Monday, June 26, 2006

ಜೂನ್ ಎಂಬ ಒಡಲಾಳದ ಪಡಿನೆಳಲು

ಜೂನ್!

ವರ್ಷದಲ್ಲಿ ಇದು ಏಳಕ್ಕೇರದ, ಐದಕ್ಕಿಳಿಯದ ಆರನೇ ತಿಂಗಳು. ನನ್ನಂತಹದೇ ಶುದ್ಧ ಮಧ್ಯಮ ವರ್ಗದ ತಿಂಗಳು!

ಜೂನ್ ತಿಂಗಳು ಮುಂಗಾರನ್ನೂ ತನ್ನ ಬೆನ್ನಿಗೇ ಅಂಟಿಸಿಕೊಂಡು ಬರುತ್ತದೆ, ಈ ದಿನಗಳಲ್ಲಿ ರೈತರು ಬಿತ್ತುವ ಖುಷಿಯಲ್ಲಿದ್ದರೆ, ಸಹಕಾರಿ ಬ್ಯಾಂಕುಗಳು ಕೃಷಿಕರಿಗೆ ಎಷ್ಟು ಬೆಳೆ ಸಾಲ ನೀಡಿದರೆ ಎಷ್ಟು ಬಡ್ಡಿ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿರುತ್ತವೆ, ಸಾಲದ ಮೇಲೆ ತೆಗೆದುಕೊಂಡು ಹೋದ ಗೊಬ್ಬರಕ್ಕೆ ಬೆಳೆ ಬಂದ ಮೇಲೆ ರೈತ ದುಡ್ಡು ಕೊಡುತ್ತಾನೋ ಅಥವಾ ಫಸಲು ಬರದೇ ಕೈ ಎತ್ತುತ್ತಾನೋ ಎಂಬ ಅರ್ಧ ಅಪನಂಬಿಕೆ‌ಯಿಂದಲೇ ಈ ಅಂಗಡಿಯವರು ದಂಧೆ ಆರಂಭಿಸುತ್ತಾರೆ.

ಮಕ್ಕಳು ಮಾತ್ರ ಈ ವರೆಗೆ ಬೇಸಿಗೆ ರಜೆಯಲ್ಲಿ ಮಜಾ ಮಾಡಿ ಒಲ್ಲದ ಮನಸ್ಸಿನಿಂದ ಪಾಟೀ ಚೀಲ ಹೆಗಲಿಗೇರಿಸಿ ಶಾಲೆಗೆ ನಡೆಯುತ್ತವೆ.

"ಜಿಟಿ ಜಿಟಿ ಮಳೆ, ಕಿಚಿ ಪಿಚಿ ಕೆಸರು, ಮಗು ಬಿಕ್ಕಿ ಬಿಕ್ಕಿ ಅತ್ತಂತೆ" ಸುರಿಯುವ ಮಳೆಯ ಜೂನ್ ತಿಂಗಳ ಮೊದಲ ತಾರೀಖಿನಂದೇ ಶಾಲೆ ಆರಂಭ.

ಅದೇಕೋ ಈ ತಿಂಗಳು ನನ್ನ ಮನಸ್ಸಿನ ಆಳದಲ್ಲಿ ಒಂದು ರೀತಿಯ ಭಯದ ಗಾಯ ಮೂಡಿಸಿಬಿಟ್ಟಿದೆ. ಶಾಲೆ-ಕಾಲೇಜುಗಳ ಮೆಟ್ಟಿಲು ತುಳಿಯುವುದನ್ನು ಬಿಟ್ಟು 10-12 ವರ್ಷಗಳ ಮೇಲಾದರೂ, ವರ್ಷಕ್ಕೊಮ್ಮೆ ಈ ತಿಂಗಳು ಬಂದಾಗ ಈಗಲೂ ನನ್ನ ಮನಸ್ಸಿನಲ್ಲಿ ಒಂದು ರೀತಿಯ ಭಯ, ವಿಷಣ್ಣತೆ, ಕೀಳರಿಮೆ ಮನೆಮಾಡಿ‌ಬಿಡುತ್ತದೆ.

ಉತ್ತರ ಕರ್ನಾಟಕದ ಉರಿಬಿಸಿಲಿನ ಕಾವು ಮೇ ಕೊನೆಯ ವಾರದ ಹೊತ್ತಿಗೆ ಕಡಿಮೆಯಾಗಿ ಜೂನ್ ಮೊದಲ ವಾರದಲ್ಲೇ ಒಂದು ರೀತಿಯ ಮೋಡ ಮುಸುಕಿದ ವಾತಾವರಣ. ಪ್ರಕೃತಿಯ ಮನಸ್ಸಿಗೂ ಮೋಡ ಕವಿದಂತಾಗಿ ಬಿಸಿಲಿನ ದರ್ಶನ ಅಷ್ಟಕ್ಕಷ್ಟೇ. ಆಗಾಗ ಬರುವ ಜಿಟಿ ಜಿಟಿ ಮಳೆ, ನನ್ನ ಮನಸ್ಸಿನಲ್ಲೂ ಮೋಡದ ಮುಸುಕಿದ ವಾತಾರವಣ.

ಇದನ್ನು ಮೀರಿಸುವಂತೆ ಕಬ್ಬಿಣದ ಕಡಲೆಯಂತಿದ್ದ ಗಣಿತದ ಸೂತ್ರಗಳನ್ನು ಹೇರುತ್ತಿದ್ದ ಗಣಿತದ ಮೇಷ್ಟ್ರು, ವಿಜ್ಞಾನದ ಕಾಳಿಂಗಪ್ಪ ಮೇಷ್ಟ್ರು, ಪ್ರಾರ್ಥನೆಯ ಸಮಯದಲ್ಲಿ 'ಜಯ ಭಾರತ ಜನನಿಯ ತನುಜಾತೆ...' ಪದ್ಯದ 'ಜಯ ಹೇ, ಜಯ ಹೇ...' ಚರಣವನ್ನು ಸ್ವಲ್ಪವೇ ಏರು-ಪೇರು ಮಾಡಿದರೂ ಇಡೀ ಮುನ್ನೂರೂ ಚಿಲ್ಲರೆ ವಿದ್ಯಾರ್ಥಿಗಳಿಗೆ ಚಬುಕದ (ಬಿದಿರಿನ ಕೋಲು) ಬಿಸಿ ಮುಟ್ಟಿಸುತ್ತಿದ್ದ ಪಿಟಿ ಸರ್... ನೆನಪಿಸಿಕೊಂಡರೆ ಅದೊಂದು worst life ಅನ್ನಿಸಿಬಿಡುತ್ತದೆ. ಯಾರಾದರೂ Student life is golden life ಅಂತ ಹೇಳಿದರೆ, ಅವರು ಸುಳ್ಳು ಹೇಳುತ್ತಿದ್ದಾರೇನೋ ಎಂದು ಅವರ ಬಗ್ಗೇ ನನಗೆ ಗುಮಾನಿ.

ಹೊಸ ಲೇಖಕ್ ನೋಟುಬುಕ್ಕಿನ ಹಿತವಾದ ವಾಸನೆ, ಹೊಸ ಪಠ್ಯ ಪುಸ್ತಕಗಳ ಬಣ್ಣದ ವಾಸನೆ ಆಘ್ರಾಣಿಸುತ್ತ ಪಾಟಿಚೀಲ ಏರಿಸಿಕೊಂಡು ಹುರುಪಿನಿಂದ ಶಾಲೆಗೆ ನಡೆದರೆ, ಒಮ್ಮೊಮ್ಮೆ ಮೊದಲ ಪೀರಿಯಡ್ಡೇ ಗಣಿತದ್ದು! ಸಾಮಾನ್ಯವಾಗಿ ಹಳ್ಳಿಯ ಶಾಲೆಗಳಲ್ಲಿ ನಿಗದಿತ ಟೈಂ-ಟೇಬಲ್ ಇಲ್ಲದೇ ಯಾವ್ಯಾವ ಮೇಷ್ಟ್ರಿಗೆ ಯಾವಾಗ ಪುರುಸೊತ್ತಿರುತ್ತದೋ ಆವಾಗ ಅವರು ಪಾಠ ಮಾಡುತ್ತಾರೆ. ನಮ್ಮ ಶಾಲೆಯಲ್ಲೂ ಆಗುತ್ತಿದ್ದುದು ಅದೇ.

ನಾನೂ ಒಬ್ಬ ಮೇಷ್ಟ್ರ ಮಗ ಆಗಿದ್ದರಿಂದಲೋ, ಅಥವಾ ನಾನು ಜಾಣ ಆಗಬೇಕು ಎಂಬ ಕಾರಣದಿಂದಲೋ ಅಥವಾ ಗಣಿತದಲ್ಲಿ ನಾನು ಶತದಡ್ಡ ಅಂದುಕೊಂಡಿದ್ದರಿಂದಲೋ- ಗೆಳೆಯನ ಬೆನ್ನಿನ ಹಿಂದೆ ನನ್ನ ತಲೆ ಹುದುಗಿಸಿ ಕುಳಿತಿದ್ದರೂ ಗಣಿತದ ಮೇಷ್ಟ್ರ ಹದ್ದಿನ ಕಣ್ಣು ನನ್ನ ಮೇಲೆ ಬಿದ್ದೇ ಬಿಡುತ್ತಿತ್ತು. ಭಾರತ-ಪಾಕಿಸ್ತಾನ ಗಡಿಯ ಪೊದೆಯೊಂದರಲ್ಲಿ ಅವಿತು ಕುಳಿತ ವೈರಿಯನ್ನು ನಮ್ಮ ಭದ್ರತಾ ಪಡೆಗಳು ಹೊರಗೆಳೆದು ಗುಂಡಿನ ಮಳೆಗರೆವಂತೆಯೇ ನಮ್ಮ ಗುರುಗಳು ನನ್ನ ಕೈಗೆ ಚಾಕ್ ಪೀಸ್ ಕೊಟ್ಟು ಗಣಿತದ ಸಮಸ್ಯೆಗಳನ್ನು ಬಿಡಿಸಲು ಹೇಳಿ ನನ್ನ ಹಿಂದೆಯೇ AK 47 ಬಂದೂಕು ಹಿಡಿದು ನಿಲ್ಲುವಂತೆ ಬಿದಿರಿನ ಕೋಲು ಹಿಡಿದು ನಿಂತು ಬಿಡುತ್ತಿದ್ದರು. ಎಷ್ಟೋ ಬಾರಿ ಆ ಲೆಕ್ಕ ಬಿಡಿಸಲು ಆಗದೇ ಅವರ ಹೊಡೆತಕ್ಕೆ ನನ್ನ ನಿಕ್ಕರು ಒದ್ದೆಯಾಗಿದ್ದೂ ಇದೆ! ಆದರೆ ನನ್ನ ಪ್ರೀತಿಯ ವಿಷಯಗಳಾದ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ತರಗತಿಗಳಲ್ಲಿ ಮೇಷ್ಟ್ರ ಕಣ್ಣಿಗೆ ರಾಚುವಂತೆ ಅನೇಕ ಬಾರಿ ಕೈ ಎತ್ತಿ ಅವರ ಗಮನ ಸೆಳೆದರೂ ನನಗೆ ಪ್ರಶ್ನೆಗಳನ್ನೇ ಕೇಳುತ್ತಿರಲಿಲ್ಲ.

ಹಾಗೆ ನೋಡಿದರೆ, ನಾನು ನೆಮ್ಮದಿಯಿಂದ ಕಲಿತಿದ್ದು ಪಿಯುಸಿ ಮೊದಲ ವರ್ಷದಿಂದಲೇ. ಹತ್ತನೇ ತರಗತಿವರೆಗೂ ವಿಜ್ಞಾನ-ಗಣಿತದ ಉಕ್ಕಿನ ಕಡಲೆ (ಕಬ್ಬಿಣಕ್ಕಿಂತಲೂ ಕಠಿಣ)ಗಳನ್ನು ಅಗಿಯಲಾಗದೇ ಹಲ್ಲು ಮುರಿದುಕೊಂಡಿದ್ದ ನನಗೆ ಹೊಸ ಹಲ್ಲು ಮೂಳೆತದ್ದು ಪಿಯುಸಿಯಲ್ಲೇ. ಎಸ್ಸೆಸ್ಸೆಲ್ಸಿ ವರೆಗೂ ನನ್ನದು ಸೆಕೆಂಡ್ ಕ್ಲಾಸ್ ಜೀವನ. ಫಸ್ಟ್‌ಕ್ಲಾಸ್‌ ಎಂಬುದು ನನಗಾಗ ಗಗನ ಕುಸುಮ. ಆದರೆ ಪಿಯುಸಿಯಲ್ಲಿ ಆರ್ಟ್ಸ್ ವಿಭಾಗಕ್ಕೆ ಸೇರಿದ ಮೇಲೆ ನನ್ನ ಇಷ್ಟದ ವಿಷಯಗಳನ್ನು ಓದುವ ಅವಕಾಶ ಸಿಕ್ಕಿದ್ದರಿಂದ ನಂತರ ಫಸ್ಟ್‌ಕ್ಲಾಸ್‌ಗೆ ಬಡ್ತಿ.

ಶಾಲೆಯ ದಿನಗಳೇಕೆ ಹೀಗೆ ಎಂದು ನಾನು ಅನೇಕ ಬಾರಿ ಯೋಚಿಸಿದ್ದುಂಟು. ಇದು ಕೇವಲ ನನಗೊಬ್ಬನಿಗಾದ ತಳಮಳವೇ, ಮಾನಸಿಕ ಗೊಂದಲವೇ, ಮನೋವೈಜ್ಞಾನಿಕ ಕಾರಣವೇನಾದರೂ ಇರಬಹುದೇ ಎಂದು ಅನೇಕ ಬಾರಿ ತಲೆ ಕೆಡಿಸಿಕೊಂಡಿದ್ದೇನೆ. ಇಂಗ್ಲಿಷ್ ನಾಟಕ ಪ್ರಪಂಚದಲ್ಲಿ ಅನಭಿಷಿಕ್ತ ದೊರೆಯಾಗಿ ಮೆರೆದ, ಸಾಹಿತ್ಯಕ್ಕೆ ಪ್ರತಿಷ್ಠಿತ ನೊಬೆಲ್ ಪಾರಿತೋಷಕ ಪಡೆದ ಜಾರ್ಜ್ ಬರ್ನಾರ್ಡ್ ಶಾ ಕೂಡ ಇಂತಹದೇ ತಹತಹ ಅನುಭವಿಸಿದ್ದರಂತೆ. ಅವರ ಜೀವನ ಚರಿತ್ರೆಯಲ್ಲಿ ಈ ವಿಷಯದ ಪ್ರಸ್ತಾಪವೂ ಆಗಿದೆ.

ಶಾಲೆ ಮತ್ತು ಕಾಲೇಜಿನಲ್ಲಿ ಬರ್ನಾರ್ಡ್ ಶಾ ವಿಫಲರಾಗಿದ್ದೇ ಹೆಚ್ಚು. ವೈಜ್ಞಾನಿಕವಾಗಿ ತಯಾರಾಗದ, ನಿದ್ರೆ ಬರಿಸುವ ಪಠ್ಯಕ್ರಮ, ಸಾಹಿತ್ಯದ ಹೆಸರಿನಲ್ಲಿ ತಲೆನೋವಾಗುವ ಪಠ್ಯಪುಸ್ತಕ ಮತ್ತು ವರ್ಷವಿಡೀ ಕಲಿತಿದ್ದನ್ನು ಮೂರೇ ಗಂಟೆಗಳಲ್ಲಿ ಕಕ್ಕುವ ಪರೀಕ್ಷಾ ಪದ್ಧತಿಯನ್ನು ಶಾ ತುಂಬಾ ವಿರೋಧಿಸಿದರು. ಜೈಲೇ ಶಾಲೆಗಿಂತ ಎಷ್ಟೋ ಉತ್ತಮ ಎಂಬ ಅಭಿಪ್ರಾಯವನ್ನೂ ಅವರು ತಮ್ಮ ಆತ್ಮಚರಿತ್ರೆಯಲ್ಲಿ ವ್ಯಕ್ತಪಡಿಸಿದ್ದಾರೆ.

ಬರ್ನಾರ್ಡ್ ಶಾ ಮಾತಿನಲ್ಲೇ ಹೇಳಬೇಕೆಂದರೆ, In a prison one was not forced to read books written by warders but in the school, one was forced through the hideous imposture of literature called the text-books!

ನನ್ನ ಮಟ್ಟಿಗಂತೂ ಆತನ ಮಾತು ನೂರಕ್ಕೆ ನೂರು ಸತ್ಯ. ಜೂನ್ ತಿಂಗಳಲ್ಲಿ ನನಗೆ ಬೇಸರವಾದಾಗಲೆಲ್ಲ ನಾನು ನೆನಪಿಸಿಕೊಳ್ಳುವುದು ಬರ್ನಾರ್ಡ್ ಶಾ ನನ್ನೇ.

ಮೊನ್ನೆ ಸ್ನೇಹಿತರೊಬ್ಬರು ತಮ್ಮ ನಾಲ್ಕು ವರ್ಷದ ಮಗು ಶಾಲೆಗೆ ಹೋಗಲು ಹಠ ಮಾಡಿದ್ದನ್ನು ಹೇಳಿದಾಗ ಇದೆಲ್ಲ ನೆನಪಾಯಿತು.

6 Comments:

At 3:18 AM, June 28, 2006, Blogger v.v. said...

ವಿಶ್ವನಾಥರೇ,

ನನ್ನ ಶಾಲೆಯ ಅನುಭವ ನಿಮಗಿಂತ ಕೊಂಚ ಮಟ್ಟಿಗೆ ಭಿನ್ನ. ಚಿಕ್ಕಂದಿನಿಂದ ಕ್ಲಾಸಿನಲ್ಲಿ ಮೊದಲ ಅಥವಾ ಎರಡನೆಯ rankಗಿಂತ ಕೆಳಗಿಳಿಯಿದ ನನಗೆ, ಶಿಕ್ಷಕರಿಂದ ಏಟು ಇರಲಿ, ಬೈಸಿಕೊಂಡ ಅನುಭವ ಸಹ ಇಲ್ಲ. ಆದರೂ, ಜೂನ್ ತಿಂಗಳ ಶಾಲೆಯ ಪುನರಾರಂಭದ ಭಯ, ಆತಂಕ ಎಂದೂ ಇದ್ದೇ ಇತ್ತು; ನಾನೀಗ ಶಾಲೆಗೆ ಹೋಗ ಬೇಕಿಲ್ಲದಿದ್ದರೂ ಇನ್ನೂ ಇದೆ. ಈಗ ನನ್ನ ಮಗಳ ಶಾಲೆಯ ಆರಂಭದ ಆತಂಕ ಅವಳಿಗಿಂತ ನನಗೇ ಹೆಚ್ಚು ಅನ್ನಿಸುತ್ತದೆ.

ಉತ್ತಮ ಲೇಖನ ಬರೆದಿದ್ದೀರಿ. ಧನ್ಯವಾದಗಳು.

 
At 1:03 PM, June 28, 2006, Blogger Anveshi said...

ಹೌದು ವಿಶ್ವನಾಥರೆ,
ಸಂಜಯರು ತಿಳಿಸಿದಂತೆ ನಾನು ಕೂಡ ಓದಿನಲ್ಲಿ ಮುಂದೆ ಇದ್ದೆ ಮತ್ತು ಶಾಲೆಯ ಬಾಗಿಲು ತೆಗೆಯುವ ಮೊದಲೇ ಶಾಲೆಗೆ ತೆರಳಿ ಕಾಯುತ್ತಿದ್ದೆ.

ಆದರೂ ಶಾಲೆ ಆರಂಭವಾಗುತ್ತದೆ ಅನ್ನುವುದು ನೆನಪಿಸಿಕೊಂಡಾಗ ಈಗಲೂ ಅದೇನೋ ದುಗುಡ, ಆತಂಕ ಛಂಗನೆ ಸುಳಿದು ಹೋಗುತ್ತಿದೆ.

ಮಕ್ಕಳು ಶಾಲೆಗೆ ಹೋಗುವಾಗಲೂ, ಅವುಗಳ ಮನದಲ್ಲಿ ನಮಗೆ ಕಾಡಿದ ಆತಂಕವೇ ಕಾಡುತ್ತಿರಬಹುದಲ್ಲ ಎಂಬುದೂ ಯೋಚನೆಗೆ ದಾರಿ ಮಾಡಿಕೊಡುತ್ತಿದೆ.

ಅಂತೂ ಮತ್ತೊಮ್ಮೆ ನಮಗೆ ಆ ಆತಂಕವನ್ನು ನೆನಪಿಸಿದ್ದೀರಿ! :)

 
At 1:15 PM, June 28, 2006, Blogger Vishwanath said...

ಶ್ರೀಯುತ ಸಂಜಯರೇ,

ನಿಮ್ಮೆ ಮೆಚ್ಚುಗೆಯ ಮಾತುಗಳಿಗೆ ತುಂಬಾ ಧನ್ಯವಾದಗಳು.

ಶಾಲಾ ದಿನಗಳು ಮುಗಿಯುವವರೆಗೂ ಕೀಳರಿಮೆ ಅನುಭವಿಸಿದ್ದ ನನಗಷ್ಟೇ ಜೂನ್ ಬಗ್ಗೆ ಇಂಥ ಅಭಿಪ್ರಾಯವಿದೆ ಎಂದುಕೊಂಡಿದ್ದೆ. ಆದರೆ ಮೊದಲೆರಡು rank ಗಳನ್ನು ಬಿಟ್ಟುಕೊಡದ ನಿಮಗೂ ಇಂತಹದೇ ಆತಂಕ ಇತ್ತು ಎಂಬುದನ್ನು ಓದಿ ಅಚ್ಚರಿಯಾಯಿತು. ಹಾಗಿದ್ದರೆ ಈ ಜೂನ್ ಫೋಬಿಯಾ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತಿರುತ್ತದೆ ಎಂದುಕೊಂಡಿದ್ದೇನೆ.

ನೀವು ಬರೆದಿರುವುದು ನಿಜ. ಈಗ ಮಕ್ಕಳಿಗಿಂತ ಪಾಲಕರಿಗೇ ಶಾಲೆಯ ಆರಂಭದ ಭಯ ಹೆಚ್ಚು. ಅವರ ಪಠ್ಯಕ್ರಮ, ಹೋಂ ವರ್ಕ್... ಮಕ್ಕಳ ಇನ್ನೂ ಹತ್ತಾರು ಒತ್ತಡಗಳನ್ನು ತಾಯ್ತಂದೆಯರೂ ಹಂಚಿಕೊಳ್ಳಬೇಕಿದೆ.

ಮಕ್ಕಳ ಪಠ್ಯದ ಭಾರವನ್ನು ಹಗುರಗೊಳಿಸಿ, ಅವರ ಮನಸ್ಸಿಗೆ ಮುದನೀಡುವ ಉಲ್ಲಾಸಕರ ಪಠ್ಯಕ್ರಮ ಸಾಧ್ಯವಿಲ್ಲವೇ? ನಮ್ಮ ಮಕ್ಕಳು ಭಯ-ಆತಂಕದ ನೆರಳಿನಲ್ಲೇ "ಭಯೋತ್ಪಾದನಾ"(ಭಯ-ಉತ್ಪಾದನಾ) ಕೇಂದ್ರಗಳಂಥ ಶಾಲೆಗೆ ಹೋಗುವ ದಿನಗಳು ಎಂದು ಮುಗಿದಾವು?

ನಮಸ್ಕಾರ.
-ವಿಶ್ವನಾಥ

 
At 1:21 PM, June 28, 2006, Blogger Shiv said...

ವಿಶ್ವನಾಥರೇ,

ನಿಮ್ಮ ಜೂನ್ ಲೇಖನ ಅದರ ಜೊತೆ ಸಾಕಷ್ಟು ನೆನಪುಗಳನ್ನು ತಗೊಂಡು ನಂತು.

ಹೊಸ ಲೇಖಕ್ ಬುಕ್ಕಿನ ವಾಸನೆ..

ಶಾಲೆ ಜೈಲೋ ಎನೋ ಒಂದು ಇರಬಹುದು..ಆದರೆ ಶಾಲೆಯ ನೆನಪುಗಳು..ನಿತ್ಯಹರಿದ್ವರ್ಣ..

ಸೊಗಸಾದ ಲೇಖನ

 
At 1:26 PM, June 28, 2006, Blogger Vishwanath said...

ಅನ್ವೇಷಿಗಳೇ,

ನನ್ನ ಒಡಲಾಳದ ಆತಂಕಕ್ಕೆ ದನಿಗೂಡಿಸಿದ ನಿಮಗೆ ಧನ್ಯವಾದಗಳು.

ಶಾಲೆಗಳು ಕೇವಲ ಬುದ್ಧಿವಂತ ಮಕ್ಕಳಿಗೆ ಮಾತ್ರವೇ? ಎಲ್ಲ ಮಕ್ಕಳೂ, ಎಲ್ಲಾ ವಿಷಯಗಳಲ್ಲೂ ಮುಂದಿರಲು ಸಾಧ್ಯವೇ? ಪ್ರತೀ ಮಗುವಿನಲ್ಲೂ ಒಂದು ವಿಷಯದ ಬಗ್ಗೆ ಖಂಡಿತವಾಗಲೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಆ ನಿಟ್ಟಿನಲ್ಲಿ ಪ್ರೋತ್ಸಾಹಿಸುವುದೇ ಶಿಕ್ಷಣ ಎಂಬುದು ನನ್ನ ಅನಿಸಿಕೆ.

"ಎಲ್ಲರೂ ರಾಜರೇ ಆದರೆ ಪಲ್ಲಕ್ಕಿ ಹೊರುವವರು ಯಾರು?"

ನಮಸ್ಕಾರ.

-ವಿಶ್ವನಾಥ

 
At 1:45 PM, June 28, 2006, Blogger Vishwanath said...

ಶಿವಶಂಕರರೇ,

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

ಈ ಲೇಖನದ ಜೊತೆಗೆ ನಿಮಗೆ ಜೂನ್ ತಿಂಗಳಿನ ಸಾಕಷ್ಟು ನೆನಪುಗಳು ಬಂದವು ಎಂದು ಬರೆದಿದ್ದೀರಿ. ಸಂತೋಷ.

ವಿದ್ಯಾರ್ಥಿ ಜೀವನ ಸುವರ್ಣ ಜೀವನ ಇದ್ದಂತೆ ಎಂಬರ್ಥದಲ್ಲಿ ಶಾಲೆಯ ನೆನಪುಗಳು ನಿತ್ಯ ಹರಿದ್ವರ್ಣ ಎಂದು ಬರೆದಿದ್ದೀರಿ. ಈ ಬಗ್ಗೆ ನಾನು ಬ್ಲಾಗಿನಲ್ಲಿ ಗುಮಾನಿಯನ್ನೂ ವ್ಯಕ್ತಪಡಿಸಿದ್ದೇನೆ. ಇರಲಿ, ಅದು ನನ್ನ ವೈಯಕ್ತಿಕ ಅಭಿಪ್ರಾಯ.

ನೀವು ಹೇಳಿದಂತೆ ಎಂಎಸ್‌ಐಎಲ್ ನವರ ಲೇಖಕ್ ನೋಟುಬುಕ್ಕಿನ ಹಾಳೆಗಳ ಹಿತವಾದ ವಾಸನೆ, ಶಾಲೆಗಿಂತಲೂ ನನಗೆ ತುಂಬಾ ಅಪ್ಯಾಯ ಅನುಭವ ನೀಡುತ್ತದೆ.

ನಮಸ್ಕಾರ.

-ವಿಶ್ವನಾಥ

 

Post a Comment

<< Home