Thursday, May 04, 2006

ಮರೆಯಾದ "ಮಹಾಜನ"




ಉತ್ತಮರಿಗೆ ಅಲ್ಪಾಯುಷ್ಯ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ.

ಭಾರತೀಯ ಜನತಾ ಪಕ್ಷದ ಮುಂಚೂಣಿ ನಾಯಕ, ಉತ್ತಮ ವಾಗ್ಮಿ, ಸಂಘಟಕ ಪ್ರಮೋದ ಮಹಾಜನ ಅವರ ಅಕಾಲಿಕ ನಿಧನ ಕೇವಲ ಅವರು ಪ್ರತಿನಿಧಿಸಿದ ಪಕ್ಷಕ್ಕಷ್ಟೇ ಅಲ್ಲ ಭಾರತೀಯ ರಾಜಕಾರಣಕ್ಕೇ ಒಂದು ನಷ್ಟ.

ಪ್ರಮೋದ ಮಹಾಜನ ಎಂದೊಡನೆ ಅವರ ಕಂಚಿನ ಕಂಠ, ಮಾತಿನ ಓಘಕ್ಕೆ ತಕ್ಕ ಅವರ ಹಾವ-ಭಾವಗಳು ನಮ್ಮ ಕಣ್ಮುಂದೆ ಸುಳಿದು ಹೋಗುತ್ತವೆ. ನಿನ್ನೆ-ಮೊನ್ನೆಯವರೆಗೂ ನಮ್ಮ ಕಣ್ಣಮುಂದೆ ಇದ್ದ ವ್ಯಕ್ತಿ ಇಂದು ಮರೆಯಾದರು ಎಂಬುದನ್ನು ನಂಬುವುದು ಕಷ್ಟ.

ಪ್ರಮೋದ್ ವೆಂಕಟೇಶ್ ಮಹಾಜನ ಮಹಾರಾಷ್ಟ್ರದ ಭೀಡ್ ಜಿಲ್ಲೆಯ ಗ್ರಾಮವೊಂದರ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದ ಹುಡುಗ ಭಾರತೀಯ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು ಒಂದು ರೋಚಕ ಕಥನ.

ಶಾಲಾ ಶಿಕ್ಷಕರಾಗಿದ್ದ ತಂದೆ ವೆಂಕಟೇಶ ಮಹಾಜನ ಇಹಲೋಕ ತ್ಯಜಿಸಿದಾಗ ಪ್ರಮೋದ್ ಗೆ ಕೇವಲ 21 ವರ್ಷ ವಯಸ್ಸು. ಆ ಚಿಕ್ಕ ಹರೆಯದಲ್ಲೇ ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಮತ್ತು ತಾಯಿಯ ಹೊಣೆ ಹೊರಬೇಕಾದ ಸಂದರ್ಭ. ಚಿಕ್ಕ ವಯಸ್ಸಿನಲ್ಲಿ ದೊರೆತ ಇಂಥ ಜವಾಬ್ದಾರಿಯೇ ಅವರನ್ನು ಜೀವನದಲ್ಲಿ ಪಳಗಿಸಿರಬೇಕು.

ಆರೆಸ್ಸೆಸ್ ಪ್ರಚಾರಕರಾಗಿ ಅವರು ಅಳವಡಿಸಿಕೊಂಡ ಶಿಸ್ತು, ಸಂಘಟನಾ ಚಾತುರ್ಯವೇ ಹಿರಿಯ ರಾಜಕೀಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಅವರಂಥ ನಾಯಕರು ಪ್ರಮೋದ್ ಅವರನ್ನು ತಮ್ಮ ರಾಜಕೀಯ ಸಲಹಾಕಾರರಂಥ ಸ್ಥಾನಕ್ಕೆ ನೇಮಿಸಿಕೊಳ್ಳಲು ಕಾರಣವಾಯ್ತು.

"ಅಟಲ್ ಕೋ ಹಠಾವ್, ಅಟಲ್ ಕೋ ಹಠಾವ್ ಪುಕಾರ್ ಆ ರಹೇ ಹೈ, ಮಗರ್ ಏ ಪ್ರಶ್ನ ದೇಶ ಕೇ ಸಾಮ್ನೆ ಆ ರಹಾ ಹೈ ಕಿಸ್ಕೋ ಬಿಠಾವ್, ಕಿಸ್ಕೋ" ಎಂದು ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ಸಾರ್ವಜನಿಕ ಸಭೆಯೊಂದರಲ್ಲಿ ಮಾಡಿದ ಭಾಷಣದ ಪ್ರಾಸಬದ್ಧ ಸಾಲೊಂದು ಇನ್ನೂ ನನ್ನ ತಲೆಯಲ್ಲಿ ಗುನುಗುಡುತ್ತಿದೆ. ಇದು ಒಂದು ಉದಾಹರಣೆಯಷ್ಟೇ. ಭಾಷಣ ಮಾಡುವುದಕ್ಕಿಂತ ಮುನ್ನ ಪ್ರಮೋದ್ ಮಹಾಜನ್ ಪಕ್ಕಾ ಹೋಂ ವರ್ಕ್ ಮಾಡುತ್ತಿದ್ದರು ಎಂಬುದಕ್ಕೆ ಅವರು ಭಾಷಣದಲ್ಲಿ ಕೋಟ್ ಮಾಡುತ್ತಿದ್ದ ಹೇಳಿಕೆಗಳೇ ಸಾಕ್ಷಿ.

ಚುನಾವಣೆಯಲ್ಲಿ ಕೇವಲ ಒಂದೇ ಬಾರಿ ಗೆದ್ದರೂ, ಹಲವಾರು ದಶಕಗಳಿಂದ ರಾಜಕಾರಣದಲ್ಲಿದ್ದವರಿಗಿಂತ ಹೆಚ್ಚಿನ ಜನಪ್ರಿಯತೆ ಗಳಿಸಿದ್ದ ಪ್ರಮೋದ್ ಮಹಾಜನ್ ಹಠಾತ್ ನಿರ್ಗಮಿಸಿದ್ದಾರೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ, ಈ ವಜ್ರಾಘಾತವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದಯಪಾಲಿಸಲಿ.

2 Comments:

At 2:24 PM, May 05, 2006, Blogger Anveshi said...

ಭವಿಷ್ಯದ ಪ್ರಧಾನಿಯನ್ನು ದೇಶ ಕಳೆದುಕೊಂಡಿದೆ.
ಉಳಿದ ರಾಜಕಾರಣಿಗಳು ತಮ್ಮ ಹುಳುಕುಗಳನ್ನು ಹೇಳಿಕೊಳ್ಳುತ್ತಿರಲಿಲ್ಲವಾದುದರಿಂದ ವಿವಾದ ಅಂಥವರನ್ನು ಸುತ್ತಿಕೊಳ್ಳುತ್ತಿರಲಿಲ್ಲ. ಆದರೆ ಮಹಾಜನ್ ಅಂಥವರಲ್ಲ. ಯಾವತ್ತಿದ್ದರೂ ನೇರಾನೇರ ಹೇಳಿಬಿಡುವವರು. ಅವರ ಬಾಯಿ ಹರಕು ಎಂದು ಹಲವು ಬಾರಿ ಟೀಕೆಗಳು ಬಂದರೂ, ಸತ್ಯ ಹೇಳುತ್ತಿದ್ದರು, ಅದಕ್ಕಾಗಿ ವಿವಾದಕ್ಕೆ ತುತ್ತಾಗುತ್ತಿದ್ದರು.

ದೇಶದಲ್ಲಿ ಇಂಥ ಅನುಭವಿ, ಯೋಗ್ಯ ಮತ್ತು ಎಂಟೆದೆಯ ಮಹಾನ್ ನಾಯಕರಿದ್ದರೂ ಇಂದು ನಾವು ರಾಜಕೀಯದಲ್ಲಿ ಏನೂ ಅನುಭವವಿಲ್ಲದ, ಸರಿಯಾಗಿ ಮಾತನಾಡಲು ಬಾರದ, ವಿದೇಶೀ ಸಂಜಾತರನ್ನು ಪ್ರಧಾನಿ ಪಟ್ಟಕ್ಕೆ ಕೂರಿಸಲು ಹೆಣಗುತ್ತೇವೆ.

ಇದು ದೇಶದ ದುರಂತ. ಪ್ರಮೋದ್ ರಂಥವರಿಗೆ ಈ ದೇಶದಲ್ಲಿ ಜಾಗವಿರಲಿಲ್ಲವೋ... ಅಂತೂ ಹೋಗಿ ಬಿಟ್ಟರು. ಬರೇ ಬಿಜೆಪಿಗೆ ಮಾತ್ರವಲ್ಲ, ದೇಶದ ರಾಜಕೀಯಕ್ಕೇ ಇದೊಂದು ಬಲುದೊಡ್ಡ ನಷ್ಟ.

ಪ್ರಮೋದ್ ಹಾಕಿಕೊಟ್ಟ ಮಾರ್ಗ ಮುಂದುವರಿಯಲಿ, ರಾಜಕಾರಣಿಗಳಿಗೆ ಬುದ್ಧಿ ಬರಲಿ. ಪ್ರಮೋದ್ ಆತ್ಮಕ್ಕೆ ಶಾಂತಿ ದೊರೆಯಲಿ.

 
At 4:59 PM, May 05, 2006, Blogger Vishwanath said...

ಅನ್ವೇಷಿಗಳೇ,

ನೀವು ಹೇಳಿರುವುದು ಅಕ್ಷರಶಃ ಸತ್ಯ.

ವಿವಾದದ ಹುತ್ತ ಮತ್ತೆ ಮತ್ತೆ ಸುತ್ತಿಕೊಳ್ಳುತ್ತಿದ್ದರೂ, ಧೃತಿಗೆಡದೇ ಕೊಡವಿಕೊಂಡು ಮೇಲೇಳುತ್ತಿದ್ದ ಪ್ರಮೋದ್ ನಿಜಕ್ಕೂ ಓರ್ವ ಅಪರೂಪದ ರಾಜಕಾರಣಿ.

ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಮೈತ್ರಿಕೂಟ ಸರಕಾರ ರಚಿಸುವಲ್ಲಿ ಮಹತ್ವದ ಪಾತ್ರ ವಹಿಸಿ, ದೇಶದಲ್ಲೇ ಸಮ್ಮಿಶ್ರ ಸರಕಾರದ ಪರಂಪರೆಗೆ ನಾಂದಿ ಹಾಡಿದ ಪ್ರಮೋದ್ ಭಾರತೀಯ ರಾಜಕಾರಣದಲ್ಲಿ ಹೊಸ ಭಾಷ್ಯ ಬರೆದರು.

ಸಂಸದೀಯ ವ್ಯವಹಾರಗಳ ಸಚಿವರಾಗಿ ಪಕ್ಷಾತೀತ ಬೆಂಬಲ ಪಡೆದಿದ್ದ ಅಜಾತಶತ್ರುವಿಗೆ ತನ್ನ ಸ್ವಂತ ತಮ್ಮನೇ ಶತ್ರುವಾಗಿದ್ದು ಮಾತ್ರ ದುರಂತ.

 

Post a Comment

<< Home