂದು ಕೊಲ್ಗೇಟ್ ನಗೆ ಬೀರುವುದು ಇದೆಲ್ಲ ಅನಂತ್ ಶೈಲಿ. ಮಗು ಚಿವುಟಿ ಅಳುವಂತೆ ಮಾಡಿ ಮತ್ತೆ ಬಂದು ತೊಟ್ಟಿಲು ತೂಗುವ ಸೋಗನ್ನೂ ಅನಂತ್ ಮಾಡುತ್ತಾರೆ.
ಕಳೆದ 40 ವರ್ಷಗಳಿಂದ ಬಿಜೆಪಿಯಲ್ಲಿರುವ ಯಡಿಯೂರಪ್ಪ ಕೂಡ ತಮ್ಮ ವಿರೋಧಿಗಳು ಎನ್ನಲಾದವರ ವಿರುದ್ಧ ಬಹಿರಂಗವಾಗಿ ಮಾಡುತ್ತಿರುವ ಟೀಕೆ-ಟಿಪ್ಪಣಿಗಳನ್ನು ನೋಡಿದರೆ ಅವರ ರಾಜಕೀಯ ಅಪ್ರಬುದ್ಧತೆಯ ಬಹಿರಂಗ ದರ್ಶನವಾಗುತ್ತಿದೆ.
ಬಿಜೆಪಿ ಎಂಥ ಹೀನಮಟ್ಟಕ್ಕೆ ಇಳಿದಿದೆ ಎಂಬುದಕ್ಕೆ ಈಚಿನ ಶೋಭಾ ಕರಂದ್ಲಾಜೆ ಪ್ರಕರಣವೇ ಸಾಕ್ಷಿ.
ಬಿಜೆಪಿಯಲ್ಲಿ ಮಹಿಳೆಯರಿಗೆ ಆದ್ಯತೆ ಕಡಿಮೆ ಎಂಬುದು ಈ ವರೆಗೆ ಇದ್ದ ಅತಿ ದೊಡ್ಡ ಆರೋಪ. ಇಂಥದ್ದರಲ್ಲಿ ದಕ್ಷಿಣ ಕನ್ನಡದ ಶಾಸಕಿ ಶೋಭಾ ಕರಂದ್ಲಾಜೆ ಅವರನ್ನು ಸಚಿವೆಯಾಗಿ ಆಯ್ಕೆ ಮಾಡಲು ಪಕ್ಷದ ಒಂದು ಬಣ ಯೋಚಿಸಿರಬಹುದು. ಅದಕ್ಕೆ ಇನ್ನೊಂದು ಬಣ ವಿರೋಧಿಸಿದ ರೀತಿ ಗಮನಿಸಿದರೆ ಈ ಪಕ್ಷ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡುತ್ತದೆ. ಶೋಭಾ ಅವರನ್ನು ನೇಮಿಸುವಲ್ಲಿ ಯಡಿಯೂರಪ್ಪ 'ವಿಶೇಷ ಮಮತೆ' ತೋರುತ್ತಿದ್ದಾರೆ ಎಂಬಲ್ಲಿಂದ ಹಿಡಿದು ಅವರಿಬ್ಬರ ಮಧ್ಯೆ ಸಂಬಂಧ ಇದೆ ಎಂಬ ಮಟ್ಟದವರೆಗೂ ವಿರೋಧಿ ಬಣದ ಮಾತುಗಳು ಪತ್ರಿಕೆಗಳಲ್ಲಿ ವರ್ಣರಂಜಿತವಾಗಿ ಪ್ರಕಟವಾದವು.
ಭಾರತೀಯ ಮೌಲ್ಯಗಳನ್ನು ತಾವೇ ಗುತ್ತಿಗೆ ಹಿಡಿದಿದ್ದೇವೆ ಎಂದು ಆಗಾಗ ಸಾರ್ವಜನಿಕವಾಗಿ ಬೆನ್ನು ತಟ್ಟಿಕೊಳ್ಳುವ ಪಕ್ಷದ ನಾಯಕರು ತಮ್ಮ ಸಹೋದ್ಯೋಗಿ ಮಹಿಳೆಗೆ ನೀಡುತ್ತಿರುವ ಗೌರವವಿದು. ಇನ್ನು ಬೇರೆಯವರಿಗೆ ಇವರು ಎಂಥ ಗೌರವ ನೀಡಬಲ್ಲರು?
ಕರ್ನಾಟಕದಲ್ಲಿ ಏನಾದರೂ ಜೆಡಿ ಎಸ್-ಬಿಜೆಪಿ ಸರಕಾರ ಕುಸಿದು ಬಿದ್ದರೆ ಅದು ಬೇರೆ ವಿರೋಧಿ ಪಕ್ಷದ ಚಿತಾವಣೆಯಿಂದಲ್ಲ ಬದಲಾಗಿ ಬಿಜೆಪಿ ಆಂತರಿಕ ವೈರುಧ್ಯಗಳಿಂದ ಮಾತ್ರ.
ಈ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಾಗ ದಕ್ಷಿಣ ಭಾರತದಲ್ಲಿ ಕರ್ನಾಟಕದಿಂದಲೇ ಬಿಜೆಪಿ ಅಧಿಕಾರದತ್ತ ದಾಪುಗಾಲು ಎಂದು ಅರುಣ್ ಜೈಟ್ಲಿ ಘೋಷಿಸಿದ್ದರು. ಈ ಯಾದವೀ ಕಲಹ ನೋಡಿದರೆ ಕರ್ನಾಟಕದಿಂದಲೇ ಪಕ್ಷದ ಅವನತಿ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.
7 Comments:
ಬಿಜೆಪಿ ಶಿಸ್ತಿನ ಪಕ್ಷ ಎಂಬುದು ಅಪ್ಪಟ ಸುಳ್ಳು. ಅಧಿಕಾರ ಗದ್ದುಗೆ ಏರುವವರೆಗೂ ಎಲ್ಲರೂ ಸಿದ್ಧಾಂತಗಳನ್ನು ಉಲಿಯುತ್ತಾರೆ. ಆದರೆ ಒಮ್ಮೆ ಅಧಿಕಾರ ಸಿಕ್ಕಿತೆಂದರೆ ಅವರದೆಲ್ಲವೂ ಬಟಾಬಯಲು.
ಬಿಜೆಪಿಯವರು ಧರ್ಮಭೀರುಗಳೂ, ಶ್ರೀಕೃಷ್ಣನ ಅನುಯಾಯಿಗಳೂ ಆಗಿರುತ್ತಾರೆ. ಶ್ರೀಕೃಷ್ಣ ತನ್ನ ಅನುಯಾಯಿಗಳು (ಯಾದವ ಕುಲ) ತಮ್ಮೊಳಗೆ ಹೊಡೆದಾಡಿ ವಿನಾಶ ಹೊಂದುವುದನ್ನು ಬಯಸಿದ್ದ.
ಅದೇ ಪ್ರಕಾರ ಋಷಿ ಶಾಪದಿಂದ ಯಾದವ ಕುಲವೂ ನಿರ್ನಾಮವಾದಂತೆ ತೋರಿತ್ತು. ಇದೀಗ ಅಳಿದುಳಿದವರೂ ತಮ್ಮ ತಮ್ಮೊಳಗೆ ಹೊಡೆದಾಡಿ ಯಾವತ್ತೂ ಕೆಸರಿನಲ್ಲೇ ಇರುವ ಕಮಲ ಶಾಶ್ವತವಾಗಿ ಮುಳುಗುವಂತೆ ಮಾಡುತ್ತಿದ್ದಾರೆ.
ಇದಕ್ಕೆ ಯಡಿಯೂರಪ್ಪ, ಅನಂತ್ ಕುಮಾರ್ ನೆಪಮಾತ್ರರು. ಹೇಗಿದ್ದರೂ ಚುನಾವಣೆ ಫಲಿತಾಂಶಕ್ಕೆ ಮೊದಲೇ ಮಂತ್ರಿಗಳ ಪಟ್ಟಿ ಸಿದ್ಧ ಮಾಡಿ ಸರಕಾರ ಮಾಡಿದವರಲ್ವೇ?
ಸಾರಥಿಯವರೇ, ನೀವು ಹೇಳಿದಂತೆ ಬಿಜೆಪಿ ಈಗ ಶಿಸ್ತಿನ ಪಕ್ಷವಾಗಿ ಉಳಿದಿಲ್ಲ. ಅಂಥ ಭ್ರಮೆಯಲ್ಲಿದ್ದ ನಾನು ಈಚಿನ ಬೆಳವಣಿಗೆಗಳಿಂದ ವಾಸ್ತವ ಅರಿತಿದ್ದೇನೆ. ಯಾವ ಅಶಿಸ್ತಿನ ಪಕ್ಷಕ್ಕೂ ಬಿಜೆಪಿ ಕಡಿಮೆಯಿಲ್ಲ ಎಂಬುದು ದಿನೇ ದಿನೇ ಸಾಬೀತಾಗುತ್ತಿದೆ. ಅಪರೂಪಕ್ಕೆ ಸಿಕ್ಕ ಅಧಿಕಾರವನ್ನು ಜನಸೇವೆಗೆ ಬಳಸಿಕೊಳ್ಳದ ಬುದ್ಧಿಹೀನರು ಬಿಜೆಪಿಯವರು. ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಗೆ ಪರ್ಯಾಯ ಪಕ್ಷ ಮತ್ತೊಂದಿಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ.
ಅನ್ವೇಷಿಗಳೇ, ನೀವು ಹೇಳಿದ್ದು ನಿಜ.
ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲೆದು ಸಿದ್ಧವಾಗಿಟ್ಟುಕೊಂಡವರಿವರು. ಬಿಜೆಪಿಯಲ್ಲಿ ನಡೆಯುತ್ತಿರುವುದು ಅಕ್ಷರಶಃ ಯಾದವೀ ಕಲಹವೇ.
ಆರೆಸ್ಸೆಸ್ ನಂಥ ಶಿಸ್ತಿನ ಹಿನ್ನೆಲೆಯಿಂದ ಬಂದವರೆಂದು ಹೇಳಿಕೊಂಡು ಬಂದಿರುವ ನಾಯಕರೆಲ್ಲ ಯಾವ ಸಿದ್ಧಾಂತ, ಶಿಸ್ತಿಗೆ ಕಟ್ಟು ಬೀಳದೇ ಕಚ್ಚಾಡುತ್ತಿರುವುದನ್ನು ನೋಡಿದರೆ ನಾಯಿಗಳಿಗೇ ನಾಚಿಕೆಯಾಗುತ್ತಿದೆಯೇನೋ!
ವಿನಾಶಕಾಲೇ ವಿಪರೀತ ಬುದ್ಧಿ.
ಸಾರಥಿಯವರು ಹೇಳಿದಂತೆ ಬಿಜೆಪಿಯಲ್ಲಿ ಶಿಸ್ತಿಲ್ಲ. ನಿಮಗೆ ನೆನಪಿರಬಹುದು - ೧೯೭೬ರಲ್ಲಿ ತುರ್ತುಪರಿಸ್ಥಿತಿ ಕೊನೆಗೊಂಡು, ಕಾಂಗ್ರೆಸ್ಸೇತರರ ಜನತಾ ಪಕ್ಷ ಪ್ರಾರಂಭವಾದಾಗ ಜನಸಂಘದಲ್ಲಿನ ಹೆಚ್ಚಿನ ನಾಯಕರು ಅಲ್ಲಿಗೆ ಸೇರಿದರು. ಆದರೆ ಬಲರಾಜ ಮಧೋಕರು ಮಾತ್ರ ಸೇರಲಿಲ್ಲ. ಮಧೋಕರು ಅಪ್ಪಟ ಸಂಘಸ್ವಯಂಸೇವಕರು. ನಾನೊಬ್ಬನೇ ಇದ್ದರೂ ಪರವಾಗಿಲ್ಲ ಜನಸಂಘ ಬಿಡುವುದಿಲ್ಲ ಎಂದುಳಿದರು. ಜನಸಂಘ ಮತ್ತು ಅದರ ಗುರುತು ನಂದಾದೀಪ, ಚುನಾವಣಾ ಮಂಡಳಿಯ ದಾಖಲೆಯ ಪ್ರಕಾರ ಇನ್ನೂ ಅಳಿಯದೇ ಉಳಿದಿದೆ.
ಬಸವರಾಜರ ರಾಜಕೀಯ ಲೇಖನ ಪ್ರಸ್ತುತ ಪರಿಸ್ಥಿತಿಗೆ ಕನ್ನಡಿಯನ್ನು ಹಿಡಿದಂತಿದೆ. ಇನ್ನೂ ಹೆಚ್ಚು ಹೆಚ್ಚು ಮೂಡಿ ಬರಲಿ.
ಶ್ರೀನಿವಾಸರೇ,
ಜನಸಂಘದ ಶಿಸ್ತಿನ ಮೂಸೆಯಲ್ಲಿ ಬೆಳೆದು ಬಂದ ನಾಯಕರೂ ಈಗಿಲ್ಲ, ಆ ಸಂಸ್ಥೆಯ ಮೌಲ್ಯಗಳೂ ಈಗಿನ ಪೀಳಿಗೆಯ ನಾಯಕರಿಗೆ ಬೇಕಾಗಿಲ್ಲ.
ಈಗ ಅವರ ಎದುರಿಗಿರುವುದು ಒಂದೇ ಅಜೆಂಡಾ ಸಿಕ್ಕಷ್ಟು ಬಾಚಿಕೊಳ್ಳುವುದು.
ನೀವು ಹೇಳಿದಂತೆ, ಈಗಿನ ಬಿಜೆಪಿಯಲ್ಲಿ ಬಲರಾಜ ಮುಧೋಕರಂಥ ಮೌಲ್ಯಾಧಾರಿತ ನಾಯಕರು ಸಿಕ್ಕಲು ಸಾಧ್ಯವೇ ಇಲ್ಲ.
ಅಂದಹಾಗೆ ನೀವು ನನ್ನ ಹೆಸರನ್ನೇ ತಪ್ಪಾಗಿ ಬರೆದಿದ್ದೀರಲ್ಲಾ ಸರ್! ಪರವಾಗಿಲ್ಲ.
ಧನ್ಯವಾದ.
-ವಿಶ್ವನಾಥ
www.hinduwisdom.info
www.hindutva.org
ನ ಪುಟಗಳನ್ನೊಮ್ಮೆ ಓದಿ
Post a Comment
<< Home