ಜನಾಬ್ ನೌಶಾದ್ ಅಲಿ ಅಮರ್ ರಹೇ
ಸುಹಾನಿ ರಾತ್ ಢೇಲ್ ಚುಕೆ ನಾ ಜಾನೆ ತುಮ್ ಕಬ್ ಆವೋಗೆ
ಜಹಾಸೆ ಋತು ಬದಲ್ ಚುಕೆ ನಾ ಜಾನೆ ತುಮ್ ಕಬ್ ಆವೋಗೆ
ತಡಪ ರಹೇ ಹೈ ಹಮ್ ಯಹಾ ತುಮ್ಹಾರೆ ಇಂತಜಾರ್ ಮೇ...
ಹೀಗೊಂದು ಹಾಡು ಮುಂಬೈ ವಿವಿಧ ಭಾರತಿಯಿಂದ ತೇಲಿ ಬರುತ್ತಿದ್ದರೆ ಬೇರೆಯದೇ ಆದ ಲೋಕಕ್ಕೆ ತೆರಳುತ್ತಿದ್ದೆ ನಾನು. ಮತ್ತೆ ವಾಸ್ತವಕ್ಕೆ ಬರುತ್ತಿದ್ದುದು, "ದೋಸ್ತೋ, ನೌಶಾದ್ ಅಲಿಕೆ ಏಕ್ ಓರ್ ಗೀತ್ ಸುನೀಯೆ" ಎಂದು ನಿರೂಪಕಿ ಹೇಳಿದಾಗಲೇ.
ಅದಿನ್ನೂ ಹದಿನಾರರ ವಯಸು, ಹುಚ್ಚುಖೋಡಿ ಮನಸು. ಕಂಡ ಕನಸಿಗೆ ಲೆಕ್ಕವಿಲ್ಲ, ಕಲ್ಪನೆಗಳಿಗೆ ಸೀಮೆಯಿಲ್ಲ. ಹೈಸ್ಕೂಲಿನಲ್ಲಿ ಎರಡು ವರ್ಷ ಮುಗಿಸಿ ಹತ್ತನೆಯ ತರಗತಿಗೆ ಕಾಲಿಡುವ ದಿನಗಳವು. "ಮುಂದೆ ಬೋರ್ಡ್ ಎಕ್ಸಾಮ್ ಹೆಂಗ್ ಓದ್ತೀಯೋ ನೋಡು" ಎಂದು ಬೆದರಿಸುತ್ತಿರುವವರು ಒಂದೆಡೆಯಾದರೆ, ಶಾಲೆಯಲ್ಲಿ ನಕ್ಕು ಮಾತಾಡಿಸಿದ ಗೆಳತಿಯ ಮಾತುಗಳು ಹೊಸ ಭಾವನಾ ಲೋಕಕ್ಕೇ ಕರೆದೊಯ್ಯುತ್ತಿದ್ದವು. ಇವೆಲ್ಲ ದುಮ್ಮಾನ-ಗೊಂದಲಗಳನ್ನು ಮರೆಯಲು ನಾನು ಆಗಷ್ಟೇ ಕಂಡುಕೊಂಡ ಆಪ್ತ ಮಿತ್ರ- ಮುಂಬೈ ವಿವಿಧ ಭಾರತಿ! ರಾತ್ರಿ ಊಟ ಮಾಡಿ ಮಲಗುವ ಮುನ್ನ ಚಾಪೆ ಹಾಸಿ, ತಲೆದಿಂಬಿನ ಬಳಿ ಪುಟ್ಟ ಟ್ರಾನ್ಸಿಸ್ಟರ್ ಇಟ್ಟು, ದೀಪ ಆರಿಸಿ ಮಲಗಿದರೆ ಆ ಲೋಕವೇ ಬೇರೆ.
ಪ್ರೀತಿ-ಪ್ರೇಮ, ದಾಂಪತ್ಯದ ಬಗ್ಗೆ ನನ್ನಲ್ಲಿ ಅನೇಕ ಕಾಲ್ಪನಿಕ ವಿಚಾರಗಳನ್ನು ಬಿತ್ತಿದವರು ಇಬ್ಬರು. ಒಬ್ಬವರು ನಮ್ಮವರೇ ಆದ ಪ್ರೇಮಕವಿ ಮೈಸೂರು ಮಲ್ಲಿಗೆಯ ಕಂಪು ಸೂಸಿದ ಶ್ರೀ ಕೆ.ಎಸ್. ನರಸಿಂಹಸ್ವಾಮಿ, ಇನ್ನೊಬ್ಬರು ಜನಾಬ್ ನೌಶಾದ್ ಅಲಿ(ಯಾಸ್) ಜನಾಬ್ ನೌಶಾದ್ ಸಾಹಬ್.
ಸ್ನೇಹದ ಮಾತುಗಳನ್ನೇ ಪ್ರೇಮವೆಂದು ತಿಳಿದ ನನ್ನಂಥವನಿಗೆ ಭಾವನಾಲೋಕಕ್ಕೆ ನೂಕಿ,
"ಪ್ಯಾರ್ ಕಿಯಾ ತೋ ಡರನಾ ಕ್ಯಾ, ಹಮ್ ಪ್ಯಾರ್ ಕಿಯಾ ಹೈ ಮಗರ್ ಚೋರಿ ನ ಕಿಯಾ..."
ಎಂದು ಮೊಹ್ಮದ್ ರಫಿ, ಲತಾ ಮಂಗೇಶ್ಕರ್, ಬಡೇ ಘುಲಾಂ ಅಲಿ ಖಾನ್ ಕೋರಸ್‌ನಲ್ಲಿ ಹಾಡುತ್ತಿದ್ದರೆ ಹಾಗೂ
"ಮೊಹಬ್ಬತ್ ಜಿಂದಾಬಾದ್...."
ಎಂಬ ಹಾಡು ತೇಲಿ ಬಂದರೆ ಇವರೆಲ್ಲಾ ನನ್ನನ್ನೇ ಬೆನ್ನು ತಟ್ಟಿ ಹಾಡಿದಷ್ಟು ಸಂತೋಷ!
ನನ್ನಂಥ ಇನ್ನೂ ಎಷ್ಟೋ ಹುಡುಗರೆದೆಯಲ್ಲಿ ಪ್ರೇಮದ ಕಿಚ್ಚು ಹಚ್ಚಿದ್ದ ಜನಾಬ್ ನೌಶಾದ್ ಅಲಿ ಮೇ 5, 2006 ರಂದು ಮುಂಬೈನಲ್ಲಿ ತಮ್ಮ 86ರ ತುಂಬು ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ.
ನೌಶಾದ್ ಸಾಹೇಬರು ಕೇವಲ ಪ್ರೀತಿ-ಪ್ರೇಮದ ಬಗ್ಗೆಯಷ್ಟೇ ಅಲ್ಲದೇ ಜೀವನದ ಇನ್ನೊಂದು ಮಗ್ಗುಲಿನ ಬಗ್ಗೆ ಮನಮುಟ್ಟುವಂತೆ ಗೀತೆಗಳನ್ನು ರಚಿಸಿದ್ದಾರೆ. ಆದರೆ ಜೀವನ ಎಂದರೆ ಏನು ಎಂದೇ ಗೊತ್ತಿರದ ನನಗೆ ತಟ್ಟಿದ್ದು ಪ್ರೀತಿ-ಪ್ರೇಮದ ಹಾಡುಗಳು ಮಾತ್ರ!
ನಲವತ್ತರ ದಶಕದಲ್ಲೇ ಕೀರ್ತಿಯ ಉತ್ತುಂಗಕ್ಕೇರಿದ ನೌಶಾದ್ ಅಲಿ ಅವರ ಜೀವನ ಹೂವಿನ ಹಾಸುಗೆಯೇನೂ ಆಗಿರಲಿಲ್ಲ. ಒಂದು ಕಾಲದಲ್ಲಿ ಅವರು ದಿಕ್ಕಿಲ್ಲದೇ ಫುಟ್ ಪಾತ್ ನಲ್ಲಿ ಅಡ್ಡಾಡುವ ದಿನಗಳೂ ಇದ್ದವಂತೆ. ಅಂಥ ಮುಳ್ಳುಗಳ ಮಧ್ಯವೇ ಅಲ್ಲವೇ ಗುಲಾಬಿ ರೂಪು ತಳೆಯುವುದು.
ಹಿಂದಿ ಚಿತ್ರಗಳ ಸಂಗೀತ ಸಂಯೋಜನೆಯಲ್ಲಿ ಪಾಶ್ಚಿಮಾತ್ಯ ಸಂಗೀತ ಅಳವಡಿಕೆ, ಹಿಂದೂಸ್ತಾನಿ ಸಂಗೀತ ಪರಂಪರೆಯನ್ನು ಚಿತ್ರಗೀತೆಗಳಿಗೂ ವಿಸ್ತರಿಸಿದ್ದು, ಹಾಡಿನ ಮಧ್ಯೆ ಸಂಭಾಷಣೆಗಳ ಸೇರ್ಪಡೆಯಂಥ ಹೊಸ ಹೊಸ ಪ್ರಯೋಗಗಳನ್ನು ಮಾಡಿದ ಗುಲಾಮ್ ಅಲಿ ಸಾಹೇಬರು ಹಿಂದಿ ಚಲನಚಿತ್ರ ಕ್ಷೇತ್ರದಲ್ಲಿ ನೂತನ ಭಾಷ್ಯವನ್ನೇ ಬರೆದಿದ್ದಾರೆ. ಮೊಗಲೇ ಆಜಂ ಮತ್ತು ತಾಜ ಮಹಲ್ ನಂಥ ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಅತ್ಯುತ್ಕೃಷ್ಟ ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿದ ಹಿರಿಮೆಯೂ ಜನಾಬ್ ರಿಗಿದೆ.
1919ರಲ್ಲಿ ಉತ್ತರ ಪ್ರದೇಶದ ಬಡ ಮುಸ್ಲಿಂ ಕುಟುಂಬದಲ್ಲಿ ಆರಂಭವಾದ ಅವರ ಜೀವನಯಾತ್ರೆ ಮುಂಬೈನಲ್ಲಿ ಮುಗಿದಿದೆ. ಜನಾಬ್ ನೌಶಾದ್ ಅಲಿ ಸಂಗೀತ ಇರುವವರೆಗೂ ಅಮರ.
0 Comments:
Post a Comment
<< Home